ದೀರ್ಘಕಾಲದ ಅನಿಶ್ಚಿತತೆ ಮತ್ತು ರಾಷ್ಟ್ರಪತಿ ಆಡಳಿತದ ನಂತರ, ಮಣಿಪುರದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆ ಮರುಚಾಲನೆಗೊಂಡಿದ್ದು, ಬಿಜೆಪಿಯ ಹಿರಿಯ ನಾಯಕ ಯುಮ್ನಮ್ ಖೇಮ್‌ಚಂದ್ ಸಿಂಗ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಇಂಫಾಲದ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ, ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ನೂತನ ಮುಖ್ಯಮಂತ್ರಿಗಳಿಗೆ ಪದವಿ ಹಾಗೂ ರಹಸ್ಯ ಪ್ರಮಾಣ ವಚನ ಬೋಧಿಸಿದರು. ಈ ಮೂಲಕ ಮಣಿಪುರದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭಗೊಂಡಂತಾಗಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿತ್ತು. ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿದ್ದ ಮಣಿಪುರದಲ್ಲಿ ಶಾಂತಿ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿತ್ತು. ಇದೀಗ ಪರಿಸ್ಥಿತಿ ತಹಬದಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ರಾಷ್ಟ್ರಪತಿ ಆಡಳಿತವನ್ನು ತೆರವುಗೊಳಿಸಿ ಜನಪ್ರತಿನಿಧಿಗಳ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇಸ್ರೇಲ್ ಸಂಗದಲ್ಲಿ ‘ಶಿಕಾರಿ’- ಪ್ಯಾಲೆಸ್ತೀನ್ ಜೊತೆ ‘ಪರಾರಿ’; ಕಪಟ ನಾಟಕವಲ್ಲವೇ ಮೋದೀಜಿ?
ಹಿಂದೆ ಮಣಿಪುರ ವಿಧಾನಸಭೆಯ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿರುವ ಅನುಭವಿ ರಾಜಕಾರಣಿ ಖೇಮ್‌ಚಂದ್ ಸಿಂಗ್ ಅವರ ಹೆಗಲಿಗೆ ಈಗ ರಾಜ್ಯದಲ್ಲಿ ಸಂಪೂರ್ಣ ಶಾಂತಿ ನೆಲೆಸುವಂತೆ ಮಾಡುವ ಮತ್ತು ವಿಭಿನ್ನ ಸಮುದಾಯಗಳ ನಡುವೆ ವಿಶ್ವಾಸ ಮೂಡಿಸುವ ದೊಡ್ಡ ಜವಾಬ್ದಾರಿ ಬಿದ್ದಿದೆ.
This video cannot be played in your browser. Open the video directly
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ಹಿರಿಯ ಶಾಸಕರು, ಪಕ್ಷದ ಪ್ರಮುಖ ಪದಾಧಿಕಾರಿಗಳು ಹಾಗೂ ಎನ್‌ಡಿಎ ಮೈತ್ರಿಕೂಟದ ಉನ್ನತ ನಾಯಕರು ಉಪಸ್ಥಿತರಿದ್ದು, ನೂತನ ಮುಖ್ಯಮಂತ್ರಿಗಳಿಗೆ ಶುಭ ಕೋರಿದರು.





