ದುರಿತ ಕಾಲದ ದಿಟ್ಟ ಧ್ವನಿ ರವೀಶ್ ಕುಮಾರ್ ಮತ್ತು ಆತ್ಮಸಾಕ್ಷಿಯುಳ್ಳ ಪತ್ರಕರ್ತರ ಮೌನ, ಗೊಂದಲ ಹಾಗೂ ಆಳದ ನೋವು..

Date:

ಎನ್‌ಡಿಟಿವಿ ಮೂಲಕ ದಶಕಗಳ ಕಾಲ ಸುದ್ದಿ ನಿರೂಪಕರಾಗಿ ಹೆಸರು ಮಾಡಿದವರು ರವೀಶ್ ಕುಮಾರ್. ಪ್ರೈಮ್ ಟೈಮ್‌ ಬುಲೆಟಿನ್‌ ನಿರೂಪಕರಾಗಿದ್ದ ರವೀಶ್ ಮೋದಿ ವಿರೋಧಿ ಎಂದು ಅನೇಕರ ವಿರೋಧವನ್ನೂ ಕಟ್ಟಿಕೊಂಡವರು; ಹಿಂದುತ್ವವಾದಿಗಳ ತೀವ್ರ ಟೀಕೆ, ಅಪಹಾಸ್ಯ, ದ್ವೇಷಕ್ಕೆ ಗುರಿಯಾದವರು. ನೂರಾರು ನಂಜಿನ ಕರೆ, ಜೀವ ಬೆದರಿಕೆಗಳನ್ನು ಎದುರಿಸಿದವರು. ಹೀಗೆ ಪತ್ರಕರ್ತರಾಗಿ ಜನಪ್ರಿಯರಾಗಿದ್ದ ರವೀಶ್‌ ಕುಮಾರ್ ಅವರ ಕೆಲಸದ ಶೈಲಿ ಹೇಗಿತ್ತು ಎನ್ನುವುದು ಸೇರಿ ಅವರ ಖಾಸಗಿ ಬದುಕಿನ ವಿವರಗಳನ್ನೂ ಒಳಗೊಂಡಂತೆ 94 ನಿಮಿಷಗಳ ಸಾಕ್ಷಚಿತ್ರವೊಂದು ಬಂದಿದೆ. ಅದರ ಹೆಸರು While we watched.

ರವೀಶ್ ಕುಮಾರ್, 1994ರಿಂದ 2022ರವರೆಗೆ ಎನ್‌ಡಿಟಿವಿಯಲ್ಲಿ ಕೆಲಸ ಮಾಡಿದವರು. ಎರಡು ವರ್ಷಕ್ಕೂ ಹೆಚ್ಚು ಕಾಲ ಅವರೊಂದಿಗಿದ್ದು, ಹಗಲು ಇರುಳು ಎನ್ನದೇ ಮನೆ, ಕಚೇರಿ, ರಸ್ತೆ, ಕಾರು ಮುಂತಾದೆಡೆ ಅವರನ್ನು ಹಿಂಬಾಲಿಸಿ ತೆಗೆದ ಡಾಕ್ಯುಮೆಂಟರಿ ಇದು.

ಹಣಕಾಸಿನ ಸಮಸ್ಯೆಯಿಂದ ಎನ್‌ಡಿಟಿವಿ ಕಚೇರಿಯ ಒಂದು ಫ್ಲೋರ್ ಅನ್ನು ಖಾಲಿ ಮಾಡಬೇಕಾಗಿ ಬರುತ್ತದೆ. ಅದರ ಪಳೆಯುಳಿಕೆಗಳ ನಡುವೆ ಮೊಬೈಲ್ ಬೆಳಕಿನಲ್ಲಿ ಹೆಜ್ಜೆ ಹಾಕುತ್ತಾ ರವೀಶ್ ಸಾಗುವುದರೊಂದಿಗೆ ಡಾಕ್ಯುಮೆಂಟರಿ ಆರಂಭವಾಗುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರವೀಶ್ಸಾಮಾನ್ಯವಾಗಿ, ನ್ಯೂಸ್ ರೂಮ್ ಎಂದರೆ, ಸದಾ ಗದ್ದಲದ ವಾತಾವರಣವಿರುತ್ತದೆ. ಚಾನೆಲ್‌ಗಳಂತೂ ಕಿರುಚಾಟ, ಜೋರು ನಿವೇದನೆ, ಆಗ್ರಹ, ಆತಂಕಗಳ ಸಂತೆ. ನಮಗೆ ಬೇಕಾದ ಬೈಟ್ ಅಥವಾ ವಿಡಿಯೋ ತಕ್ಷಣಕ್ಕೆ ಸಿಕ್ಕುವುದಿಲ್ಲ ಎನ್ನುವುದು ಕೂಡ ದೊಡ್ಡ ಗದ್ದಲಕ್ಕೆ ಕಾರಣವಾಗುತ್ತದೆ. ಇಂಥ ಹಲವು ಅಂಶಗಳು ರವೀಶ್ ಅವರ ಡಾಕ್ಯುಮೆಂಟರಿಯಲ್ಲಿ ಸ್ಥಾನ ಪಡೆದಿವೆ.

ಒಬ್ಬ ನಿಜವಾದ ಪತ್ರಕರ್ತನಿಗೆ ಸವಾಲು ಇರುವುದು, ಕಠೋರವಾದ, ಅಪಥ್ಯವಾದ ಸತ್ಯವನ್ನು ಜನರ ಮುಂದಿಡುವುದು. ಜೆಎನ್‌ಯುನ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಬಹುತೇಕ ಮಾಧ್ಯಮಗಳು ದೇಶದ್ರೋಹಿಗಳೆಂದು ಕರೆಯುತ್ತವೆ. ಅದನ್ನು ಬಹಳ ಜನ ನಂಬುತ್ತಾರೆ. ಆ ವಿದ್ಯಾರ್ಥಿಗಳ ಮೇಲೆ ಕೊಲೆ ಯತ್ನವೂ ನಡೆಯುತ್ತದೆ. ಅಂಥ ಚಾನೆಲ್‌ಗಳ ಹುಸಿ ನಿರೂಪಣೆಗಳನ್ನು ಮುರಿಯುವ ರವೀಶ್ ಕುಮಾರ್, ಜನರನ್ನು ಜಾತಿ, ಧರ್ಮದ ಮೇಲೆ ವಿಂಗಡಿಸಿ, ಅವರಿಗೆ ದೇಶದ್ರೋಹಿಗಳೆಂದು ಪಟ್ಟ ಕಟ್ಟುವ ಸರ್ಕಾರದ ಹಿಪಾಕ್ರಸಿಯನ್ನು ಬಯಲು ಮಾಡುತ್ತಾರೆ. ಅದಕ್ಕಾಗಿ ಅವರು ಏಕಕಾಲಕ್ಕೆ ಸರ್ಕಾರವನ್ನೂ, ತಮ್ಮ ಸುಳ್ಳು ಸುದ್ದಿಗಳು, ಹುಸಿ ಕಥನಗಳ ಮೂಲಕ ಸರ್ಕಾರದ ಬೆಂಬಲಕ್ಕೆ ನಿಂತ ಚಾನೆಲ್‌ಗಳನ್ನೂ ಎದುರಿಸಬೇಕಾಗಿ ಬರುತ್ತದೆ; ದೇಶದ್ರೋಹಿ ಎನ್ನುವ ಆರೋಪವನ್ನೂ ಹೊರಬೇಕಾಗುತ್ತದೆ.

ಜನರ ಮುಂದೆ ಸತ್ಯ ಇಡುವುದು ಎಂದರೆ, ಅದಕ್ಕಾಗಿ ಪತ್ರಕರ್ತನೊಬ್ಬ ಸಾಕಷ್ಟು ಶ್ರಮ ಪಡಬೇಕಾಗಿ ಬರುತ್ತದೆ. ಬೈಟ್ಸ್ ತರಿಸಬೇಕು, ವಿಡಿಯೋ ಫೂಟೇಜ್ ಬೇಕು. ಅದಕ್ಕೆ ವರದಿಗಾರರು ಬೇಕು, ಪ್ರೊಡಕ್ಷನ್ ನೋಡಿಕೊಳ್ಳುವವರು ಇರಬೇಕು. ಅದನ್ನೆಲ್ಲ ಸಂಸ್ಕರಿಸಿ, ಅದನ್ನು ಪರದೆ ಮೇಲೆ ಮೂಡಿಸಲು ದೊಡ್ಡ ತಾಂತ್ರಿಕ ತಂಡವೇ ಇರಬೇಕಾಗುತ್ತದೆ, ಅದಕ್ಕೆಲ್ಲ ಅಪಾರ ಮೊತ್ತದ ಹಣ ಖರ್ಚಾಗುತ್ತಿರುತ್ತದೆ. ತಮ್ಮ ಜನಪರ ವರದಿಗಾರಿಕೆಯಿಂದ ಸರ್ಕಾರವನ್ನು, ಪ್ರತಿಸ್ಪರ್ಧಿ ಚಾನೆಲ್‌ಗಳನ್ನು ಎದುರಿಸುವವರಿಗೆ ಅಗತ್ಯ ಸಿಬ್ಬಂದಿ, ಸೂಕ್ತ ಸಂಪನ್ಮೂಲದ ಒತ್ತಾಸೆ ಇಲ್ಲದಿದ್ದರೆ ಅವರ ಪರಿಸ್ಥಿತಿ ಹೇಗಿರಬಹುದು ಊಹಿಸಿ. ಅಂಥ ಪರಿಸ್ಥಿತಿಯನ್ನು ರವೀಶ್ ಎದುರಿಸುತ್ತಾರೆ.

ಡಾಕ್ಯುಮೆಂಟರಿಯಲ್ಲಿ ಆಗಿಂದಾಗ್ಗೆ ಕೇಕ್ ಕಟ್ ಮಾಡುವ ಸಂದರ್ಭಗಳು ಬರುತ್ತವೆ. ಒಮ್ಮೆ ಕೇಕ್ ಕಟ್ ಮಾಡಿದರು ಎಂದರೆ, ಒಬ್ಬ ಸಿಬ್ಬಂದಿಯ ವಿದಾಯ ಹೇಳುವ ಸಂದರ್ಭ ಬಂತು ಎಂದು ಅರ್ಥ. ಕ್ರಮೇಣ ಚಾನೆಲ್‌ನ ಒಂದೊಂದೇ ವಿಭಾಗವನ್ನು ಮುಚ್ಚುತ್ತಾ ಬರಲಾಗುತ್ತದೆ. ಪ್ರತಿಭಾವಂತ ಸಿಬ್ಬಂದಿ ಬೇರೆ ಮಾಧ್ಯಮ ಸಂಸ್ಥೆಗಳಿಗೆ ಹೋಗತೊಡಗುತ್ತಾರೆ. ಎಲ್ಲವನ್ನೂ ದುಗುಡದಿಂದಲೇ ಸ್ವೀಕರಿಸುವ ರವೀಶ್, ಮೌನಕ್ಕೆ ಜಾರುತ್ತಾರೆ.              

ಚಾನೆಲ್‌ನ ಸಿಬ್ಬಂದಿ ದ್ವಂದ್ವದಲ್ಲಿ ಸಿಲುಕುತ್ತಾರೆ. ಈ ಸಂಸ್ಥೆ ಇರುತ್ತೋ ಇಲ್ಲವೋ ಅನ್ನುವ ಬಗ್ಗೆ ಖಾತ್ರಿ ಇಲ್ಲ. ಹೆಚ್ಚಿನ ಸಂಬಳದ ಆಫರ್ ಬಂದರೆ ಅದನ್ನು ಸ್ವೀಕರಿಸಬೇಕೋ ಬೇಡವೋ ಎನ್ನುವ ಗೊಂದಲ.

ಸಣ್ಣ ಪತ್ರಿಕೆಯೊಂದರ ಸಂಪಾದಕನೊಬ್ಬ ರವೀಶ್ ಕುಮಾರ್ ಅವರಿಗೆ ಕರೆ ಮಾಡಿ, ‘ಪತ್ರಿಕೋದ್ಯಮದಲ್ಲಿ ಮುಂದುವರೆಯಲು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳಲೇಬೇಕೆ? ಎಂದು ಪ್ರಶ್ನಿಸುತ್ತಾನೆ. ‘ನಾನೂ 26 ವರ್ಷಗಳಿಂದ ಅದೇ ಗೊಂದಲದಲ್ಲಿದ್ದೇನೆ’ ಎನ್ನುತ್ತಾರೆ ರವೀಶ್. ಆದರೂ ‘ಸರ್ಕಾರ ನಾವು ಏನು ಮಾಡಬೇಕು ಎಂದು ಬಯಸುತ್ತೋ ಅದನ್ನು ನಾವು ಖಂಡಿತ ಮಾಡಬಾರದು’ ಎನ್ನುವುದು ಅವರ ಖಚಿತ ನಿಲುವು. ಜೊತೆಗೆ ಇಂಥ ವಾತಾವರಣದಿಂದಾಗಿ ನ್ಯೂಸ್‌ ರೂಮ್‌ಗಳಲ್ಲಿ ಬೌದ್ಧಿಕ ದಾರಿದ್ರ್ಯ ಆವರಿಸುತ್ತಿರುವುದರ ಬಗ್ಗೆಯೂ ಅವರು ಆತಂಕಗೊಳ್ಳುತ್ತಾರೆ.

ಕಡಿಮೆ ಸಂಬಳ. ಹೆಚ್ಚು ಕೆಲಸ, ಹೆಚ್ಚು ಒತ್ತಡ, ನೆರಳಿನಂತೆ ಹಿಂಬಾಲಿಸುವ ಅಭದ್ರತೆ ಇದು ಪತ್ರಕರ್ತರ ಪರಿಸ್ಥಿತಿ. ಇವುಗಳ ಜೊತೆಗೆ ದ್ವೇಷದ ಕರೆಗಳು. ಅಂಥ ಕರೆಗಳಿಂದ ಆರಂಭದಲ್ಲಿ ಆತಂಕಗೊಳ್ಳುವ ರವೀಶ್, ಬರಬರುತ್ತಾ ಅವಕ್ಕೆ ಹೊಂದಿಕೊಳ್ಳುತ್ತಾರೆ. ಬೆದರಿಕೆಯ ಕರೆ ಬಂದಾಗ ಹಾಡು ಹೇಳಿಕೊಂಡು ನಗುವ ಮಟ್ಟಿಗೆ ಅವು ಅವರ ಜೀವನದಲ್ಲಿ ಕಾಮನ್ ಆಗಿಬಿಡುತ್ತವೆ.  

ರವೀಶ್, ಇದೆಲ್ಲವನ್ನೂ ಮೀರಿ ಕೆಲಸ ಮಾಡುತ್ತಾರೆ. ಸರ್ಕಾರವನ್ನು ಎದುರು ಹಾಕಿಕೊಳ್ಳುತ್ತಾರೆ. ಬಡವರನ್ನು, ಶ್ರಮಿಕರನ್ನು ಹುಡುಕಿಕೊಂಡು ಹೋಗಿ ಮಾತನಾಡಿಸಿ, ‘ನಿಜವಾದ ಸುದ್ದಿ’ ಬಿತ್ತರಿಸುತ್ತಾರೆ. ಅವರು ಮಾಡುತ್ತಿರುವ ಕೆಲಸವನ್ನು ಜನ ನೋಡುತ್ತಿದ್ದಾರೆ ಎನ್ನುವುದರ ಬಗ್ಗೆ ಖಾತರಿ ಇರುವುದಿಲ್ಲ. ಆದರೂ ರಿಸ್ಕ್ ತೆಗೆದುಕೊಂಡು ಸರ್ಕಾರದ ಮುಖವಾಡ ಬಯಲು ಮಾಡುತ್ತಾರೆ. ಅದಕ್ಕೆ ಅವರಿಗೆ ಸಿಕ್ಕ ಪ್ರತಿಫಲ ಟೀಕೆ, ನಿಂದೆ, ಹಗೆತನ. ಸರ್ಕಾರದವರಿರಲಿ, ಇತರೆ ಮಾಧ್ಯಮಗಳೇ ರವೀಶ್ ಅವರನ್ನು ದೇಶವಿರೋಧಿ ಎಂದು ಕರೆಯುತ್ತವೆ. ವರದಿ ಮಾಡಲು ಹೋದಾಗ ಕೆಲವರು ಅವರ ಕೆಲಸಕ್ಕೆ ಅಡ್ಡಿಪಡಿಸುತ್ತಾರೆ, ಇಲ್ಲಿಂದ ತೊಲಗು ನಿನ್ನ ವರದಿ ನಮಗೆ ಅಗತ್ಯವಿಲ್ಲ ಎನ್ನುತ್ತಾರೆ. ಅದನ್ನೆಲ್ಲ ಸಹಿಸಿಕೊಂಡು ರವೀಶ್ ಕೆಲಸ ಮಾಡುತ್ತಾರೆ. ಆದರೂ ಜಗತ್ತು ಬೇರೊಂದು ದಿಕ್ಕಿನಲ್ಲಿ ಚಲಿಸುತ್ತಿರುವಂತೆ ಅವರಿಗೆ ಅನ್ನಿಸುತ್ತದೆ.

ತನ್ನ ವರದಿಗಾರನೊಂದಿಗೆ ಒಮ್ಮೆ ರವೀಶ್ ಹೇಳುತ್ತಾರೆ: ನಾವು ಅಪ್ರಸ್ತುತರಾಗುತ್ತಿದ್ದೇವೆ. ಜನರ ನಿಲುವುಗಳು ತುಂಬಾ ಬದಲಾಗಿವೆ. ನಾವು ಅವರನ್ನು ತಲುಪುವುದು ಹೇಗೆ?

ಇದು ಇಂದು ಆತ್ಮಸಾಕ್ಷಿಯುಳ್ಳ ಎಲ್ಲ ಪತ್ರಕರ್ತರನ್ನು ಕಾಡುತ್ತಿರುವ ಪ್ರಶ್ನೆ. ಅದಕ್ಕೆ ರವೀಶ್ ಅವರೇ ಉತ್ತರವನ್ನೂ ಕಂಡುಕೊಂಡಿದ್ದಾರೆ. ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕರಿಸಿ ರವೀಶ್ ಹೇಳುವ ಮಾತಿನಲ್ಲಿ ಅದರ ಸುಳಿವಿದೆ; ಎಲ್ಲ ಯುದ್ದಗಳನ್ನೂ ಗೆಲ್ಲಲೆಂದೇ ಮಾಡುವುದಿಲ್ಲ. ಕೆಲವೊಮ್ಮೆ ಹೋರಾಡಲು ಯುದ್ಧಭೂಮಿಯಲ್ಲಿ ಯಾರೋ ಒಬ್ಬರು ಇದ್ದಾರೆ ಎಂದು ಜಗತ್ತಿಗೆ ಸಾರಲು ಯುದ್ಧ ಮಾಡಬೇಕಾಗುತ್ತದೆ.

ರವೀಶ್ಡಾಕ್ಯುಮೆಂಟರಿಯಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಕಾಡುವುದು ರವೀಶ್ ಅವರ ಮೌನ. ಹೆಂಡತಿಯೊಂದಿಗೆ ಕಾರು ಚಾಲನೆ ಮಾಡುವಾಗಲೂ ಅವರ ಏಕಾಂಗಿಯಾಗಿದ್ದಂತೆ, ಮೌನದ ಮೊರೆ ಹೋದಂತೆ ಅನ್ನಿಸುತ್ತದೆ. ಪ್ರಶ್ನೆ, ಉತ್ತರ, ವಿಶ್ಲೇಷಣೆ ಎಲ್ಲ ಮುಗಿದ ನಂತರ ಬಂದ ಮೌನ ಅದು. ಆ ಮೌನದ ಅರ್ಥವೇನು? ಅವರು ತನ್ನ ವೃತ್ತಿಯ ಬಗ್ಗೆ ಚಿಂತಿಸುತ್ತಿದ್ದರೆ, ಜನಪರ ಪತ್ರಿಕೋದ್ಯಮದ ಭವಿಷ್ಯದ ಬಗ್ಗೆ ಆಲೋಚಿಸುತ್ತಿದ್ದರೆ, ತನ್ನ ಸುತ್ತಲಿನ ಬೆಳವಣಿಗೆಗಳನ್ನು ನೋಡಿ ದುಗುಡಗೊಂಡಿದ್ದರೆ, ದೇಶ ಎತ್ತ ಸಾಗುತ್ತಿದೆ ಎಂದು ಆತಂಕಗೊಂಡಿದ್ದರೆ?  

ರವೀಶ್ ಕುಮಾರ್ ಮೌನಕ್ಕೆ ಜಾರಿದ ಹೊತ್ತಿನಲ್ಲೇ ಅಮಿಶ್ ದೇವಗನ್, ಸುಧೀರ್ ಚೌಧರಿ, ಅರ್ನಾಬ್ ಗೋಸ್ವಾಮಿಯಂಥವರು ಅಬ್ಬರಿಸುತ್ತಿರುತ್ತಾರೆ. ಸರ್ಕಾರದ ಪರವಾಗಿ ನೆರೇಟಿವ್‌ಗಳನ್ನು ಸೃಷ್ಟಿಸುತ್ತಾ, ಅದನ್ನು ವಿರೋಧಿಸಿದವರನ್ನು ನಗರ ನಕ್ಸಲರು, ದೇಶದ್ರೋಹಿಗಳು ಎಂದು ಚಿತ್ರಿಸುತ್ತಾ ಭೂಮ್ಯಾಕಾಶಗಳನ್ನು ಒಂದು ಮಾಡುವಂತೆ ಚೀರಾಡುತ್ತಿರುತ್ತಾರೆ. ಡಾಕ್ಯುಮೆಂಟರಿಯಲ್ಲಿ ಅದನ್ನೆಲ್ಲ ನೋಡುವವರನ್ನೂ ದುಗುಡ ಮುತ್ತಿ, ಮೌನ ಆವರಿಸುತ್ತದೆ.

ಈ ಸಾಕ್ಷಚಿತ್ರ ನಿರ್ದೇಶಿಸಿರುವ ವಿನಯ್ ಶುಕ್ಲಾ ಈ ಹಿಂದೆ ಅರವಿಂದ್ ಕೇಜ್ರಿವಾಲ್ ಕುರಿತು ಸಾಕ್ಷಚಿತ್ರವೊಂದನ್ನು ಮಾಡಿದ್ದರು. ಹಲವು ಸವಾಲುಗಳ ನಡುವೆ ಅದನ್ನು ಥಿಯೇಟರ್‌ಗಳಲ್ಲಿ ಬಿಡುಗಡೆಯೂ ಮಾಡಿದ್ದರು. ರವೀಶ್ ಕುರಿತ ಈ ಡಾಕ್ಯುಮೆಂಟರಿ ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಪ್ರದರ್ಶನ ಕಂಡು ಜನಮನ್ನಣೆ ಗಳಿಸಿದೆ. ಆದರೆ, ಅದನ್ನು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ವಿನಯ್ ಶುಕ್ಲಾ ಆಸೆ ಕೈಗೂಡದೇ ಅದನ್ನು ಯೂ ಟ್ಯೂಬ್‌ನಲ್ಲಿ ಹಾಕಿದ್ದಾರೆ.

ರವೀಶ್‌ ಕುಮಾರ್, ಬಿಹಾರದ ಬ್ರಾಹ್ಮಣ ಕುಟುಂಬವೊಂದರಲ್ಲಿ ಹುಟ್ಟಿದವರು. ದೆಹಲಿಯಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡಿದ ನಂತರ ಎನ್‌ಡಿಟಿವಿ ಸೇರಿ ತಮ್ಮ ನಿರ್ಭೀತ ವರದಿಗಾರಿಕೆ ಹಾಗೂ ಜನಪರ ಕಾಳಜಿಯಿಂದ ಖ್ಯಾತರಾದವರು; ಪಶ್ಚಿಮ ಬಂಗಾಳ ಮೂಲದ, ಲೇಡಿ ಶ್ರೀರಾಮ್ ಕಾಲೇಜಿನ ಪ್ರಾಧ್ಯಾಪಕಿ ನಯನ್ ದಾಸ್‌ಗುಪ್ತ ಅವರನ್ನು ಪ್ರೇಮವಿವಾಹವಾಗಿ, ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದಾರೆ.

ಇದನ್ನು ಓದಿದ್ದೀರಾ: ʼಒಂದು ದೇಶ ಒಂದು ಚುನಾವಣೆʼಯೋ, ಇದೊಂದು ಹೂವಿನ ರೂಪದ ಕಣ್ಕಟ್ಟೋ ಅಥವಾ ಹಲವಾರು ಭ್ರಾಂತಿಗಳೋ?

ಎನ್‌ಡಿಟಿವಿಯನ್ನು ಅದಾನಿ ಕಂಪನಿ ಕೊಂಡುಕೊಂಡ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬರುವ ರವೀಶ್ ಕುಮಾರ್, ತಮ್ಮ ಯೂ ಟ್ಯೂಬ್ ಚಾನೆಲ್‌ ಮೂಲಕ ತಮ್ಮ ಪತ್ರಿಕೋದ್ಯಮವನ್ನು ಮುಂದುವರೆಸುತ್ತಿದ್ದಾರೆ. ಅವರ ಯೂ ಟ್ಯೂಬ್ ಚಾನೆಲ್ (Ravish Kumar Official) 70 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿದೆ.

ಒಬ್ಬ ಪತ್ರಕರ್ತನಾಗಿ ತಮ್ಮ ಜೀವ ಮತ್ತು ಜೀವನ ಪಣಕ್ಕಿಟ್ಟು ಕೆಲಸ ಮಾಡಿದ ರವೀಶ್ ಕುಮಾರ್ ಅಂಥವರಿಗೆ ಕೆಲಸ ಮಾಡಲು ಸೂಕ್ತವಾದ ಒಂದು ಚಾನೆಲ್‌ ಕೂಡ ಇಲ್ಲದೇ ಇರುವ ದಿನಮಾನಗಳಲ್ಲಿ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್‌ನಂಥ ಚಾನೆಲ್‌ಗಳು ತಮ್ಮ ನೆಲೆ ವಿಸ್ತರಿಸಿಕೊಳ್ಳುತ್ತಾ, ಕನ್ನಡಕ್ಕೂ ಕಾಲಿಟ್ಟಿವೆ. ಇದೇ ಹೊತ್ತಿಗೆ ಅರ್ನಾಬ್‌, ಸುಧೀರ್ ಚೌಧರಿ, ಅಮಿಶ್ ದೇವಗನ್‌ ಸೇರಿದಂತೆ 16 ಸುದ್ದಿ ನಿರೂಪಕರನ್ನು ಆಳುವ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ, ಕೋಮು ಭಾವನೆ ಕೆರಳಿಸುತ್ತಾರೆ ಎನ್ನುವ ಕಾರಣಕ್ಕೆ ವಿಪಕ್ಷಗಳ ಒಕ್ಕೂಟ ನಿಷೇಧಿಸಿದೆ. ಸುಧೀರ್ ಚೌಧರಿಯ ಮೇಲೆ ಅಲ್ಪಸಂಖ್ಯಾತರ ಕುರಿತ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಕರ್ನಾಟಕದಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ. ಪತ್ರಿಕೋದ್ಯಮ ಯಾವ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದೆ ಎನ್ನುವುದನ್ನು ಈ ಬೆಳವಣಿಗೆಗಳು ತೋರುತ್ತವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೊಲೀಸ್‌ ಕಸ್ಟಡಿಯಲ್ಲೇ ನಡೆದಿವೆ 275 ಅತ್ಯಾಚಾರ ಪ್ರಕರಣಗಳು: ಎನ್‌ಸಿಆರ್‌ಬಿ ಡೇಟಾ

2017 ರಿಂದ 2022ರವರೆಗೆ 275 'ಪೊಲೀಸ್‌ ಕಸ್ಟಡಿಯಲ್ಲಿ ಅತ್ಯಾಚಾರ' ಪ್ರಕರಣಗಳು ದಾಖಲಾಗಿವೆ...

ಗುಜರಾತ್ | ಭಾರತದ ಅತಿ ಉದ್ದದ ಸೇತುವೆ ‘ಸುದರ್ಶನ್ ಸೇತು’ ಉದ್ಘಾಟಿಸಿದ ಪ್ರಧಾನಿ ಮೋದಿ

ಗುಜರಾತ್‌ನ ದ್ವಾರಕಾ ಜಿಲ್ಲೆಯ ಬೇಟ್ ದ್ವಾರಕಾ ದ್ವೀಪದಿಂದ ಓಖಾ ಪ್ರದೇಶಕ್ಕೆ ಸಂಪರ್ಕಿಸುವ,...

ಲೋಕಸಭಾ ಚುನಾವಣೆ | ಮುಂದಿನ ವಾರ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ವರದಿ

ಮುಂದಿನ ತಿಂಗಳು ಚುನಾವಣಾ ಆಯೋಗದಿಂದ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ...

ಆಂಧ್ರ ಪ್ರದೇಶ | ಟಿಡಿಪಿ-ಜನಸೇನಾ ಮೈತ್ರಿ: 24 ಕ್ಷೇತ್ರ ಪವನ್‌ ಕಲ್ಯಾಣ್‌ಗೆ ಬಿಟ್ಟುಕೊಟ್ಟ ಚಂದ್ರಬಾಬು ನಾಯ್ಡು

ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ...