ಇಂಧನ ಉಳಿತಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಶುಕ್ರವಾರ, ಕೇಂದ್ರ ಸರ್ಕಾರವು ಪೆಟ್ರೋಲ್-ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿದೆ. ಈ ನಡುವೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ರಾಜ್ಯ ಸರ್ಕಾರಿ ನೌಕರರಿಗೆ ವಾರದಲ್ಲಿ ಎರಡು ದಿನ ಕಡ್ಡಾಯವಾಗಿ ‘ವರ್ಕ್ ಫ್ರಮ್ ಹೋಮ್’ (ಮನೆಯಿಂದಲೇ ಕೆಲಸ) ಮಾಡುವಂತೆ ಆದೇಶಿಸಿದ್ದಾರೆ. ಇದೇ ಮಾದರಿಯನ್ನು ಅನುಸರಿಸುವಂತೆ ಖಾಸಗಿ ವಲಯದ ಸಂಸ್ಥೆಗಳಿಗೂ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗುಪ್ತಾ, “ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಉಂಟಾಗಿರುವ ಇಂಧನ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದು ಹಾಗೂ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವುದು ಮುಂದಿನ 90 ದಿನಗಳ ಯೋಜನೆಯಾಗಿದೆ” ಎಂದು ಹೇಳಿಕೊಂಡಿದ್ದಾರೆ.
ಅವರ ಆದೇಶದ ಪ್ರಕಾರ, ಆಸ್ಪತ್ರೆಗಳು, ಅಗ್ನಿಶಾಮಕ ದಳ, ಕಾರಾಗೃಹಗಳು, ಸಾರ್ವಜನಿಕ ಸಾರಿಗೆ, ನೀರು ಹಾಗೂ ವಿದ್ಯುತ್ ಪೂರೈಕೆಯಂತಹ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಇಲಾಖೆಗಳು ವಾರದಲ್ಲಿ ಎರಡು ದಿನ ‘ವರ್ಕ್ ಫ್ರಮ್ ಹೋಮ್’ ನಿಯಮವನ್ನು ಜಾರಿಗೆ ತರಬೇಕು. ಇದನ್ನು ಬೆಂಬಲಿಸಲು ದೆಹಲಿ ಕಾರ್ಮಿಕ ಇಲಾಖೆಯು ಸಿಂಗಲ್ ವಿಂಡೋ ಹೆಲ್ಪ್ ಡೆಸ್ಕ್ ಮತ್ತು ಕಾಲ್ ಸೆಂಟರ್ ಅನ್ನು ಸ್ಥಾಪಿಸಲಿದೆ.
ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸುವುದಾಗಿ ಮತ್ತು ಎಲೆಕ್ಟ್ರಿಕ್ ವಾಹನ ಹಾಗೂ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವುದಾಗಿ ರೇಖಾ ಗುಪ್ತ ಹೇಳಿಕೊಂಡಿದ್ದಾರೆ.
ಅಂತೆಯೇ, ಅಧಿಕಾರಿಗಳ ಮಾಸಿಕ ಇಂಧನ ಭತ್ಯೆಯಲ್ಲಿ 20% ಕಡಿತಗೊಳಿಸಲಾಗಿದೆ. ತಮ್ಮ ಸಾರಿಗೆ ಭತ್ಯೆಯ ಕನಿಷ್ಠ 25% ರಷ್ಟನ್ನು ಸಾರ್ವಜನಿಕ ಸಾರಿಗೆಗಾಗಿ ಬಳಸುವ ನೌಕರರಿಗೆ 10% ಪ್ರೋತ್ಸಾಹಧನ ನೀಡಲಾಗುವುದು ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ತಮಿಳುನಾಡು | ವಿಜಯ್ ಸರ್ಕಾರಕ್ಕೆ AIADMK ಬಂಡಾಯ ಬಣ ಬೆಂಬಲ; ಮೋದಿ-ಶಾ ಕುತಂತ್ರವೇ?
ಪ್ರತಿ ಸೋಮವಾರವನ್ನು ‘ಮೆಟ್ರೋ ಮಂಡೇ’ ಎಂದು ಆಚರಿಸಲಾಗುವುದು. ಅಂದು ಸಚಿವರು ಮತ್ತು ಸಿಬ್ಬಂದಿ ಸಾರ್ವಜನಿಕ ಸಾರಿಗೆ ಬಳಸಬೇಕು. ನಾಗರಿಕರು ವಾರಕ್ಕೊಮ್ಮೆ ಸ್ವಯಂಪ್ರೇರಿತವಾಗಿ ‘ನೋ ವೆಹಿಕಲ್ ಡೇ’ (ವಾಹನ ರಹಿತ ದಿನ) ಆಚರಿಸಬೇಕೆಂದು ಅವರು ಕೋರಿದ್ದಾರೆ.
ಇದರಿಂದಾಗುವ ಸಾರಿಗೆ ದಟ್ಟಣೆ ಕಡಿಮೆ ಮಾಡಲು ಕಚೇರಿ ಸಮಯವನ್ನು ಬದಲಾಯಿಸಲಾಗಿದೆ. ದೆಹಲಿ ಸರ್ಕಾರಿ ಕಚೇರಿಗಳು ಬೆಳಿಗ್ಗೆ 10:30 ರಿಂದ ಸಂಜೆ 7 ರವರೆಗೆ ಮತ್ತು ದೆಹಲಿ ಮಹಾನಗರ ಪಾಲಿಕೆಯು (MCD) ಬೆಳಿಗ್ಗೆ 8:30 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸುವಂತೆ ಮಾರ್ಪಾಡು ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಪ್ರಾಯೋಗಿಕವಲ್ಲದ ತರಗತಿಗಳನ್ನು ವರ್ಚುವಲ್ ಆಗಿ ನಡೆಸಲು ಸೂಚಿಸಲಾಗಿದೆ.



