ತಮಿಳುನಾಡಿನ ಆಡಳಿತಾರೂಢ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರುವ ಎಡಪಕ್ಷಗಳು (ಸಿಪಿಐ ಮತ್ತು ಸಿಪಿಎಂ), ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಕಠಿಣ ರಾಜಕೀಯ ಸವಾಲೊಂದನ್ನು ಒಡ್ಡಿವೆ. “ಅಧಿಕಾರಿಗಳ ಆಡಳಿತ ಬೇಕೋ ಅಥವಾ ಎಡಪಕ್ಷಗಳ ಬೆಂಬಲ ಬೇಕೋ ಎಂಬುದನ್ನು ಮುಖ್ಯಮಂತ್ರಿಗಳೇ ತೀರ್ಮಾನಿಸಬೇಕು” ಎಂದು ಎಡಪಕ್ಷಗಳ ನಾಯಕರು ಬಹಿರಂಗವಾಗಿ ಎಚ್ಚರಿಸಿದ್ದಾರೆ.
ಎಡಪಂಥೀಯ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಿ ರಾಜ್ಯ ಸರ್ಕಾರ ಹೊರಡಿಸಿದ, ಬಳಿಕ ಹಿಂಪಡೆದ ವಿವಾದಾತ್ಮಕ ಸುತ್ತೋಲೆ ಈ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಎಡಪಕ್ಷ, ಸಿಜೆಪಿ ಪ್ರತಿಭಟನೆಯಿಂದ ವಿದ್ಯಾರ್ಥಿಗಳನ್ನು ತಡೆಯುವ ಆದೇಶ ಹಿಂಪಡೆದ ವಿಜಯ್ ಸರ್ಕಾರ
ಬ್ರಿಟೀಷರ ಕಾಲದ ಕಾಯ್ದೆಗಳನ್ನು ನೆನಪಿಸುವಂತೆ ಹೊರಡಿಸಲಾದ ಈ ಆದೇಶಗಳು ಹಾಗೂ ದಿಂಡಿಗಲ್ ಜಿಲ್ಲೆಯಲ್ಲಿ ಸಿಪಿಐ-ಸಿಪಿಎಂ ಪದಾಧಿಕಾರಿಗಳ ಮಾಹಿತಿ ಸಂಗ್ರಹಿಸಲು ತಹಸೀಲ್ದಾರ್ ನಡೆಸಿದ ಯತ್ನಗಳನ್ನು ಎಡಪಕ್ಷಗಳು ತೀವ್ರವಾಗಿ ಖಂಡಿಸಿವೆ.
ಕೇಂದ್ರದ ಬಿಜೆಪಿ ಸರ್ಕಾರದ ಇಷಾರೆಯಂತೆ ರಾಜ್ಯದ ಹಿರಿಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅನುಮಾನವನ್ನೂ ನಾಯಕರು ವ್ಯಕ್ತಪಡಿಸಿದ್ದಾರೆ.
ವಿವಾದಾತ್ಮಕ ಆದೇಶಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಸಿ. ಸಾಯಿ ಕುಮಾರ್ ಅವರೇ ನೇರ ಹೊಣೆ ಎಂದು ಆರೋಪಿಸಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ, ತಕ್ಷಣವೇ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಈ ವಿಷಯದಲ್ಲಿ ಅಧಿಕಾರಿಗಳು ಸರ್ಕಾರದ ನಿಯಂತ್ರಣದಲ್ಲಿದ್ದಾರೋ ಅಥವಾ ಸರ್ಕಾರವೇ ಅಧಿಕಾರಿಗಳ ಕಟುಕೈಯಲ್ಲಿದೆಯೋ ಎಂಬುದನ್ನು ಮುಖ್ಯಮಂತ್ರಿ ವಿಜಯ್ ಸ್ವತಃ ಸ್ಪಷ್ಟಪಡಿಸಬೇಕು. ವಿವಾದಾತ್ಮಕ ಸುತ್ತೋಲೆಗಳ ಹಿನ್ನೆಲೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡಿಯನ್ ಮಾತನಾಡಿ, “ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಹಾಗೂ ಸಾಮಾಜಿಕ ನ್ಯಾಯದ ಪರ ದ್ವನಿಗಳನ್ನು ಹತೋಟಿಗೆ ತರಲು ಹುನ್ನಾರ ನಡೆಸಲಾಗುತ್ತಿದೆ. ಮುಖ್ಯಮಂತ್ರಿಗಳು ಮೌನ ಮುರಿದು ಈ ಕುರಿತು ವಿಷಾದ ವ್ಯಕ್ತಪಡಿಸಬೇಕು ಹಾಗೂ ತಮ್ಮ ನಿಲುವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಚೆನ್ನೈನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಈ ಎಚ್ಚರಿಕೆ ನೀಡಲಾಗಿದ್ದು, ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಇದು ಮೊದಲ ದೊಡ್ಡ ರಾಜಕೀಯ ಪರೀಕ್ಷೆಯಾಗಿ ಪರಿಣಮಿಸಿದೆ.




