ವರ್ಜೀನಿಯಾ ಸ್ಟೇಟ್ ಯೂನಿವರ್ಸಿಟಿಯ (VSU) ಕ್ವಾಡ್ ಅನೆಕ್ಸಸ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಶನಿವಾರ ಮುಂಜಾನೆ ಇಡೀ ಕ್ಯಾಂಪಸ್ ಅನ್ನು ಲಾಕ್‌ಡೌನ್ ಮಾಡಲಾಗಿದೆ.
ಬಾಯ್ಸಿಯೊ ಸ್ಟ್ರೀಟ್ ಮತ್ತು ಥರ್ಡ್ ಅವೆನ್ಯೂ ಪ್ರದೇಶದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಯಾರಿಗೂ ಪ್ರಾಣಾಪಾಯವಿಲ್ಲ ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ. ಘಟನೆಯ ಬೆನ್ನಲ್ಲೇ ವರ್ಜೀನಿಯಾ ಸ್ಟೇಟ್ ಯೂನಿವರ್ಸಿಟಿ ಪೊಲೀಸ್ ಹಾಗೂ ಚೆಸ್ಟರ್‌ಫೀಲ್ಡ್ ಕೌಂಟಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.
ಈ ಗುಂಡಿನ ದಾಳಿಯಲ್ಲಿ ಹಲವು ದುಷ್ಕರ್ಮಿಗಳು ಭಾಗಿಯಾಗಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಆದರೆ, ಈವರೆಗೆ ಯಾರನ್ನೂ ಬಂಧಿಸಿಲ್ಲ ಮತ್ತು ಆರೋಪಿಗಳ ಗುರುತು ಇನ್ನು ಪತ್ತೆಯಾಗಿಲ್ಲ. ಘಟನೆಗೆ ನಿಖರವಾದ ಕಾರಣವೇನು ಹಾಗೂ ಒಟ್ಟು ಎಷ್ಟು ಜನರಿಗೆ ಗಾಯಗಳಾಗಿವೆ ಎಂಬ ಅಧಿಕೃತ ಮಾಹಿತಿಯನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ. ತನಿಖೆ ಮುಂದುವರಿದಿರುವ ಕಾರಣ ಸಾರ್ವಜನಿಕರು ಆ ಪ್ರದೇಶದತ್ತ ತೆರಳಬಾರದು ಎಂದು ಪೊಲೀಸರು ಸೂಚಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಕ್ಯಾಂಪಸ್ ಸಿಬ್ಬಂದಿ ಕಾನೂನು ಜಾರಿ ಸಂಸ್ಥೆಗಳ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಕ್ಸ್ (X) ಖಾತೆಯಲ್ಲಿ ಮನವಿ ಮಾಡಲಾಗಿದೆ.
ವಿಶ್ವವಿದ್ಯಾಲಯದ ಫಾಲ್ (ಶರತ್ಕಾಲದ) ಸೆಮಿಸ್ಟರ್ ಆರಂಭವಾಗಲು ಇನ್ನೇನು ಕೆಲವೇ ದಿನಗಳಿರುವಾಗ ಈ ಆಘಾತಕಾರಿ ಘಟನೆ ನಡೆದಿದೆ. ಹೊಸ ವಿದ್ಯಾರ್ಥಿಗಳಿಗಾಗಿ ಶುಕ್ರವಾರವಷ್ಟೇ ಕ್ಯಾಂಪಸ್‌ನಲ್ಲಿ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸೋಮವಾರದಿಂದ ತರಗತಿಗಳು ಎಂದಿನಂತೆ ಆರಂಭವಾಗಲಿವೆ ಎಂದು ಹೇಳಲಾಗಿದೆ. ಘಟನೆಯ ಕುರಿತು ಯಾವುದೇ ಮಾಹಿತಿ ಇದ್ದರೂ ವರ್ಜೀನಿಯಾ ಸ್ಟೇಟ್ ಯೂನಿವರ್ಸಿಟಿ ಪೊಲೀಸರನ್ನು 804-524-5411 ಸಂಖ್ಯೆಯ ಮೂಲಕ ಸಂಪರ್ಕಿಸುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ.




