ಸರ್ಕಾರಿ ಕಾನೂನು ಸಮಿತಿಗಳಲ್ಲಿ ವಕೀಲೆಯರಿಗೆ ಕನಿಷ್ಠ 30 ಪ್ರತಿಶತ ಮೀಸಲಾತಿ ನೀಡಬೇಕು ಎಂದು ಕೋರಿ ಲಾಡ್ಲಿ ಫೌಂಡೇಶನ್ ಟ್ರಸ್ಟ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಿದೆ.
ದೇಶದ 75 ವರ್ಷಗಳ ಇತಿಹಾಸದಲ್ಲಿ ಯಾವುದೇ ಮಹಿಳೆ ಅಟಾರ್ನಿ ಜನರಲ್ (AG) ಅಥವಾ ಸಾಲಿಸಿಟರ್ ಜನರಲ್ (SG) ಆಗಿ ನೇಮಕಗೊಂಡಿಲ್ಲ ಎಂಬ ಅಂಶವನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ ಪಾಂಚೋಲಿ ಅವರ ಪೀಠವು ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಇದನ್ನು ಓದಿದ್ದೀರಾ? ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ತರಾತುರಿ | ಕ್ಷೇತ್ರಗಳ ಮರುವಿಂಗಡನೆ ಸಂದರ್ಭದಲ್ಲೇ ಜಾರಿ?
ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ವಿಕಾಸ್ ಸಿಂಗ್ ವಾದ ಮಂಡಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ವಕೀಲೆಯರು ಎದುರಿಸುತ್ತಿರುವ ತೊಂದರೆಗಳ ಕುರಿತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯನ್ನು ಸಿಂಗ್ ಉಲ್ಲೇಖಿಸಿದರು. ವಕೀಲೆಯರನ್ನು ಸಮಿತಿಗಳಲ್ಲಿ ಸೇರಿಸಲಾಗಿದ್ದರೂ, ಅಗತ್ಯವಾಗಿ ಪ್ರಕರಣಗಳನ್ನು ಹಂಚಿಕೆ ಮಾಡಲಾಗುತ್ತಿಲ್ಲ. ಮಹಿಳಾ ವಕೀಲರಿಗೂ ಪ್ರಕರಣಗಳನ್ನು ಹಂಚಿಕೆ ಮಾಡಲಾಗಿದೆಯೇ ಎಂಬ ಖಚಿತಗಪಡಿಸಿಕೊಳ್ಳುವ ಕಾರ್ಯವಿಧಾನ ಇರಬೇಕು ಎಂದು ವಾದಿಸಿದರು.
ಸಂವಿಧಾನದ 14, 15(3), 19(1)(g) ಮತ್ತು 21 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಜಾರಿಯನ್ನು ಖಚಿತಪಡಿಸಿಕೊಳ್ಳಲು, ಎಲ್ಲ ಹೈಕೋರ್ಟ್ ಸಮಿತಿಗಳು, ಸರ್ಕಾರಿ ಕಾನೂನು ಅಧಿಕಾರಿ ಹುದ್ದೆಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರ/ಪಿಎಸ್‌ಯು ಎಂಪ್ಯಾನಲ್‌ಗಳಲ್ಲಿ ವಕೀಲೆಯರಿಗೆ ಕನಿಷ್ಠ 30% ಮೀಸಲಾತಿಯನ್ನು ಜಾರಿಗೆ ತರಲು ನಿರ್ದೇಶಿಸುವಂತೆ ಪಿಐಎಲ್ ಕೋರಿದೆ.
“ಮಹಿಳೆಯರು ಕಾನೂನು ಶಾಲೆಗಳು ಮತ್ತು ಕಾನೂನು ವೃತ್ತಿಯನ್ನು ಗಣನೀಯ ಸಂಖ್ಯೆಯಲ್ಲಿ ಪ್ರವೇಶಿಸುತ್ತಿದ್ದಾರೆ. ಆದರೂ ವೃತ್ತಿಪರ ಅಧಿಕಾರದ ಸ್ಥಾನಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀವ್ರವಾಗಿ ಕುಸಿಯುತ್ತಿದೆ. ದೇಶದಾದ್ಯಂತ ದಾಖಲಾಗಿರುವ ಸುಮಾರು 1.54 ಮಿಲಿಯನ್ ವಕೀಲರಲ್ಲಿ ಕೇವಲ 284507 ಮಹಿಳೆಯರು ಮಾತ್ರ ಇದ್ದಾರೆ. ಇದು ಕಾನೂನು ಕಾರ್ಯಪಡೆಯ ಸರಿಸುಮಾರು 15.31% ರಷ್ಟಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
1989ರಲ್ಲಿ ನ್ಯಾಯಮೂರ್ತಿ ಫಾತಿಮಾ ಬೀವಿ ಅವರು ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದಿದ್ದಾರೆ. ಅದಾದ ಬಳಿಕ ಈವರೆಗೆ 11 ಮಹಿಳೆಯರು ಮಾತ್ರ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದಿದ್ದಾರೆ. ಉನ್ನತ ನ್ಯಾಯಾಂಗದಲ್ಲಿಯೂ ಅಸಮತೋಲನವು ಪ್ರತಿಫಲಿಸುತ್ತದೆ. ಸ್ವಾತಂತ್ರ್ಯದ ನಂತರ, ಭಾರತದ ಅಟಾರ್ನಿ ಜನರಲ್ ಅಥವಾ ಭಾರತದ ಸಾಲಿಸಿಟರ್ ಜನರಲ್ ಆಗಿ ಯಾವುದೇ ಮಹಿಳಾ ವಕೀಲರನ್ನು ನೇಮಿಸಲಾಗಿಲ್ಲ. ವಾಸ್ತವವಾಗಿ, ಹೈಕೋರ್ಟ್‌ಗಳಿಗೆ ನಿಯೋಜಿಸಲಾದ ಯಾವುದೇ ಎಎಸ್‌ಜಿಗಳು ಮಹಿಳೆಯರಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? 2023ರಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಮಸೂದೆಯನ್ನು ಮೋದಿ ಸರ್ಕಾರ ಜಾರಿ ಮಾಡಬಹುದಲ್ಲವೇ?
ವಿಚಾರಣೆಯ ಸಮಯದಲ್ಲಿ, ಹಿರಿಯ ವಕೀಲೆ ಡಾ. ಮೋನಿಕಾ ಗುಸೇನ್ ಅವರು ಹರಿಯಾಣದಲ್ಲಿ, ಹಿರಿಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆ ರಚನೆಯಾದಾಗಿನಿಂದ ಯಾವುದೇ ಮಹಿಳಾ ವಕೀಲರನ್ನು ನೇಮಿಸಲಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಈ ವೇಳೆ ಎಎಜಿ ಹುದ್ದೆಯಲ್ಲಿ ಹಲವಾರು ಮಹಿಳಾ ವಕೀಲರನ್ನು ನೇಮಿಸಲಾಗಿದೆ ಎಂದು ಸಿಜೆಐ ಹೇಳಿದರು. “ಹೌದು ಎಎಜಿ ಹುದ್ದೆಯಲ್ಲಿ ಮಹಿಳೆಯರಿದ್ದಾರೆ. ಮಾಸಿಕ ಸ್ಟೈಫಂಡ್‌ಗಳನ್ನು ಸಹ ಪಡೆಯುತ್ತಿದ್ದಾರೆ. ಆದರೆ ಒಂದು ತಿಂಗಳು ಪೂರ್ತಿ ಪ್ರಕರಣಗಳನ್ನು ಅವರಿಗೆ ನೀಡಲಾಗಲ್ಲ” ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದರು.
ಇದಕ್ಕೆ ಪ್ರತಿಯಾಗಿ ಸಿಜೆಐ, “ಸೀನಿಯರ್ ಎಎಜಿ ಬಗ್ಗೆ ಏಕೆ ಮಾತನಾಡುತ್ತೀರಿ? ಸೀನಿಯರ್ ಎಎಜಿ ಎಎಜಿಗಿಂತ ಕೇವಲ ಒಂದು ಹೆಜ್ಜೆ ಮೇಲಿದೆ ಅಷ್ಟೇ” ಎಂದರು. ಇದಕ್ಕೆ ಉತ್ತರಿಸಿದ ಹಿರಿಯ ವಕೀಲೆ ಡಾ. ಮೋನಿಕಾ ಗುಸೇನ್, “ಇದು ಅಡ್ವೊಕೇಟ್ ಜನರಲ್‌ಗಿಂತ ಒಂದು ಹೆಜ್ಜೆ ಕಡಿಮೆ” ಎಂದು ವ್ಯಂಗ್ಯವಾಗಿಯೇ ಹೇಳಿದರು.
ಬಳಿಕ ಅಂತಹ ನಾಮಕರಣ (ಸೀನಿಯರ್ ಎಎಜಿ) ರಚನೆಗೆ ಒಪ್ಪುವುದಿಲ್ಲ ಎಂದು ಸಿಜೆಐ ಹೇಳಿದರು. ಹಾಗೆಯೇ ದೇಶದಲ್ಲಿ ಯಾವುದೇ ಮಹಿಳಾ ಅಡ್ವೊಕೇಟ್ ಜನರಲ್‌ಗಳು ಇದ್ದಾರೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ವಿಕಾಸ್ ಸಿಂಗ್ ಮತ್ತು ಗುಸೇನ್ ಇಲ್ಲಿಯವರೆಗೆ ಕೇವಲ ಒಂದಿಬ್ಬರು ಮಾತ್ರ ಇದ್ದಾರೆ. ಈ ನಿಟ್ಟಿನಲ್ಲಿ ಅಗತ್ಯವಾದ ಡೇಟಾ ಲಭ್ಯವಿಲ್ಲ ಮತ್ತು ರಾಜ್ಯಗಳು ಪ್ರಶ್ನೆಗೆ ಉತ್ತರಿಸಬೇಕು ಎಂದು ಹೇಳಿದರು. ಈ ಬಳಿಕ ಸುಪ್ರೀಂ ಕೋರ್ಟ್ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಿದೆ.




