ತನ್ನ ಪ್ರೇಮಿಯು ವಿವಾಹಕ್ಕೆ ಒಪ್ಪುತ್ತಿಲ್ಲವೆಂದು ನೊಂದ ಯುವತಿಯೊಬ್ಬರು ಅತ್ಮಹತ್ಯೆ ಮಾಡಿಕೊಳ್ಳಲು ಹೈ-ವೋಲ್ಟೇಜ್ ವಿದ್ಯುತ್ ಟವರ್ (ಕಂಬ) ಏರಿದ್ದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಆಕೆಗೆ ಒಂದು ಗಂಟೆಯೊಳಗೆ ವಿವಾಹ ಮಾಡಿಸುವುದಾಗಿ ಪೊಲೀಸರು ಭರವಸೆ ನೀಡಿದ್ದು, ಯುವತಿ ಸುರಕ್ಷಿತವಾಗಿ ಇಳಿದುಬಂದಿದ್ದಾರೆ ಎಂದು ವರದಿಯಾಗಿದೆ.
ವೈಶಾಲಿಯ ಮಹ್ನಾರ್ ಪ್ರದೇಶದಲ್ಲಿ ಘಟನೆ ನಡೆದಿದೆ. ಯುವತಿ ಸುಮಾರು 100 ಅಡಿ ಎತ್ತರದ, 1.32 ಲಕ್ಷ ವೋಲ್ಟ್ ವಿದ್ಯುತ್ ಪ್ರವಹಿಸುವ ವಿದ್ಯುತ್ ಕಂಬ ಏರಿ, ಏರಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದರು. ಘಟನೆಯ ಸಂದರ್ಭದಲ್ಲಿ ಯುವತಿ ತನ್ನ ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು, ತನ್ನ ಬೇಡಿಕೆಯನ್ನು ಈಡೇರಿಸದಿದ್ದರೆ ಕೆಳಕ್ಕೆ ಜಿಗಿಯುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದರು. ಪೊಲೀಸರು ಮತ್ತು ಯುವತಿಯ ನಡುವೆ ಸುಮಾರು 9 ಗಂಟೆಗಳ ಕಾಲ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಯುವತಿ ಟವರ್ ಏರುತ್ತಿದ್ದಂತೆಯೇ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನೂರಾರು ಜನರು ಸ್ಥಳದಲ್ಲಿ ನೆರೆದಿದ್ದರು. ದೊಡ್ಡ ಅವಘಡ ಸಂಭವಿಸಬಹುದೆಂಬ ಭೀತಿಯಿಂದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಯಾವುದೇ ಪ್ರಾಣಾಪಾಯ ಸಂಭವಿಸದಂತೆ ತಡೆಯಲು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಸಬ್‌ಇನ್ಸ್‌ಪೆಕ್ಟರ್ ಯುವತಿಯನ್ನು ಕೆಳಕ್ಕೆ ಇಳಿಯುವಂತೆ ಮನವೊಲಿಸಲು ಹರಸಾಹಸ ಪಟ್ಟರು. ಗಂಟೆಗಟ್ಟಲೆ ವಿನಂತಿಸಿದರೂ, ಭರವಸೆಗಳನ್ನು ನೀಡಿದರೂ ಆಕೆ ಮಾತ್ರ ಕೆಳಕ್ಕೆ ಬರಲು ನಿರಾಕರಿಸಿದ್ದರು. ಕೊನೆಗೆ ಪೊಲೀಸರು ಭಾವನಾತ್ಮಕವಾಗಿ ಮನವಿ ಮಾಡಲು ಅರಂಭಿಸಿದರು.
ಈ ಲೇಖನ ಓದಿದ್ದೀರಾ?: ರಷ್ಯಾದಿಂದ ತೈಲ, ಅನಿಲ ಪೂರೈಕೆಗೆ ಸಮ್ಮತಿ: ಭಾರತದ ಇಂಧನದ ಕೊರತೆ ಎಷ್ಟರ ಮಟ್ಟಿಗೆ ನೀಗಲಿದೆ?
ಮೈಕ್ರೊಫೋನ್ ಮೂಲಕ ಯುವತಿಯೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು, “ಮಗಳೇ, ನಾನು ಕೆಲಸ ಕಳೆದುಕೊಳ್ಳುವಂತೆ ಮಾಡಲು ನೀನು ಬಯಸುವೆಯಾ? ದಯವಿಟ್ಟು ಕೆಳಕ್ಕೆ ಬಾ. ನೀನು ಸುರಕ್ಷಿತವಾಗಿ ಕೆಳಗೆ ಬಂದರೆ, ಇಂದೇ ಒಂದು ಗಂಟೆಯೊಳಗೆ ನಿನ್ನ ಮದುವೆ ಮಾಡಿಸುತ್ತೇವೆ” ಎಂದು ಭರವಸೆ ನೀಡಿದರು. ಮತ್ತೊಬ್ಬ ಅಧಿಕಾರಿ ಆಕೆಯ ಮೊಬೈಲ್ ಫೋನ್‌ಗೆ ಕರೆ ಮಾಡಿ ಆಕೆಯ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಸಾಂತ್ವನ ಹೇಳಿದರು.
ಅಂತಿಮವಾಗಿ, ಪೊಲೀಸರು ಆಕೆಯ ಪ್ರಿಯಕರನನ್ನು ಸ್ಥಳಕ್ಕೆ ಕರೆಸಿದ್ದಾರೆ. ಇದರಿಂದ ಪರಿಸ್ಥಿತಿ ಸ್ವಲ್ಪ ತಿಳಿಗೊಂಡು, ಸುದೀರ್ಘ ಪ್ರಯತ್ನದ ನಂತರ ಯುವತಿಯನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸಲಾಗಿದೆ. ಆದರೆ, ಆಕೆ ಕೆಳಗೆ ಬಂದ ನಂತರ ಆ ಹುಡುಗನೊಂದಿಗೆ ಮದುವೆ ನಡೆದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.



