ಅಯೋಧ್ಯೆಯ ರಾಮಮಂದಿರದ ದಾನದಕ್ಷಿಣೆಯ ಕೋಟ್ಯಂತರ ರುಪಾಯಿ ಲೂಟಿಯ ಎಫ್.ಐ.ಆರ್. ದಾಖಲಿಸುವಂತೆ ವಿಶೇಷ ತನಿಖಾ ದಳ(ಎಸ್.ಐ.ಟಿ) ಶಿಫಾರಸು ಮಾಡಿದೆ. ಕಳೆದ ಐದು ವರ್ಷಗಳ ಕಾಲ ಕೋಟ್ಯಂತರ ಭಕ್ತರು ಮಂದಿರಕ್ಕೆ ಸಲ್ಲಿಸಿರುವ ಕಾಣಿಕೆಗಳ ಆಡಿಟ್ ಮಾಡಿಸುವಂತೆಯೂ ಸಲಹೆ ಮಾಡಿದೆ.
ಟ್ರಸ್ಟ್‌ನ ಪದಾಧಿಕಾರಿಗಳ ಪಾತ್ರದ ಕುರಿತು ಎಸ್.ಐ.ಟಿ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಅಷ್ಟೇ ಅಲ್ಲದೆ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟನ್ನು ಪುನಾರಚಿಸುವಂತೆಯೂ, ಹಿರಿಯ ಅಧಿಕಾರಿಯೊಬ್ಬರನ್ನು ಮಂದಿರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ(ಸಿಇಒ) ನೇಮಕ ಮಾಡುವಂತೆಯೂ ಎಸ್.ಐ.ಟಿ. ಸಲಹೆ ಮಾಡಿರುವುದಾಗಿ ಪ್ರಸಿದ್ಧ ಹಿಂದೀ ಪತ್ರಿಕೆ ‘ದೈನಿಕ್ ಭಾಸ್ಕರ್’ ವರದಿ ಮಾಡಿದೆ.
ಲೂಟಿಯ ಕುರಿತು ಮಂಗಳವಾರ ಮಧ್ಯಂತರ ವರದಿಯನ್ನು ಉತ್ತರಪ್ರದೇಶ ಸರ್ಕಾರಕ್ಕೆ ಸಲ್ಲಿಸಿರುವ ಎಸ್.ಐ.ಟಿ. ವಿವರವಾದ ತನಿಖೆಗೆ ಇನ್ನಷ್ಟು ಕಾಲಾವಕಾಶ ಕೋರಿದೆ.
ಹಾಲಿ 20 ಪುಟಗಳ ತನಿಖಾ ವರದಿಯಲ್ಲಿ 150 ಮಂದಿಯನ್ನು ಪ್ರಶ್ನಿಸಿರುವ ವಿವರಗಳಿವೆ. ಉತ್ತರಪ್ರದೇಶ ಸರ್ಕಾರ ಎಸ್ ಐ ಟಿ ವರದಿಯನ್ನು ಕೇಂದ್ರ ಗೃಹಮಂತ್ರಾಲಯಕ್ಕೆ ರವಾನಿಸಲಿದೆ. ಯಾವ ಟ್ರಸ್ಟಿಗಳನ್ನು ಉಳಿಸಿಕೊಳ್ಳಬೇಕು ಇಲ್ಲವೇ ಯಾರನ್ನು ತೆಗೆದು ಹಾಕಬೇಕು ಎಂಬುದನ್ನು ಕೇಂದ್ರ ಸರ್ಕಾರ ತೀರ್ಮಾನಿಸಲಿದೆ.
ರಾಮಮಂದಿರದ ಕಾಣಿಕೆಗಳ ಕಳ್ಳತನದ ಆರೋಪಿಗಳಾದ ಲವಕುಶ, ಅವನೀಶ್, ಅನುಕಲ್ಪ್, ಕರುಣೆ ಹಾಗೂ ರಾಮಶಂಕರ್ ಉರುಫ್ ಟಿನ್ನೂ ಅವರಿಂದ ಎರಡು ಕೋಟಿ ರುಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಟ್ರಸ್ಟ್ ನ ಪ್ರಧಾನಕಾರ್ಯದರ್ಶಿಯಾದ ಚಂಪತ್ ರಾಯ್ ಅವರ ಬಂಟ ಟಿನ್ನೂ ಮನೆಯಿಂದ ಚಿನ್ನ ದೊರೆತಿದೆ. ಲೂಟಿಯ ಮೊತ್ತ 200 ಕೋಟಿಯನ್ನು ಮೀರಿರುವುದಾಗಿ ಎಸ್ ಐ ಟಿ ಹೇಳಿರುವುದಾಗಿ ಭಾಸ್ಕರ್ ವರದಿ ಮಾಡಿದೆ.
ಈ ಕಳ್ಳತನದ ದೋಷಿಗಳ ಮೇಲೆ ಕಠೋರ ಕ್ರಮ ಜರುಗಿಸಬೇಕೆಂದು ಶ್ರೀರಾಮಸೇನೆಯು ರಾಮಜನ್ಮಭೂಮಿ ಪೊಲೀಸ್ ಠಾಣೆಗೆ ತೆರಳಿ ಆಗ್ರಹಿಸಿದೆ.
ರಾಮಮಂದಿರ ಟ್ರಸ್ಟ್‌ನ ಪ್ರಧಾನಕಾರ್ಯದರ್ಶಿ ಚಂಪತ್ ರಾಯ್, ರಾಮಮಂದಿರದ ವ್ಯವಸ್ಥಾಪಕ ಗೋಪಾಲ ರಾವ್, ಟ್ರಸ್ಟ್‌ನ ಸಂಸ್ಥಾಪಕ ಸದಸ್ಯ ಅನಿಲ್ ಮಿಶ್ರ, ಚಂಪತ್ ರಾಯ್ ಬಂಟ ರಾಮಶಂಕರ ಯಾದವ್ ಉರುಫ್ ಟಿನ್ನು ಹಾಗೂ ಗೋಪಾಲರಾವ್ ಸಮೀಪ ಸಂಬಂಧಿ ಸೋಮೇಶ್ ಆನಂದ್ ಅವರು ಹಾಲಿ ಟ್ರಸ್ಟ್‌ನ ದೊಡ್ಡ ಕುಳಗಳು.
ಹಿರಿಯ ಐಎಎಸ್ ಅಧಿಕಾರಿ ವಿಜಯ ವಿಶ್ವಾಸ್ ಪಂತ್, ಐಪಿಎಸ್ ಅಧಿಕಾರಿ ಕಿರಣ್ ಶಿವಕುಮಾರ್ ಹಾಗೂ ಯೂಪಿ ಫೈನಾನ್ಸ್ ಮತ್ತು ಅಕೌಂಟ್ಸ್ ಸರ್ವೀಸಸ್ ಅಧಿಕಾರಿ ನೀಲರತನ್ ಕುಮಾರ್ ಹಾಲಿ ಎಸ್.ಐ.ಟಿ.ಯಲ್ಲಿದ್ದಾರೆ.
ಧರ್ಮಸೇನೆಯ ಸಂಸ್ಥಾಪಕ ಸಂತೋಷ್ ದುಬೆ ಪ್ರಕಾರ, 1989ರಲ್ಲಿ ಹಳ್ಳಿಹಳ್ಳಿ, ಪೇಟೆ ಪಟ್ಟಣ, ದೇಶವಿದೇಶಗಳಿಂದ ಅಯೋಧ್ಯೆಗೆ ಬಂದ ಬೆಳ್ಳಿ ಬಂಗಾರ ಹಾಗೂ ವಜ್ರ-ಮಾಣಿಕ್ಯ, ಅಷ್ಟಧಾತುವಿನ 1250 ರಾಮಶಿಲೆಗಳು(ಇಟ್ಟಿಗೆಗಳು) ಕಾಣೆಯಾಗಿವೆ. ಈ ಶಿಲೆಗಳು 2002ರ ತನಕ ಕಾರಸೇವಕಪುರಂ ನಲ್ಲಿಯೇ ಇದ್ದವು. ಮಣ್ಣಿನ ಶಿಲೆಗಳು ಈಗಲೂ ಕಾರಸೇವಕಪುರಂ ನಲ್ಲಿಯೇ ಇವೆ.
ದಾನಪೆಟ್ಟಿಗೆಗೆ ಹಾಕುವ ದಕ್ಷಿಣೆಯ ಎಣಿಕೆಯಿಂದ ಹಿಡಿದು ರಾಮಮಂದಿರದ ಇಡೀ ನಿರ್ವಹಣೆಯ ತನಕ ಎಲ್ಲ ವ್ಯವಹಾರಗಳನ್ನು ರಾಮಮಂದಿರದ ಮೂವರು ಟ್ರಸ್ಟಿಗಳ ಬಂಧುಗಳು ನೋಡಿಕೊಳ್ಳುತ್ತಿದ್ದರು. ಚಂಪತ್ ರಾಯ್, ಡಾ.ಅನಿಲ್ ಮಿಶ್ರ ಹಾಗೂ ಗೋಪಾಲ್ ರಾವ್ ಈ ಮೂವರು ಟ್ರಸ್ಟಿಗಳು.
ರಾಮಮಂದಿರ ನಿರ್ಮಾಣ ಮತ್ತು ಜಮೀನು ಖರೀದಿಯಲ್ಲೂ ಅವ್ಯವಹಾರ ನಡೆದಿರುವುದೂ ಎಸ್ಐಟಿ ಗಮನಕ್ಕೆ ಬಂದಿದೆಯೆಂದು ಗೊತ್ತಾಗಿದೆ.
ರಾಮಮಂದಿರಕ್ಕೆ ಬೇಕಿರುವ ಜಮೀನನ್ನು ಸರ್ಕಲ್ ರೇಟ್‌ಗಿಂತ 17 ಪಟ್ಟು ಹೆಚ್ಚು ಬೆಲೆ ತೆತ್ತು ಖರೀದಿಸಲಾಗಿದೆ. ನಿರ್ಮಾಣ ಸಾಮಗ್ರಿಗಳ ಖರೀದಿಯಲ್ಲಿ ಶೇ.40ರಷ್ಟು ಕಮಿಷನ್ ಹೊಡೆದಿರುವುದೂ ಬೆಳಕಿಗೆ ಬಂದಿರುವುದಾಗಿ ಪ್ರಮುಖ ಹಿಂದೀ ಪತ್ರಿಕೆ ದೈನಿಕ್ ಭಾಸ್ಕರ್ ವರದಿ ಮಾಡಿದೆ.
ಜಮೀನು ಖರೀದಿಯಲ್ಲಿ ಮಂದಿರ ಟ್ರಸ್ಟ್‌ನ ಪ್ರಧಾನಕಾರ್ಯದರ್ಶಿ ಚಂಪತ್ ರಾಯ್ ಅವರ ಸಂಬಂಧಿಕ ಚಂದನ್ ರಾಯ್ ಹೆಸರು ಮುನ್ನೆಲೆಗೆ ಬಂದಿದೆ. ಮಂದಿರದಿಂದ 500 ಗಜದಿಂದ ಹಿಡಿದು ಮೂರು ಕಿಮೀ ಸುತ್ತಳತೆಯಲ್ಲಿ ಸಂಬಂಧಪಟ್ಟ ವಲಯ ದರಗಳಿಗಿಂತ 17 ಪಟ್ಟು ಹೆಚ್ಚು ದರ ತೆತ್ತು ರಾಮಮಂದಿರಕ್ಕಾಗಿ ಜಮೀನು ಖರೀದಿಸಿರುವ ಆರೋಪಗಳಿವೆ. ಜಮೀನು ಖರೀದಿಯ ದಾಖಲೆಗಳನ್ನು ವಿಶೇಷ ತನಿಖಾ ದಳ ವಶಕ್ಕೆ ಪಡೆದಿದೆ.
ರಾಮಮಂದಿರದ ದಾನದಕ್ಷಿಣೆಯ ಕೋಟ್ಯಂತರ ರುಪಾಯಿ ಕಾಣೆಯಾಗಿದೆ ಮತ್ತು ದೇವಾಲಯದ ಸಿಸಿ ಟೀವಿ ಸಾಕ್ಷ್ಯ ಕೂಡ ನಾಪತ್ತೆಯಾಗಿದೆ ಎಂದು ಇದೇ ಜೂನ್ 7ರಂದು ಸಮಾಜವಾದಿ ಪಾರ್ಟಿಯ ನಾಯಕ ಅಖಿಲೇಶ್ ಯಾದವ್ ಆಪಾದಿಸಿದ್ದರು.
ಶುರುವಿನಲ್ಲಿ ಈ ಕಳವಿನ ಮೊತ್ತ ಏಳು ಕೋಟಿ ರುಪಾಯಿ ಎಂದು ಅಂದಾಜು ಮಾಡಲಾಗಿತ್ತು. ಆದರೆ ತನಿಖೆ ಆಳಕ್ಕಿಳಿಯುತ್ತಿದ್ದಂತೆ ಈ ಮೊತ್ತ 200 ಕೋಟಿ ರುಪಾಯಿಯಿಂದ 1,400 ಕೋಟಿ ರುಪಾಯಿ ಎನ್ನಲಾಗುತ್ತಿದೆ. ಈ ಮೊತ್ತದಲ್ಲಿ ಬಂಗಾರ ಮತ್ತು ಬೆಳ್ಳಿಯ ಇಟ್ಟಿಗೆಗಳು, ಚಿನ್ನ ಮತ್ತು ವಜ್ರದ ಹಾರಗಳು ಸೇರಿವೆ. ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿರುವುದಾಗಿಯೂ ಹೇಳಲಾಗುತ್ತಿದೆ.
ಕಳವಿನ ಸಂಬಂಧ ರಚಿಸಲಾಗಿರುವ ವಿಶೇಷ ತನಿಖಾ ದಳವು ರಾಮಮಂದಿರ ಟ್ರಸ್ಟ್‌ನ ಪ್ರಧಾನಕಾರ್ಯದರ್ಶಿ ಚಂಪತ್ ರಾಯ್ ಬನ್ಸಲ್ ಅವರನ್ನೂ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆಯ ಅಂತಿಮ ವರದಿ ಸದ್ಯದಲ್ಲೇ ಸಲ್ಲಿಕೆಯಾಗುವ ನಿರೀಕ್ಷೆ ಇದೆ.
ರಾಮಮಂದಿರವನ್ನು ನಿರ್ಮಿಸುವಂತೆ ಮತ್ತು ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳಲು ಮೂರು ತಿಂಗಳ ಒಳಗಾಗಿ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ರಚಿಸುವಂತೆ ಸುಪ್ರೀಮ್ ಕೋರ್ಟು 2019ರ ನವೆಂಬರ್ ಒಂಬತ್ತರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. 2020ರ ಫೆಬ್ರವರಿ ಐದರಂದು ಪ್ರಧಾನಮಂತ್ರಿಯವರು ಟ್ರಸ್ಟ್ ರಚಿಸಿದರು. ಮಂದಿರದ ನಿರ್ಮಾಣ- ಅಭಿವೃದ್ಧಿ- ಆಡಳಿತ ಹಾಗೂ ಸಂಪತ್ತಿನ ಉಸ್ತುವಾರಿ ನೋಡಿಕೊಳ್ಳುವುದು ಟ್ರಸ್ಟ್‌ನ ಕರ್ತವ್ಯವಾಗಿತ್ತು. 15 ಮಂದಿ ಸದಸ್ಯರ ಈ ಟ್ರಸ್ಟ್‌ನ ಪ್ರಧಾನಕಾರ್ಯದರ್ಶಿಯಾಗಿ ವಿಶ್ವಹಿಂದೂ ಪರಿಷತ್ ಮತ್ತು ಆರೆಸ್ಸೆಸ್‌ನಲ್ಲಿ ದಶಕಗಳಿಂದ ದುಡಿಯುತ್ತಿದ್ದ ಚಂಪತ್ ರಾಯ್ ನೇಮಕಗೊಂಡರು.
ಇದನ್ನೂ ಓದಿದ್ದೀರಾ? ಲಖನೌ ಅಗ್ನಿ ದುರಂತ | ಮದುವೆಯಾಗಬೇಕಿದ್ದ ಜೋಡಿ ಮಸಣಕ್ಕೆ!
2024ರ ಜನವರಿ 22ರಂದು ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಸಾರ್ವಜನಿಕರ ದರ್ಶನಕ್ಕೂ ತೆರೆಯಲಾಯಿತು. ದೇಶ ವಿದೇಶಗಳಿಂದ ಭಕ್ತರು ಭಾರೀ ಸಂಖ್ಯೆಯಲ್ಲಿ ಬರಲಾರಂಭಿಸಿದರು. ದೊಡ್ಡ ಮೊತ್ತಗಳ ಕಾಣಿಕೆಯನ್ನೂ ಸಲ್ಲಿಸುತ್ತಿದ್ದರು.
2026ರ ಜೂನ್ 7ರಂದು ಅಖಿಲೇಶ್ ಯಾದವ್ ಆಪಾದನೆ ಸಿಡಿದಿತ್ತು. ಆರೆಸ್ಸೆಸ್‌ನ ಕಾರ್ಯಕರ್ತ ಮತ್ತು ಈ ಹಿಂದೆ ರಾಮಮಂದಿರದ ಲೆಕ್ಕದ ಉಸ್ತುವಾರಿ ಹೊತ್ತಿದ್ದ ಮಹೀಪಾಲ್ ಸಿಂಗ್ ಸುದ್ದಿ ಮಾಧ್ಯಮಗಳ ಮುಂದೆ ಆಘಾತಕಾರಿ ಆಪಾದನೆಗಳನ್ನು ಮಾಡುತ್ತಾರೆ.




