ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ‘ವೈಶ್ಯ ಟೇಕ್ರಿ’ (Vaishya Tekri) ಎಂಬ ಬೃಹತ್ ದಿಬ್ಬ ಈಗ ಮತ್ತೆ ಜಗತ್ತಿನ ಗಮನ ಸೆಳೆಯುತ್ತಿದೆ. ಮೇಲ್ನೋಟಕ್ಕೆ ಇದೊಂದು ಮಣ್ಣಿನ ದಿಬ್ಬದಂತೆ ಕಂಡರೂ, ಇದರ ಗರ್ಭದಲ್ಲಿ ಮೌರ್ಯ ಚಕ್ರವರ್ತಿ ಅಶೋಕನ ಕಾಲದ ಬೃಹತ್ ಬೌದ್ಧ ಸ್ತೂಪವೊಂದು ಅಡಗಿದೆ! ಬರೋಬ್ಬರಿ 90 ವರ್ಷಗಳ ಸುದೀರ್ಘ ಅಂತರದ ನಂತರ, ಈ ಐತಿಹಾಸಿಕ ತಾಣದ ಉತ್ಖನನ (ಅಗೆಯುವ ಕಾರ್ಯ) ಮತ್ತು ಜೀರ್ಣೋದ್ಧಾರಕ್ಕೆ ಮಧ್ಯಪ್ರದೇಶ ಸರ್ಕಾರ ಮರುಚಾಲನೆ ನೀಡಲು ಸಿದ್ಧತೆ ನಡೆಸಿದೆ.
ಮಧ್ಯಪ್ರದೇಶದ ‘ಸಾಂಚಿ ಸ್ತೂಪ’ ಜಗತ್ಪ್ರಸಿದ್ಧ. ಆದರೆ ಉಜ್ಜಯಿನಿಯಲ್ಲಿರುವ ಈ ವೈಶ್ಯ ಟೇಕ್ರಿ ಸ್ತೂಪ ಸಾಂಚಿಗಿಂತಲೂ ಹಿರಿದಾಗಿದೆ. ಸಾಂಚಿ ಸ್ತೂಪದ ಎತ್ತರ ಸುಮಾರು 54 ಅಡಿಗಳಿದ್ದರೆ, ಈ ಸ್ತೂಪದ ಎತ್ತರ ಬರೋಬ್ಬರಿ 100 ಅಡಿಗೂ ಹೆಚ್ಚಿದೆ ಹಾಗೂ 350 ಅಡಿಗಳಷ್ಟು ವಿಶಾಲವಾದ ಸುತ್ತಳತೆ ಹೊಂದಿದೆ. 1938-39ರಲ್ಲಿ ಗ್ವಾಲಿಯರ್ ಸಂಸ್ಥಾನದ ಪುರಾತತ್ವ ಇಲಾಖೆ ನಡೆಸಿದ ಮೊದಲ ಉತ್ಖನನದಲ್ಲಿ ಈ ಬೆರಗುಗೊಳಿಸುವ ಸತ್ಯ ಬಯಲಾಗಿತ್ತು. ಈ ಸ್ತೂಪದ ಮೇಲ್ಭಾಗ ಕಾಲಕ್ರಮೇಣ ನೈಸರ್ಗಿಕವಾಗಿ ಕೊಚ್ಚಿಹೋಗಿರುವುದರಿಂದ, ಇದರ ಮೂಲ ಎತ್ತರ 100 ಅಡಿಗಳಿಗಿಂತಲೂ ಹೆಚ್ಚಿತ್ತು ಎಂದು ಅಂದಾಜಿಸಲಾಗಿದೆ.
90 ವರ್ಷಗಳ ಹಿಂದಿನ ಉತ್ಖನನ ವರದಿಯ ಪ್ರಕಾರ, ಈ ಸ್ತೂಪದ ನಿರ್ಮಾಣ ಶೈಲಿಯೇ ಒಂದು ಅಚ್ಚರಿ. ಇದನ್ನು ಕೇವಲ ಇಟ್ಟಿಗೆಗಳಿಂದ ಕಟ್ಟಿಲ್ಲ; ಬದಲಾಗಿ ಒಳಭಾಗದಲ್ಲಿ ಗಟ್ಟಿಯಾದ ‘ಕಪ್ಪು ಮುರಮ್’ ಮಣ್ಣನ್ನು ತುಂಬಿ, ಹೊರಭಾಗದಲ್ಲಿ ಬೃಹತ್ ಗಾತ್ರದ ಇಟ್ಟಿಗೆಗಳು ಹಾಗೂ ಮಣ್ಣಿನ ಗಾರೆ ಬಳಸಿ ಅತ್ಯಂತ ಭದ್ರವಾಗಿ ನಿರ್ಮಿಸಲಾಗಿದೆ.
ವಿಶೇಷವೆಂದರೆ, ಸ್ತೂಪದ ಅಗಾಧ ತೂಕ ಮತ್ತು ಒತ್ತಡವನ್ನು ತಡೆದುಕೊಳ್ಳಲು ಇದರ ತಳಪಾಯವನ್ನು ‘ಬಟ್ಟಲಿನ ಆಕಾರ’ದಲ್ಲಿ (Bowl shape) ನಿರ್ಮಿಸಲಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಇಂತಹ ಅದ್ಭುತ ತಂತ್ರಜ್ಞಾನವನ್ನು ಬಳಸಿರುವುದು ಅಂದಿನ ಎಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಸ್ತೂಪದ ನಿರ್ಮಾಣಕ್ಕೆ ಮಣ್ಣು ತೆಗೆದ ಜಾಗವು ಕಾಲಕ್ರಮೇಣ ಚೌಕಾಕಾರದ ಕಂದಕವಾಗಿ ಮಾರ್ಪಟ್ಟಿದ್ದು, ಪಶ್ಚಿಮ ದಿಕ್ಕಿನಲ್ಲಿ ಭಕ್ತರು ಸ್ತೂಪದತ್ತ ಬರಲು ದಾರಿ ಮಾಡಲಾಗಿತ್ತು.
ಚಕ್ರವರ್ತಿಯಾಗುವ ಮೊದಲು ಅಶೋಕನು ಉಜ್ಜಯಿನಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದನು. ಆತನ ಪತ್ನಿ ವ್ಯಾಪಾರಿ (ವೈಶ್ಯ) ಸಮುದಾಯಕ್ಕೆ ಸೇರಿದ್ದರಿಂದ ಈ ಸ್ತೂಪಕ್ಕೆ ‘ವೈಶ್ಯ ಟೇಕ್ರಿ’ ಎಂಬ ಹೆಸರು ಬಂದಿರಬಹುದು ಎನ್ನಲಾಗಿದೆ. ಉತ್ಖನನದ ವೇಳೆ ಸಿಕ್ಕಿರುವ ಮೌರ್ಯರ ಕಾಲದ (ಕ್ರಿ.ಪೂ 3ನೇ ಶತಮಾನ) ಬೃಹತ್ ಇಟ್ಟಿಗೆಗಳು ಹಾಗೂ ಪುರಾತನ ನಾಣ್ಯಗಳು ಈ ಐತಿಹಾಸಿಕ ಸತ್ಯವನ್ನು ಖಚಿತಪಡಿಸಿವೆ.
ಇದೀಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಈ ಸ್ತೂಪದ ಮರು-ಉತ್ಖನನಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸ್ತೂಪದ ಸುತ್ತಮುತ್ತಲಿನ ಖಾಸಗಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವುದು ದೊಡ್ಡ ಸವಾಲಾಗಿದ್ದು, ಇದಕ್ಕಾಗಿ ಉಜ್ಜಯಿನಿ ಜಿಲ್ಲಾಡಳಿತ 40 ಕೋಟಿ ರೂಪಾಯಿಗಳ ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಿದೆ. ಸ್ಮಾರಕದ ಮೂಲ ಸ್ವರೂಪಕ್ಕೆ ಯಾವುದೇ ಹಾನಿಯಾಗದಂತೆ ಉತ್ಖನನ ನಡೆಸಿ ಮಹತ್ವದ ಫಲಿತಾಂಶಗಳು ಹೊರಬರಲು ಕನಿಷ್ಠ ಮೂರು ವರ್ಷಗಳೇ ಬೇಕಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.




