ರಾಜ್ಯಸಭಾ ಚುನಾವಣೆಗೆ ತಮ್ಮ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇದಾದ ಬಳಿಕ ಕಾಂಗ್ರೆಸ್ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಲು ಸಜ್ಜಾಗಿದೆ.
ಚುನಾವಣಾ ಅರ್ಜಿ ಸಲ್ಲಿಸಿ ಎಂದು ಹೇಳಿದ ಸುಪ್ರೀಂ ಕೋರ್ಟ್ ಕಾಂಗ್ರೆಸ್ ನಾಯಕಿಯ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್ ಚಂದೂರ್ಕರ್ ಅವರನ್ನೊಳಗೊಂಡ ಪೀಠವು ನಟರಾಜನ್ ಅವರ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರ ವಾದವನ್ನು ತಿರಸ್ಕರಿಸಿದೆ.
ಇದನ್ನು ಓದಿದ್ದೀರಾ? ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದತಿ; ಸೋಲುವ ಪಂದ್ಯವನ್ನು ಮೋಸದಿಂದ ಗೆದ್ದ ಬಿಜೆಪಿ!
ಈ ಸಂಬಂಧ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರೊಂದಿಗೆ ನಿರುದ್ಯೋಗ ಮತ್ತು ಪರೀಕ್ಷಾ ಪತ್ರಿಕೆ ಸೋರಿಕೆಯ ಕುರಿತಾದ ತನ್ನ ರಾಷ್ಟ್ರವ್ಯಾಪಿ ಅಭಿಯಾನದ ಜೊತೆಗೆ, ಕಾಂಗ್ರೆಸ್ ‘ಚುನಾವಣೆ ವಂಚನೆ’ ಬಗ್ಗೆಯೂ ಅಭಿಯಾನ ನಡೆಸಲು ಮುಂದಾಗಿದೆ.
ತೆಲಂಗಾಣದ ಹೈದರಾಬಾದ್‌ನಲ್ಲಿ ಬಾಕಿ ಇರುವ ಒಂದು ಕಾನೂನು ಪ್ರಕರಣದ ವಿವರಗಳನ್ನು ಮೀನಾಕ್ಷಿ ನಟರಾಜನ್ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ ಎಂದು ಬಿಜೆಪಿ ನಾಯಕರು ಚುನಾವಣಾ ಅಧಿಕಾರಿಗೆ ದೂರು ನೀಡಿದ್ದರು. ಈ ಆಕ್ಷೇಪಣೆಯನ್ನು ಪುರಸ್ಕರಿಸಿದ ಚುನಾವಣಾಧಿಕಾರಿ ಅರವಿಂದ್ ಶರ್ಮಾ ಅವರು ಮೀನಾಕ್ಷಿ ಅವರ ನಾಮಪತ್ರವನ್ನು ತಿರಸ್ಕರಿಸಿದ್ದಾರೆ.
ಆದರೆ ಮೀನಾಕ್ಷಿ ನಟರಾಜನ್ ಅವರ ವಿರುದ್ಧ ಯಾವುದೇ ಎಫ್‌ಐಆರ್ (FIR) ಅಥವಾ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ, ಅವರಿಗೆ ಕೇವಲ ನೋಟಿಸ್ ಮಾತ್ರ ನೀಡಲಾಗಿತ್ತು. ಹಾಗಾಗಿ ಅಫಿಡವಿಟ್‌ನಲ್ಲಿ ಅದನ್ನು ಉಲ್ಲೇಖಿಸುವ ಅಗತ್ಯವಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯ ಫಲಿತಾಂಶ ಘೋಷಣೆಗೆ ತಡೆ ನೀಡುವಂತೆ ಕಾಂಗ್ರೆಸ್ ಸುಪ್ರೀಂ ಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿತ್ತು. ಆದರೆ, ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವಾಗ ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಅರ್ಜಿಯ ವಿವರವಾದ ವಿಚಾರಣೆಯನ್ನು ನಡೆಸಲು ಸಮ್ಮತಿಸಿತ್ತು. ಇದೀಗ ಈ ಅರ್ಜಿಯನ್ನೂ ವಜಾಗೊಳಿಸಿ ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ಚುನಾವಣಾ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.





