ಸಿಖ್ ಕೈದಿಗಳ ಬಿಡುಗಡೆಗೆ ಆಗ್ರಹಿಸಿ ಪಂಜಾಬ್ ರಾಜ್ಯಪಾಲರ ನಿವಾಸದತ್ತ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರನ್ನು ಚದುರಿಸಲು ಚಂಡೀಗಢ ಪೊಲೀಸರು ಇಂದು ಅಶ್ರುವಾಯು ಸಿಡಿಸಿ, ಜಲಫಿರಂಗಿ ಪ್ರಯೋಗಿಸಿದ್ದಾರೆ.
ಚಂಡೀಗಢದ ಲೋಕಭವನದಲ್ಲಿರುವ ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರ ನಿವಾಸದತ್ತ ಸಾಗುತ್ತಿದ್ದ ಪ್ರತಿಭಟನಾಕಾರರು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತು. ಕೆಲವರು ಬ್ಯಾರಿಕೇಡ್‌ಗಳನ್ನು ಏರಿದರೆ, ಇನ್ನು ಕೆಲವರು ಟ್ರ್ಯಾಕ್ಟರ್ ಬಳಸಿ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲು ಪ್ರಯತ್ನಿಸಿದರು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹಲವು ಸುತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ, ಜಲಫಿರಂಗಿ ಮೂಲಕ ನೀರು ಹರಿಸಿದರು ಎಂದು ವರದಿಯಾಗಿದೆ.
ಪ್ರತಿಭಟನಾಕಾರರು ಲೋಕಭವನ ತಲುಪುವುದನ್ನು ತಡೆಯಲು ಚಂಡೀಗಢ-ಮೊಹಾಲಿ ಗಡಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಮುಳ್ಳುತಂತಿ ಅಳವಡಿಸಿದ ಬಹುಹಂತದ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ಗಲಭೆ ನಿಯಂತ್ರಣ ವಾಹನಗಳು ಹಾಗೂ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಸಿಬ್ಬಂದಿ ಸೇರಿದಂತೆ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಚಂಡೀಗಢ ಮತ್ತು ಮೊಹಾಲಿ ನಡುವಿನ ಎಲ್ಲ ಗಡಿ ಪ್ರವೇಶ ಬಿಂದುಗಳನ್ನು ಮುಚ್ಚಲಾಗಿತ್ತು. ಭದ್ರತಾ ಕ್ರಮದ ಭಾಗವಾಗಿ ಹಲವು ಕಡೆ ಟಿಪ್ಪರ್ ಲಾರಿಗಳನ್ನೂ ಅಡ್ಡವಾಗಿ ನಿಲ್ಲಿಸಲಾಗಿತ್ತು.
‘ಕೌಮಿ ಇನ್ಸಾಫ್ ಮೋರ್ಚಾ’ ರಾಜ್ಯಪಾಲರ ನಿವಾಸದತ್ತ ಮೆರವಣಿಗೆಗೆ ಕರೆ ನೀಡಿತ್ತು. ‘ಬಂದಿ ಸಿಂಗ್’ ಎಂದು ಕರೆಯಲಾಗುವ ಸಿಖ್ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ. ವಿವಿಧ ಜೈಲುಗಳಲ್ಲಿ ಶಿಕ್ಷೆ ಪೂರ್ಣಗೊಂಡಿದ್ದರೂ ಹಲವು ಸಿಖ್ ಕೈದಿಗಳು ಇನ್ನೂ ಬಂಧನದಲ್ಲಿದ್ದಾರೆ ಎಂದು ಮೋರ್ಚಾ ಆರೋಪಿಸಿದೆ. ಮೋರ್ಚಾ ಪ್ರಮುಖವಾಗಿ ಬಲ್ವಂತ್ ಸಿಂಗ್ ರಾಜೋಅನಾ ಮತ್ತು ದೇವಿಂದರ್‌ಪಾಲ್ ಸಿಂಗ್ ಭುಲ್ಲರ್ ಸೇರಿದಂತೆ ಹಲವು ಕೈದಿಗಳ ಬಿಡುಗಡೆಗೆ ಆಗ್ರಹಿಸುತ್ತಿದೆ. ರಾಜೋಅನಾ ಅವರು 1995ರಲ್ಲಿ ಪಂಜಾಬ್ ಮುಖ್ಯಮಂತ್ರಿ ಬೇಅಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಭುಲ್ಲರ್ ಅವರು 1993ರ ದೆಹಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ: 38 ಮಂದಿ ಸಾವು; ಬೆಚ್ಚಿಬೀಳಿಸುವ VIDEO
‘ಬಂದಿ ಸಿಂಗ್’ ಎಂಬ ಪದವನ್ನು ಸಾಮಾನ್ಯವಾಗಿ 1990ರ ದಶಕದ ಪಂಜಾಬ್ ಉಗ್ರಗಾಮಿ ಚಳವಳಿಯ ಸಂದರ್ಭದಲ್ಲಿ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಸಿಖ್ ಕೈದಿಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಕೌಮಿ ಇನ್ಸಾಫ್ ಮೋರ್ಚಾ 2023ರ ಜನವರಿ 7ರಿಂದ ಚಂಡೀಗಢದ ಸೆಕ್ಟರ್ 52–53 ಮತ್ತು ಮೊಹಾಲಿಯ YPS ಚೌಕ್ ಪ್ರದೇಶದಲ್ಲಿ ಸಿಖ್ ಕೈದಿಗಳ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದೆ. ಮೋರ್ಚಾದ ಬೇಡಿಕೆಗೆ ಶಿರೋಮಣಿ ಅಕಾಲಿ ದಳ (ವಾರಿಸ್ ಪಂಜಾಬ್ ದೇ), SAD (ಪುನರ್‌ಸರ್ಜಿತ) ಮತ್ತು ವಿವಿಧ ನಿಹಾಂಗ್ ಸಂಘಟನೆಗಳು ಸೇರಿದಂತೆ ಹಲವು ಸಿಖ್ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಈಗಾಗಲೇ ಬೆಂಬಲ ವ್ಯಕ್ತಪಡಿಸಿವೆ.




