ಗಾಜಿಪುರದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷ ಯಾವುದೇ ಪ್ರತಿಭಟನಾ ಸಭೆಗಳನ್ನು ನಡೆಸುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶವನ್ನು ಜಿಲ್ಲಾಡಳಿತ ಹೊರಡಿಸಿದೆ. ಗಾಜಿಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಪಮ್ ಶುಕ್ಲಾ ಅವರು BNSSನ ಸೆಕ್ಷನ್ 163 ಅನ್ನು ವಿಧಿಸಿದ್ದು, ಏಪ್ರಿಲ್ 30 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನೇತೃತ್ವದ ನಿಯೋಗವು ಏಪ್ರಿಲ್ 29 ರಂದು ಸಂತ್ರಸ್ತೆಯ ಗ್ರಾಮಕ್ಕೆ ಭೇಟಿ ನೀಡಿ ಬಾಲಕಿಯ ಕುಟುಂಬವನ್ನು ಭೇಟಿ ಮಾಡಲಿದೆ ಎಂದು ಏ.25( ಶುಕ್ರವಾರ)ರಂದು ಪಕ್ಷ ಘೋಷಿಸಿತ್ತು. ಅದೇ ದಿನ, ಪ್ರಧಾನಿ ನರೇಂದ್ರ ಮೋದಿ ಗಂಗಾ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಲು ಉತ್ತರ ಪ್ರದೇಶದ ಹರ್ದೋಯ್‌ಗೆ ಭೇಟಿ ನೀಡಲಿದ್ದಾರೆ. ಈ ಬೆನ್ನಲ್ಲೇ ಜಿಲ್ಲಾಡಳಿತ ಈ ನಿಯಮವನ್ನು ಜಾರಿ ಮಾಡಿದ್ದು ರಾಜಕೀಯ ಜಟಾಪಟಿಗೂ ಕಾರಣವಾಗಿದೆ.
ಇದನ್ನೂ ಓದಿ : ರಾಯಚೂರು | ಬಿರುಬಿಸಿಲು: ಕಚೇರಿ ಕೆಲಸಗಳ ಸಮಯ ಪರಿಷ್ಕರಣೆ ಉಪಯೋಗವಾಗುತ್ತಿದೆಯೇ?
ವಿರೋಧ ಪಕ್ಷಗಳು ಗಾಜಿಪುರದ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾವೆ, ಪರಿಸ್ಥಿತಿ ಅಸ್ಥಿರವಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿವೆ ಎಂದು ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರ ತಿಳಿಸಿದೆ.
ವಿರೋಧ ಪಕ್ಷಗಳು ಸಾರ್ವಜನಿಕರ ದಾರಿತಪ್ಪಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ಅನ್ನು ವಿಧಿಸಲಾಗಿದೆ ಎಂದು ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಮಾತ್ರವಲ್ಲದೇ, ಆದೇಶವನ್ನು ಉಲ್ಲಂಘಿಸಿದರೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 223 ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಕೂಡ ಹೇಳಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನಾ ಮೆರವಣಿಗೆಗಳನ್ನು ಆಯೋಜಿಸುವುದು, ಪ್ರತಿಭಟನಾ ಸಭೆಗಳನ್ನು ನಡೆಸುವುದು, ಮೇಣದಬತ್ತಿ ಮೆರವಣಿಗೆಗಳನ್ನು ನಡೆಸುವುದು ಅಥವಾ ಘೋಷಣೆಗಳನ್ನು ಕೂಗುವುದನ್ನು ಸರ್ಕಾರ ನಿಷೇಧಿಸಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ, ಯಾವುದೇ ವ್ಯಕ್ತಿ ಅಥವಾ ನಿಯೋಗ ಗ್ರಾಮಕ್ಕೆ ಸಂತಾಪ ಸೂಚಿಸಲು ಭೇಟಿ ನೀಡಲು ಅನುಮತಿಸಲಾಗುವುದಿಲ್ಲ ಎಂದು ಕೂಡ ಹೇಳಿದೆ.
ಒಬಿಸಿ ಸಮುದಾಯಕ್ಕೆ ಸೇರಿದ 17 ವರ್ಷದ ಬಾಲಕಿಯ ಮೃತದೇಹ ಏಪ್ರಿಲ್ 15 ರಂದು ಗಾಜಿಪುರ ಜಿಲ್ಲೆಯ ಕರಂಡಾ ಪ್ರದೇಶದ ಗಂಗಾ ನದಿಯಲ್ಲಿ ಪತ್ತೆಯಾಗಿತ್ತು. ಆಕೆಯ ಕುಟುಂಬವು ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಆರೋಪ ಮಾಡಿದೆ.
ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. ಮೃತ ಬಾಲಕಿ ಮತ್ತು ಬಂಧಿತ ಪ್ರಮುಖ ಆರೋಪಿಯ ನಡುವಿನ ಪೂರ್ವ ಸಂಬಂಧವನ್ನು ಉಲ್ಲೇಖಿಸಿ, ಆರಂಭಿಕ ತನಿಖೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಈ ಘಟನೆಯ ಬಗ್ಗೆ ಸರ್ಕಾರವನ್ನು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಉನ್ನತ ಮಟ್ಟದ ತನಿಖೆಗೆ ಕರೆ ನೀಡಿದ್ದರೆ, ಅಖಿಲೇಶ್ ಯಾದವ್, ಪ್ರಿಯಾಂಕಾ ಗಾಂಧಿ ಕೂಡ ಆರಂಭದಲ್ಲಿ ಪ್ರಕರಣ ದಾಖಲಿಸಲು ಹಿಂಜರಿದಿದ್ದಾರೆ ಮತ್ತು ಕುಟುಂಬಕ್ಕೆ ಬೆದರಿಕೆಗಳು ಬಂದಿವೆ ಎಂದು ಆರೋಪಿಸಿದ್ದಾರೆ.





