ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸಿದ SIR ಪ್ರಕ್ರಿಯೆ ‘ಸಂದೇಹಾಸ್ಪದ’ ಎಂದು ವರ್ಗೀಕರಿಸಿದ್ದ 60 ಲಕ್ಷ ಬಂಗಾಳಿ ಮತದಾರರ ಪೈಕಿ 27 ಲಕ್ಷ ಮತದಾರರು ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಮ್ ಕೋರ್ಟ್ ರಚಿಸಿದ ಉಸ್ತುವಾರಿ ನ್ಯಾಯಾಧಿಕಾರಿಗಳ ಸಮಿತಿಯ ತೀರ್ಮಾನಿಸಿದೆ. ಈ ತೀರ್ಮಾನ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಬಂಗಾಳದ27 ಲಕ್ಷ ಮತದಾರರಿಗೆ ಮತದಾನದ ಹಕ್ಕಿಲ್ಲ:
ಪಶ್ಚಿಮ ಬಂಗಾಳದ ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ಆಕ್ಷೇಪಗಳು ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಉಸ್ತುವಾರಿ ನ್ಯಾಯಾಧಿಕಾರಿಗಳ ಸಮಿತಿ ರಚಿಸಿತ್ತು. ಸಮಿತಿ ಈಗ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. SIR (Special Investigation Report) ಪ್ರಕ್ರಿಯೆಯ ಅಡಿಯಲ್ಲಿ ‘ಸಂದೇಹಾಸ್ಪದ’ ಎಂದು ಗುರುತಿಸಲಾಗಿದ್ದ 60 ಲಕ್ಷ ಮತದಾರರ ಪೈಕಿ 27 ಲಕ್ಷ ಜನರನ್ನು ಮುಂಬರುವ ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲು ಸಮಿತಿ ನಿರ್ಧರಿಸಿದೆ.
ಪಶ್ಚಿಮ ಬಂಗಾಳದ ಗಡಿ ಜಿಲ್ಲೆಗಳಲ್ಲಿ ಬಾಂಗ್ಲಾ ನುಸುಳುಕೋರರು ಅಕ್ರಮವಾಗಿ ನೆಲೆಸಿದ್ದಾರೆಂದು ನೆಪ ನೀಡಿ ಎಸ್ಐಆರ್ ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಒಟ್ಟು 60 ಲಕ್ಷ ಮತದಾರರನ್ನು ಪ್ರಾಥಮಿಕವಾಗಿ ‘ಸಂದೇಹಾಸ್ಪದ’ ಪಟ್ಟಿಯಲ್ಲಿ ಇರಿಸಲಾಗಿತ್ತು. 27 ಲಕ್ಷ ಮತದಾರರು ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸುವಲ್ಲಿ ಅಥವಾ ಮೂಲ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ, ಅನೇಕ ಮತದಾರರು ಒಂದೇ ಹೆಸರಿನಲ್ಲಿ ವಿವಿಧ ಮತಕ್ಷೇತ್ರಗಳಲ್ಲಿ ಹೆಸರು ನೋಂದಾಯಿಸಿರುವುದು ಪತ್ತೆಯಾಗಿದೆ ಎಂದು ಸಮಿತಿ ತನ್ನ ಪರಿಶೀಲನಾ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ : ಮೈಬಣ್ಣದ ತಾರತಮ್ಯಕ್ಕೆ ಆಟದ ಮೂಲಕವೇ ಉತ್ತರ: ಅಂದು ಬಿಳಿಯರನ್ನೇ ಬೆರಗುಗೊಳಿಸಿದ್ದ ಟೆನಿಸ್ ದಿಗ್ಗಜ ವಿಜಯ್…
ಈ 27 ಲಕ್ಷ ಮತದಾರರು ಮುಂಬರುವ ಯಾವುದೇ ಚುನಾವಣೆಗಳಲ್ಲಿ ಮತ ಚಲಾಯಿಸುವಂತಿಲ್ಲ ಮತ್ತು ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಧಿಕೃತವಾಗಿ ತೆಗೆದುಹಾಕಲು ಸಮಿತಿ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದೆ. ಈ ತೀರ್ಮಾನ ಪಶ್ಚಿಮ ಬಂಗಾಳದ ರಾಜಕೀಯ ಸಮೀಕರಣಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು, ಸುಪ್ರೀಂ ಕೋರ್ಟ್ ರಚನೆ ಮಾಡಿರುವ ಸಮಿತಿಯೇ ಈ ರೀತಿಯ ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ, ಯಾರ ಹೆಸರುಗಳನ್ನು ಮತ ಪಟ್ಟಿಯಿಂದ ಕೈಬಿಡಲಾಗಿದೆಯೋ, ಅವರು ಮೇಲ್ಮನವಿ ಸಲ್ಲಿಸಲು ಕಾನೂನುಬದ್ಧ ಅವಕಾಶವಿದೆಯೇ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಸದ್ಯದ ಮಟ್ಟಿಗೆ ಈ 27 ಲಕ್ಷ ಜನರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ ಎನ್ನುವುದು ಸ್ಪಷ್ಟ. ಭವಾನಿಪುರದಲ್ಲಿರುವ ಶೇ.21.9 ಮುಸ್ಲಿಮ್ ಮತದಾರರ ಪೈಕಿ ಅರ್ಧಕ್ಕಿಂತ ಹೆಚ್ಚು, ಅಂದರೆ ಶೇ.51.8 ರಷ್ಟು ಮುಸ್ಲಿಮ್ ಮತದಾರರನ್ನು SIR ಪ್ರಕ್ರಿಯೆಯ ಮೂಲಕ ಅನಿಶ್ಚಿತ ಸ್ಥಿತಿಯಲ್ಲಿ (Suspended/under adjudication) ಇಡಲಾಗಿದೆ ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.
ರಾಜಕೀಯ ಚರ್ಚೆಗಳೇನು :
ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಏರಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಇದನ್ನು “ಮತದಾರರ ಹಕ್ಕಿನ ಹರಣ” ಎಂದು ಟೀಕಿಸಿದೆ, ವಿರೋಧ ಪಕ್ಷವಾದ ಬಿಜೆಪಿ “ನೈಜ ಮತದಾರರ ರಕ್ಷಣೆ ಮತ್ತು ನುಸುಳುಕೋರರ ಪತ್ತೆಗೆ ಇದು ಅಗತ್ಯ” ಎಂದು ಸಮರ್ಥಿಸಿಕೊಳ್ಳುತ್ತಿದೆ. ಇದು ಕೂಡ ಚುನಾವಣಾ ರಾಜಕೀಯದ ಅಸ್ತ್ರವಾಗಿ ಈ ಬಾರಿ ಇರಲಿದ್ದು, ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ.
ವಿರೋಧ ಪಕ್ಷಗಳು ಈ ನಿರ್ಧಾರವನ್ನು ಸ್ವಾಗತಿಸಿವೆ. ಮತದಾರರ ಪಟ್ಟಿಯಲ್ಲಿರುವ ‘ಸಂದೇಹಾಸ್ಪದ’ ಅಥವಾ ನಕಲಿ ಮತದಾರರನ್ನು ತೆಗೆದುಹಾಕುವುದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅತ್ಯಗತ್ಯ ಎನ್ನುವ ವಾದವನ್ನು ಮುಂದಿಟ್ಟು ಚುನಾವಣಾ ಪ್ರಚಾರಕ್ಕೆ ಇಳಿದಿವೆ. ವಿಶೆಷವಾಗಿ SIR ಪ್ರಕ್ರಿಯೆಯ ಮೂಲಕ ಈ ಅಕ್ರಮಗಳನ್ನು ಪತ್ತೆಹಚ್ಚಿರುವುದು ಚುನಾವಣಾ ಆಯೋಗದ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ ಎಂದೂ ಸಮರ್ಥಿಸಿಕೊಳ್ಳುತ್ತಿವೆ. ಆದರೇ, ಆಡಳಿತರೂಢ ತೃಣಮೂಲ ಕಾಂಗ್ರೆಸ್, ಚುನಾವಣಾ ಆಯೋಗ ಮತ್ತು ಎಂದು ಸುಪ್ರೀಮ್ ಕೋರ್ಟ್ ರಚಿಸಿದ ಉಸ್ತುವಾರಿ ನ್ಯಾಯಾಧಿಕಾರಿಗಳ ಸಮಿತಿ ಪಕ್ಷಪಾತಿಯಿಂದ ವರ್ತಿಸಿದೆ ಎಂದು ಗಂಭೀರ ಆರೋಪ ಮಾಡಿದೆ.
ಪ್ರಜಾಪ್ರಭುತ್ವದಆಶಯಕ್ಕೆವಿರುದ್ಧ :
27 ಲಕ್ಷದಷ್ಟು ದೊಡ್ಡ ಸಂಖ್ಯೆಯ ಜನರನ್ನು ಮತದಾನದಿಂದ ಹೊರಗಿಡುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧ. ದಾಖಲೆಗಳ ಕೊರತೆಯಿಂದಾಗಿ ನೈಜ ಮತದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆಯೇ ಎನ್ನುವ ಚರ್ಚೆಯೂ ಕೇಳಿ ಬರುತ್ತಿದೆ. ಪಶ್ಚಿಮ ಬಂಗಾಳದ ಗಡಿ ಜಿಲ್ಲೆಗಳಲ್ಲಿ ಈ ‘ಸಂದೇಹಾಸ್ಪದ’ ಮತದಾರರ ಸಂಖ್ಯೆ ಹೆಚ್ಚಿದೆ, ಇದರಿಂದಲೇ ತೃಣಮೂಲ ಕಾಂಗ್ರೆಸ್ ಗೆಲ್ಲುತ್ತಿದೆ ಎನ್ನುವ ಬಿಜೆಪಿಯ ಆರೋಪವನ್ನು ಸಾಬೀತು ಮಾಡುವುದಕ್ಕಾಗಿಯೇ ಚುನಾವಣಾ ಆಯೋಗ ಈ ರೀತಿಯಾಗಿ ಎಸ್ಐಆರ್ ಪ್ರಕ್ರಿಯೆ ನಡೆಸಿದೆ ಎನ್ನುವುದು ರಾಜಕೀಯ ಚರ್ಚೆ. ಇದನ್ನು ಹೊರತಾಗಿ, ಚುನಾವಣಾ ಪ್ರಕ್ರಿಯೆಯಿಂದಲೇ ಈ ಪ್ರಮಾಣದ ಮತದಾರರನ್ನು ಹೊರಗಿಡುವುದರ ಹಿಂದೆ ರಾಜಕೀಯ ಪಿತೂರಿ ಇದೆಯೇ ಎನ್ನುವ ಪ್ರಶ್ನೆ ಮೂಡುವುದು ಸಹಜ ಎನ್ನುವುದರಲ್ಲಿ ಸಂಶಯವಿಲ್ಲ. ಇನ್ನು, ಇದು ನೇರವಾಗಿ ಕೆಲವು ನಿರ್ದಿಷ್ಟ ಸಮುದಾಯಗಳ ಮತ ಬ್ಯಾಂಕ್ ಮೇಲೆ ಪರಿಣಾಮ ಬೀರಲಿದೆ. ಈ ನಿರ್ಧಾರದಿಂದ ಯಾವ ಪಕ್ಷಕ್ಕೆ ಲಾಭವಾಗುತ್ತದೆ ಮತ್ತು ಯಾರಿಗೆ ನಷ್ಟವಾಗುತ್ತದೆ ಎಂಬ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿವೆ. ಈ ತೀರ್ಮಾನ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವ ಕುತೂಹಲವೂ ಸೃಷ್ಟಿಯಾಗಿದೆ.




