ವಿದ್ಯಾರ್ಥಿಗಳಿಗೆ ಅನ್ಯಧರ್ಮಿಯ ಪ್ರಾರ್ಥನೆಯನ್ನು ಹಾಡಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿರುವ ಘಟನೆ ಪುಣೆ ತಾಲೇಗಾಂವ್ ದಭಾಡೆ ಪಟ್ಟಣದ ಡಿ ವೈ ಪಾಟೀಲ್ ಪ್ರೌಢಶಾಲೆಯಲ್ಲಿ ನಡೆದಿದೆ.
ಅಲೆಕ್ಸಾಂಡರ್, ಹಲ್ಲೆಗೊಳಗಾದ ಪ್ರಾಂಶುಪಾಲರು. ಪ್ರಾಂಶುಪಾಲರನ್ನು ಶಾಲೆಯ ಆವರಣದಲ್ಲೇ ಅಟ್ಟಾಡಿಸಿ ಹಲ್ಲೆ ನಡೆಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. “ಹರ್ ಹರ್ ಮಹಾದೇವ್” ಎಂದು ಕೂಗುತ್ತಾ ಬಂದ 100ಕ್ಕೂ ಹೆಚ್ಚು ಜನರ ಗುಂಪು ಪ್ರಾಂಶುಪಾಲರನ್ನು ಮನಬಂದಂತೆ ಹಲ್ಲೆ ನಡೆಸಿದೆ.
ವಿಡಿಯೋಗಳಲ್ಲಿ ಸೆರೆಯಾಗಿರುವಂತೆ, ಹಲ್ಲೆಯಿಂದ ಮೆಟ್ಟಿಲುಗಳ ಮೇಲೆ ಹರಿದ ಅಂಗಿಯಲ್ಲಿ ಪ್ರಾಂಶುಪಾಲರು ಹೋಗುತ್ತಿದ್ದಾಗ ಹಿಂದೂ ಸಂಘಟನೆಯ ಒಬ್ಬಾತ ಹಲ್ಲೆ ನಡೆಸುತ್ತಾನೆ. ಇತರರು ಆತನನ್ನು ತಡೆದರು. ಅಲ್ಲದೆ ವಿದ್ಯಾರ್ಥಿಗಳ ಶೌಚಗೃಹದ ಬಳಿ ಸಿಸಿ ಟಿವಿ ಅಳವಡಿಸಿರುವುದಕ್ಕೆ ಹಲ್ಲೆ ನಡೆಸಿದ ಗುಂಪು ಆಕ್ಷೇಪಿಸಿದೆ.
ಈ ಸುದ್ದಿ ಓದಿದ್ದೀರಾ? ಥ್ರೆಡ್ಸ್: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕೋಟಿ ಮಂದಿ ಇನ್‌ಸ್ಟಾಲ್; ಆ್ಯಪ್‌ನಲ್ಲಿರುವ ವಿಶೇಷತೆಗಳೇನು?
ಪುಣೆ ತಾಲೇಗಾಂವ್ ಎಂಐಡಿಸಿ ಪ್ರದೇಶದ ಪೊಲೀಸ್ ಅಧಿಕಾರಿ ರಂಜಿತ್ ಸಾವಂತ್ ಮಾತನಾಡಿ, ಕೆಲವು ಪೋಷಕರು, ಹಿಂದುತ್ವ ಸಂಘಟನೆಗೆ ಸೇರಿದ ಗುಂಪಿನೊಂದಿಗೆ ಸೇರಿಕೊಂಡು ಪ್ರಾಂಶುಪಾಲರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕಾರ್ಯಕರ್ತರು ಆಕ್ಷೇಪಿಸಿದಂತೆ ಸಿಸಿ ಟಿವಿಯು ಶೌಚಾಲಯದ ಮಾರ್ಗದಲ್ಲಿಲ್ಲ, ಹೊರ ಭಾಗದಲ್ಲಿದೆ. ಅದೇ ರೀತಿ ಪ್ರತಿದಿನ ಬೆಳಿಗ್ಗೆ ಹಾಡುವ ಅನ್ಯ ಸಮುದಾಯದ ಪ್ರಾರ್ಥನೆ ಸಾಮಾನ್ಯ ಪ್ರಾರ್ಥನೆಯಾಗಿದೆ. ಇದು ಬೈಬಲಿನ ಒಂದು ಪದ್ಯ. ಇದರಲ್ಲಿ ಮತಾಂತರದ ಯಾವುದೇ ಪ್ರಚೋದನೆಯಿಲ್ಲ” ಎಂದು ತಿಳಿಸಿದರು.
ಪೋಷಕರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಅಧಿಕಾರಿಗಳು ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.