ಅಸಲಿಗೆ ಛಾತ್ರೋಂ ಕಿ ಗೂಂಜ್ 2026ರ ಜೂನ್ 17ರಂದು ರಾಜಸ್ಥಾನದ ಕೋಟಾದಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಆರಂಭವಾದ ವಿದ್ಯಾರ್ಥಿ ಅಭಿಯಾನವಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವಜನರ (ವಿಶೇಷವಾಗಿ Gen Z) ಸಮಸ್ಯೆಗಳಾದ NEET-UG 2026 ಪೇಪರ್ ಲೀಕ್, ಪರೀಕ್ಷಾ ಅನಿಯಮಿತತೆ, ಹೆಚ್ಚುತ್ತಿರುವ ಶಿಕ್ಷಣ ವೆಚ್ಚ, ನೇಮಕಾತಿ ವಿಳಂಬ ಹಾಗೂ ನಿರುದ್ಯೋಗವನ್ನು ನೇರವಾಗಿ ಚರ್ಚಿಸಿ ಅವರ ಧ್ವನಿಯನ್ನು ಶಕ್ತಗೊಳಿಸುವುದು, ಜನಸಾಮಾನ್ಯರ ಮನಸ್ಸಿಗೆ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ.
ಗಾಜಿನ ಮನೆಯಲ್ಲಿ ಕುಳಿತು ನೆರೆಮನೆಗೆ ಕಲ್ಲು ಹೊಡೆಯಬಾರದು ಎಂಬ ಮಾತಿದೆ. ನಮ್ಮ ದೇಶದ ಪ್ರಧಾನಿಗೋ ನಿಷಿದ್ಧವೆಂಬುದರ ಮೇಲೆಯೇ ಅತೀವ ಮೋಹ… ಸದ್ಯ ದೇಶದ ರಾಜಕೀಯ ರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ವಿಷಯಗಳಲ್ಲಿ ‘ಸುಳ್ಳರು ಯಾರು’ ಎಂಬುದು ರಂಗೀದಾರ್ ಟಾಪಿಕ್. ಪ್ರಧಾನಿ ನರೇಂದ್ರ ಮೋದಿ, ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಷ್ಟ್ರೀಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ವಿದ್ಯಾರ್ಥಿಗಳ ಒಳಿತಿಗಾಗಿ ಕೈಗೊಂಡ ಛಾತ್ರೋಂ ಕಿ ಗೂಂಜ್ ಅಭಿಯಾನವನ್ನು ‘ಜೂಠ್ ಕಿ ಗೂಂಜ್’ ಎಂದು ಲೇವಡಿ ಮಾಡಿದ್ದಾರೆ.
ಅಸಲಿಗೆ ಛಾತ್ರೋಂ ಕಿ ಗೂಂಜ್ 2026ರ ಜೂನ್ 17ರಂದು ರಾಜಸ್ಥಾನದ ಕೋಟಾದಲ್ಲಿ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಆರಂಭವಾದ ವಿದ್ಯಾರ್ಥಿ ಅಭಿಯಾನವಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವಜನರ (ವಿಶೇಷವಾಗಿ Gen Z) ಸಮಸ್ಯೆಗಳಾದ NEET-UG 2026 ಪೇಪರ್ ಲೀಕ್, ಪರೀಕ್ಷಾ ಅನಿಯಮಿತತೆ, ಹೆಚ್ಚುತ್ತಿರುವ ಶಿಕ್ಷಣ ವೆಚ್ಚ, ನೇಮಕಾತಿ ವಿಳಂಬ ಹಾಗೂ ನಿರುದ್ಯೋಗವನ್ನು ನೇರವಾಗಿ ಚರ್ಚಿಸಿ ಅವರ ಧ್ವನಿಯನ್ನು ಶಕ್ತಗೊಳಿಸುವುದು, ಜನಸಾಮಾನ್ಯರ ಮನಸ್ಸಿಗೆ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ.

ʻಕೋಟಾʼ ಕೋಚಿಂಗ್ ಹಬ್ ಆಗಿರುವುದರಿಂದ ಅಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಶುಲ್ಕ ತೆತ್ತು, ಕುಟುಂಬಗಳ ಆರ್ಥಿಕ ಹೊರೆ ಮತ್ತು ಉದ್ಯೋಗ ಅನಿಶ್ಚಿತತೆಯನ್ನು ಎದುರಿಸುತ್ತಿದ್ದರು. ರಾಹುಲ್ ಗಾಂಧಿ ಶಿಕ್ಷಣ ವ್ಯವಸ್ಥೆಯನ್ನು “ವಸೂಲಿ ಯಂತ್ರ” ಮತ್ತು “ರಿಜೆಕ್ಷನ್ ಸಿಸ್ಟಂ” ಎಂದು ಕರೆದು, ವಿದ್ಯಾರ್ಥಿಗಳ ನೋವು, ಆತಂಕ ಮತ್ತು ಕನಸುಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಧ್ವನಿಸುವುದಕ್ಕಾಗಿ ಈ ವೇದಿಕೆಯನ್ನು ಸೃಷ್ಟಿಸಿದರು. ಸರ್ಕಾರದ ಹೊಣೆಗಾರಿಕೆ ಬೇಡುವುದು ಮತ್ತು ಶಿಕ್ಷಣ ಸುಧಾರಣೆಗೆ ಒತ್ತಡ ನಿರ್ಮಿಸುವುದು ದೇಶದ ಯುವಜನರ ಬದುಕಿನ ಕುರಿತು ಸಹಾನುಭೂತಿ ಹೊಂದಿದ್ದ ರಾಹುಲ್ ಗಾಂಧಿಯ ಉದ್ದೇಶವಾಗಿತ್ತು. ಆದರೆ ಕೃತ್ತಿಮ ಬುದ್ಧಿಯ ಪ್ರಧಾನಿ ವಿದ್ಯಾರ್ಥಿಗಳ ಒಳತುಮುಲವನ್ನು, ನೋವು, ಸಂಕಟಗಳನ್ನು ಸುಳ್ಳಿನ ಪ್ರತಿಧ್ವನಿ ಎಂದು ಹೀಯಾಳಿಸಿದರು… ನೀಟ್ ಹಗರಣದಿಂದ ದೇಶದ ಎಳೆಯರು ಹಗ್ಗಕ್ಕೆ ಕೊರಳೊಡ್ಡಿದ್ದು, ಕೆರೆಯಲ್ಲಿ ಅವರ ಕನಸಿನ ಹೆಣವೇ ತೇಲಿದ್ದು, ಈ ದೇಶಕ್ಕಾವರಿಸಿದ ನಂಜು ಕುಡಿದು ಬದುಕು ಅಸಹನೀಯವೆನಿಸಿ ಎದ್ದು ಹೊರಟಿದ್ದು ಘನತೆವೆತ್ತ ಪ್ರಧಾನಿಗೆ ಸುಳ್ಳು ಅನಿಸಿರಬಹುದು.
ರಾಜ್ಯಗಳ ಹಕ್ಕುಸತ್ತೆಯನ್ನು ಕಸಿದು ಏಕರೂಪದ ವೈದ್ಯಕೀಯ ಶಿಕ್ಷಣವನ್ನು ರಾಜ್ಯಗಳ ವಿರೋಧದ ನಡುವೆಯೂ ಅಸ್ತಿತ್ವಕ್ಕೆ ತಂದ ಮೋದಿ ಸರ್ಕಾರ ಎನ್ಟಿಎ ಕಾರ್ಯವೈಖರಿಯ ಬಗ್ಗೆ, ಅನುಷ್ಠಾನದಲ್ಲಿ ತೋರಿದ ಒಲವಿನ ಕಿಂಚಿತ್ತಾದರೂ ತೋರಬೇಕಿತ್ತು. ಅಮಾಯಕ, ಕನಸ ಕಂಗಳ ವಿದ್ಯಾರ್ಥಿಗಳದ್ದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂಬ ಕೂಗು, ಕಿವುಡು ಸರ್ವಾಧಿಕಾರಿಯ ಆತ್ಮವನ್ನು ತಟ್ಟಲಿಲ್ಲ.

ಈ ಅನ್ಯಾಯದ ವಿರುದ್ಧ ಸಿಡಿದೆದ್ದ ಜೆನ್-ಝಿ ಸಮೂಹ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಕೈಗೊಂಡಾಗ ಪೊಲೀಸ್ ಧಿರಿಸಿನಲ್ಲಿದ್ದ ಬಿಜೆಪಿ ಗೂಂಡಾಗಳು ತಮ್ಮ ಹಕ್ಕುಗಳನ್ನು ಪಡೆಯಲು ಸರ್ಕಾರದ ಹೊಣೆಗಾರಿಕೆ ಬೇಡಿದ ಹರೆಯದ ಮಕ್ಕಳನ್ನು ಮೊಳೆ ಸಿಕ್ಕಿಸಿದ ಲಾಠಿಗಳಿಂದ ಹೊಡೆದು, ಪೆಲೆಟ್ ಗನ್ ಬಳಸಿ ಹಿಂಸಿಸಿದರು. ಶಿಕ್ಷಣ ವ್ಯವಸ್ಥೆ ಹದಗೆಟ್ಟಿದ್ದಕ್ಕೆ ದಂಡ ತೆರಬೇಕಾದ ಶಿಕ್ಷಣ ಸಚಿವನನ್ನು ಪಟ್ಟದಿಂದ ಇಳಿಸಲು ಮೋದಿ ಸರ್ಕಾರಕ್ಕೆ 36 ದಿನಗಳ ಯೋಜನಾವಧಿ ಬೇಕಿತ್ತು; ಪ್ರತಿಭಟನೆಯಲ್ಲಿ ಭಾಗವಹಿಸಿದ ಹೆಣ್ಣುಮಕ್ಕಳ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ, ಅವರಿಗೆ ಅತ್ಯಾಚಾರ, ಕೊಲೆ ಬೆದರಿಕೆಗಳನ್ನು ಹಾಕಲಾಯಿತು. ಮೋದಿಯನ್ನು ನಿಂದಿಸಿ ವಿಡಿಯೋ ಮಾಡಿದ್ದ ಅಪ್ರಾಪ್ತೆಯನ್ನು ಸ್ಟಾಕಿಂಗ್ ಮಾಡಿ ಆಕೆಗೆ ಜೀವ ಬೆದರಿಕೆ ಹಾಕಿದರು, ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತೆಯನ್ನು ನಿಂದಿಸಿದರು, ತುಚ್ಛವಾಗಿ ಅಪಮಾನಿಸಿದರು. ಬಾಲಕಿಯ ನಿಂದನೆಯನ್ನು ತಮ್ಮ 56 ಇಂಚಿನ ಎದೆಗೆ ಆಳವಾಗಿ ಇಳಿಸಿಕೊಂಡ ಮೋದಿ ಸಿಂಪಥಿ ಹುಟ್ಟಿಸಿಕೊಳ್ಳಲು ವಿಡಿಯೋ ಮಾಡಿ ತನ್ನ ತಾಯಿಯ ಹೆಸರನ್ನು ನಡುವೆ ತಂದು ಭಕ್ತರ ಕರುಳು ಹರಿದು ಹೊರಬರುವಂತೆ ಮಾತನಾಡಿದರು. ಆದರೆ… ಲೆಕ್ಕವಿರದ ಹೆಣ್ಣುಮಕ್ಕಳ ಅಪಮಾನವಾಗುತ್ತಿರುವಾಗ, ತಮ್ಮ ಬಲಗೈ ಭಂಟರು ಹೋರಾಟಕ್ಕಿಳಿದ ಹೆಂಗಳೆಯರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವಾಗ ಅಕ್ಷರಶಃ ಸ್ಮಶಾನ ಮೌನ ತಾಳಿದ್ದರು.
ಸುಳ್ಳೆಂದರೆ…
ವಿದ್ಯಾರ್ಥಿಗಳ ಪ್ರತಿಧ್ವನಿಯನ್ನು ಸುಳ್ಳಿನ ಪ್ರತಿಧ್ವನಿ ಎಂದಿದ್ದಾರೆ ದೇಶದ ಸುಳ್ಳಿನ ಪ್ರತಿನಿಧಿ; ಅಂತಹ ಪ್ರಸಿದ್ಧ ಸುಳ್ಳುಗಳಲ್ಲಿ ವಿಶೇಷವಾದದ್ದು, ವಿದೇಶದ ಕಪ್ಪು ಹಣವನ್ನು ತಂದು ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ಜಮೆ ಮಾಡುವ ಬಗ್ಗೆ ಮೋದಿ 2013ರ ಚುನಾವಣಾ ಭಾಷಣದಲ್ಲಿ “ಕಪ್ಪು ಹಣ ಹಿಂತಿರುಗಿದರೆ ಪ್ರತಿ ಬಡವರಿಗೆ 15-20 ಲಕ್ಷ ಬರಬಹುದು” ಎಂದದ್ದು. ನಂತರ ನಾವು ಚುನಾವಣಾ ಮ್ಯಾನಿಫೆಸ್ಟೋದಲ್ಲಿ ಇಂತಹ ಭರವಸೆಯನ್ನೇ ನೀಡಿಲ್ಲ ಎಂದು ಮೆಲ್ಲಗೆ ಜಾರಿಕೊಂಡದ್ದು.
2014ರಲ್ಲಿ ಛತ್ತೀಸ್ಘಡ ಚುನಾವಣಾ ಪ್ರಚಾರದ ವೇಳೆ ಮಾತನಾಡುವಾಗ ದೇಶದ ಭ್ರಷ್ಟ ಉದ್ಯಮಿಗಳು ವಿದೇಶದಲ್ಲಿ ಇರಿಸಿರುವ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತರಿಸಿ, ದೇಶದ ಪ್ರತಿಯೊಬ್ಬನ ಖಾತೆಗೆ ಹಾಕುತ್ತೇವೆ ಎಂದಿದ್ದರು. ಸ್ವಿಸ್ ಬ್ಯಾಂಕ್ನಲ್ಲಿ ಇರುವ ಕಪ್ಪು ಹಣದ ಪಟ್ಟಿ ಕೇಂದ್ರದ ಬಳಿ ಇದ್ದರೂ ಆ ದೇಶಭ್ರಷ್ಟರ ಹೆಸರನ್ನು ಬಹಿರಂಗಗೊಳಿಸಲಿಲ್ಲ ಮೋದಿ.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಬಗ್ಗೆ 2014ರ ಮ್ಯಾನಿಫೆಸ್ಟೋದ ಕೆಲವು ಭಾಷಣಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಒತ್ತಿ ಹೇಳಲಾಗಿತ್ತು. ಸರ್ಕಾರಿ ಡೇಟಾ (EPFO, PLFS, MSME) ಹಲವು ಕೋಟಿ ಉದ್ಯೋಗ ಮತ್ತು ಸ್ವಯಂ ಉದ್ಯೋಗವನ್ನು ತೋರಿಸುತ್ತದೆ, ಆದರೆ ನಿರುದ್ಯೋಗ ದರ ಮತ್ತು ಗುಣಮಟ್ಟದ ಕುರಿತ ಸಮಸ್ಯೆ ಜಟಿಲವಾಗುತ್ತಿದೆಯೇ ಹೊರತು ಎಳ್ಳಷ್ಟೂ ಸುಧಾರಿಸಿಲ್ಲ. ಕೊನೆಗೆ ವಿಶ್ವಗುರು ಹರಡಿದ ಈ ಸುಳ್ಳನ್ನು “ಜಾಬ್ಲೆಸ್ ಗ್ರೋತ್” ಎಂದೇ ಕರೆಯಬೇಕಾಯಿತು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡುವ ಬಗ್ಗೆ ನೇರವಾಗಿ ಪುಂಕಾನುಪುಂಕ ಭಾಷಣ ಮಾಡಿದವರು ಈಗ ಲೀಟರ್ ಪೆಟ್ರೋಲ್ 110 ರೂ., ಡೀಸೆಲ್ 98 ರೂ. ದರಕ್ಕೆ ಮಾರುತ್ತಿದ್ದಾರೆ. 40 ರೂಪಾಯಿಗೆ ಪೆಟ್ರೋಲ್-ಡೀಸೆಲ್ ದೊರೆಯುತ್ತದೆ ಎಂದಿದ್ದರು. ಅಷ್ಟೂ ಸಾಲದಾಗಿ ಎಥೆನಾಲ್ ಎಂಬ ಹೊಸ ಮೋಸದ ಜಾಲವನ್ನು ಹೆಣೆದು ದೇಶಿಗರ ಬೆಲ್ಲ, ಸಕ್ಕರೆ, ಜೋಳ ಮೊದಲಾದ ಆಹಾರ ಪದಾರ್ಥವನ್ನು ಎಥೆನಾಲ್ ಇಂಧನದ ಉತ್ಪಾದನೆಗೆ ಬಳಸಿಕೊಂಡು ಈ ಆಹಾರ ಉತ್ಪನ್ನಗಳನ್ನು ಬಡಪಾಯಿಗಳಿಗೆ ಗಗನಕುಸುಮವಾಗಿಸಿದ್ದಾರೆ.
2022ರೊಳಗೆ ಪ್ರತಿ ಭಾರತೀಯರಿಗೆ ಸ್ವಂತ ಮನೆ (PMAY) ಯೋಜನೆಯಲ್ಲಿ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಕೋಟಿಗಟ್ಟಲೆ ಮನೆಗಳು ನಿರ್ಮಾಣ ಮತ್ತು ಹಂಚಿಕೆಯಾಗಿವೆ ಎಂದು ಬಿಜೆಪಿ ಬಡಾಯಿ ಕೊಚ್ಚಿಕೊಳ್ಳುತ್ತಿರುವಾಗಲೇ ಸೂರಿಲ್ಲದವರ ಬಾಳುವೆಯ ಕುರಿತು ಮೋದಿಗಿದ್ದ ಗಂಭೀರತೆ ಎಂತಹುದೆಂದರೆ ದೇಶದಲ್ಲಿ 2011ರಲ್ಲಿ ನಡೆದ ಸರ್ವೇ ಆಧರಿಸಿಯೇ ಇವರ ಆವಾಸ್ ಯೋಜನೆ ಕೈಗೆತ್ತಿಕೊಂಡರು; ಪ್ರಸ್ತುತ ಭಾರತದಲ್ಲಿ ನಿರಾಶ್ರಿತರ ಸಂಖ್ಯೆ ಎಷ್ಟಿದೆ, ಕೊಳಗೇರಿಯಲ್ಲಿ ಅಸಹನೀಯ ಬದುಕು ಬದುಕುತ್ತಿರುವ ಜನರ ನಿಖರ ಅಂಕಿ-ಅಂಶಗಳನ್ನು ಕೇಂದ್ರ ಸಂಗ್ರಹಿಸಲಿಲ್ಲ.

ರೈತರ ಆದಾಯವನ್ನು 2022ರೊಳಗೆ ದ್ವಿಗುಣಗೊಳಿಸುವುದನ್ನು 2016ರಲ್ಲಿ ಘೋಷಿಸಲಾಯಿತು. MSP ಹೆಚ್ಚಳ, PM-ಕಿಸಾನ್ ಮತ್ತು ವಿಮೆ ಇತ್ಯಾದಿ ಕ್ರಮಗಳು ಇವೆ. ಆದರೆ ನೈಜ ಆದಾಯ ದ್ವಿಗುಣವಾಗಿಲ್ಲ ಎಂದು ಬಹುತೇಕ ಅಧ್ಯಯನಗಳು (NSSO ಇತ್ಯಾದಿ) ತೋರಿಸುತ್ತವೆ. ಅದಿರಲಿ… 2021ರಲ್ಲಿ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡಿದ ರೈತರನ್ನು ಮನಬಂದಂತೆ ನಡೆಸಿಕೊಂಡರು, ದೇಶದ ರಾಜಧಾನಿ ಗಡಿಯಲ್ಲಿ ಕೃಷಿ ಕಾಯ್ದೆಯ ತಿದ್ದುಪಡಿ, ಕನಿಷ್ಠ ಬೆಂಬಲ ಬೆಲೆ ಆಗ್ರಹಿಸಿ ಆಂದೋಲನ ಕೈಗೊಂಡಿದ್ದ ರೈತರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ದೇಶದ ಅನ್ನದಾತರನ್ನು ಕೀಳಾಗಿ ನಡೆಸಿಕೊಂಡ ಪ್ರಿಯ ಪ್ರಧಾನಿ ಈ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರ ಜೀವ ಪಡೆದರು.
ನೋಟ್ ಬ್ಯಾನ್ ಸಂದರ್ಭದಲ್ಲಿ ಮೋದಿ ದೇಶದ ಜನರನ್ನು “50 ದಿನ ಸಹಕರಿಸಿ” ಎಂದು ಕೇಳಿದ್ದರು (ಡಿಸೆಂಬರ್ 30, 2016ರವರೆಗೆ). ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ವಾಪಸು ತರುವುದಾಗಿ ನಂಬಿಸಿ ಪ್ರಜೆಗಳನ್ನು ಮೂರ್ಖರನ್ನಾಗಿಸಿದರು. ಅಂದಿನಿಂದ ಇಂದಿನವರೆಗೆ ದೇಶ ಕಂಡ ಆರ್ಥಿಕ ತಲ್ಲಣಗಳು, ಡಾಲರ್ ಎದುರು ಮುಗ್ಗರಿಸಿದ ರೂಪಾಯಿ ಮೌಲ್ಯದ ಕುರಿತು ಎಲ್ಲಿಯೂ ಬಾಯಿ ಬಿಡದ ಪ್ರಧಾನಿ ಎಂತಹ ಕಡುಗಷ್ಟದ ಕಾಲದಲ್ಲೂ ಪತ್ರಿಕಾ ಮಾಧ್ಯಮದವರೊಂದಿಗೆ ಮುಖ ಕೊಟ್ಟು ನಿಲ್ಲಲಿಲ್ಲ. ಯಾವ ಪ್ರಶ್ನೆಗೂ ಉತ್ತರಿಸಲಿಲ್ಲ…
ನಾನು ಟೀ ಮಾರಿ ಜೀವನ ನಡೆಸಿದೆ ಎಂಬ ಸುಳ್ಳಿನಿಂದ ಹಿಡಿದು ಗಟಾರಿನಿಂದ ಗ್ಯಾಸ್ ಉತ್ಪಾದಿಸಬಹುದು, ದೇಶಕ್ಕಾಗಿ ಹೆಂಡತಿಯನ್ನು ತೊರೆದೆ, ಕುಟುಂಬದವರಿಂದ ದೂರವಾಗಿ ದೇಶ ಸೇವೆಗಾಗಿ ಜೀವ ಮುಡಿಪಿಟ್ಟೆ ಎಂಬ ತರಹೇವಾರಿ ಸುಳ್ಳನ್ನು ದೇಶದ ಪ್ರಜೆಗಳ ಮೆದುಳಿಗೆ ಬಿತ್ತಿ, ಬೆಳೆಸಿ ಸುಳ್ಳನ್ನೇ ತಮ್ಮ ಅನುಗಾಲದ ಮಂತ್ರವಾಗಿಸಿರುವ ಮೋದಿಜಿ ಒಮ್ಮೆ ಹೇಳಿದ್ದರು ಬಡತನ ಮತ್ತು ಅಪೌಷ್ಟಿಕತೆಯ ನಿರ್ಮೂಲನೆ ಮಾಡುತ್ತೇವೆ ಎಂದು. ಸದ್ಯ ವಿಶ್ವಸಂಸ್ಥೆಯ ವರದಿಯ ಪ್ರಕಾರ ವಿಶ್ವದಲ್ಲಿ ಹಸಿವಿನಿಂದ ಬಳಲುತ್ತಿರುವ ದೇಶಗಳಲ್ಲಿ ಭಾರತ 67ನೇ ಸ್ಥಾನದಲ್ಲಿದೆ. ಮತ್ತು ಜಗತ್ತಿನಾದ್ಯಂತ ಹಸಿವಿನಿಂದ ಬಳಲುತ್ತಿರುವವರ ಪೈಕಿ ಭಾರತದ 25% ಜನರಿದ್ದಾರೆ.

ಇನ್ನೂ.. ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸುವ, ಅವರ ಸಮಸ್ಯೆಗಳನ್ನು, ಸಂಕಟಗಳನ್ನು ಪ್ರತಿನಿಧಿಸುವ ಧ್ವನಿಯನ್ನೇ ಸುಳ್ಳಿನ ಪ್ರತಿಧ್ವನಿ ಎಂದ ಪ್ರಧಾನಿ ತಮ್ಮ ಪದವಿಯ ಕುರಿತು ಸುಳ್ಳನ್ನೇ ಹೇಳಿದ್ದಾರೆ. ಅವರ ಪದವಿ ಪ್ರಮಾಣಪತ್ರದಲ್ಲಿರುವ ದಾಖಲೆಗೂ, ಅವರಾಡುವ ಮಾತಿಗೂ ತಾಳೆಯೇ ಇಲ್ಲ. ಸಮಗ್ರ ರಾಜಕೀಯ ಶಾಸ್ತ್ರ ಎಂಬ ವಿಷಯದಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪದವಿ ಪಡೆದಿದ್ದೇನೆ ಎನ್ನುತ್ತಾರೆ ಮೋದಿ, ಆ ಸಮಯದಲ್ಲಿ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಸಮಗ್ರ ರಾಜಕೀಯ ಶಾಸ್ತ್ರ ಎಂಬ ವಿಷಯವೇ ಇರಲಿಲ್ಲ.
ಕುಸಿದದ್ದು ಕಟ್ಟಡವಲ್ಲ; ಭವಿಷ್ಯ
1975ರಲ್ಲಿ ತಾನು ಭೂಗತನಾಗಿದ್ದೆ, ವೈಖರಿಯಲ್ಲಿರದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ ಎಂದು ಸುಳ್ಳಾಡುವ ಪ್ರಧಾನಿಗೆ ಈ ದೇಶದ ವಿದ್ಯಾರ್ಥಿಗಳ ಸಮಸ್ಯೆಗಳು ಹೇಗೆ ತಾನೇ ಅರ್ಥವಾಗಬೇಕು. ದೆಹಲಿಯ ಸತ್ಯ ನಿಕೇತನ ಕುಸಿದಾಗ ಖಾಲಿ ಕಟ್ಟಡಗಳು ಕುಸಿಯಲಿಲ್ಲ; ಕುಸಿದದ್ದು ಭಾರತದ ಶೈಕ್ಷಣಿಕ ವ್ಯವಸ್ಥೆ. ಒಂದೆಡೆ ವಿಶ್ವವಿದ್ಯಾಲಯಗಳು ಹಣದ ದಂದೆಗೆ ಇಳಿದಿದೆ, ಇನ್ನೊಂದೆಡೆ ಪ್ರಶ್ನೆಪತ್ರಿಕೆ ಸೋರಿಕೆ, ವರ್ಷಗಳು ಉರುಳಿದರೂ ನಡೆಯದ ಸರ್ಕಾರಿ ಹುದ್ದೆಗಳ ನೇಮಕಾತಿ, ನಿರುದ್ಯೋಗದ ಭೀತಿ ಇದೆಲ್ಲದರ ನಡುವೆಯೂ ವಿದ್ಯಾರ್ಥಿಗಳು ಬೆಟ್ಟದಷ್ಟು ಭರವಸೆ ಹೊತ್ತು ದೂರದ ನಗರಗಳಿಗೆ ವಲಸೆ ಹೋಗುತ್ತಾರೆ. ಬೆಂಕಿ ಪೊಟ್ಟಣದಂತಹ ಅಂಗುಲದಗಲದ, ಗಾಳಿಯಾಡದ, ಬೆಳಕು ತೂರದ, ಮುಗ್ಗಲು ವಾಸನೆಯ ಕೋಣೆಗಳಲ್ಲಿ ತಪಸ್ಸಿಗೆ ಕುಳಿತವರಂತೆ ಕುಳಿತು ಕಿತ್ತು ತಿನ್ನುವ ಬಡತನ, ಅಪಮಾನ, ಬದುಕಿನ ಅಭದ್ರತೆಯ ಮೆಟ್ಟಿನಿಂತು, ಬದುಕು ಕಟ್ಟಿಕೊಳ್ಳಬೇಕು, ಹೆತ್ತವರಿಗೆ ನೆರವಾಗಬೇಕು ಎಂಬ ಚಲದಲ್ಲಿ ಈಗಲೋ ಆಗಲೋ ಕುಸಿಯುವ ಕಟ್ಟಡಗಳಲ್ಲಿ ದಿನ ತಳ್ಳುತ್ತಾರೆ. ಗೋಡೆಗಳು ಕುಸಿದಾಗ… ಕನಸೂ, ದೇಶದ ಭವಿಷ್ಯವೂ ನೆಲಸಮವಾಗುತ್ತದೆ.

ಸತ್ಯ ನಿಕೇತನ ಕಟ್ಟಡ ಕುಸಿತದ ನಂತರ ತೆಗೆದುಕೊಳ್ಳಬಹುದಾದ ಕ್ರಮಗಳಲ್ಲಿ ಮಾಲೀಕರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ, ಸಂತ್ರಸ್ತರ ಕುಟುಂಬಗಳಿಗೆ ತಕ್ಷಣದ ಪರಿಹಾರ ಇದೆಲ್ಲಾ ಆ ಕ್ಷಣಕ್ಕೆ ಕಣ್ಣೊರೆಸುವ ತಂತ್ರ. ದೇಶದ ಯುವಜನರ ಕುರಿತು ಕಾಳಜಿ ಇರುವ ಪ್ರಧಾನಿ ಮಾಡಬೇಕಾದ್ದು; ಅಪಾಯಕಾರಿ ಕಟ್ಟಡಗಳನ್ನು ಮುಚ್ಚುವುದು ಅಥವಾ ಕೆಡವುದು. ದೀರ್ಘಾವಧಿಯಲ್ಲಿ ಎಲ್ಲಾ PG ಮತ್ತು ಹಾಸ್ಟೆಲ್ ಕಟ್ಟಡಗಳಿಗೆ ಕಡ್ಡಾಯ ರಚನಾತ್ಮಕ ಆಡಿಟ್, ಅನಧಿಕೃತ ಮಹಡಿಗಳ ನಿರ್ಮಾಣವನ್ನು ಕಠಿಣವಾಗಿ ನಿಷೇಧಿಸುವುದು. ಎಂಜಿನಿಯರ್ಗಳ ಸಲಹೆ ಇಲ್ಲದೆ ಕಟ್ಟಡಗಳ ಮಾರ್ಪಾಡಿಗೆ ಅನುಮತಿ ನಿರಾಕರಿಸುವುದು. ಸುರಕ್ಷತಾ ಪ್ರಮಾಣಪತ್ರ ಮತ್ತು ಅಗ್ನಿಶಾಮಕ NOC ಅನ್ನು ಕಡ್ಡಾಯಗೊಳಿಸುವುದು ಜೊತೆಗೆ ವಿದ್ಯಾರ್ಥಿಗಳು ತಂಗಲು ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆಯನ್ನು ರೂಪಿಸುವ ಯೋಜನೆಯನ್ನು ಕೈಗೊಳ್ಳುವುದು. ಕಾಲಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸಿ, ಪರೀಕ್ಷಾಂಗವನ್ನು ಗಟ್ಟಿಗೊಳಿಸಿ ಒಂದಿನಿತು ನೆರವಾಗಬೇಕು. ಹೀಗಾದರೆ ಬಹುಶಃ ತಡರಾತ್ರಿ ಕನಸಿನಿಂದ ಎದ್ದವರಂತೆ ವಿಡಿಯೋ ಮಾಡಿ “ಫ್ರೆಂಡ್ಸ್…” ಎಂದು ನಗೆಪಾಟಲಾಗುವುದು. ಬಣ್ಣಬಣ್ಣದ ಬೆಳಕು, ಧ್ವನಿವರ್ಧಕಗಳ ಹಿನ್ನೆಲೆಯಲ್ಲಿ ಹೂವಿನ ಹಾಸಿನ ಮೇಲೆ ನಡೆದು ಕೃತಕ ನಡೆ, ನಗು, ಕ್ಯಾಮೆರಾಗೆ ಕೊಡುವ ಪೋಸ್ಗಳಿಂದ ದೇಶದ ನವಪೀಳಿಗೆಯನ್ನು ಒಲಿಸಿಕೊಳ್ಳುವೆನೆಂಬ ಭ್ರಮೆಯಿಂದ ನಮ್ಮ ಪ್ರಧಾನಿ ಆಚೆ ಬರಬಹುದು.





