ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿರುದ್ಯೋಗಿ ಯುವಕರುಗಳನ್ನು ‘ಜಿರಳೆಗಳು’ ಎಂದು ಕರೆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ‘ನಾನೂ ಜಿರಳೆ’ ಅಥವಾ ‘I Am Cockroach’ ಎಂದು ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ. ಈ ಮೂಲಕ ಡಿಜಿಟಲ್ ಚಳವಳಿ ನಡೆಸಲಾಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ ‘ಕಾಕ್ರೋಚ್’ ಹೆಸರಿನಲ್ಲಿ ಖಾತೆಗಳನ್ನು ತೆರೆಯಲಾಗುತ್ತಿದ್ದು ಅಥವಾ ತಮ್ಮ ಖಾತೆಯನ್ನೇ ‘ಕಾಕ್ರೋಚ್’ ಅಂದರೆ ಜಿರಳೆ ಎಂದು ಬದಲಾಯಿಸುವ ಟ್ರೆಂಡ್ ನಡೆಯುತ್ತಿದೆ. ಈ ಖಾತೆಗಳು, ಪೋಸ್ಟ್‌ಗಳ ಸಂಖ್ಯೆ ಅಧಿಕವಾಗುತ್ತಿದ್ದಂತೆ ಇನ್‌ಸ್ಟಾಗ್ರಾಂ ‘ಕಾಕ್ರೋಚ್’ ಖಾತೆಗಳನ್ನು ಅಮಾನತುಗೊಳಿಸುತ್ತಿದೆ.
ಈ ಬಗ್ಗೆ ‘I Am Cockroach’ ಎಂಬ ಇನ್‌ಸ್ಟಾ ಖಾತೆಯಲ್ಲಿ ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. “ಖಾತೆಗಳನ್ನು ಅಮಾನತುಗೊಳಿಸುವುದರಿಂದ ‘ಕಾಕ್ರೋಚ್ ಚಳವಳಿ’ಯನ್ನು ಮೌನಗೊಳಿಸಲು ಸಾಧ್ಯವಿಲ್ಲ. ನಮ್ಮ ಕಾಕ್ರೋಚ್ ಥೀಮ್ ಹಾಡು 700K+ ವೀಕ್ಷಣೆಗಳು ಮತ್ತು 100K+ ಲೈಕ್‌ಗಳನ್ನು ದಾಟಿದೆ. ಈ ಬೆನ್ನಲ್ಲೇ ನಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ನಿಷೇಧಿಸಲಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಜಿರಳೆ ಪಕ್ಷ ಹುಟ್ಟಿದ್ದೇಕೆ?
ಇನ್ನು ಖಾತೆ ಸಸ್ಪೆಂಡ್ ಆಗಿರುವ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿರುವ ನೆಟ್ಟಿಗರು, “ಜನರು ‘I Am Cockroach’ ಎಂದು ಸೈನ್ ಅಪ್ ಆದರೆ, ಮೆಟಾ ನಮ್ಮನ್ನು ನಿಷೇಧಿಸುತ್ತಿದೆ. ಈಗಲೇ https://www.iamcockroach.in/ ನಲ್ಲಿ ರಿಜಿಸ್ಟಾರ್ ಮಾಡಿಕೊಳ್ಳಿ” ಎಂದು ತಿಳಿಸಿದ್ದಾರೆ.
ಸಿಜೆಐ ಸೂರ್ಯ ಕಾಂತ್ ಹೇಳಿಕೆ ಬಳಿಕ ‘ಕಾಕ್ರೋಚ್ ಖಾತೆಗಳು’ ಎಂಬ ವಿಷಯವು ಒಂದು ರಾಜಕೀಯ ಮತ್ತು ಸಾಮಾಜಿಕ ಪ್ರತಿಭಟನೆಯ ಭಾಗವಾಗಿದೆ. ನಿರುದ್ಯೋಗಿ ಯುವಕರು ಮತ್ತು ಸೋಶಿಯಲ್ ಮೀಡಿಯಾ ಕ್ರಿಯೇಟರ್‌ಗಳು ತಾವು ವ್ಯವಸ್ಥೆಯನ್ನು ಪ್ರಶ್ನಿಸುವ ಜಿರಳೆಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.
ಇನ್ನು ಈಗಾಗಲೇ ಯುವಕರು ತಮಗೆ ಎದುರಾದ ಅವಮಾನವನ್ನೇ ತಮ್ಮ ಅಸ್ಮಿತೆಯನ್ನಾಗಿ ಮಾಡಿಕೊಂಡು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಎಂಬ ವ್ಯಂಗ್ಯಾತ್ಮಕ ಡಿಜಿಟಲ್ ರಾಜಕೀಯ ಪಕ್ಷವನ್ನು ಆರಂಭಿಸಿದ್ದಾರೆ. ಈ ಖಾತೆಯು ಕೇವಲ 72 ಗಂಟೆಗಳಲ್ಲಿ 1 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಗಳಿಸಿ ದಾಖಲೆ ಬರೆದಿದೆ. ಮುಖ್ಯ ನ್ಯಾಯಮೂರ್ತಿಗಳ ನಿವೃತ್ತಿ ನಂತರದ ರಾಜಕೀಯ ಸ್ಥಾನಮಾನಗಳ ನಿಷೇಧ, ಶೇ. 50ರಷ್ಟು ಮಹಿಳಾ ಮೀಸಲಾತಿ, ಮತ್ತು ಪರೀಕ್ಷಾ ಹಗರಣಗಳ ವಿರುದ್ಧ ಧ್ವನಿ ಎತ್ತುವ 5 ಪ್ರಮುಖ ಪ್ರಣಾಳಿಕೆಗಳನ್ನು ಈ ಖಾತೆಯ ಮೂಲಕ ಹರಡಲಾಗುತ್ತಿದೆ.




