ಕಳ್ಳಭಟ್ಟಿ ಸೇವಿಸಿ ಕನಿಷ್ಠ 19 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ನಾಗಾಲ್ಯಾಂಡ್‌ನಲ್ಲಿ ನಡೆದಿದೆ. ಕಳೆದ ಎರಡು ದಿನಗಳಲ್ಲಿ ಮೊಕೊಕ್ಚುಂಗ್ ಜಿಲ್ಲೆಯಲ್ಲಿ 8 ಮಂದಿ ಹಾಗೂ ಟುಯೆನ್‌ಸಾಂಗ್ ಜಿಲ್ಲೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬೆನ್ನಲ್ಲೇ ಅಕ್ರಮ ಮದ್ಯದ ಮೂಲ ಮತ್ತು ಪೂರೈಕೆ ಜಾಲವನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐ. ಬಂಗ್ಲಾಂಗ್ ಚಾಂಗ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ಕಳ್ಳಭಟ್ಟಿ ಎಲ್ಲಿಂದ ಪೂರೈಕೆಯಾಗುತ್ತಿತ್ತು ಹಾಗೂ ಇದರ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಮೃತರ ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ಮದ್ಯದ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಗುವಾಹಟಿಗೆ ಕಳುಹಿಸಲಾಗಿದೆ. ತನಿಖೆಯಲ್ಲಿ ಕೆಲವು ಮಹತ್ವದ ಸುಳಿವುಗಳು ಸಿಕ್ಕಿವೆ. ಆದರೆ ತನಿಖೆಯ ಹಿತದೃಷ್ಟಿಯಿಂದ ಹೆಚ್ಚಿನ ಮಾಹಿತಿಯನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವೆಸುಪ್ರಾ ಕೆಜೊ ತಿಳಿಸಿದ್ದಾರೆ.
ಸಾವುಗಳ ಬಳಿಕ ರಾಜ್ಯದ ವಿವಿಧೆಡೆ ಪೊಲೀಸರು ದಾಳಿ ನಡೆಸಿದ್ದು, ಹಲವರನ್ನು ಬಂಧಿಸಿ ಸುಮಾರು 3,000 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ನಾಗಾಲ್ಯಾಂಡ್‌ನಲ್ಲಿ 1990ರಿಂದ ಮದ್ಯ ನಿಷೇಧ ಕಾನೂನು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಅಕ್ರಮ ಮದ್ಯದ ಪೂರೈಕೆ ಜಾಲದ ವಿರುದ್ಧ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಗುರುತು ಇಲ್ಲದ, ಲೇಬಲ್ ಇಲ್ಲದ ಅಥವಾ ಅನುಮತಿ ಇಲ್ಲದೆ ಮಾರಾಟವಾಗುತ್ತಿರುವ ಮದ್ಯ ಸೇವಿಸದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಮದ್ಯ ಸೇವಿಸಿದ ಬಳಿಕ ತಲೆಸುತ್ತು, ದೃಷ್ಟಿ ಮಸುಕಾಗುವುದು, ಉಸಿರಾಟದ ತೊಂದರೆ, ವಾಂತಿ ಅಥವಾ ಪ್ರಜ್ಞೆ ಕಳೆದುಕೊಳ್ಳುವಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯಕೀಯ ನೆರವು ಪಡೆಯುವಂತೆ ಸೂಚಿಸಿದ್ದಾರೆ.
ದೇಶದಲ್ಲಿ ಇತ್ತೀಚೆಗೆ ನಡೆದಿರುವ ಹಲವು ಕಳ್ಳಭಟ್ಟಿ ಪ್ರಕರಣಗಳು ಆತಂಕಕ್ಕೀಡು ಮಾಡುತ್ತವೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದರು. ತನಿಖೆ ವೇಳೆ ಅಕ್ರಮ ಮದ್ಯ ತಯಾರಿಕೆ ಮತ್ತು ಪೂರೈಕೆಯಲ್ಲಿ ಅಂತರರಾಜ್ಯ ಜಾಲವೊಂದು ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ದಾಳಿಗಳಲ್ಲಿ ಬಾಟಲಿ ತಯಾರಿಕೆ ಯಂತ್ರಗಳು, ಸೀಲಿಂಗ್ ಉಪಕರಣಗಳು, 11,050 ಖಾಲಿ ಬಾಟಲಿಗಳು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: ಬೆಳಗಾವಿ | ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ
ಗುಜರಾತ್‌ನ ಭಾವನಗರದಲ್ಲೂ ಆಗಸ್ಟ್‌ನಲ್ಲಿ ಕಳ್ಳಭಟ್ಟಿ ಸೇವನೆಯಿಂದ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 39 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಕರಣದ ತನಿಖೆಯಲ್ಲಿ ನಕಲಿ ಬ್ರ್ಯಾಂಡ್‌ಗಳ ಲೇಬಲ್‌ಗಳು, ಬಾಟಲಿ ಮುಚ್ಚಳಗಳು, ಪ್ಯಾಕೇಜಿಂಗ್ ವಸ್ತುಗಳು ಹಾಗೂ ರಾಸಾಯನಿಕಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ಅಕ್ರಮ ತಯಾರಿಕಾ ಘಟಕ ಪತ್ತೆಯಾಗಿತ್ತು. ಈ ಪ್ರಕರಣವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ಸ್ವಯಂಪ್ರೇರಿತವಾಗಿ ಪರಿಗಣಿಸಿತ್ತು.
ಇತ್ತೀಚಿನ ಪ್ರಕರಣಗಳು ಕಳ್ಳಭಟ್ಟಿ ವ್ಯಾಪಾರ ಕೇವಲ ಸ್ಥಳೀಯ ಅಕ್ರಮ ಮದ್ಯ ಮಾರಾಟಕ್ಕೆ ಸೀಮಿತವಾಗದೆ, ನಕಲಿ ಲೇಬಲ್, ಪ್ಯಾಕೇಜಿಂಗ್, ರಾಸಾಯನಿಕಗಳ ಬಳಕೆ ಹಾಗೂ ಅಂತರರಾಜ್ಯ ಪೂರೈಕೆ ಜಾಲದ ರೂಪ ಪಡೆಯುತ್ತಿರುವುದನ್ನು ತನಿಖೆಗಳು ತೋರಿಸುತ್ತಿವೆ. ಸಾಗರ್ ಪ್ರಕರಣದಲ್ಲಿ ಕಳ್ಳಭಟ್ಟಿ ತಯಾರಿಕೆಗೆ ಬಳಸಲಾದ ಕಚ್ಚಾ ವಸ್ತುಗಳು ದೆಹಲಿಯಿಂದ ಬಂದಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.




