ಮೇಲ್ಜಾತಿ ಯುವತಿಯೊಬ್ಬಳ ಜೊತೆ ಸ್ನೇಹ ಹೊಂದಿದ್ದ ಕಾರಣಕ್ಕೆ 18 ವರ್ಷದ ದಲಿತ ಯುವಕನೊಬ್ಬನನ್ನು ಯುವತಿಯ ಕುಟುಂಬಸ್ಥರು ಇಡೀ ರಾತ್ರಿ ಕೂಡಿಹಾಕಿ, ಕಾಲಿಗೆ ಮೊಳೆ ಹೊಡೆದು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರಾಖಂಡದ ಟಿಹ್ರಿ ಗಢ್ವಾಲ್ ಜಿಲ್ಲೆಯ ಲಂಬಗಾಂವ್ ವ್ಯಾಪ್ತಿಯಲ್ಲಿ ನಡೆದಿದೆ. 12ನೇ ತರಗತಿ ವಿದ್ಯಾರ್ಥಿ ಕೇತನ್ ಲಾಲ್ ಕೊಲೆಯಾದ ದುರ್ದೈವಿ. ಘಟನೆಯು ಶತಮಾನಗಳಿಂದಲೂ ಜಾತಿ ತಾರತಮ್ಯ ಮತ್ತು ಹಿಂಸಾಚಾರದ ಬೇರುಗಳು ಈ ದೇಶದಲ್ಲಿ ಎಷ್ಟು ಆಳವಾಗಿ ಬೇರೂರಿವೆ ಎಂಬುದನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.
ಪೊಲೀಸರು ಮತ್ತು ಮೃತ ಯುವಕನ ತಂದೆ ಧನಪಾಲ್ ಲಾಲ್ ನೀಡಿರುವ ದೂರಿನ ಪ್ರಕಾರ, ಕೇತನ್ ಲಾಲ್ ಹಾಗೂ ಖೋಲ್ಗಢ್ ಗ್ರಾಮದ ಅಪ್ರಾಪ್ತ ಯುವತಿ ಕಳೆದ 6 ತಿಂಗಳಿನಿಂದ ಸ್ನೇಹಿತರಾಗಿದ್ದರು. ಭಾನುವಾರ ರಾತ್ರಿ ಯುವತಿಯ ಫೋನ್‌ನಿಂದ ಬಂದ ಕರೆಯ ಮೇರೆಗೆ ಕೇತನ್ ತನ್ನ ಸ್ನೇಹಿತ ದಿವಾಕರ್ ದಿಮ್ರಿ ಜೊತೆ ಆಕೆಯ ಮನೆಗೆ ಹೋಗಿದ್ದನು. ಅಲ್ಲಿಗೆ ತಲುಪಿದ ತಕ್ಷಣ ಯುವತಿಯ ತಂದೆ ಯಶ್‌ವೀರ್ ಸಿಂಗ್ ಪನ್ವಾರ್, ಅಜ್ಜ ವಿದ್ಯಾದತ್ ಪನ್ವಾರ್ ಮತ್ತು ಅವರ ಪರಿಚಿತರು ಸೇರಿ ಇಬ್ಬರನ್ನೂ ಕೋಣೆಯೊಂದರಲ್ಲಿ ಕೂಡಿಹಾಕಿ, ಇಡೀ ರಾತ್ರಿ ಅಮಾನವೀಯವಾಗಿ ಥಳಿಸಿದ್ದಾರೆ. ಹಲ್ಲೆಯ ವೇಳೆ ಜಾತಿ ನಿಂದನೆ ಮಾಡಿದ್ದಲ್ಲದೆ, ಕೇತನ್‌ನ ಕಾಲುಗಳಿಗೆ ಮೊಳೆಗಳನ್ನು ಹೊಡೆದು ತೀವ್ರವಾಗಿ ಚಿತ್ರಹಿಂಸೆ ನೀಡಿದ್ದಾರೆ. ಸೋಮವಾರ ಮುಂಜಾನೆ ಯುವತಿಯ ತಂದೆ ಯಶ್‌ವೀರ್, ಕೇತನ್ ತಂದೆಗೆ ಫೋನ್ ಮಾಡಿ ಬೆದರಿಕೆ ಹಾಕುತ್ತಾ, “ನಿನ್ನ ಮಗ ಎಲ್ಲಿದ್ದಾನೆ?” ಎಂದು ಕೇಳಿದ್ದಾನೆ. ತಂದೆ ಮಗನ ಕೋಣೆಗೆ ಹೋಗಿ ನೋಡಿದಾಗ ಆತ ಇರಲಿಲ್ಲ. ಈ ವಿಷಯ ತಿಳಿಸಿದಾಗ, “ನಿನ್ನ ಮಗ ಮತ್ತು ಆತನ ಸ್ನೇಹಿತನನ್ನು ಕೊಂದು ಹಳ್ಳಕ್ಕೆ ಎಸೆದಿದ್ದೇನೆ, ಬಂದು ಹೆಣಗಳನ್ನು ತೆಗೆದುಕೊಂಡು ಹೋಗು” ಎಂದು ಹೇಳಿದ್ದಾನೆ.
ತಕ್ಷಣವೇ ಧನಪಾಲ್ ಲಾಲ್ ಅವರು ದಿವಾಕರ್‌ನ ತಂದೆಗೂ ವಿಷಯ ತಿಳಿಸಿ ಯಶ್‌ವೀರ್ ಗ್ರಾಮಕ್ಕೆ ಧಾವಿಸಿದಾಗ, ಇಬ್ಬರೂ ಯುವಕರು ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಗಾಯಗೊಂಡಿದ್ದ ಮಗನನ್ನು ಆಸ್ಪತ್ರೆಗೆ ಸಾಗಿಸುವಾಗ, ಕೇತನ್ ತಾನು ದಲಿತ ಸಮುದಾಯಕ್ಕೆ ಸೇರಿದವನೆಂಬ ಏಕೈಕ ಕಾರಣಕ್ಕೆ ಇಡೀ ರಾತ್ರಿ ತಮಗೆ ನೀಡಿದ ಚಿತ್ರಹಿಂಸೆಯ ಭೀಕರತೆಯನ್ನು ವಿವರಿಸಿದ್ದಾನೆ. ತಂದೆ ತಮ್ಮ ಮಗ ಸಾವನ್ನಪ್ಪುವ ಮುನ್ನ ಆತನ ಈ ಹೇಳಿಕೆಯನ್ನು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಅದನ್ನು ಪೊಲೀಸರಿಗೆ ಪ್ರಮುಖ ಸಾಕ್ಷ್ಯವಾಗಿ ಒಪ್ಪಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕೇತನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ತಲೆ ಮತ್ತು ದೇಹಕ್ಕೆ ಗಂಭೀರ ಗಾಯಗಳಾಗಿರುವ ಆತನ ಸ್ನೇಹಿತ ದಿವಾಕರ್ ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಟಿಹ್ರಿ ಗಢ್ವಾಲ್ ಎಸ್‌ಎಸ್‌ಪಿ ಶ್ವೇತಾ ಚೌಬೆ ನೇತೃತ್ವದಲ್ಲಿ ಪೊಲೀಸರು ತಕ್ಷಣದ ಕ್ರಮ ಕೈಗೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) (ಕೊಲೆ), 3(5) (ಸಮಾನ ಉದ್ದೇಶ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ (SC/ST Act) ಪ್ರಕರಣ ದಾಖಲಿಸಿಕೊಂಡು, ಯುವತಿಯ ತಂದೆ ಯಶ್‌ವೀರ್ ಸಿಂಗ್ ಪನ್ವಾರ್ ಮತ್ತು ಅಜ್ಜ ವಿದ್ಯಾದತ್ ಪನ್ವಾರ್‌ನನ್ನು ಬಂಧಿಸಲಾಗಿದೆ. ಗಾಯಗಳ ತೀವ್ರತೆಯನ್ನು ಪತ್ತೆಹಚ್ಚಲು ವೈದ್ಯರ ಸಮಿತಿಯು ಶವಪರೀಕ್ಷೆ ನಡೆಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಯುವತಿಯ ಸ್ನೇಹದ ಬಗ್ಗೆ ಅವಳ ಕುಟುಂಬಕ್ಕೆ ಇಷ್ಟವಿರಲಿಲ್ಲ ಎನ್ನಲಾಗಿದ್ದು, ಈ ಹಿಂದೆ ಯಶ್‌ವೀರ್ ಕೇತನ್ ತಂದೆಯನ್ನು ಭೇಟಿಯಾಗಿ ಮಗನಿಗೆ ತಿಳಿಹೇಳುವಂತೆ ಎಚ್ಚರಿಸಿದ್ದ ಎನ್ನಲಾಗಿದೆ. ಸದ್ಯ, “ನನ್ನ ಮಗನನ್ನು ಕೊಂದವರು ನಮ್ಮ ಇಡೀ ಕುಟುಂಬವನ್ನೂ ಕೊಲ್ಲಬಹುದು” ಎಂದು ಧನಪಾಲ್ ಲಾಲ್ ಆತಂಕ ವ್ಯಕ್ತಪಡಿಸಿದ್ದು, ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಕೋರಿದ್ದಾರೆ. ಗ್ರಾಮದ ಮಾಜಿ ಮುಖ್ಯಸ್ಥ ದಿನೇಶ್ ಶಾ ಮಾತನಾಡಿ, “ಹುಡುಗರದ್ದು ತಪ್ಪೇ ಇದ್ದರೂ ಕಾನೂನನ್ನು ಕೈಗೆತ್ತಿಕೊಳ್ಳಲು ಅವರಿಗೆ ಯಾರು ಹಕ್ಕು ಕೊಟ್ಟಿದ್ದು? ಪೊಲೀಸರಿಗೆ ದೂರು ನೀಡಬೇಕಿತ್ತು, ಹೀಗೆ ಚಿತ್ರಹಿಂಸೆ ನೀಡಿ ಕೊಲ್ಲಲು ಹೇಗೆ ಸಾಧ್ಯ?” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಮಿತಿಮೀರುತ್ತಿದೆ ಅಧಿಕಾರಿಗಳ ದರ್ಪ; ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ
ಉತ್ತರಾಖಂಡದ ಕಮ್ಯುನಿಸ್ಟ್ ಪಕ್ಷದ (CPI-ML) ನಾಯಕ ಇಂದ್ರೇಶ್ ಮೈಖುರಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು 2022ರಲ್ಲಿ ಮೇಲ್ಜಾತಿ ಯುವತಿಯನ್ನು ಮದುವೆಯಾಗಿದ್ದಕ್ಕಾಗಿ ದಲಿತ ರಾಜಕೀಯ ಕಾರ್ಯಕರ್ತ ಜಗದೀಶ್ ಚಂದ್ರ ಅವರನ್ನು ಹೊಡೆದು ಕೊಂದಿದ್ದ ಘಟನೆಯನ್ನು ನೆನಪಿಸುತ್ತದೆ ಎಂದಿದ್ದಾರೆ. ಇದು ಕೇವಲ ಕೌಟುಂಬಿಕ ಪ್ರತಿಷ್ಠೆಯಲ್ಲ, ಬದಲಿಗೆ ಸಮಾಜದಲ್ಲಿ ಹಾಸುಹೊಕ್ಕಾಗಿರುವ ‘ಜಾತಿ ವಿಷ’ದ ಕ್ರೂರ ರೂಪ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ‘ನ್ಯಾಷನಲ್ ಕ್ಯಾಂಪೇನ್ ಆನ್ ದಲಿತ್ ಹ್ಯೂಮನ್ ರೈಟ್ಸ್’ (NCDHR) ವರದಿಯ ಪ್ರಕಾರ, ಉತ್ತರಾಖಂಡದಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲಿನ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಕಳೆದ 2019ರಿಂದ 2023ರ ಅವಧಿಯಲ್ಲಿ ಈ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇಕಡಾ 21ಕ್ಕಿಂತ ಹೆಚ್ಚಿರುವುದು ಆಂತರಿಕ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.





