ರಾಜಸ್ಥಾನದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದ್ದು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಆದರೆ ಬಿಜೆಪಿ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೇ ಭದ್ರಕೋಟೆಯನ್ನು ಕಾಂಗ್ರೆಸ್ ಭೇದಿಸಿದೆ. ಇದರಿಂದಾಗಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ರಾಜ್ಯದ 309 ನಗರ ಸ್ಥಳೀಯ ಸಂಸ್ಥೆಗಳ 10,244ಕ್ಕೂ ಹೆಚ್ಚು ವಾರ್ಡ್‌ಗಳಿಗೆ ಸೆಪ್ಟೆಂಬರ್ 9 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮತ ಎಣಿಕೆಯ ಅಂಕಿ-ಅಂಶಗಳ ಪ್ರಕಾರ, ಬಿಜೆಪಿ ಸುಮಾರು 2,700ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಮುನ್ನಡೆ ಹಾಗೂ ಗೆಲುವು ಸಾಧಿಸಿ ಅಗ್ರಸ್ಥಾನದಲ್ಲಿದ್ದರೆ, ಕಾಂಗ್ರೆಸ್ 2,240ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಗೆದ್ದು ದ್ವಿತೀಯ ಸ್ಥಾನದಲ್ಲಿದೆ. ಪಕ್ಷೇತರ ಅಭ್ಯರ್ಥಿಗಳು ಸುಮಾರು 1,490ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದ್ದಾರೆ.
ಇದನ್ನೂ ಓದಿ: ನೀವು ದಲಿತರನ್ನು ಅಪ್ಪಿಕೊಳ್ಳುತ್ತೀರಾ?: ಆರ್‌ಎಸ್‌ಎಸ್-ಬಿಜೆಪಿ ಪ್ರಶ್ನಿಸಿದ ರಾಜಸ್ಥಾನ ಸಿಎಂ
ಮುಖ್ಯ ನಗರಗಳಾದ ಜೈಪುರ, ಉದಯಪುರ, ಜೋಧ್‌ಪುರ ಮತ್ತು ಬಾರ್ಮೇರ್‌ನಂತಹ ಪ್ರಮುಖ ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ಬಹುತೇಕ ವಾರ್ಡ್‌ಗಳಲ್ಲಿ ಬಿಜೆಪಿ ತನ್ನ ಪಟ್ಟು ಸಡಿಲಿಸದೆ ಆಡಳಿತ ಚುಕ್ಕಾಣಿ ಹಿಡಿಯುವತ್ತ ಹೆಜ್ಜೆ ಇಟ್ಟಿದೆ. ಬಾರ್ಮೇರ್ ನಗರಸಭೆಯಲ್ಲಿ ಬಿಜೆಪಿ 29 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಗಳಿಸಿದೆ.
ಇನ್ನೊಂದೆಡೆ, ಕಾಂಗ್ರೆಸ್ ಪಕ್ಷವು ಅಟ್ರು ನಗರಸಭೆಯಲ್ಲಿ ಬಹುಮತ ಪಡೆದಿದ್ದರೆ, ವಸುಂಧರಾ ರಾಜೇ ಅವರ ತವರು ಕ್ಷೇತ್ರವೆಂದೇ ಬಿಂಬಿತವಾದ ಝಾಲಾವಾಡ್‌ನಲ್ಲಿ ಕಾಂಗ್ರೆಸ್ 29 ವಾರ್ಡ್‌ಗಳನ್ನು ಗೆದ್ದು ಬಿಜೆಪಿಗೆ ಆಘಾತ ನೀಡಿದೆ. ಬಾರಾನ್‌ನಲ್ಲಿ ಎಎಪಿ 32 ವಾರ್ಡ್‌ಗಳಲ್ಲಿ ಗೆದ್ದು ಅಚ್ಚರಿಯ ಬಹುಮತ ಸಾಧಿಸಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ದೊಡ್ಡ ಮಟ್ಟದ ಸ್ಥಳೀಯ ಚುನಾವಣೆಯಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳಿಗೆ ಜನರಿಂದ ಸಿಕ್ಕ ಅನುಮೋದನೆ ಇದಾಗಿದೆ ಎಂದು ಬಿಜೆಪಿ ನಾಯಕರು ಸಂಭ್ರಮಿಸಿದ್ದಾರೆ.




