ವಿವಾಹದ ಸ್ವರೂಪದಲ್ಲಿರುವ ಮತ್ತು ಮದುವೆಯಾಗುವ ಉದ್ದೇಶವನ್ನು ಹೊಂದಿರುವ ‘ಲಿವ್-ಇನ್’ ಸಂಬಂಧಗಳಿಗೂ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 498A ಅನ್ವಯವಾಗುತ್ತದೆ. ಈ ಸೆಕ್ಷನ್ ಅಡಿಯಲ್ಲಿ ಮಹಿಳೆಯರಿಗೆ ರಕ್ಷಣೆ ದೊರೆಯುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸೆಕ್ಷನ್ 498A – ಮಹಿಳೆಯರ ಮೇಲೆ ಗಂಡ ಅಥವಾ ಆತನ ಸಂಬಂಧಿಕರಿಂದ ನಡೆಯುವ ಕ್ರೌರ್ಯವನ್ನು ತಡೆಯುವ ಕಾನೂನಾಗಿದೆ.
ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ನೋಂಗ್ಮೈಕಪಂ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. “ಔಪಚಾರಿಕ ಮದುವೆಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಲಿವ್-ಇನ್‌ನಲ್ಲಿರುವ ಮಹಿಳೆಗೆ ಕಾನೂನಿನ ರಕ್ಷಣೆ ನಿರಾಕರಿಸುವುದು ಸಂವಿಧಾನದ ವಿಧಿ 14ರ (ಸಮಾನತೆಯ ಹಕ್ಕು) ಉಲ್ಲಂಘನೆಯಾಗುತ್ತದೆ. ಅಲ್ಲದೆ, ಗೃಹಹಿಂಸೆ ತಡೆಯುವ ಉದ್ದೇಶಕ್ಕೆ ವಿರುದ್ಧವಾಗುತ್ತದೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
“ಪರಸ್ಪರ ಸಮ್ಮತಿಯುಳ್ಳ ಇಬ್ಬರು ಪ್ರಾಪ್ತವಯಸ್ಕರು ವಿವಾಹದ ಸ್ಪಷ್ಟ ಉದ್ದೇಶದೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದಾಗ ಮಾತ್ರ ಈ ಕಾನೂನು ರಕ್ಷಣೆ ಸಿಗಲಿದೆ” ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ತೀರ್ಪು ಕೇವಲ ಸೆಕ್ಷನ್ 498A ಪ್ರಕರಣಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದೂ ಹೇಳಿದೆ.
“ಲಿವ್-ಇನ್ ಸಂಬಂಧದಲ್ಲಿದ್ದು, ಗೃಹ ಹಿಂಸೆ ಅನುಭವಿಸಿದ ಪ್ರಕರಣಗಳಲ್ಲಿ ಆರಂಭಿಕ ಸಾಕ್ಷ್ಯ ಒದಗಿಸುವ ಜವಾಬ್ದಾರಿ ದೂರು ನೀಡುವ ಮಹಿಳೆಯ ಮೇಲೆಯೇ ಇರಲಿದ್ದು, ‘ಅರ್ನೇಶ್ ಕುಮಾರ್ (2014)’ ಪ್ರಕರಣದಲ್ಲಿ ವಿಧಿಸಲಾದ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರು ಮೂಲದ ದೂರುದಾರ ಮಹಿಳೆ ಮತ್ತು ಆರೋಪಿ ಲೋಕೇಶ್ ಎಂಬಾತ 2010ರಿಂದಲೂ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು. ಲೋಕೇಶ್ ತನಗೆ ಈಗಾಗಲೇ ಮದುವೆಯಾಗಿದ್ದ ವಿಷಯವನ್ನು ಮುಚ್ಚಿಟ್ಟು ತಮ್ಮೊಂದಿಗೆ ಸಂಬಂಧದಲ್ಲಿದ್ದರು ಎಂದು ಮಹಿಳೆ ಆರೋಪಿಸಿದ್ದರು.
ಅಲ್ಲದೆ, ಲೋಕೇಶ್ ಹಾಗೂ ಅವರ ಕುಟುಂಬದವರು ತನಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ, ಶಾರೀರಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಅರೋಪಿಸಿ ದೂರು ದಾಖಲಿಸಿದ್ದರು.
ತಮ್ಮ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಲೋಕೇಶ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. “ನಾವು ಕಾನೂನುಬದ್ಧವಾಗಿ ಮದುವೆಯಾಗಿಲ್ಲ. ಐಪಿಸಿ ಸೆಕ್ಷನ್ 498A ಅನ್ವಯವಾಗುವುದು ಮದುವೆಯಾದ ಪತಿಗೆ ಅಥವಾ ಆತನ ಸಂಬಂಧಿಕರಿಗೆ ಮಾತ್ರ. ನಾವು ಲಿವ್-ಇನ್‌ನಲ್ಲಿದ್ದ ಕಾರಣ, ಈ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲು ಬರುವುದಿಲ್ಲ” ಎಂದು ವಾದಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, “ಇಬ್ಬರು ದಂಪತಿಯಂತೆ ವಾಸಿಸುತ್ತಿರುವಾಗ ಸೆಕ್ಷನ್ 498A ನಲ್ಲಿರುವ ‘ಗಂಡ’ ಎಂಬ ಪದವನ್ನು ತಾಂತ್ರಿಕವಾಗಿ ಅಥವಾ ಕಿರಿದಾದ ಅರ್ಥದಲ್ಲಿ ನೋಡಲಾಗುವುದಿಲ್ಲ” ಎಂದು ಹೇಳಿ ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿತ್ತು.
ಬಳಿಕ, ಅರೋಪಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದಾಗ್ಯೂ, ಸುಪ್ರೀಂ ಕೋರ್ಟ್ ಕೂಡ ಕರ್ನಾಟಕ ಹೈಕೋರ್ಟ್ ನ ಆದೇಶವನ್ನು ಎತ್ತಿ ಹಿಡಿದಿದೆ.



