2021ರಲ್ಲಿ ನಡೆದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ನ್ಯಾಯಾಲಯದ ವಿಚಾರಣೆ ತೀರಾ ನಿಧಾನವಾಗಿ ಸಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ ಎರಡು ತಿಂಗಳಿನಿಂದ ಕೋರ್ಟ್‌ಗೆ ಒಬ್ಬನೇ ಒಬ್ಬ ಸಾಕ್ಷಿಯನ್ನೂ ಕರೆತಂದು ವಿಚಾರಣೆ ನಡೆಸದಿರುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠ ಬೇಸರ ವ್ಯಕ್ತಪಡಿಸಿತು.
ವಿಚಾರಣೆಯ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ರಾಜ್ಯ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ಮಾಹಿತಿಯನ್ನು ಒದಗಿಸಿದರು. ಮುಖ್ಯ ಘಟನೆಗೆ ಸಂಬಂಧಿಸಿದ ಮೊದಲ ಪ್ರಕರಣದಲ್ಲಿ ಇದುವರೆಗೆ 44 ಸಾಕ್ಷಿಗಳ ವಿಚಾರಣೆ ಮುಗಿದಿದ್ದು, 15 ಜನರನ್ನು ಕೈಬಿಡಲಾಗಿದೆ. ಆದರೆ, ಇನ್ನೂ 72 ಸಾಕ್ಷಿಗಳ ವಿಚಾರಣೆ ಬಾಕಿ ಉಳಿದಿದೆ. ಎರಡನೇ ಪ್ರಕರಣದಲ್ಲಿ ಒಟ್ಟು 35 ಸಾಕ್ಷಿಗಳ ಪೈಕಿ 26 ಜನರ ವಿಚಾರಣೆ ಮುಗಿದಿದ್ದು, ಕೇವಲ 9 ಜನರ ವಿಚಾರಣೆ ಮಾತ್ರ ಬಾಕಿ ಇದೆ ಎಂದು ಅವರು ವಿವರಿಸಿದರು.
ವಿಚಾರಣೆ ವೇಳೆ ಆರೋಪಿ ಆಶಿಶ್ ಮಿಶ್ರಾ ಪರ ವಕೀಲರಾದ ಸಿದ್ಧಾರ್ಥ್ ದವೆ ಅವರು, ಘಟನೆ ನಡೆದು ಸುಮಾರು ಐದು ವರ್ಷಗಳಾಗುತ್ತಾ ಬಂದರೂ ಇನ್ನೂ 72 ಸಾಕ್ಷಿಗಳ ವಿಚಾರಣೆ ಬಾಕಿ ಇದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಜಾಮೀನು ಸಹಿತ ಮತ್ತು ರಹಿತ ವಾರಂಟ್ ನೀಡಿದ್ದರೂ ಕಳೆದ ಎರಡು ತಿಂಗಳಿಂದ ಯಾರ ವಿಚಾರಣೆಯೂ ನಡೆದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ತರ ಪರ ವಕೀಲ ಪ್ರಶಾಂತ್ ಭೂಷಣ್ ಅವರು, ಪೊಲೀಸರು ಬೆದರಿಕೆ ಹಾಕುತ್ತಿರುವುದರಿಂದಲೇ ಸಾಕ್ಷಿಗಳು ಭಯಪಟ್ಟು ಕೋರ್ಟ್‌ಗೆ ಬರುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಇದನ್ನು ಓದಿದ್ದೀರಾ? ತಮಿಳುನಾಡಿನಲ್ಲಿ ತುಮಕೂರು ಮೂಲದ ಕನ್ನಡಿಗನ ಜಯಭೇರಿ; ಟಿವಿಕೆ ಪಕ್ಷದಿಂದ ಸುನಿಲ್ ಆನಂದ್ ಶಾಸಕ
ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಸಾಕ್ಷಿಗಳು ಏಕೆ ಬರುತ್ತಿಲ್ಲ ಎಂಬ ಬಗ್ಗೆ ಯಾವುದೇ ಕಾರಣ ನೀಡದಿದ್ದನ್ನು ಗಮನಿಸಿದ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಧೀಶರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿತು. ಸಾಕ್ಷಿಗಳನ್ನು ಕೋರ್ಟ್‌ಗೆ ಕರೆತರಲು ಕಾನೂನಿನ ಅಡಿಯಲ್ಲಿ ಲಭ್ಯವಿರುವ ಎಲ್ಲಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಸಾಕ್ಷಿದಾರರಿಗೆ ಸೂಕ್ತ ಭದ್ರತೆ ಹಾಗೂ ರಕ್ಷಣಾ ಯೋಜನೆಯನ್ನು ಕಡ್ಡಾಯವಾಗಿ ಒದಗಿಸುವಂತೆ ನಿರ್ದೇಶಿಸಿತು. ವಿಚಾರಣೆ ಬೇಗ ಮುಗಿಯಬೇಕಾದರೆ, ದಿನಕ್ಕೆ ಕೇವಲ 3-4 ಜನರ ಬದಲು 7-8 ಸಾಕ್ಷಿಗಳಿಗೆ ಸಮನ್ಸ್ ನೀಡಿ, ಬಂದವರ ವಿಚಾರಣೆಯನ್ನಾದರೂ ಮುಗಿಸಬಹುದು ಎಂದು ಸಲಹೆ ನೀಡಿತು. ಅಲ್ಲದೆ, ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ನಾಲ್ಕು ವಾರದೊಳಗೆ ವರದಿ ಸಲ್ಲಿಸುವಂತೆ ತನಿಖಾಧಿಕಾರಿಗೆ ಆದೇಶಿಸಿದೆ.
2021ರ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಉದ್ದೇಶಪೂರ್ವಕವಾಗಿ ವಾಹನ ಹರಿಸಿದ ಭೀಕರ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದಾರೆ. ವೇಗವಾಗಿ ಬಂದ ಎಸ್‌ಯುವಿ ಕಾರು ಹರಿದ ಪರಿಣಾಮ, ನಾಲ್ವರು ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಒಟ್ಟು ಎಂಟು ಜನರು ಪ್ರಾಣ ಕಳೆದುಕೊಂಡಿದ್ದರು. ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಈ ಹಿಂಸಾಚಾರ ಪ್ರಕರಣದ ವಿಚಾರಣೆಯೇ ಇದೀಗ ವಿಳಂಬವಾಗುತ್ತಿದ್ದು, ಶೀಘ್ರ ನ್ಯಾಯದಾನಕ್ಕಾಗಿ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ.





