ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ರದ್ದುಗೊಳಿಸಿ, ರಾಜ್ಯ ಮಟ್ಟದ ಸಿಇಟಿ ಪರೀಕ್ಷಾ ವ್ಯವಸ್ಥೆಯನ್ನು ಮರುಜಾರಿಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ, ರಂಗಕರ್ಮಿ ಹಾಗೂ ಉಪನ್ಯಾಸಕರಾದ ರಾಮಾಂಜಿ ನಮ್ಮಭೂಮಿ ಅವರು ಶನಿವಾರ ಉಡುಪಿಯ ಕ್ಲಾಕ್ ಟವರ್ ಎದುರು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಏಕವ್ಯಕ್ತಿ ಉಪವಾಸ ಧರಣಿ ನಡೆಸಿದರು.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಅವರು, ಕೇಂದ್ರೀಕೃತ ನೀಟ್ ಪರೀಕ್ಷಾ ವ್ಯವಸ್ಥೆ ಗ್ರಾಮೀಣ ಪ್ರದೇಶದ ಹಾಗೂ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ದುಬಾರಿ ಕೋಚಿಂಗ್ ಕೇಂದ್ರಗಳ ಮೇಲೆ ಅವಲಂಬನೆ ಹೆಚ್ಚಿಸುವ ಮೂಲಕ ಅಸಮಾನತೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ನಿರಂತರ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಪ್ರಕ್ರಿಯೆಯಲ್ಲಿನ ಗೊಂದಲಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಮಾನಸಿಕ ಒತ್ತಡದಿಂದ ನೀಟ್ ವ್ಯವಸ್ಥೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ರಾಜ್ಯಗಳಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದ ಸಿಇಟಿ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಮಾನ ಶಿಕ್ಷಣದ ಹಕ್ಕು ಕಾಪಾಡುವ ಉದ್ದೇಶದಿಂದ ಈ ಏಕವ್ಯಕ್ತಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.







