ದೆಹಲಿಯ ಕೊಳೆಗೇರಿಯಲ್ಲಿ ವಾಸಿಸುವ 35 ವರ್ಷದ ದಿನಗೂಲಿ ಕಾರ್ಮಿಕ ಇರ್ಫಾನ್, CJPಯ ಪ್ರತಿಭಟನೆಯ ಸಂದರ್ಭದಲ್ಲಿ ನೀಡಿದ ಸಂದರ್ಶನದಿಂದಾಗಿ ಸುದ್ದಿಯಾದರು. ತಮ್ಮ ಸಂಕಷ್ಟಗಳ ನಡುವೆಯೂ ನ್ಯಾಯಯುತ ಕೂಲಿ ಮತ್ತು ಗೌರವಯುತ ಜೀವನಕ್ಕಾಗಿ ಹೋರಾಡುತ್ತಿರುವ ಲಕ್ಷಾಂತರ ಕಾರ್ಮಿಕರ ಪರಿಸ್ಥಿತಿಯತ್ತ ಈಗ ದೇಶದ ಗಮನ ಸೆಳೆಯುತ್ತಿದ್ದಾರೆ...
‘ದ ಲಲ್ಲನ್ಟಾಪ್‘ ಪತ್ರಕರ್ತ ರಜತ್ ಪಾಂಡೆ ಅವರು ಜುಲೈ 20ರಂದು ದೆಹಲಿಯ ಜಂತರ್-ಮಂತರ್ನಲ್ಲಿ ನಡೆದ ‘ಕಾಕ್ರೋಚ್ ಜನತಾ ಪಾರ್ಟಿ'(CJP) ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದರು. ಆಗ ನೀಲಿ ಟಿ-ಶರ್ಟ್ ಧರಿಸಿದ್ದ ಒಬ್ಬ ಯುವಕ ಅವರ ಕ್ಯಾಮೆರಾದ ಮುಂದೆ ಬಂದರು. ಅವರು ವಿದ್ಯಾರ್ಥಿ ನಾಯಕನೂ ಅಲ್ಲ, ಸಂಘಟಕರ ಪ್ರತಿನಿಧಿಯೂ ಅಲ್ಲ. ಅವರು ಮೊಹಮ್ಮದ್ ಇರ್ಫಾನ್- 35 ವರ್ಷದ ದಿನಗೂಲಿ ಕಾರ್ಮಿಕ- ತಮ್ಮಂತೆಯೇ ಇರುವ ಕಾರ್ಮಿಕರ ಹೋರಾಟಗಳ ಕುರಿತು ಮಾತನಾಡಲು ಅಲ್ಲಿಗೆ ಬಂದಿದ್ದರು.
ಇರ್ಫಾನ್ ಅವರು ಕ್ಯಾಮೆರಾ ಮುಂದೆ ನಿಂತು ಒಡಲಾಳದ ನೋವನ್ನು ಬಿಚ್ಚಿಟ್ಟರು. ಬಡತನ, ಶಿಕ್ಷಣ, ಕನಿಷ್ಠ ವೇತನ ಮತ್ತು ದಿನನಿತ್ಯದ ಜೀವನದಲ್ಲಿ ಎದುರಿಸುತ್ತಿರುವ ಅವಮಾನಗಳ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಮತ್ತು ಭಾವನಾತ್ಮಕವಾಗಿ ಮಾತನಾಡಿದರು. ಕೊಳೆಗೇರಿಯಲ್ಲಿ ಬೆಳೆದುಬಂದದ್ದು ಹಾಗೂ ಕಾರ್ಮಿಕನಾಗಿ ಕುಟುಂಬವನ್ನು ಸಾಕಲು ನಡೆಸಿದ ಕಠಿಣ ಹೋರಾಟದ ಕುರಿತು ಅವರು ವಿವರಿಸಿದರು. ಅದನ್ನು ಕೇಳಿದ/ನೋಡಿದ ದೇಶದ ಜನ, ‘ಹೌದಲ್ಲ, ಅವರ ಮಾತುಗಳಲ್ಲಿ ಸತ್ಯವಿದೆಯಲ್ಲ’ ಎಂದರು. ಮೆಚ್ಚಿದರು. ದಿನ ಬೆಳಗಾಗುವುದರೊಳಗೆ ಅವರ ಮುಖ, ಮಾತುಗಳು ಮತ್ತು ಕಥೆ ದೇಶದಾದ್ಯಂತ ಪಸರಿಸಿ, ಪರಿಚಿತರಾಗಿದ್ದರು.
ನಂತರದ ಫಾಲೋ-ಅಪ್ ವೀಡಿಯೊ ವರದಿಯಲ್ಲಿ ರಜತ್ ಪಾಂಡೆ ಅವರು ಪ್ರತಿಭಟನೆಯ ಸಂದರ್ಭದಲ್ಲಿ ಇರ್ಫಾನ್ ಅವರನ್ನು ಹೇಗೆ ಭೇಟಿಯಾದರು ಎಂಬುದನ್ನು ವಿವರಿಸಿದರು. ಭಾರತದಲ್ಲಿನ ಕಾರ್ಮಿಕರ ಸಮಸ್ಯೆಗಳನ್ನು ಜನರ ಗಮನಕ್ಕೆ ತರಲು ಇರ್ಫಾನ್ ಬಯಸಿದ್ದರು ಎಂದು ಹೇಳಿದರು. ತಮ್ಮ ಮತ್ತು ಪ್ರತಿಯೊಬ್ಬ ಕಾರ್ಮಿಕನ ಸಮಸ್ಯೆಗಳನ್ನು ಕ್ಷಣಾರ್ಧದಲ್ಲೇ ದೇಶದ ಮುಂದೆ ವ್ಯಕ್ತಪಡಿಸುವ ಇರ್ಫಾನ್ ಅವರ ಸಾಮರ್ಥ್ಯದಿಂದ ತಾವು ಎಷ್ಟು ಪ್ರಭಾವಿತರಾಗಿದ್ದೇವೆ ಎಂಬುದನ್ನೂ ಅವರು ತಿಳಿಸಿದರು.

ಇರ್ಫಾನ್ ಅವರ ನಿಜ ಜೀವನ
ಸಾವದಾ ಘೇವ್ರಾದ ಕೊಳೆಗೇರಿ ಪುನರ್ವಸತಿ ಕಾಲೋನಿ ದೆಹಲಿಯ ಗದ್ದಲಮಯ ಮುಖ್ಯ ಪ್ರದೇಶಗಳಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಇರ್ಫಾನ್ ತಮ್ಮ ಪೋಷಕರು ಮತ್ತು ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಾರೆ. ಇರ್ಫಾನ್ ಬಾಲ್ಯ ಲಕ್ಷ್ಮಿ ನಗರ ಸಮೀಪದ ಕೊಳೆಗೇರಿ ಪ್ರದೇಶದಲ್ಲಿ ಕಳೆಯಿತು. ಸುಮಾರು 15 ವರ್ಷಗಳ ಹಿಂದೆ ಅಲ್ಲಿಂದ ಅವರನ್ನು ಜೆಜೆ ಕಾಲೋನಿಗೆ ಸ್ಥಳಾಂತರಿಸಲಾಯಿತು. ರಸ್ತೆ ಬದಿಯಲ್ಲಿ ಮಂಜುಗಡ್ಡೆಯ ತುಂಡುಗಳನ್ನು ಮಾರಾಟ ಮಾಡುವುದರ ಜೊತೆಗೆ ದಿನಗೂಲಿ ಕೆಲಸ ಮಾಡಿ ಅವರು ಕುಟುಂಬವನ್ನು ಸಾಕುತ್ತಿದ್ದಾರೆ.
ಇರ್ಫಾನ್ ಅವರ ಔಪಚಾರಿಕ ಶಿಕ್ಷಣ ಅಂಗನವಾಡಿಯವರೆಗೆ ಮಾತ್ರ ಸೀಮಿತವಾಗಿದೆ. ಅವರಿಗೆ ಓದಲು ಅಥವಾ ಬರೆಯಲು ಬರುವುದಿಲ್ಲ. ಆದರೂ ಹಲವು ಮಾಧ್ಯಮ ಸಂದರ್ಶನಗಳಲ್ಲಿ ಅವರು ಸಂವಿಧಾನದ ಪ್ರಸ್ತಾವನೆಯನ್ನು ಪಠಿಸಿದ್ದಾರೆ. ಹಿಂದಿ-ಉರ್ದು ಶಾಯರಿಯಿಂದ ಹಿಡಿದು ಕನಿಷ್ಠ ವೇತನ ಮತ್ತು ಪ್ರಜಾಪ್ರಭುತ್ವದ ಹೊಣೆಗಾರಿಕೆಯವರೆಗೆ ಹಲವು ವಿಷಯಗಳ ಬಗ್ಗೆ ಅವರು ಅತ್ಯಂತ ತಿಳಿವಳಿಕೆಯಿಂದ ಮಾತನಾಡಿದ್ದಾರೆ.
ಶಾಲೆಗೆ ಹೋಗದಿದ್ದರೂ ಸಂವಿಧಾನದ ಪ್ರಸ್ತಾವನೆಯನ್ನು ಹೇಗೆ ನೆನಪಿಸಿಕೊಂಡಿರಿ ಎಂದು ಕೇಳಿದಾಗ, ಇರ್ಫಾನ್ ಇಂಟರ್ನೆಟ್ ಮೂಲಕ ಕಲಿಯುವುದಾಗಿ ಹೇಳಿದರು. ತಮ್ಮ ಫೋನ್ನಲ್ಲಿರುವ ವಾಯ್ಸ್ ಸರ್ಚ್ ಸೌಲಭ್ಯವನ್ನು ಬಳಸುತ್ತಾರೆ, AI ನೀಡುವ ಉತ್ತರಗಳನ್ನು ಕೇಳುತ್ತಾರೆ ಮತ್ತು ಯಾವುದಾದರೂ ವಿಷಯ ಸ್ಪಷ್ಟವಾಗದಿದ್ದರೆ ತೃಪ್ತಿಯಾಗುವವರೆಗೆ ಮತ್ತೆ ಮತ್ತೆ ಕೇಳುತ್ತಾರೆ. ‘ದ ಲಲ್ಲನ್ಟಾಪ್’ ಸಂದರ್ಶನದ ಸಂದರ್ಭದಲ್ಲಿ ಅವರು ತಮ್ಮ ಸರ್ಚ್ ಹಿಸ್ಟರಿಯನ್ನೂ ಪತ್ರಕರ್ತರಿಗೆ ತೋರಿಸಿದರು. ಅದರಲ್ಲಿ ಜಂತರ್-ಮಂತರ್ನಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದ ವಾಯ್ಸ್ ಸರ್ಚ್ಗಳೂ ಇದ್ದವು.
ಭಾರತದಲ್ಲಿ ಶಿಕ್ಷಣ ವ್ಯವಸ್ಥೆಗೆ ಪ್ರವೇಶದ ಕೊರತೆಯ ಕುರಿತು ಮಾತನಾಡಿದ ಅವರು, ಉತ್ತಮ ಜೀವನಕ್ಕಾಗಿ ಶಿಕ್ಷಣ ಅತ್ಯಗತ್ಯವಾದರೂ ಬಡ ಕುಟುಂಬಗಳ ಮಕ್ಕಳು ತಮ್ಮ ಶಿಕ್ಷಣ ಪೂರ್ಣಗೊಳಿಸುವ ಮೊದಲೇ ಶಾಲೆ ಬಿಡುತ್ತಾರೆ ಎಂದು ಹೇಳಿದರು. ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ITI) ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಂತಹ ತಾಂತ್ರಿಕ ಶಿಕ್ಷಣ ಕೇಂದ್ರಗಳನ್ನು ಮೂಲತಃ ಕಡಿಮೆ ಆದಾಯದ ವರ್ಗಗಳಿಗೆ ಕೌಶಲ್ಯ ಕಲಿಸಲು ಸ್ಥಾಪಿಸಲಾಗಿದ್ದರೂ, ಅವುಗಳ ಪ್ರಯೋಜನವನ್ನು ಹೆಚ್ಚಾಗಿ ಮಧ್ಯಮ ವರ್ಗದ ಕುಟುಂಬಗಳೇ ಪಡೆಯಲು ಸಾಧ್ಯವಾಗುತ್ತಿದೆ ಎಂದು ಅವರು, ಇದರಿಂದ ಬಡ ಹಿನ್ನೆಲೆಯ ಮಕ್ಕಳಿಗೆ ಶಿಕ್ಷಣ ಮತ್ತು ಕೌಶಲ್ಯ ಪಡೆಯುವ ಅವಕಾಶ ಸಿಗುತ್ತಿಲ್ಲ ಎಂದರು.
ಕಾರ್ಮಿಕರ ಪರಿಸ್ಥಿತಿ
ಮುಖ್ಯವಾಹಿನಿಯ ವೇದಿಕೆಗಳಲ್ಲಿ ಬಹಳ ವಿರಳವಾಗಿ ಚರ್ಚೆಯಾಗುವ ‘ಕಾರ್ಮಿಕರ ಪರಿಸ್ಥಿತಿ’ ಕುರಿತು ಬೆಳಕು ಚೆಲ್ಲಿದ ಇರ್ಫಾನ್, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (2024) ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ನಡೆಯುವ ಒಟ್ಟು ಆತ್ಮಹತ್ಯೆಗಳಲ್ಲಿ ಸುಮಾರು ಮೂರನೇ ಒಂದು ಭಾಗ ದಿನಗೂಲಿ ಕಾರ್ಮಿಕರದ್ದಾಗಿದೆ ಎಂದು ಹೇಳಿದರು. ಇದಕ್ಕೆ ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡ ಪ್ರಮುಖ ಕಾರಣಗಳಾಗಿವೆ ಎಂದು ಅವರು ತಿಳಿಸಿದರು.
ದೆಹಲಿಯಲ್ಲಿ ನಿಗದಿಪಡಿಸಿರುವ ಕನಿಷ್ಠ ವೇತನ ಪ್ರತಿ ತಿಂಗಳಿಗೆ ಸುಮಾರು 18 ಸಾವಿರವಾದರೂ, ಬಹುತೇಕ ಕಾರ್ಮಿಕರು ದಿನಕ್ಕೆ 10ರಿಂದ 11 ಗಂಟೆ ಕೆಲಸ ಮಾಡಿ ಕೇವಲ 13ರಿಂದ 14 ಸಾವಿರ ಗಳಿಸುತ್ತಾರೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲ, ‘ಹೊಟ್ಟೆ ತುಂಬಾ ಊಟ ಮಾಡಿಬಿಟ್ಟರೆ ಮಾತ್ರ ಅದೇ ಜೀವನವಲ್ಲ’ ಎಂಬ ಅವರ ಮಾತು ಜನರ ಮನಸ್ಸನ್ನು ಆಳವಾಗಿ ಮುಟ್ಟಿತು. ಮಾನವ ಜೀವನಕ್ಕೆ ಕೇವಲ ಮೂಲಭೂತ ಅಗತ್ಯಗಳನ್ನು ಪೂರೈಸುವುದಷ್ಟೇ ಸಾಕಾಗುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಸಿತು.
ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಡೆಯುತ್ತಿದ್ದ ಪ್ರತಿಭಟನೆಗಳ ನಡುವೆ ಅವರ ಮಾತುಗಳು ವ್ಯಾಪಕವಾಗಿ ಜನರನ್ನು ಪ್ರಭಾವಿಸಿದವು. ಭಾರತದ ಕಾರ್ಮಿಕ ವರ್ಗ ಎದುರಿಸುತ್ತಿರುವ ಹೋರಾಟ ಮತ್ತು ಅಸಮಾನ ಆರ್ಥಿಕ ವ್ಯವಸ್ಥೆಯ ಭಾರವನ್ನು ಇದು ಜನರ ಗಮನಕ್ಕೆ ತಂದಿತು. ಕೇವಲ ಬದುಕುಳಿಯಲು ಸಹ ಕಾರ್ಮಿಕರು ಹೋರಾಡಬೇಕಾದ ಪರಿಸ್ಥಿತಿಯತ್ತ ಗಮನ ಸೆಳೆಯಿತು.

ಸಂದರ್ಶನದ ನಂತರ ಹಲವು ಮಾಧ್ಯಮ ಸಂಸ್ಥೆಗಳು ಸಾವದಾ ಜೆಜೆ ಕಾಲೋನಿಯಲ್ಲಿರುವ ಅವರ ಮನೆಗೆ ಭೇಟಿ ನೀಡಿದವು. ಅಲ್ಲಿ ಮೇಲ್ಛಾವಣಿ ಸರಿಯಾಗಿ ಇಲ್ಲದ ಒಂದು ಕೊಠಡಿ ಕಂಡುಬಂತು. ಐದು ಜನರು ವಾಸಿಸುವ ಆ ಕೊಠಡಿಯ ಮೇಲ್ಛಾವಣಿಯ ಬದಲಿಗೆ ಟಾರ್ಪಾಲಿನ್ ಹಾಕಲಾಗಿತ್ತು. ಕೊಳೆಗೇರಿಯಲ್ಲಿ ವಾಸಿಸುವ ಜನರ ನೋವನ್ನು ಸ್ವತಃ ಕಣ್ಣಾರೆ ನೋಡದಿದ್ದರೆ ಅದನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ ಎಂದ ಇರ್ಫಾನ್, ‘ತಮ್ಮಂತಹ ಲಕ್ಷಾಂತರ ಜನರನ್ನು ನಿರಾಶೆಯತ್ತ ತಳ್ಳುವ ಅನೇಕ ವ್ಯವಸ್ಥಾತ್ಮಕ ಸಮಸ್ಯೆಗಳಿವೆ’ ಎಂದು ಅವರು ಅಭಿಪ್ರಾಯಪಟ್ಟರು.
ಅವರು, ‘ಶಿಕ್ಷಣ ಪಡೆಯಲು ಯಾವುದೇ ಅವಕಾಶವಿಲ್ಲದಿರುವುದು ಮತ್ತು ಗೌರವಯುತ ಉದ್ಯೋಗ ಪಡೆಯಲು ಯಾವುದೇ ಪ್ರೋತ್ಸಾಹವಿಲ್ಲದಿರುವುದರಿಂದ, ನನ್ನಂತಹ ಬಡ ಕೊಳೆಗೇರಿ ನಿವಾಸಿಗಳು ಆರೋಗ್ಯ ಸೇವೆ ಮತ್ತು ಶಿಕ್ಷಣದ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಆದರೆ, ಈ ಹಕ್ಕುಗಳನ್ನು ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ಭರವಸೆ ನೀಡಿದೆ’ ಎನ್ನುತ್ತಾರೆ. ಹಾಗೆಯೇ ಮುಂದುವರೆದು, ‘ನಾವು ಯಾವ ರೀತಿಯ ಭಾರತವನ್ನು ಕಲ್ಪಿಸಿಕೊಳ್ಳುತ್ತಿದ್ದೇವೆ?’ ಎನ್ನುವ ಗಂಭೀರ ಪ್ರಶ್ನೆಯನ್ನೂ ನಮ್ಮ ಮುಂದಿಟ್ಟರು.
ಕಾಣದ ಹೋರಾಟ
ಅವರ ವೈರಲ್ ಸಂದರ್ಶನದ ನಂತರ ಮಾಧ್ಯಮಗಳು ನೀಡಿದ ಗಮನವೂ ಅವರ ಈ ಮಾತಿನ ಮುಂದೆ ಅತಿ ಸಣ್ಣದಾಗಿ ಕಾಣುತ್ತದೆ: ‘ಮೊಹಮ್ಮದ್ ಇರ್ಫಾನ್ ಅವರಂತಹ ಲಕ್ಷಾಂತರ ಜನರನ್ನು ಭಾರತದ ಬೀದಿಗಳಲ್ಲಿ ಕಾಣಬಹುದು’. ಇದು ಒಬ್ಬ ವ್ಯಕ್ತಿಯ ಹೋರಾಟಕ್ಕಿಂತ ಬಹಳ ದೊಡ್ಡ ಸಮಸ್ಯೆ ಎಂದು ಅವರು ಒತ್ತಿ ಹೇಳಿದರು.
ದೇಶದ ಕಾರ್ಮಿಕರ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ವಿವರಿಸಲು ಇರ್ಫಾನ್ ತಮ್ಮದೇ ಪ್ರದೇಶದ ಉದಾಹರಣೆಯನ್ನು ನೀಡಿದರು. ತಾವು ವಾಸಿಸುವ ಪುನರ್ವಸತಿ ಕಾಲೋನಿಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ವಲಸೆ ಕಾರ್ಮಿಕರು ವಾಸಿಸುತ್ತಿದ್ದಾರೆ ಎಂದು ಹೇಳಿದರು. ಜೀವನೋಪಾಯಕ್ಕಾಗಿ ಅವರು ದೆಹಲಿಯ ವಿವಿಧ ಪ್ರದೇಶಗಳಿಗೆ ತೆರಳಬೇಕಾಗುತ್ತದೆ. ಅಲ್ಲಿಂದ ದೊರೆಯುವ ಆದಾಯ ಕಷ್ಟಪಟ್ಟು ಜೀವನ ಸಾಗಿಸಲು ಮಾತ್ರ ಸಾಕಾಗುತ್ತದೆ; ಗೌರವಯುತ ಜೀವನದ ಮಾತೇ ಬೇರೆ.
ಅವರ ದೃಷ್ಟಿಯಲ್ಲಿ ದೇಶದಾದ್ಯಂತ ಇರುವ ಕಾರ್ಮಿಕರು- ಕಾಂಟ್ರಾಕ್ಟ್ ಕಾರ್ಮಿಕರಾಗಿರಲಿ, ರೈತರಾಗಿರಲಿ, ಕೈಗಾರಿಕಾ ಕಾರ್ಮಿಕರಾಗಿರಲಿ ಅಥವಾ ದಿನಗೂಲಿ ಕಾರ್ಮಿಕರಾಗಿರಲಿ- ಎಲ್ಲರೂ ಒಂದೇ ರೀತಿಯ ವಾಸ್ತವಿಕತೆಯನ್ನು ಎದುರಿಸುತ್ತಿದ್ದಾರೆ. ತಮ್ಮ ಕೊಳೆಗೇರಿಯ ಬಹುತೇಕ ಕುಟುಂಬವೂ ಮದ್ಯಪಾನದ ಸಮಸ್ಯೆಯಿಂದ ಬಳಲುತ್ತಿದೆ ಎಂದು ಅವರು ತಿಳಿಸಿದರು.
ನಶೆ ಕೇವಲ ಘೋಷಣೆಗಳಿಂದ ಹೋಗುವುದಿಲ್ಲ. ದೊಡ್ಡ ದೊಡ್ಡ ಹೋರ್ಡಿಂಗ್ಗಳಲ್ಲಿ ‘ನಶಾಮುಕ್ತ ಭಾರತ’ ಎಂದು ಬರೆದರೆ ಮಾತ್ರ ಅದು ಹೋಗುವುದಿಲ್ಲ. ನೆಲಮಟ್ಟದಲ್ಲಿ ಅಂತಹ ವ್ಯವಸ್ಥೆಯನ್ನು ನೀವು ನಿರ್ಮಿಸಬೇಕು ಎನ್ನುವ ಇರ್ಫಾನ್, ಕಾರ್ಮಿಕರ ಬೇಡಿಕೆಗಳು ನಿರಂತರ ಶೋಷಣೆಯಿಂದಾಗಿ ಕಾಣದಂತಾಗಿವೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಹಾಗೆಯೇ ಆ ಬೇಡಿಕೆಗಳು ಸಂವಿಧಾನಾತ್ಮಕ ಭರವಸೆಗಳೇ ಆಗಿವೆ ಎಂದು ಒತ್ತಿ ಹೇಳುತ್ತಾರೆ.
ಈ ದೇಶದ ಶ್ರೀಮಂತರ ಪಾಲಿನಲ್ಲಿ ಕಾರ್ಮಿಕರು ಸೇರಿಲ್ಲವೇ, ಅವರಿಗೆ ಉತ್ತಮ ಜೀವನ ನೀಡಬೇಕು ಎಂಬ ನಿರೀಕ್ಷೆ ಸರ್ಕಾರಕ್ಕಿಲ್ಲವೇ ಎಂದು ಪ್ರಶ್ನಿಸುವ ಇರ್ಫಾನ್, ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಚಳವಳಿಗಳಲ್ಲಿ ಸಕ್ರಿಯರಾಗಿದ್ದಾರೆ. 2011ರ ಭ್ರಷ್ಟಾಚಾರ ವಿರೋಧಿ ಚಳವಳಿ, NRC-CAA ವಿರೋಧಿ ಪ್ರತಿಭಟನೆಗಳು (2019–20), ಸೆಪ್ಟೆಂಬರ್ 2020ರ ರೈತ ಚಳವಳಿ, 2023ರ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ಸೇರಿದಂತೆ ಸರ್ಕಾರದ ಹೊಣೆಗಾರಿಕೆ ಮತ್ತು ಮಾನವ ಹಕ್ಕುಗಳಿಗಾಗಿ ಒತ್ತಾಯಿಸಿದ ಹಲವು ಸಭೆಗಳಲ್ಲಿ ತಾವು ಭಾಗವಹಿಸಿದ್ದಾಗಿ ಅವರ ಜೊತೆಗಿನ ಮಾತುಕತೆಯಲ್ಲಿ ತಿಳಿಸಿದರು.
ತಮ್ಮಂತೆಯೇ ಸರ್ಕಾರಿ ನಿರ್ಲಕ್ಷ್ಯದ ಪರಿಣಾಮಗಳನ್ನು ಅನುಭವಿಸುತ್ತಿರುವ ಬಡ ಜನರ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವುದೇ ತಮ್ಮ ಏಕೈಕ ಉದ್ದೇಶ ಎನ್ನುವ ಇರ್ಫಾನ್, ನಾನು ಯಾವುದೇ ಸರ್ಕಾರದ ಅಥವಾ ವ್ಯಕ್ತಿಯ ವಿರೋಧಿಯಲ್ಲ. ನಾನು ಅನ್ಯಾಯದ ವಿರೋಧಿ, ಹಿಂಸಾತ್ಮಕ ಚಿಂತನೆಯ ವಿರೋಧಿ. ನಾನು ಕೋಮುವಾದಿ ರಾಜಕೀಯದ ವಿರೋಧಿ. ಮನುಷ್ಯನನ್ನು ಮನುಷ್ಯನಿಂದ ಬೇರ್ಪಡಿಸುವ, ಮಾನವೀಯತೆಗೆ ಅಪಾಯಕಾರಿಯಾದ ಪ್ರತಿಯೊಂದು ವಿಚಾರ ಮತ್ತು ಚಿಂತನೆಯನ್ನೂ ನಾನು ವಿರೋಧಿಸುತ್ತೇನೆ ಎನ್ನುತ್ತಾರೆ.

ರಾಜಕಾರಣಿಗಳು, ಪತ್ರಕರ್ತರ ಬೆಂಬಲ
ಜಂತರ್-ಮಂತರ್ನಲ್ಲಿ ನಡೆದ ಗದ್ದಲದ ನಂತರ ಜುಲೈ ಕೊನೆಯ ವಾರದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿ ಇರ್ಫಾನ್ ಮತ್ತು ಅವರ ಕುಟುಂಬವನ್ನು ಭೇಟಿಯಾದರು. ನಂತರ ರಾಹುಲ್ ಗಾಂಧಿ ಇರ್ಫಾನ್ ಜೊತೆಗಿನ ಛಾಯಾಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಹೀಗೆ ಬರೆದಿದ್ದರು: ”ಇರ್ಫಾನ್ ಅವರನ್ನು ಭೇಟಿಯಾದೆ- ದೆಹಲಿಯ ಬಡಾವಣೆಯ ಒಬ್ಬ ಯುವಕ. ಅವರ ಚಿಂತನೆಗಳು ಅವರ ಪರಿಸ್ಥಿತಿಗಳಿಗೆ ಸೀಮಿತವಾಗಿಲ್ಲ. ಸಂವಿಧಾನದ ಬಗ್ಗೆ ಅವರ ತಿಳಿವಳಿಕೆ, ದೇಶದ ಕುರಿತ ಅವರ ದೃಷ್ಟಿಕೋನ ಮತ್ತು ಕಲಿಯುವ ಅವರ ಉತ್ಸಾಹ- ಇವೆಲ್ಲವೂ ಭಾರತದ ಅತಿದೊಡ್ಡ ಶಕ್ತಿ ಅದರ ಯುವಕರಲ್ಲಿದೆ ಎಂಬುದನ್ನು ತೋರಿಸುತ್ತವೆ. ಇರ್ಫಾನ್ ಅವರಂತಹ ಲಕ್ಷಾಂತರ ಯುವಕರೇ ದೇಶದ ನಿಜವಾದ ಭರವಸೆ- ಕುತೂಹಲವುಳ್ಳವರು, ಸಂವೇದನಾಶೀಲರು ಮತ್ತು ತಮ್ಮ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತರಾಗಿರುವವರು.”
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಫೋನ್ನಲ್ಲಿ ಮಾತನಾಡುವ ಅವಕಾಶವನ್ನೂ ಮಾಡಿಕೊಟ್ಟಿದ್ದನ್ನು ಹೇಳಿದ ಇರ್ಫಾನ್, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ದೃಢ ಸಂಕಲ್ಪವಿದೆ ಎಂದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೂ ಈ ಸಮಸ್ಯೆಗಳು ಮುಂದುವರಿದರೆ, ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಲು ತಮಗೆ ಯಾವುದೇ ಹಿಂಜರಿಕೆಯಿಲ್ಲ ಎಂದು ಅವರು ಕಾಂಗ್ರೆಸ್ ನಾಯಕರಿಗೆ ಹೇಳಿದ್ದಾಗಿ ತಿಳಿಸಿದರು.
ಹಿರಿಯ ಪತ್ರಕರ್ತ ಅಜಿತ್ ಅಂಜುಮ್ ಕೂಡ ಇರ್ಫಾನ್ ಅವರ ಮನೆಗೆ ಭೇಟಿ ನೀಡಿ, ಅವರು ತಮ್ಮ ಕುಟುಂಬದೊಂದಿಗೆ ಎಂತಹ ಕಷ್ಟಕರ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ತೋರಿಸಿದರು. ತಮ್ಮ ವೈಯಕ್ತಿಕ ಅನುಭವಗಳು, ನೆರೆಹೊರೆಯವರ ಹೋರಾಟಗಳು ಮತ್ತು ಕಾರ್ಮಿಕರ ದೊಡ್ಡ ಹೋರಾಟವನ್ನು ಇನ್ನಷ್ಟು ಜನರಿಗೆ ತಲುಪಿಸಲು ಅವರು ಇರ್ಫಾನ್ ಅವರಿಗೆ ಒಂದು ವೇದಿಕೆಯನ್ನು ಒದಗಿಸಿದರು. ಅಂಜುಮ್ ಕೇವಲ ವರದಿಗಾರಿಕೆಗೆ ಸೀಮಿತವಾಗಲಿಲ್ಲ, ತಮ್ಮ ತಂಡದೊಂದಿಗೆ ಸೇರಿ ಇರ್ಫಾನ್ ಅವರ ‘ಮೈ ಇರ್ಫಾನ್’ (ನಾನು ಇರ್ಫಾನ್) ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಲು ಸಹಾಯ ಮಾಡಿದರು.
ಇರ್ಫಾನ್ ಅವರ ಕಥೆ ದೇಶದ ಗಮನ ಸೆಳೆದಿದ್ದರಿಂದ, ಅವರು ತಮ್ಮ ಜೀವನ ಮತ್ತು ಅದರ ಸವಾಲುಗಳ ಕುರಿತು ವೀಡಿಯೊಗಳನ್ನು ತಯಾರಿಸಿ ಮುಂದಿನ ದಿನಗಳಲ್ಲಿ ತಮ್ಮ ಕುಟುಂಬವನ್ನು ಸಾಕಲು ಸಾಧ್ಯವಾಗುವಂತಹ ಒಂದು ಮಾಧ್ಯಮವಾಗಿ ಅಂಜುಮ್ ಇದನ್ನು ಕಂಡರು. ಇದರ ಜೊತೆಗೆ, ಅಜಿತ್ ಅಂಜುಮ್ ಅವರು ‘ಮಿಲಾಪ್’ನಲ್ಲಿ ಇರ್ಫಾನ್ ಅವರಿಗಾಗಿ 10 ಲಕ್ಷ ಹೊಂದಿಸುವ ಗುರಿಯೊಂದಿಗೆ ಕ್ರೌಡ್ಫಂಡಿಂಗ್ ಅಭಿಯಾನವನ್ನೂ ಆರಂಭಿಸಿದರು. ಅದು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಂಡಿತು.
ಅಭಿಯಾನದ ಪುಟದಲ್ಲಿನ ತಮ್ಮ ಮನವಿಯಲ್ಲಿ ಇರ್ಫಾನ್ ತಮ್ಮ ಕುಟುಂಬದ ಕುರಿತು ಮಾಹಿತಿ ನೀಡಿದ್ದರು. ತಮ್ಮ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರ ಬಗ್ಗೆ ಉಲ್ಲೇಖಿಸಿ, ಅವರಲ್ಲಿ ಒಬ್ಬ ಸಹೋದರಿ ದಿನಕ್ಕೆ ಕೇವಲ 400 ಗಳಿಸುತ್ತಾರೆ ಎಂದು ತಿಳಿಸಿದ್ದರು. ತಮ್ಮ ಸಹೋದರಿಯರ ಮದುವೆಗೆ ಹಣ ಸಂಗ್ರಹಿಸುವುದು ಮತ್ತು ತಮ್ಮ ಹಾಗೂ ಕುಟುಂಬದ ಜೀವನೋಪಾಯಕ್ಕೆ ಸ್ಥಿರವಾದ ಮಾರ್ಗವನ್ನು ರೂಪಿಸುವುದೇ ತಮ್ಮ ಪ್ರಮುಖ ಕಾಳಜಿಯಾಗಿದೆ ಎಂದು ಅವರು ತಿಳಿಸಿದ್ದರು.

ಇರ್ಫಾನ್ ಅವರ ಯೂಟ್ಯೂಬ್ ಚಾನೆಲ್ ಕೂಡ ಅತ್ಯಂತ ವೇಗವಾಗಿ ಬೆಳೆಯಿತು. ಆರಂಭವಾದ ಕೆಲವೇ ಗಂಟೆಗಳಲ್ಲಿ ಸುಮಾರು 26 ಸಾವಿರ ಚಂದಾದಾರರನ್ನು ಪಡೆದುಕೊಂಡಿತು. ಅಷ್ಟೇ ಅಲ್ಲ, ನೋಡನೋಡುತ್ತಿದ್ದಂತೆ ಆ ಸಂಖ್ಯೆ 70 ಸಾವಿರ ದಾಟಿತು. ಆದರೆ ಚಾನೆಲ್ ಆರಂಭವಾದ ಒಂದು ದಿನದ ನಂತರ ಯೂಟ್ಯೂಬ್ ಅದನ್ನು ಅಮಾನತುಗೊಳಿಸಿತು. ಇದರಿಂದ ವೀಕ್ಷಕರಲ್ಲಿ ಆಕ್ರೋಶ ವ್ಯಕ್ತವಾಯಿತು. ಜನರು ಯೂಟ್ಯೂಬ್ ಇಂಡಿಯಾ ತಂಡವನ್ನು ಟ್ಯಾಗ್ ಮಾಡಿ, ಜನರ ಬೆಂಬಲದಿಂದ ರೂಪುಗೊಂಡು ಒಂದೇ ರಾತ್ರಿ ಸಾವಿರಾರು ಚಂದಾದಾರರನ್ನು ಗಳಿಸಿದ ಚಾನೆಲ್ ಅನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿದರು ಮತ್ತು ಅದನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದರು.
ಯೂಟ್ಯೂಬ್ ಈ ವಿಷಯದ ಕುರಿತು ಸಾರ್ವಜನಿಕವಾಗಿ ಯಾವುದೇ ದೃಢೀಕರಣ ಅಥವಾ ನಿರಾಕರಣೆಯನ್ನು ನೀಡಲಿಲ್ಲ. ಆದರೆ ಕೆಲವು ದಿನಗಳ ನಂತರ ಚಾನೆಲ್ ಅನ್ನು ಮರುಸ್ಥಾಪಿಸಲಾಯಿತು. ಪ್ರಸ್ತುತ ಚಾನೆಲ್ಗೆ ಸುಮಾರು 1,45,000 ಚಂದಾದಾರರು ಮತ್ತು 32 ವೀಡಿಯೊಗಳಿವೆ. ತಮ್ಮ ವೀಡಿಯೊಗಳ ಮೂಲಕ ಇರ್ಫಾನ್ ತಮ್ಮ ವೈಯಕ್ತಿಕ ಸವಾಲುಗಳು ಮತ್ತು ಭಾರತದಲ್ಲಿನ ದಿನಗೂಲಿ ಕಾರ್ಮಿಕರ ಹೋರಾಟಗಳನ್ನು ಮಾತ್ರವಲ್ಲದೆ, ತಮ್ಮ ಸಣ್ಣ ಬಡಾವಣೆಯ ಜನರು ಎದುರಿಸುತ್ತಿರುವ ವಿಶೇಷ ಸಮಸ್ಯೆಗಳನ್ನೂ ಜನರ ಮುಂದಿಡುತ್ತಾರೆ. ಅಧಿಕಾರದಲ್ಲಿರುವವರು ಅಂಚಿನಲ್ಲಿರುವ ಜನರ ಧ್ವನಿಯನ್ನು ಕೇಳುತ್ತಾರೆ ಎಂಬ ಸಾಮೂಹಿಕ ನಿರೀಕ್ಷೆಯೊಂದಿಗೆ ಈಗ ಆ ಪ್ರದೇಶದ ಜನರು ಒಂದಾಗಿದ್ದಾರೆ.
ಕೊನೆಗೆ ಇರ್ಫಾನ್ ಅವರು ಕವಿ ಅದಮ್ ಗೊಂಡ್ವಿ ಅವರ ಸಾಲುಗಳನ್ನು ಉಲ್ಲೇಖಿಸಿದರು: ”ಬನ್ನಿ, ಜೀವನದ ತಾಪವನ್ನು ಅನುಭವಿಸಿ; ನಾನು ನಿಮ್ಮನ್ನು ಬಡವರ ಬೀದಿಯವರೆಗೆ ಕರೆದುಕೊಂಡು ಹೋಗುತ್ತೇನೆ.”
ಕೃಪೆ: ಆಲ್ಟ್ ನ್ಯೂಸ್





