ಪತ್ರಿಕೋದ್ಯಮದ ದಂತಕಥೆ, ದೇಶದ ಖ್ಯಾತ ಛಾಯಾಗ್ರಾಹಕರಲ್ಲಿ ಒಬ್ಬರಾದ ರಘು ರೈ ಭಾನುವಾರ ಮುಂಜಾನೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ರಘು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ 83 ವರ್ಷವಾಗಿತ್ತು.
ಈ ಬಗ್ಗೆ ಅವರ ಮಗ ಮತ್ತು ಛಾಯಾಗ್ರಾಹಕ ನಿತಿನ್ ರೈ ಪಿಟಿಐಗೆ ಮಾಹಿತಿ ನೀಡಿದ್ದಾರೆ. “ಎರಡು ವರ್ಷಗಳ ಹಿಂದೆ ಅಪ್ಪನಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆದರೆ ಅವರು ಗುಣಮುಖರಾದರು. ನಂತರ ಅದು ಹೊಟ್ಟೆಯಲ್ಲಿ ಹರಿಡಿತು. ಅದೂ ಸಹ ಗುಣವಾಯಿತು. ಇತ್ತೀಚೆಗೆ ಕ್ಯಾನ್ಸರ್ ಅವರ ಮೆದುಳಿಗೆ ಹರಡಿರುವುದು ತಿಳಿದುಬಂದಿದೆ. ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳೂ ಇದ್ದವು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? WWE ದಂತಕಥೆ ಹಲ್ಕ್ ಹೊಗನ್ ಹೃದಯಾಘಾತದಿಂದ ನಿಧನ
ರಘು ರೈ ಅವರು ಪತ್ನಿ ಗುರ್ಮೀತ್, ಮಗ ನಿತಿನ್ ಮತ್ತು ಹೆಣ್ಣುಮಕ್ಕಳಾದ ಲಗನ್, ಅವನಿ ಮತ್ತು ಪೂರ್ವೈ ಅವರನ್ನು ಅಗಲಿದ್ದಾರೆ. ಭಾನುವಾರ ಸಂಜೆ 4 ಗಂಟೆಗೆ ಲೋಧಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
1942ರಲ್ಲಿ ಅವಿಭಜಿತ ಭಾರತದ ಪಂಜಾಬ್‌ನ ಝಾಂಗ್‌ನಲ್ಲಿ (ಈಗಿನ ಪಾಕಿಸ್ತಾನ) ಜನಿಸಿದ ರಘು ರೈ ಅವರು ವಿಭಜನೆ ನಂತರ ಅವರ ಕುಟುಂಬ ಭಾರತಕ್ಕೆ ವಲಸೆ ಬಂದಿದೆ. 1965ರಲ್ಲಿ ಛಾಯಾಗ್ರಹಣವನ್ನು ಪ್ರಾರಂಭಿಸಿದ ರಘು, 1966ರಿಂದ 1976ರವರೆಗೆ ‘ದಿ ಸ್ಟೇಟ್ಸ್‌ಮನ್’ ಪತ್ರಿಕೆಯಲ್ಲಿ ಮುಖ್ಯ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದರು. ನಂತರ ‘ಇಂಡಿಯಾ ಟುಡೇ’ ಪತ್ರಿಕೆಯಲ್ಲಿ ಛಾಯಾಗ್ರಹಣ ವಿಭಾಗದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು.

1977ರಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಂಸ್ಥೆಯಾದ ‘ಮ್ಯಾಗ್ನಮ್ ಫೋಟೋಸ್’ ಗೆ ಆಯ್ಕೆಯಾದ ಮೊದಲ ಭಾರತೀಯ ಛಾಯಾಗ್ರಾಹಕ ಎಂಬ ಹೆಗ್ಗಳಿಕೆ ರಘು ರೈ ಅವರದ್ದು. 1984ರ ಭೋಪಾಲ್ ಗ್ಯಾಸ್ ದುರಂತದ ನಂತರ ಅವರು ತೆಗೆದ ಚಿತ್ರಗಳು ಪ್ರಪಂಚದಾದ್ಯಂತ ಸಂಚಲನ ಮೂಡಿಸಿದ್ದವು. ಅಲ್ಲದೆ, ಇಂದಿರಾ ಗಾಂಧಿ, ಮದರ್ ತೆರೇಸಾ ಮತ್ತು ದಲೈ ಲಾಮಾ ಅವರಂತಹ ಪ್ರಮುಖ ವ್ಯಕ್ತಿಗಳ ಚಿತ್ರದಲ್ಲಿ ರಘು ರೈ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು.
1972ರಲ್ಲಿ ಪದ್ಮಶ್ರೀ ಪ್ರಶಸ್ತಿ, 2019ರಲ್ಲಿ ಪ್ರತಿಷ್ಠಿತ ‘ವಿಲಿಯಂ ಕ್ಲೈನ್’ ಪ್ರಶಸ್ತಿ, ಫ್ರಾನ್ಸ್ ಸರ್ಕಾರದ ‘ಆಫೀಸರ್ ಆಫ್ ದಿ ಆರ್ಟ್ಸ್ ಅಂಡ್ ಲೆಟರ್ಸ್’ ಗೌರವ ರಘು ರೈ ಅವರಿಗೆ ಲಭಿಸಿದೆ. ಛಾಯಾಗ್ರಾಹಕ ಮಾತ್ರವಲ್ಲದೆ ರಘು ರೈ ಪುಸ್ತಕಗಳನ್ನೂ ಬರೆದಿದ್ದಾರೆ. ರಘು ರೈ ಅವರು ದೇಶದ ಇತಿಹಾಸ, ಸಂಸ್ಕೃತಿ ಮತ್ತು ದೈನಂದಿನ ಜೀವನವನ್ನು ಬಿಂಬಿಸುವ 55 ಕ್ಕೂ ಹೆಚ್ಚು ಚಿತ್ರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.





