ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ದಾಸನ ದಾಸ
ಆವ ಜಾತಿಯಲ್ಲಾದರೂ ಆಗಲಿ
ಪುರಾತನ ಚಾರಿತ್ರದಲ್ಲಿ ನಡೆದು, ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಮಂ ಕೊಟ್ಟು, ಅಹಂಕಾರವಳಿದಂಥಾ ಪುರಾತನರ
ಬಾಯ ತಂಬುಲವ ಮೆಲುವೆ,
ಬೀಳುಡಿಗೆಯ ಹೊದಿವೆ.
ಅವರ ಪಾದರಕ್ಷೆಗಳೆರಡನೂ ಮಂಡೆಯ ಮೇಲೆ ಹೊತ್ತುಕೊಂಡು ಬದುಕುವೆನಯ್ಯಾ.
ಆ ಗಣಂಗಳ ದಾಸನ ದಾಸ ನಾನು
ಜನ್ಮ ಜನ್ಮದಲ್ಲಿ ಆಗುವೆ ಕಾಣಾ ಗುಹೇಶ್ವರಾ.
ಪದಾರ್ಥ:
ಆವ = ಯಾವ
ಬೀಳುಡಿಗೆ = ತೊಟ್ಟು ಬಿಟ್ಟ ಬಟ್ಟೆ
ಮಂಡೆ = ತಲೆ
ವಚನಾರ್ಥ:
ದಕ್ಷಿಣ ಭಾರತ ದ್ರಾವಿಡ ಭಕ್ತಿ ಪಂಥದ ಶೈವ ಪರಂಪರೆಯಲ್ಲಿ ಅರವತ್ತುಮೂರು ಪುರಾತನ ಶಿವಶರಣರ ಇತಿಹಾಸವಿದೆ. ಇವರೇ ತಮಿಳಿನ ಪೆರಿಯಪುರಾಣದಲ್ಲಿ ನಿರೂಪಿತರಾಗಿರುವ ಶರಣರು. ಹತ್ತನೇ ಶತಮಾನಕ್ಕೆ ಸೇರಿದ ಇವರನ್ನು ಕನ್ನಡ ವಚನಕಾರರು ಪುರಾತನರು, ಪ್ರಮಥರು ಎಂದೂ, ತಮಿಳರು ನಾಯನಾರ್ ಎಂದೂ ಕರೆಯುವರು. ಇವರಲ್ಲಿ 15 ಮಂದಿ ಬ್ರಾಹ್ಮಣರು, 12 ಮಂದಿ ಕ್ಷತ್ರಿಯರು, 5 ಮಂದಿ ವೈಶ್ಯರು, ಒಬ್ಬ ಪಂಚಮ, 24 ಮಂದಿ ಶೂದ್ರರು, ಇಬ್ಬರು ಸ್ತ್ರೀಯರಾದಿಯಾಗಿ ಎಲ್ಲ ಕುಲ ಜಾತಿ ಪಂಥದವರೂ ಇದ್ದಾರೆ. ಈ ಪುರಾತನರೆಲ್ಲಾ ಚಾರಿತ್ರದಲ್ಲಿ ನಡೆದು, ಗುರುಲಿಂಗಜಂಗಮಕ್ಕೆ ಅರ್ಥ ಪ್ರಾಣ ಅಭಿಮಾನವನ್ನು ಕೊಟ್ಟು ಅಹಂಕಾರ ಅಳಿದಂಥ ಪೂಜ್ಯರು ಮತ್ತು ಪ್ರಾತಃಸ್ಮರಣೀಯರು. ಇವರು ಎಷ್ಟು ಪೂಜನೀಯರು ಅಂದರೆ ಅಲ್ಲಮನಂತ ಅಲ್ಲಮನೇ ಇವರು ಬಾಯಲ್ಲಿ ತಿಂದು ಉಗುಳುವ ತಾಂಬೂಲವನ್ನು ಮೆಲ್ಲುವನಂತೆ. ಇವರು ತೊಟ್ಟು ಬಿಟ್ಟ ಬಟ್ಟೆಗಳ ಉಡುವನಂತೆ. ಅವರ ಎರಡೂ ಪಾದರಕ್ಷೆಗಳ ತಲೆಯ ಮೇಲೆ ಹೊತ್ತು ಬದುಕುವನಂತೆ. ಜನ್ಮ ಜನ್ಮದಲ್ಲಿ ಅವರ ದಾಸಾನುದಾಸನಾಗುವನಂತೆ.
ಪದ ಪ್ರಯೋಗಾರ್ಥ:
ಅರವತ್ತುಮೂರು ಪುರಾತನರ ದಾಸನ ದಾಸ ಆಗುತ್ತೇನೆ ಎಂದು ಅಲ್ಲಮ ಹೇಳಿರುವುದು ಈ ವಚನದಲ್ಲಿ ಗಮನ ಸೆಳೆಯುವಂತಹುದು. ಇದು ಅಲ್ಲಮನ ವಿನಯವಂತಿಕೆಯ ಗರಿಷ್ಠತೆಯನ್ನು ಸೂಚಿಸುತ್ತದೆ. ಹಾಗೆ ನೋಡಿದರೆ ಎಲ್ಲಾ ಶರಣರೂ ವಿನಯವಂತರೇ. ಎನಗಿಂತ ಕಿರಿಯರಿಲ್ಲ ಎಂದು ಬಸವಣ್ಣ ಹೇಳುವುದು ದಾಸನ ದಾಸ ಎಂಬ ವಿನಯವಂತಿಕೆಯ ಸಮಾನ ಅರ್ಥದಲ್ಲೇ. ಶರಣರ ನಂತರದ ಕಾಲದಲ್ಲಿ ಬಂದ ದಾಸ ಶ್ರೇಷ್ಠರಾದ ಕನಕದಾಸರು “ದಾಸದಾಸರ ಮನೆಯ ದಾಸಾನುದಾಸ ನಾನು, ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ ಕುಲವಿಲ್ಲದ ದಾಸ ಕುರುಬದಾಸ” ಎಂದು ಹೇಳಿ ವಿನಯವಂತಿಕೆಯ ಪರಕಾಷ್ಠೆಯನ್ನು ಮುಟ್ಟಿದ್ದು ಶರಣ ಚಿಂತನೆಯ ಮುಂದುವರಿಕೆಯೇ. ದಾಸನ ದಾಸ ಎಂದು ಅಲ್ಲಮ ಬಳಸಿರುವ ಪದಕ್ಕೆ ಪಾರಂಪರಿಕ ಮೌಲ್ಯವಿದೆ. “ದಾಸದಾಸರ ಮನೆಯ ದಾಸಾನುದಾಸ ನಾನು” ಕನಕದಾಸರ ಕೀರ್ತನೆಯನ್ನು ರಾಜಕುಮಾರ್, ಎಂ. ರಂಗರಾವ್ ಸಂಗೀತದಲ್ಲಿ ಅದ್ಭುತವಾಗಿ ಹಾಡಿದ್ದು ಯೂಟ್ಯೂಬ್‌ನಲ್ಲಿ ಸಿಗುತ್ತದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



