ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳ ಕುರಿತು ಬಿಜೆಪಿ ಮತ್ತೆ ಟೀಕಿಸಲಾರಂಭಿಸಿದೆ. ಬಾಲಿವುಡ್ ಚಲನಚಿತ್ರಗಳ ಪೋಸ್ಟರ್‌ಗಳಿಗೆ ರಾಹುಲ್ ಅವರ ಚಿತ್ರವನ್ನು ಜೋಡಿಸಿ, ವ್ಯಂಗ್ಯಗಳ ಮೂಲಕ ಅವರನ್ನು ಅಣಕಿಸಲು ಬಿಜೆಪಿ ಯತ್ನಿಸಿದೆ. ‘ರಾಹುಲ್ ಗಾಂಧಿ ಪ್ರಸ್ತುತ ಎಲ್ಲಿದ್ದಾರೆ. ಅವರ ಅಂತಾರಾಷ್ಟ್ರೀಯ ಪ್ರವಾಸಕ್ಕೆ ಧನಸಹಾಯ ಎಲ್ಲಿಂದ ಬರುತ್ತದೆ’ ಎಂದು ಪ್ರಶ್ನಿಸಿದೆ. ಇದಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಕಾಂಗ್ರೆಸ್, “ರಾಹುಲ್ ಗಾಂಧಿ ಅವರು ಒಬ್ಬ ಜಾಗತಿಕ ನಾಯಕ. ಹಲವು ದೇಶಗಳು ಮತ್ತು ಅಲ್ಲಿನ ಪ್ರತಿಷ್ಠಿತ ಸಂಸ್ಥೆಗಳು ಅವರನ್ನು ಅಧಿಕೃತವಾಗಿ ಆಹ್ವಾನಿಸುತ್ತವೆ” ಎಂದು ಸಮರ್ಥಿಸಿಕೊಂಡಿದೆ.
ಬಿಜೆಪಿ ಟೀಕೆ
ಹಿಂದಿ ಸಿನಿಮಾಗಳ ಪೋಸ್ಟರ್ ಮತ್ತು ಶೀರ್ಷಿಕೆಗಳನ್ನು ಬಳಸಿಕೊಂಡಿರುವ ಬಿಜೆಪಿ, ‘ಛಡ್ ದೇ ಇಂಡಿಯಾ’ (ಭಾರತ ಬಿಟ್ಟುಬಿಡಿ), ‘ಲಾಪತಾ ರಾಹುಲ್’ (ನಾಪತ್ತೆಯಾದ ರಾಹುಲ್), ‘ಗೋ ರಾಹುಲ್ ಗೋನ್’, ‘ಟೂರಿಸ್ಟ್ ಜಿಂದಾ ಹೈ’ ಹಾಗೂ ‘ಪರ್ದೇಸ್’ ರೀತಿಯ ಪೋಸ್ಟರ್‌ಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. “ರಾಹುಲ್ ಬಾಬಾಗೆ ಸ್ವದೇಶಕ್ಕಿಂತ ಪರದೇಶವೇ ಹೆಚ್ಚು ಇಷ್ಟ” ಎಂದು ದೆಹಲಿ ಬಿಜೆಪಿ ವ್ಯಂಗ್ಯವಾಡಿದ್ದರೆ, ಗೋವಾ ಬಿಜೆಪಿ. “ರಾಹುಲ್ ಅವರು ಥೈಲ್ಯಾಂಡ್‌ನಲ್ಲಿ ರಜೆ ಆನಂದಿಸುತ್ತಿದ್ದಾರೆಯೇ ಅಥವಾ ಭಾರತದ ವಿರುದ್ಧ ಹೊಸ ಪ್ರಚಾರದ ಸಂಚು ರೂಪಿಸಲು ರಹಸ್ಯ ಪ್ರವಾಸದಲ್ಲಿದ್ದಾರೆಯೇ” ಎಂದು ಪ್ರಶ್ನಿಸಿದೆ.
“ದೇಶದ ಪ್ರಧಾನಿಯವರು ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ, ವಿರೋಧ ಪಕ್ಷದ ನಾಯಕರು ಕೇವಲ ಪ್ರವಾಸ ಮತ್ತು ಪಾರ್ಟಿ ಮಾಡುವುದರಲ್ಲೇ ನಿರತರಾಗಿದ್ದಾರೆ. ರಾಹುಲ್ ಗಾಂಧಿ ಅವರ ವಿರೋಧ ಪಕ್ಷದ ನಾಯಕ (LoP) ಸ್ಥಾನದ ಹೆಸರನ್ನು ‘ಪ್ರವಾಸೋದ್ಯಮದ ನಾಯಕ’ ಎಂದು ಬದಲಾಯಿಸಬೇಕು” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಲೇವಡಿ ಮಾಡಿದ್ದಾರೆ.
ಮತ್ತೊಬ್ಬ ವಕ್ತಾರ ಆರ್. ಪಿ. ಸಿಂಗ್ ಅವರು ಪ್ರವಾಸದ ವೆಚ್ಚದ ಮೂಲವನ್ನು ಪ್ರಶ್ನಿಸಿದ್ದಾರೆ. “ನನಗಿರುವ ಮಾಹಿತಿಯ ಪ್ರಕಾರ ಇದು ರಾಹುಲ್ ಅವರ 55ನೇ ವಿದೇಶಿ ಪ್ರವಾಸವಾಗಿದೆ. ಸಾರ್ವಜನಿಕ ದಾಖಲೆಗಳ ಪ್ರಕಾರ ಅವರು ಈ ಪ್ರವಾಸಗಳಿಗೆ 60 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದ್ದಾರೆ. ಆದರೆ, ಅದಕ್ಕೆ ಸರಿಹೊಂದುವ ಆದಾಯ ಅಥವಾ ಆದಾಯ ತೆರಿಗೆಯನ್ನು ಅವರು ತೋರಿಸುತ್ತಿಲ್ಲ. ಹಾಗಾದರೆ ಈ ಭಾರಿ ಮೊತ್ತದ ಹಣ ಎಲ್ಲಿಂದ ಬರುತ್ತಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ತಿರುಗೇಟು
ಬಿಜೆಪಿಯ ಈ ದಾಳಿಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ವಿಶ್ವದಾದ್ಯಂತ ಅನೇಕ ಜನರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಕಾಯುತ್ತಿದ್ದಾರೆ ಎಂದು ಹೇಳಿದೆ.
ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಮಾತನಾಡಿ, “ರಾಹುಲ್ ಗಾಂಧಿ ಕೇವಲ ನಮ್ಮ ದೇಶದ ನಾಯಕರಲ್ಲ, ವಿಶ್ವದ ಹಲವರು ಅವರನ್ನು ಉನ್ನತ ನಾಯಕನೆಂದು ಪರಿಗಣಿಸುತ್ತಾರೆ. ಅವರ ಆಲೋಚನೆಗಳನ್ನು ಕೇಳಲು ಬಯಸುತ್ತಾರೆ. ಹೀಗಾಗಿ ನಿರಂತರವಾಗಿ ಬರುವ ಆಹ್ವಾನಗಳ ಕಾರಣದಿಂದಾಗಿ ಅವರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಕೇವಲ ಎರಡು ಅಥವಾ ನಾಲ್ಕು ದಿನಗಳ ಸಣ್ಣ ಪ್ರವಾಸಗಳನ್ನು ಕೈಗೊಳ್ಳುತ್ತಾರೆ” ಎಂದು ವಿವರಿಸಿದ್ದಾರೆ.
“ಪ್ರಪಂಚದ ಯಾರೊಬ್ಬರೂ ಬಿಜೆಪಿಯ ನಿಲುವನ್ನು ಒಪ್ಪುವುದಿಲ್ಲ. ಜಾಗತಿಕ ಸಮುದಾಯವು ಭಾರತವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತದೆ. ವಿಶ್ವದ ಜನರ ದೃಷ್ಟಿಕೋನದಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವವು ಪ್ರಮುಖವಾಗಿ ಕಾಣಿಸುತ್ತದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ವಿದ್ಯುತ್ ಖಾಸಗೀಕರಣ: ಉಚಿತ ಯೋಜನೆಗಳ ಅಂತ್ಯಕ್ಕೆ ನಾಂದಿ
ಕಾಂಗ್ರೆಸ್ ಸಂಸದ ಮನೋಜ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ. “ದೇಶದ ಜನರಿಗೆ ವಿದೇಶಿ ಪ್ರವಾಸ ಕೈಗೊಳ್ಳಬೇಡಿ ಎಂದು ಮನವಿ ಮಾಡಿದ ತಕ್ಷಣವೇ ಪ್ರಧಾನಿಯವರೇ ಸ್ವತಃ ವಿದೇಶಿ ಪ್ರವಾಸಕ್ಕೆ ತೆರಳಿದ್ದರು. ಹಾಗಾಗಿ, ರಾಹುಲ್ ಗಾಂಧಿ ವಿದೇಶಿ ಪ್ರವಾಸಕ್ಕೆ ತೆರಳಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಪ್ರಮುಖ ನಾಯಕರಾಗಿದ್ದಾರೆ” ಎಂದು ಹೇಳಿದ್ದಾರೆ.



