ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರ ಪ್ರಕರಣದ ವಿಚಾರಣೆ ವೇಳೆ ತೀವ್ರ ರಾಜಕೀಯ ವಿವಾದದ ಕೊಂಡಿಯಾಗಿದ್ದ ದೆಹಲಿ ಹೈಕೋರ್ಟ್‌ನ ಪ್ರಮುಖ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ನ್ಯಾಯಪೀಠದಲ್ಲಿದ್ದ ಸಂಸದರು ಮತ್ತು ಶಾಸಕರಿಗೆ (MP-MLA) ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಯನ್ನು ವಾಪಸ್ ಪಡೆಯಲಾಗಿದೆ.
ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಪ್ರಕಟಿಸಿರುವ ವಾರ್ಷಿಕ ರೋಸ್ಟರ್ (ಪ್ರಕರಣಗಳ ಹಂಚಿಕೆ ಪಟ್ಟಿ) ಬದಲಾವಣೆಯ ಭಾಗವಾಗಿ ಈ ನಿರ್ಧಾರ ಹೊರಬಿದ್ದಿದೆ. ಜುಲೈ 1ರಿಂದಲೇ ಈ ಬದಲಾವಣೆ ಜಾರಿಗೆ ಬರಲಿದೆ.
ಇದನ್ನೂ ಓದಿ: ಕೇಜ್ರೀವಾಲ್ ಬೇಡವೆಂದರೂ ಅವರಿಗೆ ವಕೀಲರನ್ನು ನೀಡಲಿದ್ದಾರೆ ನ್ಯಾ.ಸ್ವರ್ಣಕಾಂತ ಶರ್ಮ
ಕಳೆದ ಸುಮಾರು ಮೂರು ವರ್ಷಗಳಿಂದ ಈ ರಾಜಕೀಯ ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ಬದಲಿಗೆ, ಇನ್ನು ಮುಂದೆ ನ್ಯಾಯಮೂರ್ತಿ ಮನೋಜ್ ಜೈನ್ ಅವರು ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.
ರೋಸ್ಟರ್ ಬದಲಾವಣೆಯ ಅನ್ವಯ, ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರಿಗೆ ಸಿವಿಲ್ ವಿಭಾಗದ ಪ್ರಮುಖ ಜವಾಬ್ದಾರಿಗಳನ್ನು ವಹಿಸಲಾಗಿದೆ. ಇನ್ನು ಮುಂದೆ ಉದ್ಯೋಗದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ಮಾಹಿತಿ ಹಕ್ಕು ಕಾಯ್ದೆ (RTI) ವ್ಯಾಜ್ಯಗಳು, ದೆಹಲಿ ಸಾರಿಗೆ ಸಂಸ್ಥೆ (DTC), ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI), ದೆಹಲಿ ನಗರ ಕಲಾ ಆಯೋಗ (DUAC) ಹಾಗೂ ಗಣಿ ಇಲಾಖೆಗೆ ಸಂಬಂಧಿಸಿದ ಶಾಸನಬದ್ಧ ಪ್ರಾಧಿಕಾರಗಳ ವಿವಾದಗಳ ಸಿವಿಲ್ ರಿಟ್ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ.
ಸ್ವರ್ಣಕಾಂತರ ಸುತ್ತ ಸುತ್ತಿದ ವಿವಾದ
ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಇತ್ತೀಚೆಗೆ ತೀವ್ರ ವಿವಾದದ ಧೂಳೆಬ್ಬಿಸಿದ್ದವರು. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಆಪ್ ನಾಯಕರನ್ನು ವಿಚಾರಣಾ ನ್ಯಾಯಾಲಯವು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜಡ್ಜ್ ಸ್ವರ್ಣಕಾಂತ ಶರ್ಮಾ ನಡೆಸುತ್ತಿದ್ದರು.
ಈ ವೇಳೆ ಕೇಜ್ರಿವಾಲ್ ಅವರು ನ್ಯಾಯಮೂರ್ತಿಗಳ ವಿರುದ್ಧ ಪೂರ್ವಾಗ್ರಹ ಪೀಡಿತ ಹಾಗೂ ಪಕ್ಷಪಾತದ ಆಕ್ಷೇಪವೆತ್ತಿ, ಅವರು ಈ ಕೇಸಿನಿಂದ ಹಿಂದೆ ಸರಿಯಬೇಕು ಎಂದು ಅಫಿಡವಿಟ್ ಸಲ್ಲಿಸಿದ್ದರು. ಕೇಜ್ರಿವಾಲ್ ಅವರು ನ್ಯಾಯಮೂರ್ತಿ ಸ್ವರ್ಣಕಾಂತ ಅವರ ವಿರುದ್ಧ ನ್ಯಾಯಾಲಯದಲ್ಲೇ ನೇರವಾದ ಆರೋಪಗಳನ್ನು ಮುಂದಿಟ್ಟಿದ್ದರು.
ನ್ಯಾಯಮೂರ್ತಿಗಳ ಮಗ ಮತ್ತು ಮಗಳು ಇಬ್ಬರೂ ಕೇಂದ್ರ ಸರ್ಕಾರದ ಪ್ಯಾನಲ್ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಹಿತಾಸಕ್ತಿ ಸಂಘರ್ಷ ಏರ್ಪಡುತ್ತದೆ ಎಂದು ಕೇಜ್ರಿವಾಲ್ ವಾದಿಸಿದ್ದರು.
ಇದನ್ನೂ ಓದಿ: ಕೋರ್ಟ್ ಕಲಾಪದ ವಿಡಿಯೋ ಹಂಚಿಕೆ: ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್ ನೋಟಿಸ್
ಅಷ್ಟು ಮಾತ್ರವಲ್ಲದೆ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ಆರ್‌ಎಸ್‌ಎಸ್‌ನ (RSS) ಕಾನೂನು ವಿಭಾಗ ಆಯೋಜಿಸಿದ್ದ ನಾಲ್ಕು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆರ್‌ಎಸ್‌ಎಸ್ ಸಿದ್ಧಾಂತವನ್ನು ತಾವೂ ಮತ್ತು ತಮ್ಮ ಪಕ್ಷದವರು ತೀವ್ರವಾಗಿ ವಿರೋಧಿಸುವುದರಿಂದ, ಈ ಪೀಠದಿಂದ ತಮಗೆ ನ್ಯಾಯ ಸಿಗುವುದಿಲ್ಲ ಎಂಬ ಆತಂಕವಿದೆ ಎಂದು ಕೇಜ್ರಿವಾಲ್ ಕೋರ್ಟ್‌ಗೆ ತಿಳಿಸಿದ್ದರು.
ಈ ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಮೂರ್ತಿಗಳು, ಆಪ್ ನಾಯಕರ ನಡೆ ನ್ಯಾಯಾಂಗದ ಘನತೆಗೆ ಧಕ್ಕೆ ತರುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನೂ ಆರಂಭಿಸಿದ್ದರು. ತದನಂತರ ಈ ಹಗರಣದ ಮುಖ್ಯ ಪ್ರಕರಣವನ್ನು ನ್ಯಾಯಮೂರ್ತಿ ಮನೋಜ್ ಜೈನ್ ಅವರ ಪೀಠಕ್ಕೆ ವರ್ಗಾಯಿಸಲಾಗಿತ್ತು.
ರಾಜಕೀಯ ನಾಯಕರು ಮತ್ತು ನ್ಯಾಯಾಂಗದ ನಡುವಿನ ಈ ನೇರ ಸಂಘರ್ಷವು ಭಾರತೀಯ ಕಾನೂನು ವಲಯದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ರಾಜಕೀಯ ಪ್ರಭಾವದ ಕುರಿತು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿತ್ತು.




