ಮಣಿಪುರದಲ್ಲಿ ನಾಗಾ ಸಮುದಾಯದ ಆರು ಮಂದಿಯ ಹತ್ಯೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸುವಂತೆ ಮಣಿಪುರದ 21 ನಾಗಾ ಬುಡಕಟ್ಟು ಜನಾಂಗಗಳನ್ನು ಪ್ರತಿನಿಧಿಸುವ ಸರ್ವೋಚ್ಚ ಸಂಘಟನೆಯಾದ ಯುನೈಟೆಡ್ ನಾಗಾ ಕೌನ್ಸಿಲ್ (UNC) ಶನಿವಾರ ಆಗ್ರಹಿಸಿದೆ. ನಾಗಾಗಳು ವಾಸಿಸುವ ಪ್ರದೇಶಗಳಲ್ಲಿ ಬೆದರಿಕೆ ಹೆಚ್ಚಾಗುತ್ತಿದೆ. ಆರು ನಾಗಾಗಳ ಹತ್ಯೆಯಾಗಿದೆ. ಈ ಸಂಬಂಧ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ UNC ನಾಯಕರು, ರಾಜ್ಯದ ನಾಗಾ ಪ್ರದೇಶಗಳಲ್ಲಿ ಭದ್ರತಾ ವಾತಾವರಣ ಹದಗೆಡುತ್ತಿರುವುದನ್ನು ಎತ್ತಿ ತೋರಿಸುವ ಪತ್ರವನ್ನು ಪ್ರಧಾನಿಗೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಇನ್ನು ಈ ಹತ್ಯೆಯಲ್ಲಿ ಸಮುದಾಯದ ಪಾತ್ರವನ್ನು ಕುಕಿ-ಝೋ ಕೌನ್ಸಿಲ್ ಒಪ್ಪಿಕೊಂಡಿದೆ. ಇದು ದೊಡ್ಡ ತಪ್ಪು ಎಂದು ಹೇಳಿದೆ.
ಇದನ್ನೂ ಓದಿ: ಮಣಿಪುರ | ಆರು ನಾಗಾ ಒತ್ತೆಯಾಳುಗಳ ಹತ್ಯೆ; ಸಮುದಾಯದ ಪಾತ್ರ ಒಪ್ಪಿದ ಕುಕಿ-ಝೋ ಕೌನ್ಸಿಲ್
ಮೇ 13ರಂದು ಕುಕಿ ಉಗ್ರಗಾಮಿ ಗುಂಪುಗಳು 20 ನಾಗಾ ನಾಗರಿಕರನ್ನು ಅಪಹರಿಸಿದ್ದಾರೆ. ಅಪಹರಿಸಲ್ಪಟ್ಟವರಲ್ಲಿ ಹದಿನಾಲ್ಕು ಜನರನ್ನು ಮೇ 15 ರಂದು ಬಿಡುಗಡೆ ಮಾಡಿದ್ದಾರೆ. ಆದರೆ ಆರು ಮಂದಿ ನಾಪತ್ತೆಯಾಗಿದ್ದರು. ಜೂನ್ 9 ರಂದು ನಾಗಾ ಗ್ರಾಮ ಸಿಬ್ಬಂದಿ 14 ಕುಕಿ ಬಂಧಿತರನ್ನು ಮಾನವೀಯತೆಯ ಸೂಚಕವಾಗಿ ಬಿಡುಗಡೆ ಮಾಡಿದ್ದಾರೆ. ಆದರೆ ನಾಪತ್ತೆಯಾಗಿದ್ದ ಆರು ಮಂದಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಕೌನ್ಸಿಲ್ ಹೇಳಿದೆ.
ಈ ಸಂಬಂಧ ಸ್ವತಂತ್ರ ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ನಡೆಸಬೇಕು. ಅಪಹರಣ ಮತ್ತು ಹತ್ಯೆಗಳಿಗೆ ಕಾರಣರಾದವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಮಂಡಳಿ ಒತ್ತಾಯಿಸಿದೆ. ಹಾಗೆಯೇ ನಾಗಾಗಳು ವಾಸಿಸುವ ಪ್ರದೇಶಗಳಲ್ಲಿ ಬಲವಾದ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಕೌನ್ಸಿಲ್ ಒತ್ತಾಯಿಸಿದೆ.
ಭಾರತ-ನಾಗಾ ಶಾಂತಿ ಪ್ರಕ್ರಿಯೆಯ ಕುರಿತಾದ 2015ರ ಒಪ್ಪಂದವನ್ನು ಗೌರವಿಸುವಂತೆ ಸಂಘಟನೆಯು ಕೇಂದ್ರವನ್ನು ಒತ್ತಾಯಿಸಿದೆ. “ಪ್ರಧಾನಿಗಳಿಗೆ ನಾವು ನೇರವಾಗಿ ಮನವಿ ಮಾಡುತ್ತಿದ್ದೇವೆ. ಒಪ್ಪಂದವನ್ನು ಗೌರವಿಸಿ, ನಾಗಾ ಪ್ರದೇಶಗಳನ್ನು ಸುರಕ್ಷಿತಗೊಳಿಸಿ ಮತ್ತು ನಾಗಾ ನಾಗರಿಕರ ವಿರುದ್ಧದ ಸಶಸ್ತ್ರ ಆಕ್ರಮಣವನ್ನು ಸ್ಥಳೀಯ ಅಡಚಣೆಯಾಗಿ ಪರಿಗಣಿಸುವುದನ್ನು ನಿಲ್ಲಿಸಿ” ಎಂದು ಯುಎನ್‌ಸಿ ನಾಯಕ ಕೆಎಸ್ ಪಾಲ್ ಲಿಯೋ ಹೇಳಿದ್ದಾರೆ.
ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರಗಳನ್ನು ಸೇನೆಗೆ ಒಪ್ಪಿಸಿದ ಮಣಿಪುರ ಜನತೆ
ಏನಿದು ಭಾರತ-ನಾಗಾ ಪ್ರಕ್ರಿಯೆಯ ಶಾಂತಿ ಒಪ್ಪಂದ
ಭಾರತ-ನಾಗಾ ಶಾಂತಿ ಪ್ರಕ್ರಿಯೆಯ 2015ರ ಒಪ್ಪಂದವು ಈಶಾನ್ಯ ಭಾರತದಲ್ಲಿ ದಶಕಗಳಷ್ಟು ಹಳೆಯದಾದ ನಾಗಾ ಬಂಡಾಯವನ್ನು ಕೊನೆಗೊಳಿಸಲು ಭಾರತ ಸರ್ಕಾರ ಮತ್ತು ನ್ಯಾಷನಲ್ ಸೋಷಿಯಲ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (NSCN-IM) ನಡುವೆ ಆಗಸ್ಟ್ 3, 2015 ರಂದು ನಡೆದ ಐತಿಹಾಸಿಕ ಒಪ್ಪಂದವಾಗಿದೆ. ಭಾರತ ಸರ್ಕಾರದ ಪರವಾಗಿ ಆರ್.ಎನ್. ರವಿ ಮತ್ತು ಎನ್‌ಎಸ್‌ಸಿಎನ್ (IM) ಪರವಾಗಿ ಇಸಾಕ್ ಚಿಸಿ ಸುವ್ ಹಾಗೂ ತುವಿಂಗಾಲೆಂಗ್ ಮುಯಿವಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಬದಿಗಿಟ್ಟು, ನಾಗಾ ಗುಂಪುಗಳು ಭಾರತದ ಒಕ್ಕೂಟದ (ಫೆಡರೇಶನ್) ಚೌಕಟ್ಟಿನಲ್ಲೇ ವಿಶೇಷ ಸ್ಥಾನಮಾನದೊಂದಿಗೆ ಒಪ್ಪಂದಕ್ಕೆ ಬರಲು ಒಪ್ಪಿಕೊಂಡಿವೆ. ನಾಗಾಗಳ ಇತಿಹಾಸ, ಸಂಸ್ಕೃತಿ, ಸ್ಥಾನಮಾನ ಮತ್ತು ಅವರ ಆಕಾಂಕ್ಷೆಗಳ ಅನನ್ಯತೆಯನ್ನು ಭಾರತ ಸರ್ಕಾರವು ಈ ಒಪ್ಪಂದದಲ್ಲಿ ಅಧಿಕೃತವಾಗಿ ಗುರುತಿಸಿದೆ. ಒಪ್ಪಂದವಾಗಿ ಹಲವು ವರ್ಷಗಳು ಕಳೆದಿದ್ದರೂ, ನಾಗಾಲ್ಯಾಂಡ್‌ಗೆ ಪ್ರತ್ಯೇಕ ಧ್ವಜ ಮತ್ತು ಪ್ರತ್ಯೇಕ ಸಂವಿಧಾನದಂತಹ ಪ್ರಮುಖ ಬೇಡಿಕೆಗಳ ಬಗ್ಗೆ ಭಿನ್ನಾಭಿಪ್ರಾಯಗಳು ಮುಂದುವರಿದಿವೆ.
ನಾಗಾ ಸಮುದಾಯಕ್ಕೆ ವಿಸ್ತರಿಸಿದ ಹಿಂಸಾಚಾರ
2023ರ ಮೇ 3ರಿಂದ ಮಣಿಪುರದಲ್ಲಿ ಬಹುಸಂಖ್ಯಾತ ಮೈತೇಯಿ ಮತ್ತು ಬುಡಕಟ್ಟು ಸಮುದಾಯವಾದ ಕುಕಿ-ಝೋ ನಡುವೆ ಸುದೀರ್ಘವಾದ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬಿಜೆಪಿ ಸರ್ಕಾರ ಈವರೆಗೂ ಈ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುವಲ್ಲಿ ಸಫಲವಾಗಿಲ್ಲ. ಬದಲಾಗಿ ಬಿಜೆಪಿ ರಾಜಕೀಯದಾಟದಲ್ಲೇ ತೊಡಗಿದೆ. ಇವೆಲ್ಲವುದರ ನಡುವೆ 2026ರಲ್ಲಿ ಮಣಿಪುರದಲ್ಲಿ ಹಿಂಸಾಚಾರ ಮತ್ತೊಂದು ಸಮುದಾಯಕ್ಕೆ ಪಸರಿಸಿದೆ. ಬುಡಕಟ್ಟು ಸಮುದಾಯ ನಾಗಾ ಮತ್ತು ಕುಕಿ ನಡುವೆ ಹಿಂಸಾಚಾರ ಆರಂಭವಾಗಿದೆ.
ಈ ಹಿಂಸಾಚಾರ ಆರಂಭವಾಗಿ ವರುಷಗಳೇ ಕಳೆದಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಹೇಳಿಕೆ ನೀಡಿರಲಿಲ್ಲ, ಮಣಿಪುರಕ್ಕೆ ಭೇಟಿ ನೀಡಿರಲಿಲ್ಲ. ತೀವ್ರ ಒತ್ತಡದ ಬಳಿಕ ಬರೀ ‘ದುರದೃಷ್ಟಕರ’ ಎಂಬ ಹೇಳಿಕೆ ನೀಡಿದ್ದರು, ಮಣಿಪುರಕ್ಕೆ ಭೇಟಿ ನೀಡಿದ್ದರು. ಇದೀಗ ನಾಗಾ ಸಮುದಾಯದ ಒತ್ತಾಯದಂತೆ ಪ್ರಧಾನಿ ಮಧ್ಯಪ್ರವೇಶಿಸುವ ನಿರೀಕ್ಷೆಯೇ ಇಲ್ಲ ಎಂಬ ಅಭಿಪ್ರಾಯ ನೆಟ್ಟಿಗರದ್ದು.




