ತನ್ನ ಮತಗಳಿಕೆಯ ಗರಿಷ್ಠ ಮಟ್ಟವನ್ನು ಬಿಜೆಪಿ ತಲುಪಿಬಿಟ್ಟಿದೆ. ಅದರಾಚೆಗೆ ಜನಬೆಂಬಲ ಪಡೆಯುವುದು ಕಷ್ಟವೆಂದು ಅದಕ್ಕೆ ಅರ್ಥವಾಗಿದೆ. ಒಂದು ವೇಳೆ ಅಧಿಕಾರ ಕಳೆದುಕೊಂಡರೆ, ಮೋದಿ-ಶಾ ತಲೆದಂಡ ಖಚಿತ. ಹೇಗಾದರೂ ಪವರ್ ಉಳಿಸಿಕೊಳ್ಳಬೇಕೆಂದರೆ ಚುನಾವಣಾ ಅಕ್ರಮಗಳನ್ನು ಎಸಗುವುದಷ್ಟೇ ಈ ಜೋಡಿಗಿರುವ ಕೊನೆಯ ಆಯ್ಕೆ!
“ಈ ಎಸ್ಐಆರ್ ಏಕೆ ನಡೆಯುತ್ತಿದೆ? ಈ ದೇಶದ ಮೂಲನಿವಾಸಿಗಳನ್ನು ಅಕ್ರಮ ವಲಸಿಗರ ಪಟ್ಟಿಗೆ ಏಕೆ ಸೇರಿಸಲಾಗುತ್ತಿದೆ? ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಮತದಾನದ ಹಕ್ಕಿನಿಂದ ಹೊರಗಿಡುವ ದೊಡ್ಡ ಪಿತೂರಿಯನ್ನು ಏಕೆ ಮಾಡಲಾಗುತ್ತಿದೆ?” ಈ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ- ಬಿಜೆಪಿ ಹೆದರಿಕೊಂಡಿದೆ, ಮೋದಿ ಮತ್ತು ಅಮಿತ್ ಶಾ ಬೆಚ್ಚಿಬಿದ್ದಿದ್ದಾರೆ!
“ಅಧಿಕಾರ ಅವರ ಕೈಯಲ್ಲೇ ಇದ್ದರೂ ಭಯಬೀಳುವ ಪ್ರಮೇಯವಾದರೂ ಏನು?” ಎಂದು ನೀವು ಯೋಚಿಸಬಹುದು. ಈ ಪ್ರಶ್ನೆಗೆ ವಿವರಗಳನ್ನು ನೀಡದಿದ್ದರೆ, ಬಿಜೆಪಿಯ ಭಯ ಮೂಲ ಯಾವುದೆಂದು ಅರ್ಥವಾಗುವುದಿಲ್ಲ.
2014ರಲ್ಲಿ ಅಧಿಕಾರಕ್ಕೇರುವವರೆಗೆ ಬಿಜೆಪಿ ಚುನಾವಣೆಗಳನ್ನು ಎದುರಿಸಿದ ರೀತಿಗೂ, ಆನಂತರದಲ್ಲಿ ಚುನಾವಣೆಗಳನ್ನು ನಡೆಸಿದ ರೀತಿಗೂ ವ್ಯತ್ಯಾಸಗಳಿವೆ. ಕಳೆದ 25 ವರ್ಷಗಳಲ್ಲಿ ಬಿಜೆಪಿ ಅಗಾಧವಾಗಿ ಬೆಳೆದುಬಿಟ್ಟಿತು. ಒಂದು ಕಾಲದಲ್ಲಿ ಅದನ್ನು ಬ್ರಾಹ್ಮಣ, ಬನಿಯಾಗಳ ಪಾರ್ಟಿ ಎಂದು ಗುರುತಿಸಲಾಗುತ್ತಿತ್ತು. ಆದರೆ ಆ ಐಡೆಂಟಿಟಿಯನ್ನು ಜೊತೆಗಿಟ್ಟುಕೊಂಡೇ ನಿಧಾನವಾಗಿ ಬೇರೆಬೇರೆ ಜಾತಿಗಳ ವಿಶ್ವಾಸವನ್ನು ತಕ್ಕಮಟ್ಟಿಗೆ ಪಡೆದುಕೊಳ್ಳುವಲ್ಲಿ ಸಫಲವಾಯಿತು. ಶೋಷಿತ ಸಮುದಾಯಗಳನ್ನು ಒಡೆದು ಆಳುವ ಕಸರತ್ತಿನಲ್ಲಿ ತುಸು ಯಶಸ್ವಿಯಾದರೂ ಆ ಪ್ರಯತ್ನ ಶಾಶ್ವತ ಮತಕೋಟೆಯಾಗಿ ನಿಲ್ಲಲಿಲ್ಲ. ಅಂತಿಮವಾಗಿ ಬಿಜೆಪಿಗೊಂದು ಮತಬ್ಯಾಂಕ್ ಸೃಷ್ಟಿಯಾಗಿರುವುದಂತೂ ಖಚಿತ. ಆದರೆ ಆ ಮತಕೋಟೆಯನ್ನು ಮೀರಿ, ವಿಸ್ತರಣೆ ಮಾಡಿಕೊಳ್ಳುವುದು ಅಸಾಧ್ಯವೆಂದು ಬಿಜೆಪಿಗೆ ಅರ್ಥವಾಗಿಬಿಟ್ಟಿದೆ. ಅದು ಎಷ್ಟೇ ಪ್ರಯತ್ನಪಟ್ಟರು ಶೇ. 38ರಷ್ಟು ಮತಗಳನ್ನು ದಾಟಲು ಆಗುವುದಿಲ್ಲ.
ಶೇ. 38ರಷ್ಟು ವೋಟ್ ಬ್ಯಾಂಕ್ ವಿಸ್ತರಣೆ ಆಗುವವರೆಗೆ ಅವರು ಬೇರೆ ಬೇರೆ ತಂತ್ರಗಾರಿಕೆಗಳನ್ನು ಮಾಡಿದ್ದರು. ತಮ್ಮಲ್ಲಿನ ಎಲ್ಲ ಸರಕುಗಳನ್ನೂ ಬಳಸಿದರು. ಆದರೆ ಚುನಾವಣಾ ಅಕ್ರಮಗಳಿಗೆ ದೊಡ್ಡಮಟ್ಟದಲ್ಲಿ ಕೈ ಹಾಕಿರಲಿಲ್ಲ. ಈ ಶೇ.38ರಷ್ಟು ಮತಕೋಟೆ ತನ್ನಿಂತಾನೇ, ಸಮೂಹ ಪ್ರಭಾವದ ನೆಲೆಯಿಂದೇನೂ ಸೃಷ್ಟಿಯಾದದ್ದಲ್ಲ. ಅದಕ್ಕಾಗಿ ತೀವ್ರತರನಾದ ‘ಮೆಕ್ರೋ ಮ್ಯಾನೇಜ್ಮೆಂಟ್’ ಮಾಡಬೇಕಾಯಿತು. ಬೂತ್ ಕಮಿಟಿಗಳನ್ನು, ಪೇಜ್ ಪ್ರಮುಖರನ್ನು ನೇಮಿಸಿತು. ಭಾರೀ ಶ್ರಮ ಹಾಕಿ ಮತಬ್ಯಾಂಕ್ ವಿಸ್ತರಣೆ ಮಾಡಿಕೊಂಡಿತು. ಬಿಜೆಪಿಯ ಮತದಾರರು ಕಣ್ಣಿಗೆ ಕಾಣಿಸುತ್ತಾರೆ. ಯಾಕೆಂದರೆ ಅವರು ಮಧ್ಯಮ ಮತ್ತು ಮೇಲ್ವರ್ಗದವರು. ಮೀಡಿಯಾಗಳಲ್ಲೂ ಅವರ ಅಸ್ತಿತ್ವ ಇರುವುದರಿಂದ ಬಿಜೆಪಿಯ ಸಂಖ್ಯೆ ದೊಡ್ಡದಾಗಿದೆ ಎಂಬಂತೆ ಬಿಂಬಿತವಾಗುತ್ತದೆ. ಅಬ್ಬರವೂ ಇರುತ್ತದೆ. ಆದರೆ ವಾಸ್ತವದಲ್ಲಿ ಸಾಮಾಜಿಕ ಮತ್ತು ಮತಕೋಟೆಯ ತಳಪಾಯ ಅಂದುಕೊಂಡಂತೆ ಇಲ್ಲ. ದೊಡ್ಡ ಮಟ್ಟದ ಅದೃಶ್ಯ ಮತದಾರರು ಈವರೆಗೂ ಬಿಜೆಪಿಯ ಹಿಡಿತಕ್ಕೆ ದಕ್ಕದಾಗಿದ್ದಾರೆ. ಇವರು ಎಷ್ಟೇ ತಿಪ್ಪರಲಾಗ ಹಾಕಿದರೂ ಆ ಬೃಹತ್ ವಿಭಾಗವನ್ನು ಮುಟ್ಟುವುದಕ್ಕೆ ಆಗುವುದಿಲ್ಲ. ಅದಕ್ಕೆ ದೊಡ್ಡ ಕಾರಣ- ಬಿಜೆಪಿ ಹೊಂದಿರುವ ಮತೀಯವಾದಿ, ಜಾತಿವಾದಿ ಸಿದ್ಧಾಂತ!
ಬಿಜೆಪಿಯವರ ರಾಜಕೀಯ ಅಜೆಂಡಾಗಳ ಕಾರಣಕ್ಕಾಗಿಯೇ ಶೇ. 30-35 ಜನ ಆರಂಭದಲ್ಲೇ ಅವರಿಂದ ದೂರ ನಿಂತುಬಿಡುತ್ತಾರೆ. ಅಂದರೆ ಅವರ ಪರವಾಗಿ ಶೇ.30-35 ಜನ ಖಚಿತವಾಗಿ ಇದ್ದರೂ, ಅವರ ವಿರುದ್ಧವಾಗಿಯೂ ಶೇ. 30-35 ಪರ್ಸೆಂಟ್ ಯಾವಾಗಲೂ ಇರುತ್ತಾರೆ. ಮೊದಲೆಲ್ಲ ಮುಸ್ಲಿಂ ಮತದಾರರು ಛಿದ್ರವಾಗಿ ಹೋಗುತ್ತಿದ್ದದ್ದು ಬಿಜೆಪಿಗೆ ವರದಾನವಾಗಿತ್ತು. ಬಿಜೆಪಿಯ ಮತೀಯವಾದಿ ರಾಜಕಾರಣದಿಂದ ಅಲ್ಪಸಂಖ್ಯಾತರು ತೀವ್ರವಾಗಿ ಧ್ರುವೀಕರಣವಾಗಿದ್ದಾರೆ. ಬಿಜೆಪಿಯನ್ನು ಸೋಲಿಸುವ ಅಭ್ಯರ್ಥಿಗೆ ಮತ ಹಾಕಬೇಕೆಂದು ಈ ಸಮುದಾಯ ಹೊರಟಿದೆ. ಕೇವಲ ಮುಸ್ಲಿಮರ ವೋಟು ಹೀಗೆ ಆಗಿದ್ದರೆ ಬಿಜೆಪಿಯವರು ಯೋಚನೆ ಮಾಡುತ್ತಿರಲಿಲ್ಲ. ಈಗ ದಲಿತರ ಮತಗಳು ಬಿಜೆಪಿ ವಿರುದ್ಧವಾಗಿ ಧ್ರುವೀಕರಣ ಆಗಿವೆ. ಇದು ಮುಂದುವರಿಯುವ ಸೂಚನೆಗಳು ಕಾಣಿಸುತ್ತಿವೆ. ಅದಕ್ಕೆ ಮುಖ್ಯಕಾರಣ ಬಿಜೆಪಿಯ ಸಿದ್ಧಾಂತ!
ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಎಂದರೇನೇ ಸಂವಿಧಾನ. ಇತ್ತ ಬಿಜೆಪಿ ಎಂದರೆ ಸಂವಿಧಾನ ವಿರೋಧಿ ಎಂಬುದು 2024ರ ಲೋಕಸಭಾ ಚುನಾವಣೆಯಲ್ಲೇ ಸ್ಪಷ್ಟವಾಯಿತು. “404 ಸೀಟು ಗೆಲ್ಲಿಸಿದರೆ, ಸಂವಿಧಾನ ಬದಲಿಸುತ್ತೇವೆ” ಎಂದು ಬಿಜೆಪಿ ನಾಯಕರು ಕೊಟ್ಟ ಹೇಳಿಕೆಗಳಿಂದಾಗಿ ತಳಸಮುದಾಯಗಳು ಬಿಜೆಪಿಯನ್ನು ಯಾವುದೇ ಕಾರಣಕ್ಕೂ ನಂಬದಾಗಿವೆ. “ಈ ಸಂವಿಧಾನದಲ್ಲಿ ಭಾರತೀಯತೆ ಇಲ್ಲ” ಎಂದಿದ್ದ ಆರ್ಎಸ್ಎಸ್ ನಿಲುವನ್ನು ತಪ್ಪು ಎನ್ನುವ ಮನಸ್ಥಿತಿ ಬಿಜೆಪಿಗೆ ಈಗಲೂ ಇಲ್ಲ. ಬಾಬಾಸಾಹೇಬರು ಬರೆದ ಸಂವಿಧಾನದ ಅಸ್ತಿತ್ವಕ್ಕೆ ಅಪಾಯ ಬಂದರೆ, ಅದು ನಮ್ಮ ಅಸ್ತಿತ್ವಕ್ಕೆ ಅಪಾಯ ಬಂದಂತೆ ಎಂದು ದಲಿತ ಸಮುದಾಯ ಭಾವಿಸಿದೆ. ಈ ಭಾವನೆ ಸಮುದಾಯದೊಳಗೆ ಎಷ್ಟು ಪ್ರಬಲವಾಗಿದೆ ಎಂದರೆ, ಅದು ಬಿಜೆಪಿಯ ಊಹೆಗಳಿಗೆ ಮೀರಿದ್ದು. ಕರ್ನಾಟಕದ ಎಸ್ಟಿ ಸಮುದಾಯವನ್ನೇ ಉದಾಹರಣೆಯಾಗಿ ನೋಡಿದರೂ ಒಂದು ಕಾಲದಲ್ಲಿ ಆ ಸಮುದಾಯ ಬಿಜೆಪಿ ಕಡೆ ಹೋಗುತ್ತಿದ್ದಂತೆ ಕಾಣುತ್ತಿತ್ತು. ಆದರೆ ಈ ಸಮುದಾಯವೂ ಹೊರಳು ಹಾದಿ ಹಿಡಿಯಲು ಬಿಜೆಪಿಯ ಸೈದ್ಧಾಂತಿಕ ವರ್ತನೆಯೇ ಮುಖ್ಯ ಕಾರಣವಾದಂತೆಯೂ ಕಾಣುತ್ತದೆ. 2018 ಮತ್ತು 2023ರ ಚುನಾವಣೆಗಳಲ್ಲಿ ಎಸ್ಟಿ ಸಮುದಾಯ ಬಿಜೆಪಿಗೆ ವಿರುದ್ಧವಾಗಿ ಮತಚಲಾಯಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಕಳೆದ ಹದಿನೈದು ವರ್ಷಗಳ ದೊಡ್ಡ ವಿದ್ಯಮಾನ ಯಾವುದೆಂದರೆ- ‘ದಲಿತ ರಾಜಕಾರಣ’. ಬಾಬಾಸಾಹೇಬರ ಹೆಸರು ರಾಜಕಾರಣದಲ್ಲಿ ಮುಖ್ಯ ಸ್ಥಾನವನ್ನು ವ್ಯಾಪಿಸುತ್ತಾ ಹೋದಂತೆ, ಸಂವಿಧಾನವು ರಾಜಕೀಯ ವಿಚಾರವಾಗುತ್ತದೆ ಎಂದು ಸಂಘಪರಿವಾರದ ಯಾವೊಬ್ಬನೂ ಭಾವಿಸಿರಲಿಲ್ಲ. “ಸಂವಿಧಾನವನ್ನು ನಾವು ಉಳಿಸಿದರೆ, ಅದು ನಮ್ಮನ್ನು ಉಳಿಸುತ್ತದೆ” ಎಂಬ ಅರಿವು ಬಿಜೆಪಿಯ ರಾಜಕಾರಣಕ್ಕೆ ಮಾರಕ ಪೆಟ್ಟಾಗಿ ಪರಿಣಮಿಸಿದೆ. ಮೀಸಲಾತಿ, ಗ್ಯಾರಂಟಿ, ವಚನ ಭ್ರಷ್ಟತೆ, ಅನ್ಯಾಯ, ಭ್ರಷ್ಟಾಚಾರ- ಇವೆಲ್ಲವೂ ಈ ಹಿಂದೆ ಚುನಾವಣಾ ವಿಚಾರಗಳಾಗಿದ್ದು ನೋಡಿದ್ದೇವೆ. ಆದರೆ ಕಳೆದೈದು ವರ್ಷಗಳಿಂದ ಸಂವಿಧಾನವು ಚುನಾವಣಾ ವಿಷಯವಾಯಿತು. ಸಂವಿಧಾನ ರಕ್ಷಣೆಗಾಗಿ ಇರುವ ವಲಯವೂ ಸಹಜವಾಗಿ ಬಿಜೆಪಿ ವಿರುದ್ಧ ನಿಂತಿತು.
ಶೇ.90ರಷ್ಟು ಧ್ರುವೀಕರಣಗೊಳ್ಳುವ ಬ್ರಾಹ್ಮಣರನ್ನು ಹೊರತುಪಡಿಸಿದರೆ, ಪ್ರಬಲ ಜಾತಿಗಳಾವುವೂ ಇಷ್ಟು ಪ್ರಮಾಣದಲ್ಲಿ ಒಂದು ಕಡೆ ಮತಹಾಕುವುದಿಲ್ಲ. ಒಕ್ಕಲಿಗರು, ಲಿಂಗಾಯತರು, ಜಾಠರು, ರೆಡ್ಡಿಗಳು, ಕಮ್ಮಾಗಳು, ನಾಯ್ಡುಗಳು- ಇಂತಹ ಸಮುದಾಯಗಳು ಸಂಪೂರ್ಣ ಒಂದು ಪಕ್ಷದಲ್ಲಿ ಧ್ರುವೀಕರಣವಾಗುವುದಿಲ್ಲ. ಕಾರಣ, ಈ ಸಮುದಾಯಗಳ ನಾಯಕರು ಬಿಜೆಪಿ ಮತ್ತು ಅದರ ಎದುರಾಳಿ ಪಕ್ಷಗಳಲ್ಲೂ ಇರುತ್ತಾರೆ. ಕೇವಲ ರಾಜ್ಯ ನಾಯಕತ್ವವಷ್ಟೇ ಪ್ರಧಾನವಾಗಿ ಕೆಲಸ ಮಾಡುವುದಿಲ್ಲ. ಹಳ್ಳಿಗಳಲ್ಲಿ, ಕ್ಷೇತ್ರಗಳ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಎರಡು ಬದಿಯಲ್ಲೂ ಪ್ರಬಲ ಸಮುದಾಯಗಳ ಮುಖಂಡರೇ ಲೀಡರ್ ಗಳಾಗಿರುತ್ತಾರೆ. ಬ್ರಾಹ್ಮಣರ ವಿಚಾರಕ್ಕೆ ಬಂದರೆ ಸ್ಥಳೀಯವಾಗಿ ಅವರಲ್ಲಿ ನಾಯಕರು ಇರುವುದಿಲ್ಲ. ಇನ್ನೊಂದೆಡೆ ಬಿಜೆಪಿ ವಿರುದ್ಧವಾಗಿ ಶೇ.90ರಷ್ಟು ಧ್ರುವೀಕರಣಗೊಳ್ಳುವ ದೊಡ್ಡದೊಡ್ಡ ಸಮುದಾಯಗಳಿವೆ. ಈ ಎಲ್ಲ ಕಾರಣಕ್ಕಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಬಿದ್ದಿತು. ಚುನಾವಣಾ ಯಂತ್ರಾಂಗಗಳನ್ನೆಲ್ಲ ಬಳಸಿದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗದೆ ಏದುರಿಸಿ ಬಿಡುತ್ತಾ, ಮಿತ್ರಪಕ್ಷಗಳನ್ನು ಆಶ್ರಯಿಸಬೇಕಾಯಿತು. ಈ ಪ್ರವೃತ್ತಿ ಮುಂದುವರಿದರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ, ಮುಂದಿನ ಚುನಾವಣೆಗಳಲ್ಲಿ ಗೆಲ್ಲುವುದು ನಮಗೆ ಅನಿವಾರ್ಯವೆಂದು ಅರಿತ ಬಿಜೆಪಿ, ಚುನಾವಣೆಯ ಭಾರೀ ಅಕ್ರಮಗಳಿಗೆ ಕೈಹಾಕಿತು. ಎಸ್ಐಆರ್ ಆ ಅಕ್ರಮದ ದೊಡ್ಡ ಕಾರ್ಯಾಚರಣೆ!
ಯುಪಿಎ-2 ಅವಧಿ ಮುಗಿದು, ಚುನಾವಣೆ ಎದುರಾಗುವವರೆಗೂ ಬಿಜೆಪಿ ಅಚ್ಚುಕಟ್ಟಾಗಿಯೇ ಚುನಾವಣೆಗಳನ್ನು ನಿರ್ವಹಣೆ ಮಾಡಿತು. ಆದರೆ ಅದರಿಂದಾಚೆಗೆ ಬಿಜೆಪಿ ಶುರು ಮಾಡಿದ್ದು ಚುನಾವಣಾ ಅಕ್ರಮ. ಹಣದ ಹಂಚಿಕೆ, ತಮಗೆ ಬೇಕಾದಂತೆ ಚುನಾವಣಾ ವೇಳಾಪಟ್ಟಿ ಮಾಡಿಸಿಕೊಳ್ಳುವುದು, ಎದುರಾಳಿಯ ಬಾಯಿ ಮುಚ್ಚಿಸಲು ಚುನಾವಣಾ ಆಯೋಗದಿಂದ ನೋಟಿಸ್ ಕೊಡಿಸುವುದು, ಎದುರಾಳಿಯ ಮೇಲೆ ಸುಖಾಸುಮ್ಮನೆ ಕೇಸ್ ಹಾಕಿಸುವುದು, ತಾವು ಮಾತ್ರ ಏನು ಬೇಕಾದರೂ ಮಾತನಾಡಿ ಬಚಾವಾಗುವುದು- ಈ ರೀತಿಯಲ್ಲಿ ಅಕ್ರಮಗಳು ನಡೆಯುತ್ತಿದ್ದವು. ಆದರೆ ಆದರೆ ಈಗ ಇಟ್ಟಿರುವ ಹೆಜ್ಜೆ ಭಯಾನಕವಾಗಿದೆ. ಸಂಪೂರ್ಣವಾಗಿ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಎಲ್ಲವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ತನ್ನ ವಿರುದ್ಧ ಇರುವ ಮತಗಳನ್ನು ಡಿಲೀಟ್ ಮಾಡಿಸುತ್ತಿದೆ. ವಿರೋಧಿ ಮತದಾರರಿಗೆ ಅಕ್ರಮ ವಲಸಿಗರು ಎಂಬ ಹಣೆಪಟ್ಟಿ ಹಚ್ಚುತ್ತಿದೆ. ಸರ್ಕಾರದ ದುಷ್ಕೃತ್ಯಗಳಿಗೆ ನ್ಯಾಯಾಂಗದ ಮುದ್ರೆಯೂ ಬೀಳುತ್ತಿರುವ ವ್ಯವಸ್ಥೆಯನ್ನು ಕಾಣುತ್ತಿದ್ದೇವೆ.
ಕ್ಷೇತ್ರಗಳ ಪುನರ್ ವಿಂಗಡಣೆ ಕೂಡ ಬಿಜೆಪಿಯ ಚುನಾವಣಾ ಅಕ್ರಮದ ಭಾಗ. ಇದು ಕೇವಲ ಉತ್ತರ ಭಾರತದ ಕ್ಷೇತ್ರಗಳನ್ನು ಹೆಚ್ಚಿಸುವ ಕಸರತ್ತಾಗಿಲ್ಲ. ಬಿಜೆಪಿಗೆ ಅನುಕೂಲಕರವಾಗಿಯೇ ಕ್ಷೇತ್ರಗಳನ್ನು ಮರುಜೋಡಣೆ ಮಾಡುವುದು ಇದರ ಉದ್ದೇಶ. ಅಸ್ಸಾಂ ರಾಜ್ಯದಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆಯು ಈ ಅಕ್ರಮಕ್ಕೆ ಕನ್ನಡಿ ಹಿಡಿದಿತ್ತು. ಸಾಮಾನ್ಯವಾಗಿ ಅಕ್ಕಪಕ್ಕದ ಕ್ಷೇತ್ರಗಳ ಪ್ರದೇಶವನ್ನು ಮರುವಿಂಗಡಿಸಲಾಗುತ್ತದೆ. ಆದರೆ, ಒಂದು ಪ್ರದೇಶಕ್ಕೂ, ಇನ್ನೊಂದು ಪ್ರದೇಶಕ್ಕೂ ಸಂಬಂಧ ಇಲ್ಲದಂತೆ ಡಿಲಿಮಿಟೇಷನ್ ಮಾಡಲಾಗಿದೆ! ಒಂದಕ್ಕೊಂದು ಹೊಂದಿಕೊಂಡಿರುವ ಗ್ರಾಮಗಳನ್ನು ಬೇರ್ಪಡಿಸಿ ಇಡಲಾಗಿದೆ. ಅಂದರೆ ಬಿಜೆಪಿ ಮತದಾರರು ಬಹುಸಂಖ್ಯಾತರಾಗಿರುವಂತೆ ನೋಡಿಕೊಳ್ಳಲಾಗಿದೆ! ಹೀಗೆ ಮಾಡದೆ ಬಿಜೆಪಿಗೆ ಗೆಲುವಿನ ದಾರಿಗಳೇ ಕಾಣುತ್ತಿಲ್ಲ. ತನ್ನ ಮತಗಳಿಕೆಯ ಗರಿಷ್ಠ ತುದಿಯನ್ನು ಮುಟ್ಟಿರುವ ಬಿಜೆಪಿ ಇನ್ನು ಮುಂದೆ ಕೆಳಗಿಳಿಯಲೇಬೇಕು, ಮುಂದಕ್ಕೆ ಹೋಗಲು ಸಾಧ್ಯವಿಲ್ಲ. ಬಿಜೆಪಿ ವಿರೋಧಿ ಪಾಳೆಯ ಕುಸಿಯಬೇಕೆಂದರೆ, ಅವರ ಮತಕೋಟೆಗೆ ಮತದಾನದ ಹಕ್ಕನ್ನೇ ನಿರಾಕರಿಸಿಬಿಡುವುದು ಬಿಜೆಪಿಯ ಬಹುದೊಡ್ಡ ಕುತಂತ್ರ!
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್ ಕಾಲಾಳು ಹರಿಪ್ರಸಾದ್ ಈಗ ಪಿಸಿಸಿ ತಲೆಯಾಳು; ಕುತೂಹಲ ಮೂಡಿಸಿದ ನೇಮಕ
ಒಂದು ಕಡೆ ಬಿಜೆಪಿ ಪರ ಮತಗಳು ಗರಿಷ್ಠ ಹಂತ ತಲುಪಿದರೆ, ಇನ್ನೊಂದು ಕಡೆ ಬಿಜೆಪಿ ವಿರೋಧಿ ಮತಗಳು ಒಂದಾಗಿವೆ. ಇದರ ನಡುವೆ ಮತ್ತೊಂದು ನಮೂನೆಯ ಮತದಾರರಿದ್ದಾರೆ. ಅವರು ಕಮ್ಯುನಲ್ ಅಥವಾ ಸೆಕ್ಯುಲರ್ ವಿಚಾರಗಳನ್ನು ನೋಡಿ ಮತ ಹಾಕುವವರಲ್ಲ. ಅಸಲಿಯಾಗಿ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವುದೇ ಈ ಮತದಾರರು. ತಮ್ಮ ಬದುಕಿನ ಮೇಲೆ, ಆರ್ಥಿಕತೆಯ ಮೇಲೆ ಹೊಡೆತ ಬಿದ್ದರೆ, ಯಾವುದೇ ಪಕ್ಷದ ವಿರುದ್ಧ ಈ ವರ್ಗ ಮತ ಚಲಾಯಿಸುತ್ತದೆ. ಬಿಜೆಪಿಯ ಕಳಪೆ ಆಡಳಿತ, ಭ್ರಷ್ಟಾಚಾರ, ಮೂಲಸೌಕರ್ಯಗಳ ಕೊರತೆ ಇವೆಲ್ಲವೂ ಈ ವರ್ಗಕ್ಕೆ ಪ್ರಧಾನವಾಗುತ್ತವೆ. ಈಗ ದೇಶದ್ಯಾಂತ ನೀಟ್ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಜೆನ್ಝೀ ಪ್ರತಿಭಟನೆಗಳು ಮುಖ್ಯವಾಗಿ ಈ ಮೂರನೇ ವರ್ಗದಿಂದ ಪ್ರಚೋದಿತವಾಗಿರುವುದು ಸ್ವಷ್ಟ. “ಹಿಂದೂ ಮುಸ್ಲಿಂ ಬಿಟ್ಟು, ಬದುಕಿನ ಬಗ್ಗೆ ಮಾತಾಡಿ ಸ್ವಾಮಿ” ಎನ್ನುವ ಇವರಿಗೆ ಉತ್ತರ ಕೊಡಲು ಬಿಜೆಪಿ ಅಸಮರ್ಥವಾಗಿದೆ. ಕಾರಣ ಉತ್ತಮ ಆಡಳಿತ ನೀಡುವ ಚಾಕುಚಕ್ಯತೆ ಬಿಜೆಪಿಗೆ ಇಲ್ಲವಾಗಿದೆ. ದೇಶದ ಪರಮ ಭ್ರಷ್ಟರೆಲ್ಲರೂ ಅನಿವಾರ್ಯವಾಗಿ ಬಿಜೆಪಿಯೊಳಗೆಯೇ ಇದ್ದಾರೆ. ಐಟಿ, ಇಡಿ ರೈಡ್ಗೆ ಹೆದರಿ ಪಕ್ಷದೊಳಗೆ ಬಂದವರನ್ನೆಲ್ಲ ಇಟ್ಟುಕೊಂಡು ಸರಿಯಾಗಿ ಅಧಿಕಾರ ನಡೆಸುವುದಾದರೂ ಹೇಗೆ?
“ಬಿಜೆಪಿ ಒಂದು ಚುನಾವಣೆ ಸೋತರೆ ಆಗುವ ನಷ್ಟವಾದರೂ ಏನು? ಒಂದು ಚುನಾವಣೆಗಾಗಿ ಇಷ್ಟೆಲ್ಲ ಆಟಗಳನ್ನು ಬಿಜೆಪಿ ಆಡಬೇಕಾ?” ಎಂಬ ಪ್ರಶ್ನೆ ಹುಟ್ಟಬಹುದು. ಆದರೆ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರು ಒಮ್ಮೆ ಸೋತರೆ, ಅವರ ಇಡೀ ಭವಿಷ್ಯ ಏನಾಗುತ್ತದೆ ಎಂಬ ಮುನ್ನೋಟ ಅವರಿಗಿದೆ. ದೊಡ್ಡ ಮಟ್ಟದ ಕಾನೂನು ಪ್ರಕ್ರಿಯೆಗಳಿಗೂ ಅವರು ಒಳಗಾಗುತ್ತಾರೆ. “Too many skeletons in the cupboard” ಎಂಬ ಇಂಗ್ಲಿಷ್ ನುಡಿಗಟ್ಟೊಂದು ಚಾಲ್ತಿಯಲ್ಲಿದೆ. ಅದನ್ನು ಕನ್ನಡಕ್ಕೆ ಯಥಾವತ್ತು ಅನುವಾದಿಸಿ ಹೇಳಿದರೆ, “ಅಲಮಾರಿನಲ್ಲೀಗ ರಾಶಿರಾಶಿ ಅಸ್ಥಿಪಂಜರ” ಎನ್ನಬಹುದು. ಇದರ ಅರ್ಥ- ಮೋದಿ ಮತ್ತು ಅಮಿತ್ ಶಾ ಅವರು ಮಾಡಿರುವ ಹಗರಣಗಳು ಸಾಲುಸಾಲು ಕಾಯುತ್ತಿವೆ. ಅವುಗಳು ಈ ಇಬ್ಬರನ್ನೂ ಕಾನೂನಿನ ಇಕ್ಕಟ್ಟಿಗೆ ಸಿಲುಕಿಸುವುದು ಖಚಿತ. ಹೀಗಾಗಿ ಕಪಾಟಿನಲ್ಲಿರುವ ಅಸ್ತಿಪಂಜರಗಳನ್ನು ಹೆಚ್ಚುಕಾಲ ಮುಚ್ಚಿಡಬೇಕಾದರೆ, ಆ ಕಪಾಟಿನ ಕೀ (ಅಧಿಕಾರ) ಅವರ ಬಳಿಯೇ ಇರಬೇಕಾಗುತ್ತದೆ. ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದು, ಗಂಭೀರ ತನಿಖೆಗಳೇನಾದರೂ ನಡೆದರೆ ಮೋದಿ, ಶಾ ಜೋಡಿಯ ತಲೆದಂಡ ಆಗುವುದು ಖಚಿತ. ಅಷ್ಟು ಪ್ರಮಾಣದ ಅಕ್ರಮಗಳು ಇವರ ಕಾಲದಲ್ಲಿ ನಡೆದಿವೆ.
ಬಿಜೆಪಿ ಅವಧಿಯಲ್ಲಾಗಿರುವ ಅಕ್ರಮಗಳನ್ನು ಕಣ್ಣಾರೆ ಕಾಣಬಹುದು. ಮುಂಜಾನೆ ಮೋದಿಯವರನ್ನು ಬಾಯಿಗೆ ಬಂದಂತೆ ಬೈದಿದ್ದವನ ಮೇಲೆ ಮಧ್ಯಾಹ್ನದ ವೇಳೆಗೆ ಇ.ಡಿ ಕೇಸ್ ದಾಖಲಿಸಲಾಗುತ್ತದೆ, ಸಂಜೆ ವೇಳೆಗೆ ರೈಡ್ ಆಗುತ್ತದೆ, ಮೋದಿ ಕಟುಟೀಕಾಕಾರ ಮಾರನೇ ದಿನ, ಬಿಜೆಪಿಗೆ ಸೇರಿದ ತಕ್ಷಣ ಆತನ ಮೇಲಿದ್ದ ಕೇಸ್ ವಾಪಸ್ ತೆಗೆದುಕೊಳ್ಳಲಾಗುತ್ತದೆ. ಇದು ತಮಾಷೆಯ ಸಂಗತಿಯಲ್ಲ! ಈ ಎಲ್ಲ ಅಕ್ರಮಗಳು ಮುಂದೆ ಬರುತ್ತವೆ. ಅದಾನಿ ವಿಚಾರದಲ್ಲಿ ಈ ಇಬ್ಬರು ನಾಯಕರು ಇಡೀ ದೇಶದ ಸಾರ್ವಭೌಮತೆಯನ್ನೇ ಅಡ ಇಟ್ಟಿದ್ದಾರೆ ಎಂಬ ಟೀಕೆಗಳು ಸುಮ್ಮನೆ ಬಂದಿಲ್ಲ. ಬಿಜೆಪಿಯಿಂದ ಸುಖಾಸುಮ್ಮನೆ ಸಮಸ್ಯೆ ಅನುಭವಿಸಿರುವ ವಿರೋಧ ಪಕ್ಷಗಳಿಗೆ, ಪಕ್ಷಗಳನ್ನೇ ಬುಡಮೇಲು ಮಾಡಿರುವ ಬಿಜೆಪಿ ರಾಜಕಾರಣದಿಂದ ನೊಂದವರಿಗೆ ಅಧಿಕಾರ ದೊರೆತ್ತಲ್ಲಿ ಮೋದಿ-ಶಾ ಜೋಡಿ ಕಾನೂನು ಕುಣಿಕೆಗೆ ಸಿಕ್ಕಿಬೀಳದೆ ಇರುವುದಿಲ್ಲ.
ಈ ಎಲ್ಲ ಕಾರಣದಿಂದ ಬಿಜೆಪಿ ದೊಡ್ಡ ಬಿಕ್ಕಟ್ಟಿನಲ್ಲಿ ಸಿಲುಕಿದೆ. ರೂಢಿಗತದಂತೆ ನಡೆಯುವ ಚುನಾವಣೆಯಲ್ಲಿ ಅವರು ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಅದಕ್ಕಾಗಿ ದುಷ್ಟ ತಂತ್ರಗಾರಿಕೆಯನ್ನು ಬಿಜೆಪಿ ರೂಪಿಸಿದೆ. “ಮುಂದಿನ ಚುನಾವಣೆಯನ್ನು ನಾವು ಗೆದ್ದಾಗಿದೆ. ಆ ಗೆಲುವು ದಕ್ಕದೆ ಇರುವಂತೆ ಎಲ್ಲ ಚುನಾವಣಾ ಯಂತ್ರಾಂಗ ಮತ್ತು ಪ್ರಜಾಪ್ರಭುತ್ವದ ಅಂಗಗಳನ್ನು ನಿಯಂತ್ರಿಸಲು ಬಿಜೆಪಿ ಹೊರಟಿದೆ” ಎಂದು ರಾಹುಲ್ ಗಾಂಧಿಯವರು ಇತ್ತೀಚಿಗೆ ‘ಇಂಡಿಯಾ’ ಬಣದ ಸದಸ್ಯರಿಗೆ ಹೇಳಿದ್ದು ಇದೇ ಕಾರಣಕ್ಕಾಗಿ. ಈ ಅಪಾಯವನ್ನು ಅರಿತು, ದೇಶವನ್ನು ಉಳಿಸಿಕೊಳ್ಳುವುದು ಪ್ರತಿ ನಾಗರಿಕನ ಕರ್ತವ್ಯ. ಎಸ್ಐಆರ್ ಎಂಬ ಸಂವಿಧಾನ ವಿರೋಧಿ ಕೃತ್ಯವನ್ನು ತಡೆಯಬೇಕಾಗಿದೆ. ಇದು ಉಂಟು ಮಾಡಿರುವ ಅವಾಂತರವನ್ನು ಈಗಾಗಲೇ ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇಡೀ ದೇಶ ನೋಡಿದೆ.



