ಬೀದರ್–ಬೆಂಗಳೂರು ವಿಮಾನಯಾನ ಜೂನ್ 1ರಿಂದ ಪುನರಾರಂಭಗೊಳ್ಳುತ್ತಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಂತಸದ ಸುದ್ದಿಯಾಗಿದೆ. ನಿರಂತರ ಪ್ರಯತ್ನಗಳ ಫಲವಾಗಿ ಸ್ಟಾರ್ ಏರ್ ವತಿಯಿಂದ ಈ ವಿಮಾನ ಸೇವೆ ಮತ್ತೆ ಆರಂಭವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ಸೇವೆಯ ಪುನರಾರಂಭದಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಂಚಾರ, ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಹೂಡಿಕೆ ಕ್ಷೇತ್ರಗಳಲ್ಲಿ ಹೆಚ್ಚಿನ ಅನುಕೂಲವಾಗಲಿದ್ದು, ಪ್ರದೇಶದ ಅಭಿವೃದ್ಧಿಗೆ ಹೊಸ ಉತ್ತೇಜನ ದೊರೆಯಲಿದೆ.
ವಿಮಾನ ವೇಳಾ ಪಟ್ಟಿಯ ಪ್ರಕಾರ, ಬೆಂಗಳೂರುದಿಂದ ಬೆಳಿಗ್ಗೆ 6:30ಕ್ಕೆ ಹೊರಟು 7:45ಕ್ಕೆ ಬೀದರ್ ತಲುಪಲಿದೆ. ಬೀದರ್‌ನಿಂದ ಬೆಳಿಗ್ಗೆ 8:15ಕ್ಕೆ ಹೊರಟು 9:30ಕ್ಕೆ ಬೆಂಗಳೂರು ತಲುಪಲಿದೆ.
ಈ ಮಹತ್ವದ ಕಾರ್ಯಕ್ಕೆ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಬೀದರ್ | ನೀಟ್ ಪರೀಕ್ಷೆ ಸೋರಿಕೆ : ಎನ್‌ಟಿಎ ರದ್ದತಿಗೆ ಎನ್‌ಎಸ್‌ಯುಐ ಆಗ್ರಹ
ಹಾಗೆಯೇ ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಸಾಗರ ಖಂಡ್ರೆ, ಸಚಿವ ರಹೀಂ ಖಾನ್ ಹಾಗೂ ಜಿಲ್ಲೆಯ ಎಲ್ಲಾ ಮುಖಂಡರ ಸಹಕಾರವೂ ಶ್ಲಾಘನೀಯವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಮತ್ತು ಜನರ ಕನಸುಗಳನ್ನು ನನಸಾಗಿಸಲು ಸರ್ಕಾರ ಸದಾ ಬದ್ಧವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.




