ಕೇರಳ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಸೋಮವಾರ, ಚುನಾವಣಾ ಆಯೋಗದ ಅಧಿಕೃತ ಪತ್ರವೊಂದರಲ್ಲಿ ‘ಬಿಜೆಪಿ ಕೇರಳ ಘಟಕ’ದ ಮುದ್ರೆ ಪತ್ತೆಯಾಗಿದೆ. ಈ ಘಟನೆಯು ರಾಷ್ಟ್ರಮಟ್ಟದಲ್ಲಿ ದೊಡ್ಡ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. ಈ ಘಟನೆಯನ್ನು ‘ಸಿಬ್ಬಂದಿ ದೋಷ’ ಎಂದು ಆಯೋಗ ಸಮರ್ಥಿಸಿಕೊಂಡಿದ್ದರೂ, ವಿರೋಧ ಪಕ್ಷಗಳು ಆಯೋಗ ಮತ್ತು ಬಿಜೆಪಿ ನಡುವೆ ‘ಒಳಸಂಚು’ ನಡೆದಿದೆ ಎಂದು ಗಂಭೀರ ಆರೋಪ ಮಾಡಿವೆ.
ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ವಿವರಗಳ ಪ್ರಕಟಣೆಗೆ ಸಂಬಂಧಿಸಿದಂತೆ 2019ರ ಮಾರ್ಗಸೂಚಿಗಳನ್ನು ಒಳಗೊಂಡ ಪತ್ರವನ್ನು ಚುನಾವಣಾ ಆಯೋಗವು ಎಲ್ಲ ರಾಜಕೀಯ ಪಕ್ಷಗಳಿಗೆ ಇ-ಮೇಲ್ ಮೂಲಕ ಕಳುಹಿಸಿತ್ತು. ಈ ಪತ್ರದ ಮೇಲೆ ಚುನಾವಣಾ ಆಯೋಗದ ಸೀಲ್ ಇರಬೇಕಾದ ಜಾಗದಲ್ಲಿ ‘ಬಿಜೆಪಿ ಕೇರಳ ರಾಜ್ಯ ಘಟಕ’ದ ಸೀಲ್ ಇರುವುದು ಪತ್ತೆಯಾಗಿದೆ. ಇದನ್ನು ಗಮನಿಸಿದ ಸಿಪಿಐ(ಎಂ), ಪತ್ರದ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ವಿವಾದ ತಾರಕಕ್ಕೇರುತ್ತಿದ್ದಂತೆ ಸ್ಪಷ್ಟನೆ ನೀಡಿದ ಕೇರಳ ಮುಖ್ಯ ಚುನಾವಣಾ ಅಧಿಕಾರಿ ಡಾ. ರತನ್ ಯು. ಖೇಲ್ಕರ್, ಇದೊಂದು ಕೇವಲ ‘ಸಿಬ್ಬಂದಿ ದೋಷ’ ಎಂದು ಸಮರ್ಥಿಸಿಕೊಂಡಿದ್ದಾರೆ.
“ಈ ಹಿಂದೆ ಬಿಜೆಪಿ ಘಟಕವು ಮಾರ್ಗಸೂಚಿಗಳ ಬಗ್ಗೆ ವಿವರಣೆ ಕೋರಿ ಸಲ್ಲಿಸಿದ್ದ ಫೋಟೋಕಾಪಿ (ನಕಲು) ಪತ್ರವನ್ನು, ಕಚೇರಿಯ ಸಿಬ್ಬಂದಿ ಅರಿಯದೆ ಇತರ ಪಕ್ಷಗಳಿಗೂ ವಿತರಿಸಿದ್ದಾರೆ. ಲೋಪ ಪತ್ತೆಯಾದ ತಕ್ಷಣ ಮಾರ್ಚ್ 21ರಂದೇ ಆ ಪತ್ರವನ್ನು ಹಿಂಪಡೆಯಲಾಗಿದೆ. ಈ ನಿರ್ಲಕ್ಷ್ಯಕ್ಕಾಗಿ ಒಬ್ಬ ಸಹಾಯಕ ವಿಭಾಗೀಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ” ಎಂದು ಹೇಳಿದ್ದಾರೆ.
Have all pretences been dropped by the BJP?
— CPI(M) Kerala (@CPIMKerala) March 23, 2026
It is no secret that the same power centre seems to control both the Election Commission of India and the BJP. Even then, at least maintain the courtesy of two separate desks.
Now even that seems unnecessary.
Seals are being casually… pic.twitter.com/MfMXNaXTgk
ಚುನಾವಣಾ ಆಯೋಗದ ಈ ಎಡವಟ್ಟು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಆಯೋಗ ಮತ್ತು ಬಿಜೆಪಿ ನಡುವಿನ ಸಂಬಂಧದ ಕುರಿತು ಗಂಭೀರ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
“ಚುನಾವಣಾ ಆಯೋಗ ಮತ್ತು ಬಿಜೆಪಿ ಒಂದೇ ಆಗಿಬಿಟ್ಟಿವೆಯೇ? ಇಷ್ಟು ದಿನ ತಾವು ಬೇರೆ ಬೇರೆ ಎಂದು ಮಾಡುತ್ತಿದ್ದ ನಾಟಕವನ್ನು ಈಗ ಪೂರ್ತಿಯಾಗಿ ಬಿಟ್ಟುಬಿಟ್ಟಿದ್ದಾರೆಯೇ” ಎಂದು ಸಿಪಿಐಎಂ ಪ್ರಶ್ನಿಸಿದೆ.
“ಚುನಾವಣಾ ಅಧಿಕಾರಿಗಳಿಗೆ ಬಿಜೆಪಿಯ ಅಧಿಕೃತ ಮುದ್ರೆಗಳು ಸಿಕ್ಕಿದ್ದಾದರೂ ಹೇಗೆ? ನೀವು ಬಿಜೆಪಿಯ ಕಚೇರಿಯಿಂದಲೇ ಕಾರ್ಯನಿರ್ವಹಿಸುತ್ತಿದ್ದೀರಾ?” ಎಂದು ಕೇರಳ ಕಾಂಗ್ರೆಸ್ ಘಟಕ ಕಿಡಿಕಾರಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು, “ಚುನಾವಣಾ ಆಯೋಗವು ಕೊನೆಗೂ ಬಿಜೆಪಿ ಸೀಲ್ ಇರುವ ಅಧಿಕೃತ ಪತ್ರಗಳನ್ನು ಹೊರಡಿಸುವ ಧೈರ್ಯ ತೋರಿದೆ” ಎಂದು ಲೇವಡಿ ಮಾಡಿದ್ದಾರೆ.



