ಸರ್ ಸಿದ್ಧಪ್ಪ ಕಂಬಳಿಯವರನ್ನು ಕಾಂಗ್ರೆಸ್ ಸಂಸ್ಥೆಗೆ ಸೇರಿಸಿಕೊಳ್ಳಲು ಗಾಂಧೀಜಿ ಬಹಳಷ್ಟು ಪ್ರಯತ್ನ ಮಾಡಿದರೂ ಕಂಬಳಿಯವರು ಬ್ರಾಹ್ಮಣ ಪ್ರಾಬಲ್ಯದ ಕಾಂಗ್ರೆಸ್ ಕಡೆ ಮುಖ ಮಾಡದೆ ಬ್ರಾಹ್ಮಣೇತರ ಚಳವಳಿಯಲ್ಲಿ ತೊಡಗಿಸಿಕೊಂಡರು. ಕರ್ನಾಟಕ ಏಕೀಕರಣ ಚಳವಳಿಯನ್ನು ಆರಂಭಿಸಿದ್ದೇ ಕಂಬಳಿಯವರು.
ಈ ನಾಡಿಗೆ ಪಂಚಮಸಾಲಿ ಸಮಾಜದ ಹಿರಿಯರ ಕೊಡುಗೆ ಅಪಾರವಾಗಿದೆ. ಸರ್ ಸಿದ್ಧಪ್ಪ ಕಂಬಳಿಯವರು ಬ್ರಾಹ್ಮಣೇತರ ಚಳವಳಿಯನ್ನು ಕಟ್ಟಿ ಬೆಳೆಸಿ ಅಂದಿನ ಬ್ರಿಟಿಷ್ ಭಾರತದ ರಾಜಕೀಯ ಹಾಗು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದ್ದರು. ಅವರು ಮುಂಬೈ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾಗ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಳಿಸಿದ್ದರು ಎಂದು ಪಾಟೀಲ ಪುಟ್ಟಪ್ಪನವರು “ಸರ್ ಸಾಹೇಬರು” ಗ್ರಂಥದಲ್ಲಿ ಬರೆದಿದ್ದಾರೆ. ಸರ್ ಸಿದ್ಧಪ್ಪ ಕಂಬಳಿಯವರನ್ನು ಕಾಂಗ್ರೆಸ್ ಸಂಸ್ಥೆಗೆ ಸೇರಿಸಿಕೊಳ್ಳಲು ಗಾಂಧೀಜಿ ಬಹಳಷ್ಟು ಪ್ರಯತ್ನ ಮಾಡಿದರೂ ಕಂಬಳಿಯವರು ಬ್ರಾಹ್ಮಣ ಪ್ರಾಬಲ್ಯದ ಕಾಂಗ್ರೆಸ್ ಕಡೆ ಮುಖ ಮಾಡದೆ ಬ್ರಾಹ್ಮಣೇತರ ಚಳವಳಿಯಲ್ಲಿ ತೊಡಗಿಸಿಕೊಂಡರು. ಕರ್ನಾಟಕ ಏಕೀಕರಣ ಚಳವಳಿಯನ್ನು ಆರಂಭಿಸಿದ್ದೇ ಕಂಬಳಿಯವರು, ಅದನ್ನು ಮುಂದೆ ವಿವರವಾಗಿ ಬರೆಯುತ್ತೇನೆ. ಕಂಬಳಿಯವರು ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದಾಗ ಅಲ್ಲಿದ್ದವರೆಲ್ಲರೂ ಬ್ರಾಹ್ಮಣರು. ಕಂಬಳಿಯವರನ್ನು ಆ ಬ್ರಾಹ್ಮಣರು ಬಹಳ ಕೀಳಾಗಿ ಕಾಣುತ್ತಿದ್ದರು. ಇಂಗ್ಲೀಷ್, ಮರಾಠಿ ಹಾಗು ಕನ್ನಡ ಬಲ್ಲವರು ತಾವು ಮಾತ್ರ ಎಂದು ಹೀಯಾಳಿಸುತ್ತಿದ್ದರು. ಬ್ರಾಹ್ಮಣರ ಸವಾಲನ್ನು ಸಮರ್ಥವಾಗಿ ಎದುರಿಸಿ ಕೆಲವೇ ದಿನಗಳಲ್ಲಿ ಕಂಬಳಿಯವರು ಒಬ್ಬ ಜನಪ್ರಿಯ ವಕೀಲರಾಗಿ ಹೊರಹೊಮ್ಮಿದರು.
ಕರ್ನಾಟಕದ ಮುಂಬೈ ಪ್ರಾಂತ್ಯ ಅಂದರೆ ಇಂದಿನ ಧಾರವಾಡ ವಿಭಾಗವನ್ನು ಅಂದು ದಕ್ಷಿಣ ಮಹಾರಾಷ್ಟ್ರ ಎಂದು ಗುರುತಿಸಲಾಗುತ್ತಿತ್ತು. ಈ ಭಾಗದಲ್ಲಿ ಅಂದು ಬ್ರಾಹ್ಮಣರದ್ದೇ ಪ್ರಾಬಲ್ಯವಿತ್ತು. ಮೇಲಾಗಿ ಈ ಬ್ರಾಹ್ಮಣರು ಮರಾಠಿ ಮೂಲದವರಾಗಿದ್ದು ಧಾರವಾಡ, ಬೆಳಗಾವಿ ಎಲ್ಲವೂ ಮರಾಠಿಮಯವಾಗಿತ್ತು. ಕಂಬಳಿಯವರು ಕನ್ನಡದ ವಾತಾವರಣವನ್ನು ನಿರ್ಮಿಸಲು ಸತತ ಪ್ರಯತ್ನಿಸಿದರು. 1928-29 ರಲ್ಲಿ ಮದ್ರಾಸ್ ಬಂದರಿಗೆ ಬಂದಿಳಿದ ಸೈಮನ್ ಆಯೋಗದ ಎದುರು ಕೆಲವು ಸಮಸ್ಯೆಗಳ ಕುರಿತು ಭೇಟಿಯಾಗಲು ಆಲೂರು ವೆಂಕಟರಾಯರ ಜೊತೆ ಕಂಬಳಿಯವರು ಹೋಗಿದ್ದರು. ಆಗ ಕರ್ನಾಟಕ ಏಕೀಕರಣಕ್ಕಾಗಿ ಮನವಿ ಸಲ್ಲಿಸಲು ಕಂಬಳಿಯವರು ಆಲೂರು ವೆಂಕಟರಾಯರಿಗೆ ಸಲಹೆ ನೀಡಿದರು. ಆದರೆ ವೆಂಕಟರಾಯ ಕಂಬಳಿಯವರ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ. ಅದೇ ಸಂದರ್ಭದಲ್ಲಿ ಅಸ್ಸಾಂ ಮತ್ತು ಬಂಗಾಲ ಏಕೀಕರಣಕ್ಕೆ ತೀವ್ರ ಪ್ರಯತ್ನಿಸಿ ಯಶಸ್ಸು ಕಂಡಿದ್ದವು. ಆಗ ವೆಂಕಟರಾಯ ಕಂಬಳಿಯವರ ಮಾತು ಕೇಳಿದ್ದರೆ ಕರ್ನಾಟಕ ಏಕೀಕರಣ ಅಂದೇ ಆಗಿ ಹೋಗುತ್ತಿತ್ತು. ಕಂಬಳಿಯವರ ಬ್ರಾಹ್ಮಣೇತರ ಸಿದ್ಧಾಂತ ಕಾಂಗ್ರೆಸ್ ಬ್ರಾಹ್ಮಣರಾಗಿದ್ದ ಆಲೂರು ವೆಂಕಟರಾಯರಿಗೆ ಇಷ್ಟವಾಗುತ್ತಿರಲಿಲ್ಲ. ಏಕೀಕರಣದ ಶ್ರೇಯ ಲಿಂಗಾಯತರಿಗೆ ಸಿಗಬಾರದು ಎಂದು ಈ so called ಬುದ್ದಿವಂತರು ಸದಾ ಎಚ್ಚರಿಕೆ ವಹಿಸುತ್ತಿದ್ದರು. ಈ ಕಾರಣದಿಂದ ಕಂಬಳಿಯವರ ಕರ್ನಾಟಕ ಏಕೀಕರಣ ಕನಸು ಸ್ವಾತಂತ್ರ್ಯದ ನಂತರ ನೆರವೇರಿತು.

This video cannot be played in your browser. Open the video directly
ಮುಂದೆ 1952-53ರಲ್ಲಿ ಆಂಧ್ರ ಪ್ರದೇಶದ ಏಕೀಕರಣ ಆಗಿ ಬಳ್ಳಾರಿ ಕರ್ನಾಟಕದಲ್ಲಿ ಉಳಿಯಿತು. ಬಳ್ಳಾರಿಯ ಕನ್ನಡಿಗರಿಗೆ ಇದು ಖುಷಿಯ ವಿಚಾರವಾಗಿತ್ತು. ಅದನ್ನು ಸಂಭ್ರಮಿಸಲು ಬಳ್ಳಾರಿಯಲ್ಲಿ ಕಾರ್ಯಕ್ರಮವೊಂದು ಆಯೋಜಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಬಳ್ಳಾರಿ ತೆಲುಗರು ಕಾರ್ಯಕ್ರಮದ ಬಿಡಾರಕ್ಕೆ ಬೆಂಕಿ ಹಾಕಿದರು. ಆ ಗಲಭೆಯಲ್ಲಿ ರಮ್ಜಾನ್ ಸಾಹೇಬ್ ಎನ್ನುವ ಕನ್ನಡಿಗ ಯುವಕ ಮೃತಪಟ್ಟಿದ್ದ. ಇದರಿಂದ ರಾಜ್ಯದಲ್ಲಯೂ ಕರ್ನಾಟಕ ಏಕೀಕರಣದ ಕೂಗು ತೀವ್ರತೆ ಪಡೆಯಿತು. ಆಗ ಪಂಚಮಸಾಲಿ ಲಿಂಗಾಯತ ಸಮುದಾಯದ ಅದರಗುಂಚಿ ಶಂಕರಗೌಡ ಪಾಟೀಲರು ಕರ್ನಾಟಕ ಏಕೀಕರಣಕ್ಕೆ ದೊಡ್ಡ ಮಟ್ಟದ ಧ್ವನಿ ಎತ್ತಿದರು. ಅಂದಿನ ಅವಿಭಜಿತ ಧಾರವಾಡ ಜಿಲ್ಲೆಯ ಅದರಗುಂಚಿ ಗ್ರಾಮದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಗಾಂಧಿ ಮಾರ್ಗದಲ್ಲಿ ಸುದೀರ್ಘ 23 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಬಹುಶಃ ಗಾಂಧೀಜಿಯವರಿಗಿಂತ ದೀರ್ಘಾವಧಿ ಉಪವಾಸ ಸತ್ಯಾಗ್ರಹ ಮಾಡಿದವರೆಂದರೆ ಅದರಗುಂಚಿ ಶಂಕರಗೌಡ ಪಾಟೀಲರು. ಅವರ ಸತ್ಯಾಗ್ರಹದ ವಿಷಯ ಕನ್ನಡದ ಯಾವ ಮಾಧ್ಯಮದಲ್ಲಿಯೂ ಸುದ್ದಿಯಾಗಲಿಲ್ಲ. ಆಗ ಶಂಕರಗೌಡರನ್ನು ಬೆಂಬಲಿಸಿ ಜಿಲ್ಲೆಯ ರೈತರು ಹುಬ್ಬಳ್ಳಿಯ ಗುಳ್ಳವ್ವನ ಕೆರೆ (ನೆಹರು ಮೈದಾನ) ಯಲ್ಲಿ ಬೃಹತ್ ಚಕ್ಕಡಿ ಬಂಡಿಗಳ ಸಮೇತ ಪ್ರತಿಭಟನೆ ಹಮ್ಮಿಕೊಂಡರು. ಈ ಪ್ರತಿಭಟನೆಯ ಸಂಗತಿ ಕೂಡ ಕನ್ನಡದ ಯಾವುದೇ ಪತ್ರಿಕೆಗಳಲ್ಲಿ ಸುದ್ದಿಯಾಗಲಿಲ್ಲ.
ರೈತರ ಪ್ರತಿಭಟನೆ ನಡೆದದ್ದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ, ಅದರ ಕೂಗಳತಿಯಲ್ಲಿರುವ ಕನ್ನಡದ ಮಾಧ್ಯಮಗಳೂ ಸಹ ಇದನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಲಿಲ್ಲ. ಆದರೆ, ಈ ವಿಷಯ ವಿದೇಶಿ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಸುದ್ದಿಯಿಂದ ಗಾಬರಿಯಾದ ಎಸ್ ನಿಜಲಿಂಗಪ್ಪನವರು ಅದರಗುಂಚಿಗೆ ದೌಡಾಯಿಸಿದರು. ಏಕೀಕರಣಕ್ಕಾಗಿ ತಾವು ಪ್ರಧಾನಿ ನೆಹರು ಅವರ ಜೊತೆ ಮಾತನಾಡಿ ಭಾಷಾವಾರು ಪ್ರಾಂತ್ಯಗಳ ರಚನೆ ಹಾಗು ಏಕೀಕರಣದ ಭರವಸೆಯನ್ನು ಶಂಕರಗೌಡರಿಗೆ ನೀಡಿ ಅವರ ಸತ್ಯಾಗ್ರಹವನ್ನು ನಿಜಲಿಂಗಪ್ಪನವರು ಕೊನೆಗೊಳಿಸಿದರು. ಶಂಗರಗೌಡರು ಏಕೀಕರಣಕ್ಕಾಗಿ ಗಾಂಧಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಾಗ ಕರ್ನಾಟಕ ಏಕೀಕರಣದ ರೂವಾರಿಗಳೆಂದು ಕರೆಸಿಕೊಳ್ಳುವ ಕೆಲವು ನಾಯಕರು ಅವರನ್ನು ಸೌಜನ್ಯಕ್ಕಾದರೂ ಬಂದು ಭೇಟಿಯಾಗಿರಲಿಲ್ಲ, ಮತ್ತು ಅದಕ್ಕಾಗಿ ಅವರನ್ನು ಬೆಂಬಲಿಸಲಿಲ್ಲ. ಆಗ ಶಂಕರಗೌಡರನ್ನು ಬೆಂಬಲಿಸಿದವರು ಆ ಭಾಗದ ನಾಡಪ್ರೇಮಿ, ಕನ್ನಡ ಪ್ರೇಮಿ ರೈತರು ಮತ್ತು ಸತ್ಯಾಗ್ರಹ ನಿಲ್ಲಿಸಿದವರು ಎಸ್ ನಿಜಲಿಂಗಪ್ಪನವರು. ದುರಂತವೆಂದರೆ, ಕರ್ನಾಟಕ ಏಕೀಕರಣಗೊಂಡ ಮೇಲೆ ಕನ್ನಡದ ಕುಲಪುರೋಹಿತ ಎಂದು ಬೇರೆ ಇನ್ನಾರೊ ಕರೆಸಿಕೊಳ್ಳುವಂತಾಗಿಗಿದ್ದು. ಇಂದಿಗೂ ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರ ಪಟ್ಟಿಯಲ್ಲಿ ಅದರಗುಂಚಿ ಶಂಕರಗೌಡ ಪಾಟೀಲರ ಹೆಸರು ಇಲ್ಲದಿರುವುದು.
ಲಿಂಗಾಯತ ಪಂಚಮಸಾಲಿ ಉಪವರ್ಗಕ್ಕೆ ಸೇರಿದ ಮತ್ತೊಬ್ಬ ಶ್ರೇಷ್ಠ ದಾರ್ಶನಿಕ, ವಿದ್ವಾಂಸ ಉತ್ತಂಗಿ ಚೆನ್ನಪ್ಪನವರು. ಇವರು 1881ನೆಯ ಅಕ್ಟೋಬರ್ 28ರಂದು ಧಾರವಾಡದಲ್ಲಿ ಅನಾಥಾಶ್ರಮದ ಮೇಲ್ವಿಚಾರಕ ಹಾಗು ಶಿಕ್ಷಕರಾಗಿದ್ದ ದಾನಿಯೇಲಪ್ಪ, ಮತ್ತು ಸುಭದ್ರಮ್ಮ ದಂಪತಿಗಳಿಗೆ ಜನಿಸಿದರು. ಚೆನ್ನಪ್ಪನರ ಮೂಲಸ್ಥಳ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಉತ್ತಂಗಿ ಎಂಬ ಹಳ್ಳಿಯ ಗೌಡರ ಮನೆತನ. ಎರಡು ತಲೆಮಾರಿನ ಹಿಂದೆಯೇ ಇವರ ಹಿರಿಯರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರೂ ತಮ್ಮ ಊರು ಉತ್ತಂಗಿ ಹಾಗು ಲಿಂಗಾಯತ ಧರ್ಮದ ಬಗೆಗೆ ಅವರಿಗೆ ಅಪಾರ ಅಭಿಮಾನ. ತಿರುಳು ಗನ್ನಡದ ತಿರುಕ ಎಂಬ ಕಾವ್ಯ ನಾಮದಿಂದ ಸಾಹಿತ್ಯ ಸೇವೆ ಆರಂಭಿಸಿದರು. ಬ್ರಿಟಿಷರ ಆಡಳಿತದಲ್ಲಿ ರೆವರೆಂಡ್ ಕಿಟಲ್, ಬಿ ಎಲ್ ರೈಸ್ ಅವರ ಪರಂಪರೆಯನ್ನು ಮುಂದುವರಿಸಿ ಕನ್ನಡದ ಜನಪದದಲ್ಲಿ ಶಿವಶರಣರ ವಚನಗಳನ್ನು ಮತ್ತು ತ್ರಿಪದಿ ಕವಿ ಸರ್ವಜ್ಞನ ಕುರಿತು ಆಳವಾದ ಸಂಶೋಧನೆಯನ್ನು ಮಾಡಿದರು. ಸರ್ವಜ್ಞನ ಏಕದೇವೋಪಾಸನೆ, ಜಾತಿ ವ್ಯವಸ್ಥೆಯ ಖಂಡನೆ, ವಿಶ್ವಧರ್ಮದ ಪ್ರತಿಪಾದನೆಗಳು ಮತ್ತು ಕ್ರಿಸ್ತನ ಬೋಧನೆಗಳಲ್ಲಿ ಸಾಮ್ಯತೆ ಕಂಡಿತು. ವಚನಗಳ ಸಂಪಾದನೆಯನ್ನು ಪೀಠಿಕೆ, ಪರಿಶಿಷ್ಟ, ಟಿಪ್ಪಣಿ, ಅಕ್ಷರಾನುಸಾರ ಅನುಕ್ರಣಿಕೆ, ವಿವಿಧ ಮೂಲಗಳ ಉಲ್ಲೇಖ, ಶುದ್ಧರೂಪದ ನಿರ್ಧಾರಗಳನ್ನು ಅಳವಡಿಸಿಕೊಂಡು ಆಧುನಿಕ ಸಂಪಾದನಾಶಾಸ್ತ್ರದ ಪ್ರಕಾರ ಸರ್ವಜ್ಞನ 7000 ವಚನಗಳ ಸಂಗ್ರಹವನ್ನು 1924ರಲ್ಲಿ ಪ್ರಕಟಿಸಿದರು.
ಇದನ್ನೂ ಓದಿ ಪಂಚಮಸಾಲಿ ಪೀಠಗಳ ಗೊಂದಲ- ಭಾಗ 8: ರಾಜಕೀಯ ಸ್ಥಾನಮಾನಗಳಿಗೆ ಹುಟ್ಟಿದ ಸಂಘಟನೆಗಳು ಇಡೀ ಸಮುದಾಯದ ಹಿತಾಸಕ್ತಿ ಕಾಯಲಾರವು
ಶರಣ ಸಾಹಿತ್ಯದಲ್ಲಿ ಅವರಿಗಿದ್ದ ಆಸಕ್ತಿ ಸಹಜವಾಗಿ ಅನೇಕ ವಿದ್ವಾಂಸರ ಗಮನ ಸೆಳೆಯಿತು. ಭೂಸನೂರುಮಠ ಅವರೊಂದಿಗೆ ಸೇರಿ ಮೋಳಿಗೆ ಮಾರಯ್ಯ ಮತ್ತು ಇತರ ಶರಣರ ವಚನ ಸಂಗ್ರಹದ ಕೆಲಸ ಪ್ರಾರಂಭಿಸಿ, ಮೋಳಿಗೆ ಮಾರಯ್ಯ ಮತ್ತು ಶರಣೆ ಮೋಳಿಗೆ ಮಹದೇವಿಯ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಅದೇ ಕಾಲಕ್ಕೆ ಕಲಬುರ್ಗಿಯ ಬ್ರಾಹ್ಮಣ ವಕೀಲ ಕಪಟರಾಳ್ ಕೃಷ್ಣರಾಯ ಕಲ್ಯಾಣದಲ್ಲಿ ‘ಅನುಭವ ಮಂಟಪ’ ಇರಲೇಯಿಲ್ಲ ಎಂದು ತಗಾದೆ ತೆಗೆದಿದ್ದ. ನಾಡಿನಲ್ಲಿ ಬಹಳ ದೊಡ್ಡ ದೊಡ್ಡ ಮಠಾಧೀಶರಿದ್ದರು, ಅವರಲ್ಲಿ ಕೆಲವರು ಇಡೀ ಲಿಂಗಾಯತ ಧರ್ಮ ನಾನೇ ಉದ್ಧರಿಸಿದವನು ಎಂದುಕೊಳ್ಳುವವರಿದ್ದರು. ದೊಡ್ಡ ದೊಡ್ಡ ಕೆಲಸಕ್ಕೆ ಬಾರದ ಸಂಸ್ಥೆಗಳನ್ನು ಲಿಂಗಾಯತರ ಹಣದಲ್ಲಿ ಕಟ್ಟಿಸಿ ಶ್ರೇಯ ತಾವು ತೆಗೆದುಕೊಂಡ ಅವಕಾಶವಾದಿ ಮಠಾಧೀಶರೂ ಇದ್ದರು. ಆದರೆ ಇವರಾರೂ ಕಪಟರಾಳನ ಉದ್ಧಟತನದ ತಗಾದೆಗೆ ಉತ್ತರಿಸುವ ಧೈರ್ಯ ತೋರಲಿಲ್ಲ. ಆಗ ಆಳವಾದ ಅಧ್ಯಯನದ ಮೂಲಕ ಅನುಭವ ಮಂಟಪದ ಐತಿಹಾಸಿಕತೆಯ ಕುರಿತ ಒಂದು ಅಮೂಲ್ಯವಾದ ಗ್ರಂಥವನ್ನು ರಚಿಸಿದವರು ಉತ್ತಂಗಿ ಚನ್ನಪ್ಪನವರು. ಆಗ ಬ್ರಾಹ್ಮಣ ಕಪಟರಾಯನ ಸೊಕ್ಕು ಮಣ್ಣುಪಾಲಾಯಿತು. ಸೊಲ್ಲಾಪುರದ ಸಿದ್ದರಾಮನ ಲಿಂಗದೀಕ್ಷೆಯ ಕುರಿತು ಸಹ ಇದೇ ಬಗೆಯ ವಾದ ವಿವಾದವಿತ್ತು. ಜಯದೇವಿತಾಯಿ ಲಿಗಾಡೆಯವರ ಮನವಿಯ ಮೇರೆಗೆ ಈ ವಿಷಯದಲ್ಲಿ ಸಂಶೋಧನೆ ಮಾಡಿ ‘ಸಿದ್ಧರಾಮ ಚರಿತ್ರೆ’ ಸಿದ್ಧಪಡಿಸಿ ಸತ್ಯವನ್ನು ನಿರೂಪಿಸಿದರು.
ಅದಕ್ಕೆ ಕರ್ನಾಟಕ ಸರ್ಕಾರದ ದೇವರಾಜ ಬಹದ್ದೂರ್ ಪ್ರಶಸ್ತಿಯೂ ಬಂದಿತು. ನಂತರ ಶರಣ ಆದಯ್ಯನವರ ವಚನಗಳ ಸಂಗ್ರಹವನ್ನೂ ಹೊರ ತಂದರು. ಲಿಂಗಾಯತ ಧರ್ಮದ ಷಟಸ್ಥಳ ತತ್ವಗಳು ಮತ್ತು ಯೇಸುವಿನ ನಡೆನುಡಿಯಲ್ಲಿ ಬಹಳ ಸಾಮ್ಯತೆ ಇರುವುದನ್ನು ಗುರುತಿಸಿ ಕ್ರೈಸ್ತ ಮತ್ತು ಲಿಂಗಾಯತ ಧರ್ಮಗಳ ನಡುವಿನ ಸಾಮರಸ್ಯದ ಸೇತುವೆಯಾದರು. ಲಿಂಗಾಯತ ಧರ್ಮದ ಕುರಿತು ಅವರು ಒಟ್ಟು 9 ಕೃತಿಗಳನ್ನು ರಚಿಸಿದರು.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ




