ವಿದ್ಯಾರ್ಥಿಗಳು ಮತ್ತು ಯುವಜನರ ತೀವ್ರ ಒತ್ತಡಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯು ಕೇವಲ ಒಬ್ಬ ಸಚಿವರ ನಿರ್ಗಮನವನ್ನು ಮಾತ್ರ ಸೂಚಿಸುವುದಿಲ್ಲ. ಸರ್ವಾಧಿಕಾರಿ ಧೋರಣೆಯೊಂದಿಗೆ ತಾವೇ ಪರಮೋಚ್ಛರು ಎಂದು ಮೆರೆಯುವವರನ್ನೂ ಚಳುವಳಿಗಳು ಬಗ್ಗುಬಡಿಯುತ್ತವೆ ಎಂಬುದಕ್ಕೆ ವರ್ತಮಾನದ ಉದಾಹರಣೆಯೂ ಆಗಿದೆ.
ಮೋದಿ ನೇತೃತ್ವದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಮೊದಲ ಅವಧಿಯ ಅಂತ್ಯದ ವೇಳೆಗೆ ತಮ್ಮನ್ನು ಮಣಿಸುವವರೇ ಇಲ್ಲವೆಂಬ ಧೋರಣೆಗೆ ಬಂದಿತ್ತು. ಆದ್ದರಿಂದಲೇ, 2019ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ, ಬೃಹತ್ ಜನವಿರೋಧಿ ನೀತಿಗಳನ್ನು ದೇಶದ ಮೇಲೆ ಹೇರಲು ಮುಂದಾಗಿತ್ತು. ಆದರೆ, ನಮ್ಮ ಮೇಲೆ ಸವಾರಿ ಮಾಡಲು ಯಾರಿಗೂ ಅವಕಾಶ ನೀಡೆವು ಎಂಬುದನ್ನು ಈವರೆಗೆ ಮೂರು ಬಾರಿ ದೇಶವಾಸಿಗಳು ಮೋದಿ ಸರ್ಕಾರ ಸಂದೇಶ ರವಾನಿಸಿದ್ದಾರೆ. 2019ರ ಬಳಿಕ, ಮೂರು ಬಾರಿ ಮೋದಿ ಸರ್ಕಾರವನ್ನು ಜನಾಂದೋಲನಗಳು ಮಂಡಿಯೂರುವಂತೆ ಮಾಡಿವೆ.
ಸಿಎಎ-ಎನ್ಆರ್ಸಿ
ಮೊದಲ ಬೃಹತ್ ಜನಾಂದೋಲನವನ್ನು ಮೋದಿ ಸರ್ಕಾರ ಎದುರಿಸಿದ್ದು, 2020ರಲ್ಲಿ -ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಹೋರಾಟದ ಸಮಯದಲ್ಲಿ. ಆ ಸಂದರ್ಭದಲ್ಲಿ, ಮೋದಿ ಸರ್ಕಾರವು ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (NRC)ಯನ್ನು ಜಾರಿಗೆ ತರಲು ಉದ್ದೇಶಿಸಿತ್ತು. ಆದರೆ, ಎನ್ಆರ್ಸಿ ಪಸ್ತಾಪವನ್ನು ಸಂಸತ್ತಿನಲ್ಲಿ ಸರ್ಕಾರ ಮಂಡಿಸುವ ಮುನ್ನವೇ, ಅದರ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದವು. ಬಳಿಕ, ಸರ್ಕಾರವು ಬಹಿರಂಗವಾಗಿ ತನ್ನ ನಿಲುವನ್ನು ಬದಲಿಸಬೇಕಾಯಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶವ್ಯಾಪಿ ಎನ್ಆರ್ಸಿ ಜಾರಿಯ ಬಗ್ಗೆ ಪದೇ ಪದೇ ಪ್ರಸ್ತಾಪಿಸಿ, ಸರ್ಕಾರದ ಉದ್ದೇಶವನ್ನು ಸ್ಪಷ್ಟಪಡಿಸಿದ್ದರೂ, ಸ್ವತಃ ಪ್ರಧಾನಿಯವರೇ “ಸರ್ಕಾರ ಎನ್ಆರ್ಸಿ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ” ಎಂದು ಹೇಳುವಂತಾಯಿತು. ಇದು ಸರ್ಕಾರದ ಮೊದಲ ಹಿನ್ನಡೆಯಾಗಿತ್ತು.
ರೈತ ಪ್ರತಿಭಟನೆ
ಮೋದಿ ಸರ್ಕಾರಕ್ಕೆ ಎರಡನೇ ಬಾರಿಗೆ ಭಾರೀ ಸವಾಲು ಎದುರಾದದ್ದು 2020-21ರಲ್ಲಿ ನಡೆದ ರೈತರ ಬೃಹತ್ ಹೋರಾಟದ ಸಮಯದಲ್ಲಿ. ಸರ್ಕಾರವು ಸುಮಾರು ಒಂದು ವರ್ಷಗಳ ಕಾಲ ಪ್ರತಿಭಟನೆಯನ್ನು ಎದುರಿಸಿ, ಕೊನೆಗೆ ಸೋಲೊಪ್ಪಿಕೊಂಡು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಆರಂಭದಲ್ಲಿ ಸರ್ಕಾರವು ರೈತ ಚಳವಳಿಯನ್ನು ಹತೋಟಿಗೆ ತರಬಹುದು, ಪ್ರತಿಭಟನಾಕಾರರ ತಾಳ್ಮೆ ಮುಗಿಯುವವರೆಗೆ ಕಾಯಬಹುದು ಹಾಗೂ ಇದನ್ನು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾದ ರಾಜಕೀಯ ಪ್ರೇರಿತ ಚಳವಳಿ ಎಂದು ಬಿಂಬಿಸಬಹುದು ಎಂದು ಭಾವಿಸಿತ್ತು.
ಆದರೆ, ರೈತರು ಚದುರಿ ಹೋಗಲಿಲ್ಲ. ದೆಹಲಿ ಗಡಿಗಳಲ್ಲಿ ಬಲವಾಗಿ ಕುಳಿತರು. ಈ ಪ್ರತಿಭಟನೆಯು ಸರ್ಕಾರದ ಅಧಿಕಾರಕ್ಕೆ ನಿರಂತರ ಸವಾಲಾಗಿ ಪರಿಣಮಿಸಿತು. ಅಂತಿಮವಾಗಿ, ಮೋದಿಯವರು ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದರು. ಒಂದು ವರ್ಷದ ನಂತರ ರೈತರ ಕ್ಷಮೆಯಾಚಿಸಿದರು. ಆಗ ಸರ್ಕಾರವು ಮಾತುಕತೆಯಿಂದಲ್ಲ, ಬದಲಾಗಿ ತೀವ್ರ ಒತ್ತಡದಿಂದ ಹಿಂದೆ ಸರಿಯಬೇಕಾಯಿತು ಎಂಬುದು ಸ್ಪಷ್ಟವಾಯಿತು.
ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ
ಪ್ರಸ್ತುತ, ಮೋದಿ ಸರ್ಕಾರವು ಮೂರನೇ ಬಾರಿಗೆ ಹಿನ್ನಡೆ ಅನುಭವಿಸಿದೆ. ಧರ್ಮೇಂದ್ರ ಪ್ರಧಾನ್ ಮತ್ತು ಅವರ ಶಿಕ್ಷಣ ಸಚಿವಾಲಯವು ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ವಿಫಲವಾಗಿದೆ. ಸರಣಿ ಪರೀಕ್ಷಾ ಅಕ್ರಮಗಳು ನಡೆದಿವೆ. ಇದರ ವಿರುದ್ಧ ವಿದ್ಯಾರ್ಥಿ-ಯುವಜನರು ಬೃಹತ್ ಹೋರಾಟ ನಡೆಸಿದ್ದಾರೆ. ಅಲ್ಪಾವಧಿಯಲ್ಲಿಯೇ ಸರ್ಕಾರವನ್ನು ಮಣಿಸಿದ್ದಾರೆ.
ಈ ಬಾರಿಯ ಪ್ರತಿಭಟನೆಯಲ್ಲಿ ವಿಶೇಷವೆಂದರೆ, ಈ ಪ್ರತಿಭಟನೆಗಳನ್ನು ಯಾವುದೇ ನಿರ್ದಿಷ್ಟ ಸಿದ್ಧಾಂತದ ಸಂಘಟನೆಯಾಗಲಿ ಅಥವಾ ಒಬ್ಬ ನಿರ್ದಿಷ್ಟ ನಾಯಕನಾಗಲಿ ಮುನ್ನಡೆಸಿರಲಿಲ್ಲ. ಇದು ಸ್ವಯಂಪ್ರೇರಿತ, ವಿಕೇಂದ್ರೀಕೃತ ಹಾಗೂ ನಾಯಕರ ಹಸ್ತಕ್ಷೇಪವಿಲ್ಲದ ಹೋರಾಟವಾಗಿತ್ತು. ಪ್ರತಿಭಟನಾಕಾರರ ಗುಂಪೇ ಈ ಆಂದೋಲನದ ಧ್ವನಿ ಮತ್ತು ವಾಹನವಾಗಿದ್ದವು. ಇದರಿಂದಾಗಿ, ಸಾಂಪ್ರದಾಯಿಕ ರಾಜಕೀಯ ಸಂಧಾನಗಳ ಮೂಲಕ (ಸ್ವಲ್ಪ ಮಟ್ಟದ ಚೌಕಾಶಿ ಮಾಡಿಕೊಳ್ಳಬಲ್ಲ ಅವಕಾಶವೇ ಇರಲಿಲ್ಲ) ಸಮಸ್ಯೆಯನ್ನು ಬಗೆಹರಿಸುವುದು ಸರ್ಕಾರಕ್ಕೆ ಕಷ್ಟಕರವಾಯಿತು.
ಈ ಲೇಖನ ಓದಿದ್ದೀರಾ?:ದೆಹಲಿ ಪ್ರತಿಭಟನೆಯಲ್ಲಿ ಬಳಕೆಯಾದ ಮಾರಕ ‘ಪೆಲೆಟ್ ಗನ್’ ಅಸ್ತ್ರಗಳ ಅಸಲಿಯತ್ತೇನು?
ಈ ಆಂದೋಲನದ ಸಾಂಸ್ಥಿಕ ರೂಪವೂ ಅದಕ್ಕೆ ಅಸಾಧಾರಣ ಶಕ್ತಿಯನ್ನು ನೀಡಿತು. ಇದು ಶಾಂತಿಯುತವಾಗಿದ್ದರೂ ಅತ್ಯಂತ ಸುಸಂಘಟಿತವಾಗಿತ್ತು. ಸರ್ಕಾರಕ್ಕೆ ಸುಲಭವಾಗಿ ಅರ್ಥಮಾಡಿಕೊಳ್ಳಲು ಅಥವಾ ಎದುರಿಸಲು ಸಾಧ್ಯವಾಗದ ಸಾಮಾಜಿಕ ಜಾಲತಾಣಗಳ ಶಕ್ತಿಯ ಮೂಲಕ ಇದು ಹರಡಿತು. ವ್ಯಂಗ್ಯ ಮತ್ತು ಹಾಸ್ಯದಿಂದ ಕೂಡಿದ ಮೀಮ್ಗಳು ಹಾಗೂ ರೀಲ್ಸ್ಗಳು ಪ್ರತಿಭಟನೆಗೆ ಸಾಂಸ್ಕೃತಿಕ ಶಕ್ತಿಯನ್ನು ತಂದುಕೊಟ್ಟವು.
ಈ ಬಾರಿಯ ವಿಶೇಷತೆಯೇನು?
ಹಿಂದಿನ ಪ್ರತಿಭಟನೆಗಳ ಸಮಯದಲ್ಲಿ, ಬಿಜೆಪಿ ಸಾಮಾನ್ಯವಾಗಿ ಒಂದು ನಿರ್ದಿಷ್ಟ ವಿಧಾನವನ್ನು ಬಳಸುತ್ತಿತ್ತು: ಪ್ರತಿಭಟನೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದು, ಅದರ ನಾಯಕತ್ವದ ಮೇಲೆ ದಾಳಿ ಮಾಡುವುದು, ಒಕ್ಕೂಟವನ್ನು ಒಡೆಯುವುದು ಅಥವಾ ಪ್ರತಿಭಟನಾಕಾರರು ಸುಸ್ತಾಗುವವರೆಗೆ ಕಾಯುವುದು. ಆದರೆ ಈ ಬಾರಿ, ಸರ್ಕಾರದ ಸಮರ್ಥನೆಗಿಂತ ಪ್ರತಿಭಟನೆಯ ಸಂದೇಶವೇ ವೇಗವಾಗಿ ಹರಡಿತು. ವಿಶೇಷವೆಂದರೆ ವಿರೋಧ ಪಕ್ಷಗಳು ಈ ಹೋರಾಟದ ಮುಖ್ಯ ಭೂಮಿಕೆಗೆ ಬರಲೇ ಇಲ್ಲ. ಇದು ಆಡಳಿತಾರೂಢ ಪಕ್ಷಕ್ಕೆ ದೊಡ್ಡ ಆಘಾತವಾಗಿತ್ತು.
ಜುಲೈ 20 ರಂದು ನಡೆದ ಪೋಲಿಸ್ ಕ್ರಮವು ಪ್ರತಿಭಟನಾಕಾರರನ್ನು ಹೆದರಿಸಿ ಹಿಂದೆ ಸರಿಯುವಂತೆ ಮಾಡುವ ಬದಲು, ಅವರ ನಿರ್ಧಾರವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಪೋಲಿಸ್ ಬಲಪ್ರಯೋಗದ ನಂತರವೂ ಹಿಂಜರಿಯದ ಯುವಕರ ಆಂದೋಲನವು ಸರ್ಕಾರದ ಲೆಕ್ಕಾಚಾರವನ್ನು ಬದಲಾಯಿಸಿತು. ದಣಿವು ಅಥವಾ ಮಾನಹಾನಿಗೆ ಹೆದರುವ ಸಂಘಟನೆಗಳೊಂದಿಗೆ ಸಂಧಾನ ನಡೆಸಿ ಅಭ್ಯಾಸವಿರುವ ಸರ್ಕಾರಕ್ಕೆ, ಯಾವುದೇ ಸಾಂಸ್ಥಿಕ ಹಿತಾಸಕ್ತಿಯಿಲ್ಲದೆ ಕೇವಲ ಆಕ್ರೋಶದಿಂದ ಮುನ್ನಡೆಯುವ ಯುವಜನತೆಯನ್ನು ನಿಯಂತ್ರಿಸುವುದು ಕಷ್ಟಕರವಾಯಿತು. ಸೋನಂ ವಾಂಗ್ಚುಕ್ ಅವರಂತಹ ನಾಯಕರು ತಮ್ಮ ನಿಲುವನ್ನು ಸಡಿಲಗೊಳಿಸಿದಾಗಲೂ, ಪ್ರತಿಭಟನಾಕಾರರು ಸಚಿವರ ರಾಜೀನಾಮೆ ಬೇಡಿಕೆಯನ್ನು ಜೀವಂತವಾಗಿರಿಸಿದರು. ಇದು ನಾಯಕತ್ವವು ಜನಸಾಮಾನ್ಯರಲ್ಲೇ ಹರಡಿದೆ ಎಂಬುದನ್ನು ತೋರಿಸಿತು.




