ಮತದಾನದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಬೇಕು. ಇದರಿಂದಾಗಿ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರಣದಿಂದಾಗಿ ಮತದಾನದ ಹಕ್ಕು ಕಳೆದುಕೊಳ್ಳುವುದರಿಂದ ರಕ್ಷಣೆ ಸಿಗುತ್ತದೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಸುರಕ್ಷಿತ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಸಂವಿಧಾನದ ಅಡಿಯಲ್ಲಿ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕಾಗಿದೆ ಎಂದು ಹೇಳಿದೆ. ಈ ಆದೇಶವನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು, “ಮತದಾನಕ್ಕೂ ಮೂಲಭೂತ ಹಕ್ಕು ಸ್ಥಾನಮಾನ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸುರಕ್ಷಿತ ಪಾದಚಾರಿ ಮಾರ್ಗಗಳಲ್ಲಿ ನಡೆಯುವುದು ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ, “ಸಂವಿಧಾನ ಸಭೆಯು ಸರ್ದಾರ್ ಪಟೇಲ್ ಅಧ್ಯಕ್ಷತೆಯಲ್ಲಿ ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಮತ್ತು ಹೊರಗಿಡಲ್ಪಟ್ಟ ಪ್ರದೇಶಗಳ ಸಲಹಾ ಸಮಿತಿಯನ್ನು ರಚಿಸಿತ್ತು. 1947ರ ಏಪ್ರಿಲ್ 21-22ರಂದು ನಡೆದ ಸಭೆಯಲ್ಲಿ, ಡಾ. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರು ಮತದಾನದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡುವ ಬಗ್ಗೆ ಉತ್ಸಾಹಭರಿತ ಚರ್ಚೆ ನಡೆಸಿದರು, ಅದರ ಪರವಾಗಿ ಬಲವಾಗಿ ವಾದಿಸಿದರು” ಎಂದು ಬರೆದಿದ್ದಾರೆ.
“ಆದರೆ ಸರ್ದಾರ್ ಪಟೇಲ್, ಸಿ. ರಾಜಗೋಪಾಲಾಚಾರಿ ಮತ್ತು ಇತರರು ಮತದಾನದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಿದರೆ ರಾಜಪ್ರಭುತ್ವದ ರಾಜ್ಯಗಳು ಭಾರತೀಯ ಒಕ್ಕೂಟಕ್ಕೆ ಸೇರಲು ಹಿಂಜರಿಯಬಹುದು, ಸಂವಿಧಾನದಲ್ಲಿ ಸಾರ್ವತ್ರಿಕ ವಯಸ್ಕ ಮತದಾನಕ್ಕೆ ಅವಕಾಶ ನೀಡಿದರೆ ಸಾಕು ಎಂಬ ನಿಲುವನ್ನು ತೆಗೆದುಕೊಂಡರು. ಸರ್ದಾರ್ ಪಟೇಲ್ ಸ್ವತಃ ಸಾರ್ವತ್ರಿಕ ವಯಸ್ಕ ಮತದಾನವು ಸ್ವತಃ ಒಂದು ಸೂಚ್ಯ ಮೂಲಭೂತ ಹಕ್ಕು ಎಂಬ ನಿಲುವನ್ನು ತೆಗೆದುಕೊಂಡರು. ಅದರಂತೆ ಸಂವಿಧಾನದ 326 ನೇ ವಿಧಿಯು ಪ್ರತಿಯೊಬ್ಬ ವಯಸ್ಕರಿಗೆ ಮತದಾನದ ಹಕ್ಕನ್ನು ನೀಡುತ್ತದೆ” ಎಂದು ವಿವರಿಸಿದ್ದಾರೆ.
“ಕಳೆದ ಏಳು ದಶಕಗಳಲ್ಲಿ ಮತದಾನದ ಹಕ್ಕು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯಿಂದ ಒದಗಿಸಲಾದ ಶಾಸನಬದ್ಧ ಹಕ್ಕೇ ಅಥವಾ ಸ್ಪಷ್ಟ ಮೂಲಭೂತ ಹಕ್ಕೇ ಎಂಬುದರ ಕುರಿತು ನಿರಂತರ ಚರ್ಚೆ ನಡೆಯುತ್ತಿದೆ. ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತವಾಗಿದೆ. ಇತ್ತೀಚೆಗೆ, ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರು 2023ರ ಮಾರ್ಚ್‌ನ ಅನೂಪ್ ಬರನ್ವಾಲ್ vs ಯೂನಿಯನ್ ಆಫ್ ಇಂಡಿಯಾ ತೀರ್ಪಿನಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಮತದಾನದ ಹಕ್ಕು ಮೂಲಭೂತ ಹಕ್ಕು ಎಂದು ತೀರ್ಪು ನೀಡಿದರು” ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
“ಮತದಾರರು ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ, ಆರ್ಥಿಕ ಹಿತಾಸಕ್ತಿಗಳು ಮತ್ತು ರಾಜಕೀಯ ನಿಧಿಯ ಮೂಲಗಳನ್ನು ತಿಳಿದುಕೊಳ್ಳುವ ಸಾಂವಿಧಾನಿಕ ಮತ್ತು ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸ್ವತಃ ಹೇಳಿದೆ. ಹಾಗೆಯೇ ಮತದಾನದ ಗೌಪ್ಯತೆಗೆ ರಕ್ಷಣೆಯಿದೆ. ನೋಟಾ ಮೂಲಕ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನೂ ನೀಡಿದೆ. ಹಾಗಿರುವಾಗ, ಮತದಾನದ ಹಕ್ಕು ಕೇವಲ ಶಾಸನಬದ್ಧ ಹಕ್ಕಾಗಿಯೇ ಉಳಿದಿರುವುದು ಅಸಹಜ ಎನಿಸುತ್ತದೆ. ಸುತ್ತಮುತ್ತಲಿನ ಎಲ್ಲ ಹಕ್ಕುಗಳನ್ನು ಮೂಲಭೂತವೆಂದು ಘೋಷಿಸಲಾಗಿದೆ. ಆದರೆ ಮತದಾನ ಮಾತ್ರ ಇಂದಿಗೂ ಶಾಸನಬದ್ಧ ಹಕ್ಕಾಗಿಯೇ ಉಳಿದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪ್ರಧಾನ ಮಂತ್ರಿ ಮತ್ತು ಕೇಂದ್ರ ಗೃಹ ಸಚಿವರ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ದೇಶದ ಚುನಾವಣಾ ಆಯೋಗದ ಪಕ್ಷಪಾತದ ಕಾರ್ಯವೈಖರಿಯು ಬಹಿರಂಗವಾಗಿದೆ. ಮತದಾನದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡುವ ಸಮಯ ಇದೀಗ ಬಂದಿದೆ. SIR ಪ್ರಕ್ರಿಯೆಯ ಅಡಿಯಲ್ಲಿ ವಿವಿಧ ರಾಜ್ಯಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ನಡೆದಿರುವ ಮತದಾರರ ಮೇಲಿನ ದಬ್ಬಾಳಿಕೆ ಅಥವಾ ಅನಿಯಂತ್ರಿತ ಅನರ್ಹತೆಗಳ ವಿರುದ್ಧ ರಕ್ಷಣೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಇದು ಪ್ರಬಲ ಹೆಜ್ಜೆ” ಎಂದು ಅಭಿಪ್ರಾಯಿಸಿದ್ದಾರೆ.




