ದೆಹಲಿ ಸಮೀಪದ ನೋಯ್ಡಾದ ಫೇಸ್-2 ಹೊಸೇರಿ ಕಾಂಪ್ಲೆಕ್ಸ್ನಲ್ಲಿ ವೇತನ ಹೆಚ್ಚಳಕ್ಕಾಗಿ ಗಾರ್ಮೆಂಟ್ಸ್ ಫ್ಯಾಕ್ಟರಿ ಕಾರ್ಮಿಕರು ಹಮ್ಮಿಕೊಂಡಿದ್ದ ಪ್ರತಿಭಟನೆ ಸೋಮವಾರ ವಿಕೋಪಕ್ಕೆ ತಿರುಗಿದೆ. ಶಾಂತಿಯುತವಾಗಿ ಆರಂಭವಾದ ಹೋರಾಟವು ಹಿಂಸಾಚಾರದ ರೂಪ ಪಡೆದಿದ್ದು, ರೊಚ್ಚಿಗೆದ್ದ ಪ್ರತಿಭಟನಾಕಾರರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವ ಮೂಲಕ ಕಾರ್ಮಿಕರು ತಮ್ಮ ಆಕ್ರೋಶ ಹೊರಹಾಕಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಗಾರ್ಮೆಂಟ್ಸ್ ಮತ್ತು ಫ್ಯಾಕ್ಟರಿ ಕಾರ್ಮಿಕರು ತಮ್ಮ ಮಾಸಿಕ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಿಂಗಳಿಗೆ 11,000ದಿಂದ 13,000 ರೂ ಇರುವ ವೇತನವನ್ನು 18,000 – 20,000 ರೂಗೆ ಏರಿಸಬೇಕು ಎಂಬುದು ಇವರ ಪ್ರಮುಖ ಬೇಡಿಕೆ.

ಕೇವಲ ವೇತನ ಏರಿಕೆ ಮಾತ್ರವಲ್ಲದೆ, ಓವರ್ಟೈಮ್ ಭತ್ಯೆ, ಬಾಕಿ ಇರುವ ಬೋನಸ್ ಹಾಗೂ ವಾರದ ರಜೆಯಂತಹ ಮೂಲಭೂತ ಹಕ್ಕುಗಳಿಗಾಗಿ ಕಾರ್ಮಿಕರು ಹೋರಾಟಕ್ಕಿಳಿದಿದ್ದಾರೆ. ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಬಲಪಡಿಸಬೇಕೆಂಬುದು ಅವರ ಪ್ರಮುಖ ಒತ್ತಾಯ. ವಿಶೇಷವೆಂದರೆ, ಭಾನುವಾರವಷ್ಟೇ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರು ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಶಾಂತಿ ಸಭೆ ನಡೆಸಿದ್ದರು. ಇಷ್ಟೆಲ್ಲಾ ಸಮಾಲೋಚನೆಗಳ ಹೊರತಾಗಿಯೂ ಸೋಮವಾರದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವುದು ಆಡಳಿತ ಮಂಡಳಿಯಲ್ಲಿ ಆತಂಕ ಮೂಡಿಸಿದೆ.
ಗೌತಮ್ ಬುದ್ಧ ನಗರ ಆಯುಕ್ತಾಲಯದ ವ್ಯಾಪ್ತಿಯ ಕೈಗಾರಿಕಾ ವಲಯ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವರದಿಯಾಗಿದೆ.




