ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪ್ರತಿವರ್ಷ ₹18 ಕೋಟಿ ದೇಣಿಗೆ ಹಣ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಮಹಾರಾಷ್ಟ್ರದ ಕಾನೂನು ಮತ್ತು ನ್ಯಾಯಾಂಗ ಇಲಾಖೆ ದೇವಸ್ಥಾನ ಟ್ರಸ್ಟ್‌ನಿಂದ ಸಮಗ್ರ ಹಣಕಾಸು ವರದಿ ಸಲ್ಲಿಸುವಂತೆ ಸೂಚಿಸಿದೆ.
ಈ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಟ್ರಸ್ಟ್‌ನ ಟ್ರಸ್ಟಿ ರಾಹುಲ್ ಲೋಂಧೆ, “ಕಾನೂನು ಮತ್ತು ನ್ಯಾಯಾಂಗ ಇಲಾಖೆ ಟ್ರಸ್ಟ್ ಆಡಳಿತದಿಂದ ವರದಿ ಕೇಳಿದೆ. ಆ ವರದಿ ಪರಿಶೀಲಿಸಿದ ಬಳಿಕ ಸರ್ಕಾರ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ” ಎಂದು ತಿಳಿಸಿದ್ದಾರೆ.
ಆಗಸ್ಟ್ 1ರಂದು ಮಹಾರಾಷ್ಟ್ರ ನವನಿರ್ಮಾಣ ವಿದ್ಯಾರ್ಥಿ ಸೇನೆ (MNVS) 20ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಬರೆದ ಪತ್ರವೊಂದರಲ್ಲಿ ಸಿದ್ಧಿವಿನಾಯಕ ದೇವಸ್ಥಾನದಿಂದ ಪ್ರತಿವರ್ಷ ₹18 ಕೋಟಿ ದೇಣಿಗೆ ಹಣ ಕಳವಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಆರೋಪಿಸಿದ್ದರು.
ಆದರೆ ಈ ಆರೋಪವನ್ನು ಟ್ರಸ್ಟ್ ತಳ್ಳಿಹಾಕಿದೆ. ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಅಂತಹ ಯಾವುದೇ ಪತ್ರ ಬರೆಯಲಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಟ್ರಸ್ಟ್, 2026ರ ಮೇ ತಿಂಗಳಲ್ಲೇ ದೇಣಿಗೆ ಸಂಗ್ರಹದ ಸಮಗ್ರ ಲೆಕ್ಕಪರಿಶೋಧನೆ (ಆಡಿಟ್) ನಡೆಸುವಂತೆ ತಾವೇ ಕಾನೂನು ಮತ್ತು ನ್ಯಾಯಾಂಗ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದೆ.
ಟ್ರಸ್ಟ್ ಅಧ್ಯಕ್ಷರೂ ಆಗಿರುವ ರಾಜ್ಯ ಸಚಿವ ಸದಾ ಸರ್ವಣ್ಕರ್, ದೇಣಿಗೆ ಸಂಗ್ರಹದಲ್ಲಿ ವ್ಯತ್ಯಾಸ ಕಂಡುಬಂದ ನಂತರ ತಾವೇ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮುಖ್ಯಸ್ಥ ವಿಶ್ವಾಸ್ ನಾಂಗ್ರೆ ಪಾಟೀಲ್ ಅವರಿಗೆ ದೂರು ನೀಡಿದ್ದಾಗಿ ಹೇಳಿದ್ದಾರೆ. ದೂರು ದಾಖಲಿಸಿದ ಬಳಿಕ ಎಸಿಬಿ ಅಧಿಕಾರಿಗಳನ್ನು ದೇವಸ್ಥಾನಕ್ಕೆ ನಿಯೋಜಿಸಲಾಗಿತ್ತು. ಬಳಿಕ ತನಿಖೆಯಲ್ಲಿ ದೇಣಿಗೆ ಹಣ ಕಳವು ಪ್ರಕರಣ ಬೆಳಕಿಗೆ ಬಂದಿತು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಸುಳ್ಳು ಸುದ್ದಿ ಬಿತ್ತುವುದು ಪತ್ರಿಕೋದ್ಯಮವಲ್ಲ’; ಹೇಳಿಕೆ ತಿರುಚಿದವರ ವಿರುದ್ಧ ಕಠಿಣ ಕ್ರಮ: ಪ್ರಿಯಾಂಕ್ ಖರ್ಗೆ
ಟ್ರಸ್ಟ್ ಮಾಹಿತಿ ಪ್ರಕಾರ, ದೇಣಿಗೆ ಹಣ ಕಳವು ಪ್ರಕರಣದಲ್ಲಿ ದೇವಸ್ಥಾನದ ಸಿಬ್ಬಂದಿ ರಾಜೇಂದ್ರ ಪೆಂಡೂರ್ಕರ್ ಅವರನ್ನು ಮೊದಲಿಗೆ ಬಂಧಿಸಲಾಗಿತ್ತು. ನಂತರ ಮಾರ್ಚ್‌ನಲ್ಲಿ ಇನ್ನೂ ಎಂಟು ಮಂದಿಯನ್ನು ಬಂಧಿಸಲಾಯಿತು. ಬಂಧಿತರಲ್ಲಿ ಎಲ್ಲರೂ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಜತೆ ಸಂಪರ್ಕ ಹೊಂದಿದ್ದಾರೆ ಎಂದು ಸರ್ವಣ್ಕರ್ ಆರೋಪಿಸಿದ್ದು, ಈ ಆರೋಪಕ್ಕೆ ಶಿವಸೇನೆ (ಯುಬಿಟಿ) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಾರ್ಚ್ 20ರಂದು ದೇವಸ್ಥಾನದ ಹುಂಡಿಯಲ್ಲಿದ್ದ ಹಣ ನಾಪತ್ತೆಯಾಗಿರುವುದು ಗಮನಕ್ಕೆ ಬಂದ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಆರಂಭದಲ್ಲಿ ದಾದರ್ ಪೊಲೀಸರು ₹10 ಸಾವಿರ ಕಳವು ಪ್ರಕರಣ ದಾಖಲಿಸಿದ್ದರು. ಆದರೆ ತನಿಖೆ ವೇಳೆ ₹80 ಸಾವಿರ ನಗದು ವಶಪಡಿಸಿಕೊಂಡಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ಸುಮಾರು 10 ದಿನಗಳ ಕಾಲ ಸಣ್ಣ ಹುಂಡಿಯಿಂದ ಪದೇಪದೇ ಹಣ ತೆಗೆದುಕೊಳ್ಳುತ್ತಿರುವ ದೃಶ್ಯಗಳು ದಾಖಲಾಗಿದ್ದವು. ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಿದ್ದ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಎಲ್ಲ ಆರೋಪಿಗಳು ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.




