ಶನಿವಾರ ತಡರಾತ್ರಿ ಸುಮಾರು 10.30ರ ವೇಳೆಗೆ ಆನಂದಪುರ ಮೈದಾನದ ಸಮೀಪ ಘಟನೆ ನಡೆದಿದೆ. ಒಂದು ಬಣದ ವತಿಯಿಂದ 1,000ಕ್ಕೂ ಅಧಿಕ ಮಂದಿಗೆ ಮಟನ್, ಕಟ್ಲಾ ಮೀನು ಹಾಗೂ ದೈತ್ಯ ಸಿಹಿನೀರಿನ ಸೀಗಡಿಗಳ ಭರ್ಜರಿ ಔತಣ ಏರ್ಪಡಿಸಲಾಗಿತ್ತು. ಔತಣಕೂಟದ ಕೂಪನ್‌ಗಳಲ್ಲಿ ಬಿಜೆಪಿ ಕಸ್ಬಾ ವಿಧಾನಸಭಾ ಘಟಕದ ಹೆಸರನ್ನು ಆಯೋಜಕರಾಗಿ ನಮೂದಿಸಲಾಗಿತ್ತು.
ಆದರೆ ಈ ಔತಣಕೂಟಕ್ಕೆ ಪಕ್ಷದ ಅಧಿಕೃತ ಅನುಮತಿ ಇರಲಿಲ್ಲ ಎಂದು ಸ್ಥಳೀಯ ಬಿಜೆಪಿ ಮಂಡಲ ಅಧ್ಯಕ್ಷ ಅರುಣ್ ಬಿಷೋಯಿ ಅಲಿಯಾಸ್ ಅರುಣ್ ಬಿಸ್ವಾಲ್ ಆರೋಪಿಸಿದ್ದಾರೆ. ಉದ್ಯಮಿಗಳು ಹಾಗೂ ಆಭರಣ ಮಳಿಗೆಗಳ ಮಾಲೀಕರಿಂದ ಬೆದರಿಸಿ ಹಣ ಸಂಗ್ರಹಿಸಿ ಔತಣಕೂಟ ಆಯೋಜಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ನಾವು ಹಲವು ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಟಿಎಂಸಿ ಕಾರ್ಯಕರ್ತರ ದಾಳಿಯನ್ನೂ ಎದುರಿಸಿದ್ದೇವೆ. ಆದರೆ ನಮಗೆ ಸರಳವಾದ ಮೀನು-ಅನ್ನದ ಊಟವನ್ನೂ ಆಯೋಜಿಸಲು ಸಾಧ್ಯವಾಗಲಿಲ್ಲ. ಹಾಗಿದ್ದರೆ ಇವರಿಗೆ ಮಟನ್ ಖರೀದಿಸಲು ಹಣ ಎಲ್ಲಿಂದ ಬಂತು? ಆಭರಣ ಮಳಿಗೆಗಳಿಂದ ಹಣ ಪಡೆದಿದ್ದಾರೆ” ಎಂದು ಬಿಷೋಯಿ ಆರೋಪಿಸಿದ್ದಾರೆ.
ಆದರೆ ದಕ್ಷಿಣ ಕೊಲ್ಕತ್ತಾ ಜಿಲ್ಲಾ ಸಮಿತಿ ಸದಸ್ಯೆ ಸರಸ್ವತಿ ಸರ್ಕಾರ್ ಅವರ ಬೆಂಬಲಿತ ಬಣ ಈ ಆರೋಪಗಳನ್ನು ತಳ್ಳಿಹಾಕಿದೆ. ಔತಣಕೂಟದ ಆಯೋಜನೆ ವಿಚಾರವೇ ಬಳಿಕ ಎರಡು ಬಣಗಳ ನಡುವಿನ ವಾಗ್ವಾದಕ್ಕೆ ಕಾರಣವಾಗಿ ಘರ್ಷಣೆ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ಲೂಟಿಯ ವರದಿಗಾರ ಅಭಿಷೇಕ್ ಉಪಾಧ್ಯಾಯಗೆ ಕಿರುಕುಳ; ಸುಪ್ರೀಂ ಮೊರೆ ಹೋದ ಪತ್ರಕರ್ತ
ಸ್ಥಳೀಯ ಬಿಜೆಪಿ ಹಿರಿಯ ನಾಯಕರ ಪ್ರಕಾರ, ಮೇ 4ರ ಬಳಿಕ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಕೆಲವರು ಈ ಔತಣಕೂಟವನ್ನು ಆಯೋಜಿಸಿದ್ದರು ಎನ್ನಲಾಗಿದೆ. ಘರ್ಷಣೆ ಆನಂದಪುರ ಪೊಲೀಸ್ ಠಾಣೆಯ ಹೊರಭಾಗಕ್ಕೂ ವ್ಯಾಪಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ದಿಲೀಪ್ ಘೋಷ್, “ಈ ಔತಣಕೂಟ ಯಾರದ್ದು ಎಂಬುದು ನನಗೆ ಗೊತ್ತಿಲ್ಲ” ಎಂದು ಹೇಳಿದ್ದಾರೆ. ಪಕ್ಷದ ಆಂತರಿಕ ಬಣ ಸಂಘರ್ಷವೇ ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




