ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳ ಪಟ್ಟಿಯ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, 17 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 1,12,092ಕ್ಕೂ ಹೆಚ್ಚು ಅನರ್ಹರನ್ನು ಗುರುತಿಸಿ ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ.
ಪರಿಶೀಲನೆ ವೇಳೆ 55,232 ಮೃತ ಮಹಿಳೆಯರ ಖಾತೆಗಳಿಗೆ ಯೋಜನೆಯ ಹಣ ಜಮೆಯಾಗಿರುವುದು ಪತ್ತೆಯಾಗಿದ್ದು, ಜೊತೆಗೆ ಆದಾಯ ತೆರಿಗೆ (ಐಟಿ) ಹಾಗೂ ಜಿಎಸ್‌ಟಿ ಪಾವತಿಸುತ್ತಿರುವ 56,860 ಮಹಿಳೆಯರು ಸಹ ಯೋಜನೆಯ ಫಲಾನುಭವಿಗಳಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಒಟ್ಟು 1,12,092 ಮಹಿಳೆಯರ ಹೆಸರನ್ನು ಗೃಹಲಕ್ಷ್ಮಿ ಯೋಜನೆಯ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಜಿಲ್ಲಾವಾರು ಅಂಕಿ-ಅಂಶಗಳ ಪ್ರಕಾರ, ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು 18,000 ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದರಲ್ಲಿ 13,000 ಮಂದಿ ಮೃತಪಟ್ಟವರಾಗಿದ್ದು, 5,000 ಮಂದಿ ತೆರಿಗೆದಾರರಾಗಿರುವುದು ತಿಳಿದು ಬಂದಿದೆ.
ಇತರೆ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡದಲ್ಲಿ 9,000, ಉಡುಪಿಯಲ್ಲಿ 2,800, ಗದಗದಲ್ಲಿ 1,231, ದಾವಣಗೆರೆಯಲ್ಲಿ 4,000, ಬಾಗಲಕೋಟೆಯಲ್ಲಿ 524, ಉತ್ತರ ಕನ್ನಡದಲ್ಲಿ 6,380, ಹಾವೇರಿಯಲ್ಲಿ 6,346, ಕೊಡಗಿನಲ್ಲಿ 2,687, ಚಿತ್ರದುರ್ಗದಲ್ಲಿ 12,637, ಕೊಪ್ಪಳದಲ್ಲಿ 7,200 ಹಾಗೂ ರಾಯಚೂರು ಜಿಲ್ಲೆಯಲ್ಲಿ 1,854 ಫಲಾನುಭವಿಗಳ ಹೆಸರನ್ನು ಕೈಬಿಡಲಾಗಿದೆ.
ಒಟ್ಟಾರೆ 17 ಜಿಲ್ಲೆಗಳ ವ್ಯಾಪ್ತಿಯಲ್ಲಿ 55,232 ಮಂದಿ ಮೃತಪಟ್ಟ ಫಲಾನುಭವಿಗಳಾಗಿದ್ದು, 56,860 ಮಂದಿ ತೆರಿಗೆ ಪಾವತಿದಾರರಾಗಿರುವುದು ಪತ್ತೆಯಾಗಿದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಇವರು ಯೋಜನೆಗೆ ಅನರ್ಹರಾಗಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಈ ಸುದ್ದಿ ಓದಿದ್ದೀರಾ?ಕೊಡಗು | ಮಾಂದಲಪಟ್ಟಿ ಗಿರಿಧಾಮಕ್ಕೆ 60 ಲಕ್ಷ ರೂ. ವೆಚ್ಚದ ರಸ್ತೆ ಲೋಕಾರ್ಪಣೆ
ಯೋಜನೆಯ ಸೌಲಭ್ಯವು ನಿಜವಾದ ಅರ್ಹ ಮಹಿಳೆಯರಿಗೆ ತಲುಪುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಪರಿಶೀಲನಾ ಕಾರ್ಯವನ್ನು ಮುಂದುವರಿಸಿದ್ದು, ಉಳಿದ ಜಿಲ್ಲೆಗಳಲ್ಲಿಯೂ ಅರ್ಹತೆ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.





