ಚಿಕ್ಕಮಗಳೂರು ತಾಲೂಕಿನ ಜೋಳದಾಳು ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮೈಲಿಮನೆ ಗ್ರಾಮ ಪಂಚಾಯಿತಿಯಲ್ಲಿರುವ ಶಾಲೆಗೆ ಸಂಯೋಜನೆ ಮಾಡುವ ಮೂಲಕ ಮುಚ್ಚಲಾಗುತ್ತಿದ್ದು ಇದನ್ನು ವಿರೋಧಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕಿ ಚೈತ್ರ ರವರು ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಜೋಳದಾಳು ಹಿರಿಯ ಪ್ರಾಥಮಿಕ ಶಾಲೆ ಮುಚ್ಚಿ ಇಲ್ಲಿನ ವಿದ್ಯಾರ್ಥಿಗಳನ್ನು ಮೈಲಿಮನೆ ಶಾಲೆಗೆ ಕಳುಹಿಸಲಾಗುತ್ತದೆ. ಈ ರೀತಿ ಚಿಕ್ಕಮಗಳೂರಿನಲ್ಲಿ ಅಂದಾಜು 1000 ಶಾಲೆಗಳನ್ನು ಮುಚ್ಚಲು ಪಟ್ಟಿ ತಯಾರಿಸಲಾಗಿದೆ. ರಾಜ್ಯವ್ಯಾಪಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸಾವಿತ್ರಿಬಾಯಿ- ಜ್ಯೋತಿಬಾ ಫುಲೆಯವರ ಹೋರಾಟ ಮತ್ತು ಪರಿಶ್ರಮದ ಫಲವಾಗಿ ಇಂದು ಹಳ್ಳಿಗಳಿಗೆ ಸರ್ಕಾರಿ ಶಾಲೆಗಳು ಆರಂಭವಾಗಿವೆ.ಈ ಎಲ್ಲ ಮಹಾತ್ಮರ ಆಶಯಗಳನ್ನು ಗಾಳಿಗೆ ತೂರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅ.15ರಂದು ಹೊರಡಿಸಿರುವ ಆದೇಶದಲ್ಲಿ ಆಯ್ದ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 5ಕಿಮೀ ವ್ಯಾಪ್ತಿಯ ಶಾಲೆಗಳನ್ನು ಜೋಡಿಸುವುದಾಗಿ ಸ್ಪಷ್ಟಪಡಿಸಿದೆ. ಆದರೆ ಶಿಕ್ಷಣ ಮಂತ್ರಿಗಳು ಒಂದೆಡೆ ಒಂದೇ ಒಂದು ಶಾಲೆ ಮುಚ್ಚುವುದಿಲ್ಲ ಎಂದು ಸುಳ್ಳು ಹೇಳುತ್ತ ಇನ್ನೊಂದೆಡೆ ಹಳ್ಳಿಗಳಿಗೆ ಬಸ್ ಬಿಡುವುದಾಗಿ ಹೇಳುತ್ತಿದ್ದಾರೆ. ಈ ಬಸ್ ಒದಗಿಸುವ ಜವಾಬ್ದಾರಿ ಕೂಡ ಎಸ್‌ಡಿಎಂಸಿ ಮೇಲೆ ಹೇರಲಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಇತ್ತೀಚಿಗೆ ಮಂಗಳೂರಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳನ್ನು ಲಾರಿಯಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಯಾವ ಬಸ್ ನಲ್ಲಿ ಮಕ್ಕಳನ್ನು ಕರೆದೊಯ್ಯುತ್ತದೆ ಎಂದು ಪ್ರಶ್ನಿಸಿದರು. ಎಡಿಬಿ ಬ್ಯಾಂಕಿನಿಂದ 2500 ಕೋಟಿ ರೂಪಾಯಿ ಸಾಲ ಪಡೆದು ಕೆಪಿಎಸ್ ಶಾಲೆ ತೆರೆಯಲಾಗುತ್ತಿದೆ. ಈ ಶಾಲೆಗಳನ್ನು ಖಾಸಗಿ ಕಂಪನಿಗಳಿಗೆ ಹೊರಗುತ್ತಿಗೆ ಕೊಡಲಾಗುತ್ತದೆ. ಪ್ರತಿ ಶಾಲೆ ಕೂಡ ಆದಾಯ ಸಂಗ್ರಹಿಸಬೇಕು. ಸರ್ಕಾರ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಂಡು ಇಡೀ ಸಾರ್ವಜನಿಕ ಶಿಕ್ಷಣವನ್ನು ಕಾರ್ಪೊರೇಟ್ ಕಂಪನಿಗಳಿಗೆ ದಾನ ಮಾಡುವ ಹುನ್ನಾರ ರಚಿಸಿದೆ. ಇದರ ವಿರುದ್ದ ಒಗ್ಗಟ್ಟಾಗಿ ಹೋರಾಡುವುದೇ ಜನರ ಮುಂದಿರುವ ಪರಿಹಾರವಾಗಿದ್ದು ಏನೇ ಬಂದರೂ ಹೋರಾಟದಿಂದ ಹಿಂದೆ ಸರಿಯ ಬಾರದು ಎಂದು ಕರೆ ನೀಡಿದರು.
ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯರವರಲ್ಲಿ ಒಬ್ಬರಾದ ಮಹೇಶ್ ರವರು ಮಾತನಾಡಿ, 6ನೇ ಕ್ಲಾಸಿನಿಂದಲೇ ಕೆಪಿಎಸ್ ಶಾಲೆಯಲ್ಲಿ ಅಡಿಕೆ ಸುಲಿಯುವುದು ಸೇರಿದಂತೆ ಇತರೆ ಕಸುಬುಗಳನ್ನು ಕಲಿಸುವುದಾಗಿ ಸರ್ಕಾರ ಹೇಳಿದೆ. ಸಮಾಜದ ತಳಸಮುದಾಯದ ಮಕ್ಕಳ ವಿದ್ಯೆ ಕಸಿದು ಕೂಲಿಗೆ ಕಳಿಸುವ ಸರ್ಕಾರದ ಹುನ್ನಾರವನ್ನು ನಾವು ಒಪ್ಪುವುದಿಲ್ಲ. ಈ ಯೋಜನೆ ರದ್ದಾಗುವವರೆಗೂ ನಿರಂತರವಾಗಿ ಹೋರಾಟ ನಡೆಸುತ್ತೇವೆ’ ನಮ್ಮ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ,ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸಂಸದ ರಾಘವೇಂದ್ರ ಬೀರೂರು, ಶಿವಮೊಗ್ಗ ರೈಲು ಮಾರ್ಗ ದ್ವಿಪಥಕ್ಕೆ ಮನವಿ
ಗ್ರಾಮದ ಪಾಲಕರು, ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತೀವ್ರ ವಾಗಿ ವಿರೋಧಿಸಿದರು. ಈ ಯೋಜನೆ ರದ್ದುಗೊಳಿಸುವವರೆಗೂ ಶಾಲೆ ಉಳಿಸಲು ಹೋರಾಡುವ ಸಂಕಲ್ಪ ತೆಗೆದು ಕೊಂಡರು. ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. ಈ ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷರಾದ ಚೈತ್ರಾ , ಉಪಾಧ್ಯಕ್ಷರಾದ ಪುರುಷೋತ್ತಮ್, ಜೋಳದಾಳು ಗ್ರಾಮದವರಾದ ಮಹೇಶ್, ಶೇಖರ್, ಭರತ್, ಕಮಲಾಕ್ಷಿ, ನಿರ್ಮಲ, ಪರಮೇಶ್, ಪುಟ್ಟಸ್ವಾಮಿ, ಹರೀಶ್, ಮನೋಹರ್, ಶಾರದಾ, ಪವಿತ್ರ, ಸುನೀತಾ ಇನ್ನು ಮುಂತಾದವರು ಉಪಸ್ಥಿತರಿದ್ದರು.




