ರಾಘವ್ ಛಡ್ಡಾ ಸಹಿತ 7 ಎಎಪಿ ಸಂಸದರು ಬಿಜೆಪಿ ಸೇರ್ಪಡೆಯಾಗುವುದಕ್ಕೆ ರಾಜ್ಯಸಭಾ ಅಧ್ಯಕ್ಷ ಸಿಪಿ ರಾಧಾಕೃಷ್ಣನ್ ಅವರು ಅಸ್ತು ಎಂದಿದ್ದಾರೆ. ಸೋಮವಾರ ರಾಧಾಕೃಷ್ಣನ್ ಅವರು ಈ ಸೇರ್ಪಡೆಗೆ ಅನುಮೋದನೆ ನೀಡಿರುವುದರಿಂದ ರಾಜ್ಯಸಭೆಯಲ್ಲಿ ಎಎಪಿಯ ಬಲವು ಹತ್ತರಿಂದ ಕೇವಲ ಮೂರಕ್ಕೆ ಇಳಿದಿದೆ. ಬಿಜೆಪಿಯ ಸಂಖ್ಯಾಬಲವು 113ಕ್ಕೆ ಏರಿದೆ. ಬಹುಮತಕ್ಕೆ ಎನ್‌ಡಿಎ ಒಕ್ಕೂಟ ಸಮೀಪಿಸುತ್ತಿದೆ.
ಬಿಜೆಪಿ ಸೇರ್ಪಡೆಯ ನೇತೃತ್ವವನ್ನು ಉನ್ನತ ನಾಯಕರಾದ ರಾಘವ್ ಛಡ್ಡಾ, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ವಹಿಸಿದ್ದರು. ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ಬಿಜೆಪಿ ಸೇರ್ಪಡೆ ಮಾತುಕತೆ ನಡೆಸಿದ್ದಾರೆ. ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ವಿಕ್ರಮಜಿತ್ ಸಿಂಗ್ ಸಹ್ನಿ ಮತ್ತು ರಾಜಿಂದರ್ ಗುಪ್ತಾ ಅವರನ್ನೂ ಒಳಗೊಂಡ ಈ ಗುಂಪು ಎಎಪಿ ಈ ಹಿಂದಿನಂತಿಲ್ಲ ಎಂದು ಕಾರಣ ನೀಡಿ ಈ ಪಕ್ಷಾಂತರ ಮಾಡಿಕೊಂಡಿದೆ.
ಇದನ್ನು ಓದಿದ್ದೀರಾ? ಬಿಜೆಪಿ ಸೇರಿದ 7 ಸಂಸದರ ವಜಾಗೊಳಿಸಿ: ರಾಜ್ಯಸಭಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ ಎಎಪಿ
ಭಾರತದ ಸಂವಿಧಾನದ 10ನೇ ಶೆಡ್ಯೂಲ್‌ನಲ್ಲಿರುವ ಪಕ್ಷಾಂತರ ವಿರೋಧಿ ಕಾನೂನಿನ (Anti-Defection Law) ಅಡಿಯಲ್ಲಿ, ಒಂದು ರಾಜಕೀಯ ಪಕ್ಷದ ಮೂರನೇ ಎರಡರಷ್ಟು (2/3) ಶಾಸಕರು ಅಥವಾ ಸಂಸದರು ಬೇರೆ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದರೆ, ಅವರನ್ನು ಪಕ್ಷಾಂತರಕ್ಕಾಗಿ ಅನರ್ಹಗೊಳಿಸಲಾಗುವುದಿಲ್ಲ. ಅದರಂತೆ ಎಎಪಿಯ 10 ಮಂದಿಯಲ್ಲಿ 7 ಮಂದಿ ಬಿಜೆಪಿ ಸೇರಿರುವ ಕಾರಣ ಅವರನ್ನು ಅನರ್ಹಗೊಳಿಸಲಾಗುವುದಿಲ್ಲ. ಎಎಪಿಯಲ್ಲಿ ಈಗ ಸಂಜಯ್ ಸಿಂಗ್, ಎನ್ ಡಿ ಗುಪ್ತಾ ಮತ್ತು ಬಲ್ಬೀರ್ ಸಿಂಗ್ ಸೀಚೆವಾಲ್ ಮಾತ್ರ ಉಳಿದಿದ್ದಾರೆ.
ಎಎಪಿ ಸಂಸದರು ಬಿಜೆಪಿ ಸೇರಿರುವುದರಿಂದಾಗಿ 245 ಸದಸ್ಯರ ರಾಜ್ಯಸಭೆಯಲ್ಲಿ ಬಿಜೆಪಿ ಈಗ 113 ಮತ್ತು ಎನ್‌ಡಿಎ 141 ಸದಸ್ಯ ಬಲವನ್ನು ಹೊಂದಿದೆ. ಸರ್ಕಾರವು ತನ್ನದೇ ಆದ ಸರಳ ಬಹುಮತಕ್ಕೆ ಹತ್ತಿರದಲ್ಲಿದೆ. ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಕನಿಷ್ಠ 123 ಸ್ಥಾನಗಳ ಅಗತ್ಯವಿದೆ. ಅಂದರೆ 113 ಸದಸ್ಯ ಬಲ ಹೊಂದಿರುವ ಬಿಜೆಪಿ ಬಹುಮತ ಪಡೆಯಲು ಇನ್ನು ಹತ್ತು ಸ್ಥಾನಗಳಷ್ಟೇ ಬೇಕಾಗಿದೆ.
ಈ ನಡುವೆ ಆಮ್ ಆದ್ಮಿ ಪಕ್ಷವು ತೀವ್ರ ರಾಜಕೀಯ ಪ್ರತಿದಾಳಿಯನ್ನು ಪ್ರಾರಂಭಿಸಿದೆ. ಈ ಎಲ್ಲ ಪಕ್ಷಾಂತರಿಗಳನ್ನು ತಕ್ಷಣ ಅನರ್ಹಗೊಳಿಸುವಂತೆ ಕೋರಿ ರಾಜ್ಯಸಭಾ ಅಧ್ಯಕ್ಷರಿಗೆ ಮನವಿ ಮಾಡಿದೆ, ಅರ್ಜಿ ಸಲ್ಲಿಸಿದೆ. ಹಿರಿಯ ನಾಯಕ ಸಂಜಯ್ ಸಿಂಗ್ ವಿಲೀನವನ್ನು ಪಂಜಾಬ್‌ನ ಜನಾದೇಶಕ್ಕೆ ದ್ರೋಹ ಎಂದು ಕರೆದಿದ್ದಾರೆ. ತಾವು ಹಲವು ಹಿರಿಯ ವಕೀಲರು, ಕಾನೂನು ತಜ್ಞರೊಂದಿಗೆ ಮಾತನಾಡಿದ್ದೇವೆ. ಕಾನೂನಿನ ಅಡಿಯಲ್ಲಿ ಸಂಸದರು ಅನರ್ಹತೆಗೊಳ್ಳಬೇಕು ಎಂದು ತಜ್ಞರು ತಿಳಿಸಿದ್ದಾರೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.





