ಭಾರತೀಯರ ಬೆನ್ನತ್ತಿದೆ ‘ಪೌರತ್ವ’ ಪ್ರಶ್ನೆ; SIR ಜೊತೆಗೆ ಪಾಸ್‌ಪೋರ್ಟ್‌ ತಂದ ಅಸ್ಮಿತೆಯ ಆತಂಕ!

Date:

ಪ್ರಪಂಚದ ಯಾವುದೇ ದೇಶದಲ್ಲೂ ಮರಣವನ್ನು ಖಚಿತಪಡಿಸದ ಮರಣ ಪ್ರಮಾಣಪತ್ರವಾಗಲಿ ಅಥವಾ ಚಾಲನಾ ಸಾಮರ್ಥ್ಯವನ್ನು ನಿರೂಪಿಸದ ಚಾಲನಾ ಪರವಾನಗಿಯಾಗಲಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಆದರೆ, ಭಾರತದಲ್ಲಿ ಮಾತ್ರ ಪಾಸ್‌ಪೋರ್ಟ್ ಹೊಂದಿದ್ದರೂ ಪೌರತ್ವವನ್ನು ಸಾಬೀತುಪಡಿಸಲು ಮತ್ತೊಂದು ದಾಖಲೆಬೇಕು

- Advertisement -

2019ರಿಂದಲೂ ಭಾರತದಲ್ಲಿ ಪೌರತ್ವ ಮತ್ತು ನಾಗರಿಕ ಹಕ್ಕುಗಳ ವಿಷಯ ಚರ್ಚೆಯಲ್ಲಿದೆ. ಇದು ಕಾನೂನಾತ್ಮಕ ಅಥವಾ ರಾಜಕೀಯ ಚರ್ಚೆಗಳನ್ನು ದಾಟಿ, ಪ್ರತಿಯೊಬ್ಬ ಸಾಮಾನ್ಯ ಪ್ರಜೆಯ ದೈನಂದಿನ ಬದುಕಿನ ನೆಮ್ಮದಿ ಹಾಳುಗೆಡವಿದೆ. ಭಾರತೀಯ ನಾಗರಿಕರು ಪೌರತ್ವ ಪ್ರಶ್ನೆಯ ತೂಗುಗತ್ತಿಯಡಿ ಸಿಲುಕಿಕೊಂಡಿದ್ದಾರೆ. ತಲೆಮಾರುಗಳಿಂದ ಇದೇ ಮಣ್ಣಿನಲ್ಲಿ ಬದುಕಿ, ದೇಶದ ಪ್ರಗತಿಗೆ ಶ್ರಮಿಸಿದ ಸಾಮಾನ್ಯ ಜನರಲ್ಲಿ ಈಗ ‘ತಾವು ಈ ದೇಶದವರೇ ಅಥವಾ ಅಲ್ಲವೇ’ ಎಂಬ ಕಳವಳ ಮೂಡುವಂತಹ ವಾತಾವರಣ ನಿರ್ಮಾಣವಾಗಿದೆ. ಸರ್ಕಾರದ ಸರಣಿ ನಿರ್ಧಾರಗಳು, ಆಡಳಿತಾತ್ಮಕ ಸಮೀಕ್ಷೆಗಳು ಹಾಗೂ ಇತ್ತೀಚಿನ ಅಧಿಕೃತ ಹೇಳಿಕೆಗಳು ನಾಗರಿಕರಲ್ಲಿ ಉಂಟಾಗಿರುವ ಅಭದ್ರತೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

‘ಯಾವಾಗ ನಾವು ಭಾರತೀಯರೇ ಅಲ್ಲ’ ಎಂದು ಡಿಟೆನ್ಶನ್‌ ಸೆಂಟರ್‌ಗೆ ಅಥವಾ ಗಡಿಯಾಚೆಗೆ ದಬ್ಬಿಬಿಡುತ್ತಾರೋ ಅಥವಾ 2ನೇ ದರ್ಜೆಯ ಪ್ರಜೆಗಳನ್ನಾಗಿಸಿಬಿಡುವರೇ ಎಂಬ ಆತಂಕ ಭಾರತೀಯರನ್ನು ಕಾಡುತ್ತಿದೆ. ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿಯಾದ ನಾಗರಿಕರನ್ನು ಸದಾ ತಮ್ಮ ಅಸ್ಮಿತೆಯನ್ನು ಸಾಬೀತುಪಡಿಸುವಂತೆ ಒತ್ತಾಯಿಸುವುದು ದೇಶದ ಆಂತರಿಕ ಸಾಮರಸ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಅಂದಹಾಗೆ, ಭಾರತದ ಪೌರತ್ವ ರಾಜಕಾರಣದಲ್ಲಿ 2019ರ ವರ್ಷವು ಒಂದು ಪ್ರಮುಖ ತಿರುವು ಪಡೆದುಕೊಂಡಿತು. ಆ ವರ್ಷದ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯು (CAA) 1955ರ ಮೂಲ ಪೌರತ್ವ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 13ಕ್ಕೂ ಮುಂಚಿತವಾಗಿ ಭಾರತಕ್ಕೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಪೌರತ್ವ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿತು. ಆದರೆ, ಮುಸ್ಲಿಮರನ್ನು ಈ ಪಟ್ಟಿಯಿಂದ ಹೊರಗಿಟ್ಟಿತು. ಇದು ಧರ್ಮಾಧಾರಿತ ತಾರತಮ್ಯ ಮತ್ತು ಸಂವಿಧಾನದ ಸಮಾನತೆಯ ತತ್ವಕ್ಕೆ ಅಕ್ಷರಶಃ ವಿರುದ್ಧವಾಗಿತ್ತು. ಜೊತೆಗೆ, ಈ ಸಿಎಎ ರಾಷ್ಟ್ರೀಯ ನಾಗರಿಕ ನೋಂದಣಿ (NRC) ಪ್ರಕ್ರಿಯೆಯೊಂದಿಗೆ ಜಾರಿಯಾಗಲಿದೆ ಎಂದು ಸರ್ಕಾರ ಘೋಷಿಸಿತು. ಇದು, ಇಡೀ ಭಾರತೀಯರ ಪೌರತ್ವವನ್ನೇ ಪ್ರಶ್ನಿಸುವ ಕೃತ್ಯವಾಗಿದ್ದರಿಂದ, ಭಾರೀ ಜನಾಕ್ರೋಶ ವ್ಯಕ್ತವಾಯಿತು.

ಅದಾಗಲೇ ಅಸ್ಸಾಂನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಡೆದ ಎನ್‌ಆರ್‌ಸಿ ಪರಿಷ್ಕರಣೆಯಲ್ಲಿ ಸುಮಾರು 19 ಲಕ್ಷ ಜನರನ್ನು ಹೊರಗಿಡಲಾಗಿತ್ತು. ಅವರೆಲ್ಲರೂ ಭಾರತೀಯ ಪೌರರಲ್ಲ ಎಂದು ಜೈಲಿಗೆ ದಬ್ಬುವ ಕೆಲಸಗಳು ಆರಂಭವಾದವು.  ಇದು, ಒಂದು ವೇಳೆ ಎನ್‌ಆರ್‌ಸಿ ದೇಶಾದ್ಯಂತ ನಡೆದರೆ, ಬೃಹತ್ ಸಂಖ್ಯೆಯ ಭಾರತೀಯರೇ ಭಾರತದಲ್ಲಿ ಪೌರತ್ವವಿಲ್ಲದ ಖೈದಿಗಳಾಗುವ ಅಪಾಯಗಳ ಕುರಿತು ಎಚ್ಚರಿಕೆ ನೀಡಿತು.  ಪರಿಣಾಮವಾಗಿ ದೆಹಲಿಯ ಶಾಹೀನ್ ಬಾಗ್‌ ಸೇರಿದಂತೆ ದೇಶಾದ್ಯಂತ ಮಹಿಳೆಯರ ನೇತೃತ್ವದಲ್ಲಿ ಬೃಹತ್ ಐತಿಹಾಸಿಕ ಹೋರಾಟಗಳು ನಡೆದವು.

ತೀವ್ರ ಸಾರ್ವಜನಿಕ ಪ್ರತಿಭಟನೆಗಳ ಒತ್ತಡದಿಂದಾಗಿ ದೇಶವ್ಯಾಪಿ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಸರ್ಕಾರವು ತಾತ್ಕಾಲಿಕವಾಗಿ ಮುಂದೂಡಿತು. ಜೊತೆಗೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನೂ (NPR) ಸ್ಥಗಿತಗೊಳಿಸಿತು. ಆದರೆ ಸಿಎಎ ಕಾಯ್ದೆಯನ್ನು ಸರ್ಕಾರ ಹಿಂಪಡೆಯಲಿಲ್ಲ; ಬದಲಿಗೆ 2024ರ ಮಾರ್ಚ್‌ನಲ್ಲಿ ಅದರ ಅಧಿಕೃತ ನಿಯಮಗಳನ್ನು ಪ್ರಕಟಿಸಿ, ಅರ್ಜಿಗಳನ್ನು ಸ್ವೀಕರಿಸಿ ಪೌರತ್ವ ನೀಡುವ ಪ್ರಕ್ರಿಯೆಯನ್ನು ಆರಂಭಿಸಿತು. ಈ ವಿಷಯವು ಇಂದಿಗೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಕಾನೂನಿನ ಅನುಷ್ಠಾನದ ಸುತ್ತಲಿರುವ ಗೊಂದಲಗಳು ಸಾರ್ವಜನಿಕರಲ್ಲಿ ಪೌರತ್ವ ಪರೀಕ್ಷೆಯ ಆತಂಕ ಸದಾ ಜೀವಂತವಾಗಿರುವಂತೆ ಮಾಡಿದೆ.

ಐತಿಹಾಸಿಕ ಹೋರಾಟಗಳು ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್‌ಗಳೆಂಬ ಪೆಡಂಭೂತಗಳನ್ನು ಹಿಮ್ಮೆಟ್ಟಿದ್ದವು. ಇದರಿಂದ, ವಿಚಲಿತಗೊಂಡಿದ್ದ ಮೋದಿ ಸರ್ಕಾರವು ತನ್ನ ಕೈಗೊಂಬೆಯಾಗಿರುವ ಚುನಾವಣಾ ಆಯೋಗದ ಮೂಲಕ ಈಗ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಇದು ನಾಗರಿಕರಲ್ಲಿ ಮತ್ತೊಂದು ಸುತ್ತಿನ ಅಭದ್ರತೆಯನ್ನು ಸೃಷ್ಟಿಸಿದೆ.

ಬಿಹಾರದಲ್ಲಿ ಮೊದಲು ಆರಂಭವಾದ ಎಸ್‌ಐಆರ್‌, ಅಲ್ಲಿ ಬರೋಬ್ಬರಿ 68 ಲಕ್ಷ ಮತದಾರರನ್ನು ಸಣ್ಣ-ಪುಟ್ಟ ಕ್ಷುಲ್ಲಕ ಕಾರಣಗಳಿಗಾಗಿ ಮತಪಟ್ಟಿಯಿಂದ ಹೊರಗಿಟ್ಟಿತು. ಆ ನಂತರ, 13 ರಾಜ್ಯಗಳಲ್ಲಿ ಎಸ್‌ಐಆರ್‌ ನಡೆದು ಈಗ ಬರೋಬ್ಬರಿ 6.5 ಕೋಟಿ ಭಾರತೀಯ ನಾಗರಿಕರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಅವರೆಲ್ಲರನ್ನೂ ಮತಪಟ್ಟಿಯಿಂದ ಹೊರದಬ್ಬಲಾಗಿದೆ. ಕರ್ನಾಕಟವೂ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಈಗ ಎಸ್‌ಐಆರ್‌ ನಡೆಯುತ್ತಿದೆ. ಎಲ್ಲ ರಾಜ್ಯಗಳಲ್ಲೂ ಎಸ್‌ಐಆರ್‌ ಪೂರ್ಣಗೊಂಡರೆ, ದೇಶಾದ್ಯಂತ ಸುಮಾರು 18 ಕೋಟಿಗೂ ಅಧಿಕ ಮಂದಿ ಮತದಾನದ ಹಕ್ಕು ಕಳೆದುಕೊಂಡು ಆತಂಕವಿದೆ. ವ್ಯವಸ್ಥಿತ ಲೋಪಗಳು ಮತ್ತು ದಾಖಲೆಗಳ ಕೊರತೆಯಿಂದಾಗಿ ಬಡವರು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಗ್ರಾಮೀಣ ಭಾಗದ ಲಕ್ಷಾಂತರ ಕಾನೂನುಬದ್ಧ ನಾಗರಿಕರ ಹೆಸರುಗಳು ಮತಪಟ್ಟಿಯಿಂದ ನಾಪತ್ತೆಯಾಗಿವೆ.

ಇದೀಗ, ಮತದಾನದ ಹಕ್ಕು ಕಳೆದುಕೊಂಡವರಿಗೆ ಸರ್ಕಾರಿ ಸೌಲಭ್ಯಗಳು ಸೇರಿದಂತೆ ಯಾವುದೇ ಮೂಲಭೂತ ಹಕ್ಕುಗಳು ಮತ್ತು ಸೌಕರ್ಯಗಳು ದೊರೆಯುವುದಿಲ್ಲ. ಅವರ ಬ್ಯಾಂಕ್‌ ಖಾತೆಗಳನ್ನೂ ರದ್ದು ಮಾಡಲಾಗುತ್ತದೆ ಎಂದು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇದು ಎಸ್‌ಐಆರ್ ಕೇವಲ ಮತಪಟ್ಟಿ ಪರಿಷ್ಕರಣೆ ಮಾತ್ರವಲ್ಲ, ಪೌರತ್ವ ಪರಿಷ್ಕರಣೆ ಎಂಬುದನ್ನು ಜಗಜ್ಜಾಹೀರು ಮಾಡಿದೆ. ಆದ್ದರಿಂದಲೇ, ಇದನ್ನು ಆರಂಭದಲ್ಲಿಯೇ ‘ಪರೋಕ್ಷ ಎನ್‌ಆರ್‌ಸಿ’, ‘ಹಿಂಭಾಗಿಲಿನಿಂದ ನಡೆಸಲಾಗುತ್ತಿರುವ ಪೌರತ್ವ ಪರೀಕ್ಷೆ’ ಎಂದು ಆರೋಪಿಸಲಾಗಿತ್ತು. ಅದು ಈಗ ದಿಟವಾಗುತ್ತಿದೆ.

ಇವೆಲ್ಲವುಗಳ ನಡುವೆ, ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಹಿರಿಯ ಅಧಿಕಾರಿಯೊಬ್ಬರು “ಭಾರತೀಯ ಪಾಸ್‌ಪೋರ್ಟ್ ಪೌರತ್ವದ ನಿರ್ಣಾಯಕ ಪುರಾವೆಯಲ್ಲ. ಅದೊಂದು ಕೇವಲ ಪ್ರಯಾಣದ ದಾಖಲೆ ಮಾತ್ರ” ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಇಡೀ ವ್ಯವಸ್ಥೆಯ ವಿರೋಧಾಭಾಸವನ್ನು ಬಯಲು ಮಾಡಿದೆ.

1955ರ ಪೌರತ್ವ ಕಾಯ್ದೆಯ ಪ್ರಕಾರ, ‘ಪೌರತ್ವವನ್ನು ಜನ್ಮ, ವಂಶ, ನೋಂದಣಿ ಮೂಲಕ ಮಾತ್ರ ನಿರ್ಧರಿಸಲಾಗುತ್ತದೆ’ ಎಂಬುದು ಕಾನೂನುಬದ್ಧ ಸತ್ಯ. ಹಾಗಿದ್ದರೂ, ವಿದೇಶಾಂಗ ಸಚಿವಾಲಯದ ವ್ಯತಿರಿಕ್ತ ಹೇಳಿಕೆಯು ಸಾರ್ವಜನಿಕರಲ್ಲಿ ಭಾರಿ ಗೊಂದಲವನ್ನುಂಟುಮಾಡಿದೆ. ಭಾರತದ ಅಧಿಕಾರಶಾಹಿಯು ಅತ್ಯಂತ ಕಟ್ಟುನಿಟ್ಟಾದ ಪೊಲೀಸ್ ಪರಿಶೀಲನೆ ನಡೆಸಿ, ರಾಷ್ಟ್ರೀಯ ಲಾಂಛನವನ್ನು ಮುದ್ರೆ ಒತ್ತಿ, ದೇಶದ ಅತ್ಯಂತ ಸುರಕ್ಷಿತ ಸೌಲಭ್ಯದಲ್ಲಿ ಮುದ್ರಿಸಿ ಕೇಂದ್ರ ಸರ್ಕಾರವೇ ನೀಡುವ ಅಧಿಕೃತ ದಾಖಲೆಯನ್ನು ಸ್ವತಃ ಸರ್ಕಾರವೇ ನಂಬಲು ಸಿದ್ಧವಿಲ್ಲ ಎಂಬುದು ಆಡಳಿತಾತ್ಮಕ ವ್ಯಂಗ್ಯವಾಗಿದೆ. ಜಗತ್ತಿನಾದ್ಯಂತ ವೀಸಾ ಪಡೆಯಲು, ಅಂತರರಾಷ್ಟ್ರೀಯ ವಿಮಾನಗಳನ್ನು ಏರಲು, ವಿದೇಶಿ ವಲಸೆ ಅಧಿಕಾರಿಗಳಿಗೆ ತಾವು ಭಾರತೀಯರು ಎಂಬುದನ್ನು ಖಾತ್ರಿಪಡಿಸಲು ಹಾಗೂ ವಿದೇಶಗಳಲ್ಲಿ ರಾಜತಾಂತ್ರಿಕ ರಕ್ಷಣೆಯನ್ನು ಪಡೆಯಲು ಸಾಕಷ್ಟು ವಿಶ್ವಾಸಾರ್ಹವೆಂದು ಪಾಸ್‌ಪೋರ್ಟ್‌ಅನ್ನು ಪರಿಗಣಿಸಲಾಗಿದೆ. ಆದರೆ, ಈ ದಾಖಲೆಯು ಸ್ವದೇಶದ ಗಡಿಯೊಳಗೆ ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತದೆ ಎಂದಾದರೆ, ಅರ್ಥವೇನು?

1967ರ ಪಾಸ್‌ಪೋರ್ಟ್ ಕಾಯ್ದೆಯ ಪ್ರಸ್ತಾವನೆಯು, “ಭಾರತೀಯ ನಾಗರಿಕರ ನಿರ್ಗಮನವನ್ನು ನಿಯಂತ್ರಿಸಲು ಮತ್ತು ಪಾಸ್‌ಪೋರ್ಟ್‌ಗಳನ್ನು ನೀಡಲು” ಈ ಕಾನೂನು ಅಸ್ತಿತ್ವದಲ್ಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದರೂ, ವಿದೇಶಾಂಗ ಸಚಿವಾಲಯದ ಪ್ರಸ್ತುತ ನಿಲುವು ಈ ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿದೆ.

ವಿದೇಶಾಂಗ ಸಚಿವಾಲಯದ ಈ ಹೇಳಿಕೆಯು ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರತದ ವಿಶ್ವಾಸಾರ್ಹತೆಗೆ ಧಕ್ಕೆ ತರಲಿದೆ. ಪ್ರತಿ ಭಾರತೀಯ ಪಾಸ್‌ಪೋರ್ಟ್‌ನ ಒಳಗಿನ ಪುಟದಲ್ಲಿ, “ಈ ದಾಖಲೆಯನ್ನು ಹೊಂದಿರುವ ವ್ಯಕ್ತಿಗೆ ಮುಕ್ತವಾಗಿ ಪ್ರಯಾಣಿಸಲು ಅನುಮತಿಸಬೇಕು ಮತ್ತು ಅಗತ್ಯವಿರುವ ಎಲ್ಲ ನೆರವು ಹಾಗೂ ರಾಜತಾಂತ್ರಿಕ ರಕ್ಷಣೆಯನ್ನು ಒದಗಿಸಬೇಕು” ಎಂದು ಭಾರತದ ರಾಷ್ಟ್ರಪತಿಗಳ ಪರವಾಗಿ ವಿನಂತಿಸಲಾಗಿರುತ್ತದೆ.

ಈ ಲೇಖನ ಓದಿದ್ದೀರಾ?: ರಾಮಮಂದಿರದಿಂದ ಉಜ್ಜಯಿನಿ ಮಾಸ್ಟರ್ ಪ್ಲಾನ್‌ವರೆಗೆ: ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯ ಲೂಟಿ

ಸಾರ್ವಭೌಮ ರಾಷ್ಟ್ರವೊಂದು ತನ್ನ ಪ್ರಜೆಗಳಿಗೆ ನೀಡಿರುವ ‘ಪಾಸ್‌ಪೋರ್ಟ್‌’ಅನ್ನು ಪೌರತ್ವದ ದಾಖಲೆಯಾಗಿ ಪರಿಗಣಿಸಲು ಸಿದ್ಧವಿಲ್ಲ ಎಂದಾದರೆ, ಅಂತಹ ದೇಶ ತನ್ನ ಪ್ರಜೆಗಳಿಗೆ ವಿದೇಶಗಳಲ್ಲಿ ‘ಕಾನ್ಸುಲರ್‌’ ರಕ್ಷಣೆಯನ್ನು ನೀಡುವಂತೆ ಇತರ ದೇಶಗಳನ್ನು ಕೇಳಲು ಸಾಧ್ಯವಾಗುವುದಿಲ್ಲ. ಲಂಡನ್, ಪ್ಯಾರಿಸ್ ಅಥವಾ ವಾಷಿಂಗ್ಟನ್‌ನ ವಲಸೆ ಅಧಿಕಾರಿಯೊಬ್ಬರು ಈ ದಾಖಲೆಯ ಮೇಲೆ ಸಂಪೂರ್ಣ ವಿಶ್ವಾಸ ಇಡಬೇಕು ಎಂದು ನಿರೀಕ್ಷಿಸುವ ಭಾರತ, ತನ್ನದೇ ದೇಶದೊಳಗೆ ತನ್ನ ನಾಗರಿಕರು ಪೌರತ್ವವನ್ನು ಸಾಬೀತುಪಡಿಸಲು ಅದೇ ದಾಖಲೆಯನ್ನು ಪರಿಗಣಿಸುವುದಿಲ್ಲ ಎನ್ನುವುದು ಜಾಗತಿಕವಾಗಿ ಮುಜುಗರ ಉಂಟುಮಾಡುತ್ತದೆ.

ಪ್ರಪಂಚದ ಯಾವುದೇ ದೇಶದಲ್ಲೂ ಮರಣವನ್ನು ಖಚಿತಪಡಿಸದ ಮರಣ ಪ್ರಮಾಣಪತ್ರವಾಗಲಿ ಅಥವಾ ಚಾಲನಾ ಸಾಮರ್ಥ್ಯವನ್ನು ನಿರೂಪಿಸದ ಚಾಲನಾ ಪರವಾನಗಿಯಾಗಲಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಆದರೆ, ಭಾರತದಲ್ಲಿ ಮಾತ್ರ ಪಾಸ್‌ಪೋರ್ಟ್ ಹೊಂದಿದ್ದರೂ ಪೌರತ್ವವನ್ನು ಸಾಬೀತುಪಡಿಸಲು ಮತ್ತೊಂದು ದಾಖಲೆಬೇಕು. ಇದು ನಾಗರಿಕರನ್ನು ತೀವ್ರ ಹತಾಶೆಗೆ ತಳ್ಳುತ್ತದೆ. ಮತ್ತೆ-ಮತ್ತೆ ಪೌರತ್ವವನ್ನು ಪ್ರಶ್ನಿಸುತ್ತದೆ. ಡಿಜಿಟಲ್ ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆಗಳ ಬಗ್ಗೆ ಹೆಮ್ಮೆಪಡುವ ದೇಶದಲ್ಲಿ, ಒಬ್ಬ ನಾಗರಿಕನು ಜಗತ್ತಿನಾದ್ಯಂತ ಭಾರತೀಯನಾಗಿ ಗುರುತಿಸಿಕೊಂಡು, ಸ್ವದೇಶಕ್ಕೆ ಬಂದಾಗ ಅದೇ ಸರ್ಕಾರದಿಂದ ಶಂಕೆಗೆ ಒಳಗಾಗುವುದು ಆಘಾತಕಾರಿ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕರ ಹಕ್ಕುಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಂತ ನಿರ್ಣಾಯಕ. ಒಂದು ಸರ್ಕಾರವು ತನ್ನದೇ ಪ್ರಜೆಗಳನ್ನು ಸದಾ ಶಂಕಿಸಿ ನೋಡುವುದು ಅಥವಾ ಅವರ ಹಕ್ಕುಗಳನ್ನು ಕಾಗದದ ಪತ್ರಗಳ ಆಧಾರದ ಮೇಲೆ ತೂಗುವುದು ದೇಶದ ಒಟ್ಟಾರೆ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಸಡಿಲಗೊಳಿಸುತ್ತದೆ. ಬಡತನ, ಅನಕ್ಷರತೆ ಹಾಗೂ ವಲಸೆಯ ಕಾರಣಗಳಿಂದಾಗಿ ತಳಮಟ್ಟದ ಜನರಲ್ಲಿ ಸೂಕ್ತ ದಾಖಲೆಗಳ ಕೊರತೆಗಳಿವೆ ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ವಾಸ್ತವ. ಹೀಗಿರುವಾಗ, ಅಂತವರಿಗೆ ಪೂರಕವಾದ ಸಹಾಯಕ ವ್ಯವಸ್ಥೆ ಒದಗಿಸುವುದು ಸರ್ಕಾರಗಳ ಜವಾಬ್ದಾರಿ. ಆದರೆ, ಮೋದಿ ಸರ್ಕಾರವು ತನ್ನ ಪ್ರಜೆಗಳಿಗೆ ನೆರವು ನೀಡುವ ಬದಲು, ಅವರನ್ನು ಶಂಕಿಸುತ್ತದೆ. ಇಲ್ಲದ ದಾಖಲೆಗಳನ್ನು ಕೇಳುತ್ತಿದೆ. ನೀವು ಈ ದೇಶದ ಪ್ರಜೆಗಳೇ ಅಲ್ಲವೆಂದು ಮೂಲೆಗೆ ದೂಡುವ ಕ್ರೌರ್ಯ ಮೆರೆಯುತ್ತಿದೆ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿಎಂ ಮೋದಿ, ಯುವತಿಯ ಡೀಪ್‌ಫೇಕ್ ಫೋಟೋ: ಸಿಜೆಪಿ ನಾಯಕರು, ದೆಹಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಯುವತಿಯೊಬ್ಬಳ ಮುಖವನ್ನು ಕೃತಕ ಬುದ್ಧಿಮತ್ತೆ (AI)...

ಸೌಜನ್ಯ ಪ್ರಕರಣ | SIT ವಿರುದ್ಧ ತಾಯಿ ಕುಸುಮಾವತಿ ಅಸಮಾಧಾನ; ತನಿಖಾಧಿಕಾರಿ ಬದಲಾವಣೆಗೆ ಆಗ್ರಹ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್‌ನ...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ...