ವಾರಕ್ಕೆ ಐದು ದಿನಗಳ ಕೆಲಸದ ಅವಧಿಯನ್ನು ಜಾರಿಗೆ ತರಬೇಕು ಮತ್ತು ಪರಿಷ್ಕೃತ ‘ಕಾಮಗಾರಿ ಆಧಾರಿತ ಪ್ರೋತ್ಸಾಹಕ’ (PLI) ಯೋಜನೆಯನ್ನು ಹಿಂಪಡೆಯಬೇಕು ಎಂಬ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶದ ಪ್ರಮುಖ ಬ್ಯಾಂಕ್ ಯೂನಿಯನ್‌ಗಳು ಕರೆ ನೀಡಿದ್ದ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸೇವೆಗಳು ವ್ಯತ್ಯಯಗೊಂಡಿವೆ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ಎಐಬಿಇಎ, ಎಐಬಿಒಸಿ ಸೇರಿದಂತೆ 9 ಪ್ರಮುಖ ಬ್ಯಾಂಕ್ ಉದ್ಯೋಗಿ ಹಾಗೂ ಅಧಿಕಾರಿಗಳ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಪ್ರತಿಭಟನೆಯ ಪರಿಣಾಮವಾಗಿ ದೇಶದ ವಿವಿಧೆಡೆ ನಗದು ಠೇವಣಿ, ಹಿಂತೆಗೆದುಕೊಳ್ಳುವಿಕೆ, ಚೆಕ್ ಕ್ಲಿಯರೆನ್ಸ್ ಹಾಗೂ ಶಾಖೆಗಳ ಮೂಲಕ ನಡೆಯುವ ಸಾಮಾನ್ಯ ಹಣಕಾಸು ವ್ಯವಹಾರಗಳು ಬಾಧಿತಗೊಂಡಿವೆ.
ಇದನ್ನೂ ಓದಿ: ಸಾರ್ವತ್ರಿಕ ಮುಷ್ಕರ | ಗುಬ್ಬಿ ಬಂದ್ ಭಾಗಶಃ ಬಂದ್ ಯಶಸ್ವಿ
ಪ್ರಸ್ತುತ ಮೊದಲ ಮತ್ತು ಮೂರನೇ ಶನಿವಾರ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ರದ್ದುಗೊಳಿಸಿ, ವಾರದ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕೆಲಸದ ದಿನಗಳನ್ನಾಗಿ ಘೋಷಿಸಬೇಕು. ಸೋಮವಾರದಿಂದ ಶುಕ್ರವಾರಕ್ಕೆ ಪ್ರತಿದಿನ 40 ನಿಮಿಷಗಳ ಹೆಚ್ಚುವರಿ ಕೆಲಸದ ಸಮಯವನ್ನು ನೀಡಲು ಯೂನಿಯನ್‌ಗಳು ಒಪ್ಪಿಕೊಂಡಿದ್ದು, ಈ ಕುರಿತು ಭಾರತೀಯ ಬ್ಯಾಂಕ್‌ಗಳ ಸಂಘ (IBA) ಹಾಗೂ ಯೂನಿಯನ್‌ಗಳ ನಡುವೆ ನಡೆದಿದ್ದ ಒಪ್ಪಂದವನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿವೆ.
ಹಾಗೆಯೇ ಬ್ಯಾಂಕ್‌ನ ಒಟ್ಟಾರೆ ಸಾಧನೆ ಆಧರಿಸಿ ಪ್ರೋತ್ಸಾಹಕ ನೀಡುವುದನ್ನು ಬಿಟ್ಟು, ಉದ್ಯೋಗಿಗಳ ಪ್ರತ್ಯೇಕ ಕಾರ್ಯಕ್ಷಮತೆ ಆಧಾರಿತ ಹೊಸ PLI ಯೋಜನೆಯನ್ನು ಜಾರಿಗೆ ತರಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಕೇಂದ್ರ ಸರ್ಕಾರ ಹಾಗೂ ಭಾರತೀಯ ಬ್ಯಾಂಕ್‌ಗಳ ಸಂಘವು (IBA) ತಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಮೂರು ದಿನಗಳ ಸುದೀರ್ಘ ಮುಷ್ಕರ ಹಾಗೂ ತದನಂತರ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬ್ಯಾಂಕ್ ಸಂಘಟನೆಗಳು ಎಚ್ಚರಿಕೆ ನೀಡಿವೆ.





