ದೇಶಾದ್ಯಂತ ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆದಿದೆ. ಅದೇ ರೀತಿಯಲ್ಲಿ ಅಸ್ಸಾಂನಲ್ಲಿಯೂ ಪ್ರತಿಭಟನೆಯನ್ನು ಸಂಘಟಿಸುವ ನಿಟ್ಟಿನಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿದ್ದ ಮೂವರು ಮುಸ್ಲಿಂ ಯುವಕರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ರೀತಿಯ ಬಂಧನವು ದೇಶದ ಕಾನೂನು ಚೌಕಟ್ಟಿಗೆ ಹಾಗೂ ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಕಾನೂನು ತಜ್ಞರು, ನೆಟ್ಟಿಗರು ಹೇಳಿದ್ದಾರೆ.
ಅಸ್ಸಾಂನ ಲಖಿಂಪುರ ಜಿಲ್ಲೆಯ ಲಾಲುಕ್ ನಿವಾಸಿಗಳಾದ ಮಂಜೂರ್ ರೆಹಮಾನ್ (23), ಅಶ್ರಫುಲ್ ಇಸ್ಲಾಂ (21) ಮತ್ತು ಅಬ್ದುಲ್ ಕಾಸಿಮ್ (23) ಬಂಧಿತ ಯುವಕರು. ಬಂಧಿತರಲ್ಲಿ ಇಬ್ಬರು ಎಂ.ಕಾಂ ವಿದ್ಯಾರ್ಥಿಗಳಾಗಿದ್ದರೆ, ಮತ್ತೊಬ್ಬರು ಫಾರ್ಮಾಸ್ಯುಟಿಕಲ್ ಸೈನ್ಸ್ ಪದವೀಧರರಾಗಿದ್ದಾರೆ. ಈ ಯುವಕರು ಪ್ರತಿಭಟನೆ ನಡೆಸುವುದಕ್ಕೂ ಮುನ್ನವೇ ಲಾಲುಕ್ ಪೊಲೀಸ್ ಠಾಣೆಗೆ ತೆರಳಿ ಶಾಂತಿಯುತ ಪ್ರತಿಭಟನೆಗೆ ಅನುಮತಿ ಕೋರಿದ್ದರು. ಆದರೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಲ್ಲದೆ, ಬಳಿಕ ಅವರನ್ನು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: ನೀಟ್ ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ, ಉತ್ತರ ನೀಡಿ: ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಸುಪ್ರೀಂ ನೋಟಿಸ್
ಸದ್ಯ ಯುವಕರ ಕುಟುಂಬಸ್ಥರು ಪೊಲೀಸರ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ಮಗ ಪ್ರತಿಭಟನೆ ನಡೆಸಲು ಯತ್ನಿಸಿ ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ. ದೇಶದಾದ್ಯಂತ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ, ಆದರೆ ಯಾರನ್ನೂ ಬಂಧಿಸುತ್ತಿಲ್ಲ. ನನ್ನ ಮಗ ಇನ್ನು ಪ್ರತಿಭಟನೆಯನ್ನೇ ನಡೆಸಿರಲಿಲ್ಲ, ಕೇವಲ ಸಂಘಟಿಸಲು ಯತ್ನಿಸಿದ್ದ ಅಷ್ಟೇ” ಎಂದು ಮಂಜೂರ್ ಅವರ ತಂದೆ ಮೊಜಿಬುರ್ ಹೇಳಿದ್ದಾರೆ.
ಇನ್ನೊಬ್ಬ ಆರೋಪಿ ಅಶ್ರಫುಲ್ ಇಸ್ಲಾಂ ಅವರ ತಂದೆ ಅಯೂಬ್ ಅಲಿ ಮಾತನಾಡಿ, “ಇತರ ಸಮುದಾಯದ ಜನರನ್ನು ಬಂಧಿಸಲಾಗುತ್ತಿಲ್ಲ, ನಾವು ಮುಸ್ಲಿಮರು ಎಂಬ ಒಂದೇ ಕಾರಣಕ್ಕೆ ನಮ್ಮನ್ನು ಗುರಿ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
ಜುಲೈ 23ರಂದು ಈ ಮೂವರನ್ನು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 61(2)(b), 353(1) ಮತ್ತು ಸೆಕ್ಷನ್ 152 ಅಡಿಯಲ್ಲಿ ಬಂಧಿಸಲಾಗಿದೆ. ಇದರಲ್ಲಿ ಸೆಕ್ಷನ್ 152 ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವಂತಹ ಅಥವಾ ಸಶಸ್ತ್ರ ದಂಗೆ ಹಾಗೂ ಪ್ರತ್ಯೇಕತಾವಾದವನ್ನು ಪ್ರಚೋದಿಸುವ ಕೃತ್ಯಗಳಿಗೆ ಸಂಬಂಧಿಸಿದ್ದಾಗಿದೆ. ಪೊಲೀಸರು ಇವರನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲು ಕೋರಿದ್ದರಾದರೂ, ನ್ಯಾಯಾಲಯವು ಅದನ್ನು ತಿರಸ್ಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಬಂಧನ ಎಷ್ಟು ಸಮಂಜಸವೇ?
ಭಾರತೀಯ ಸಂವಿಧಾನದ ವಿಧಿ 19(1)(a) ಮತ್ತು 19(1)(b) ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತವಾಗಿ, ಶಸ್ತ್ರಾಸ್ತ್ರಗಳಿಲ್ಲದೆ ಸಭೆ ಸೇರಲು ಮತ್ತು ಪ್ರತಿಭಟಿಸಲು ಹಕ್ಕಿದೆ. ಪ್ರತಿಭಟನೆಗೆ ಅನುಮತಿ ಕೋರುವುದು ಪ್ರಜಾಪ್ರಭುತ್ವದ ವಿರೋಧದ ಕೃತ್ಯವಾಗುವುದಿಲ್ಲ.
ಯುವಕರು ಇನ್ನು ಪ್ರತಿಭಟನೆಯನ್ನೇ ನಡೆಸಿರಲಿಲ್ಲ. ಕೇವಲ ವಾಟ್ಸಾಪ್ ಗ್ರೂಪ್ ರಚಿಸಿ ಅನುಮತಿ ಕೋರಿದ್ದರು. ಯಾವುದೇ ಹಿಂಸಾಚಾರ ಅಥವಾ ಅಶಾಂತಿ ಸೃಷ್ಟಿಯಾಗದಿದ್ದರೂ, ಕೇವಲ ಪ್ರತಿಭಟನೆಗೆ ಯೋಜನೆ ರೂಪಿಸಿದ್ದಕ್ಕೆ ಗಂಭೀರ ಪ್ರಕರಣ ದಾಖಲಿಸುವುದು ಕಾನೂನಿನ ದುರ್ಬಳಕೆಯಾಗುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಕೃತ್ಯಗಳಿಗೆ ಬಳಸಬೇಕಾದ ಸೆಕ್ಷನ್ 152 ಅನ್ನು ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನಾ ಯತ್ನಕ್ಕೆ ಅನ್ವಯಿಸಿರುವುದು ಕಾನೂನುಬಾಹಿರ ಮತ್ತು ಅಸಮಂಜಸ ನಡವಳಿಕೆಯಾಗಿದೆ ಎಂದೂ ನೆಟ್ಟಿಗರು ದೂರಿದ್ದಾರೆ.





