ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 24ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟನ್ಸ್ (ಜಿಟಿ) ನಡುವಿನ ಐಪಿಎಲ್ ಪಂದ್ಯದ ವೇಳೆ ಭಾರಿ ಭದ್ರತಾ ಲೋಪವೊಂದು ಬೆಳಕಿಗೆ ಬಂದಿದೆ. ಪಂದ್ಯದ ದಿನದಂದು ಕ್ರೀಡಾಂಗಣದ ಪ್ರಮುಖ ಭದ್ರತಾ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಜಖಂಗೊಳಿಸಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಮಂಜುನಾಥ್ (37) ಮತ್ತು ಉತ್ತರ ಪ್ರದೇಶ ಮೂಲದ ಅಬ್ದುಲ್ ಕಲಾಂ (19) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಪಂದ್ಯದ ದಿನಗಳಲ್ಲಿ ಕ್ರೀಡಾಂಗಣಕ್ಕೆ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿದ್ದ ‘ಐವಿಎಸ್ ಡಿಜಿಟಲ್ ಸಲ್ಯೂಷನ್ಸ್’ ಎಂಬ ಉಪ-ಗುತ್ತಿಗೆದಾರ ಕಂಪನಿಯೊಂದರ ಉದ್ಯೋಗಿಗಳಾಗಿದ್ದರು.
ಯಾವುದೇ ಮಾನ್ಯತೆ ಪಡೆದ ಭದ್ರತಾ ಪಾಸ್‌ಗಳಿಲ್ಲದೆ ಕ್ರೀಡಾಂಗಣದ ಸಿಸಿಟಿವಿ ನಿಯಂತ್ರಣ ಕೊಠಡಿಯನ್ನು (ಸರ್ವರ್ ರೂಮ್) ಪ್ರವೇಶಿಸಿದ್ದ ಈ ಆರೋಪಿಗಳು, ನೆಟ್‌ವರ್ಕ್ ವಿಡಿಯೋ ರೆಕಾರ್ಡರ್ ವ್ಯವಸ್ಥೆಗಳು ಮತ್ತು ಆಪ್ಟಿಕಲ್ ಫೈಬರ್ ಸಂಪರ್ಕಗಳನ್ನು ಕತ್ತರಿಸಿ ಹಾಕಿದ್ದಾರೆ. ಇದರ ಪರಿಣಾಮವಾಗಿ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30ರ ಅವಧಿಯಲ್ಲಿ ಕ್ರೀಡಾಂಗಣದ ಪ್ರವೇಶ ದ್ವಾರಗಳು, ಕಾನ್ಕೋರ್ಸ್‌ಗಳು ಮತ್ತು ಡಿ-ಕಾರ್ಪೊರೇಟ್ ಸ್ಟ್ಯಾಂಡ್ ಸೇರಿದಂತೆ ಪ್ರಮುಖ ವಲಯಗಳ ಕಣ್ಗಾವಲು ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ದೃಶ್ಯಗಳು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿವೆ. ವ್ಯವಸ್ಥೆಗಳು ಸ್ಥಗಿತಗೊಂಡಿದ್ದರಿಂದ, ಕ್ರೀಡಾಂಗಣದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೇರ ಪ್ರಸಾರದ ಕಣ್ಗಾವಲು ದೃಶ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ.
ಇದನ್ನು ಓದಿದ್ದೀರಾ? ಕೆ ಎಲ್ ರಾಹುಲ್ ನಂತರ ಈಗ ರಿಷಭ್ ಪಂತ್ ಸರದಿಯೇ? LSG ನಾಯಕತ್ವ ತ್ಯಜಿಸಲು ಸಲಹೆ
ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಉದ್ಯೋಗದಾತ ಕಂಪನಿಯು ತಮಗೆ ನೀಡಬೇಕಿದ್ದ 10 ಲಕ್ಷ ರೂಪಾಯಿಗಳ ಬಾಕಿ ಹಣವನ್ನು ಪಾವತಿಸದ ಕಾರಣ, ಆಕ್ರೋಶಗೊಂಡು ಸರ್ವರ್ ಕೊಠಡಿ ಮತ್ತು ಸಿಸಿಟಿವಿ ಕ್ಯಾಮೆರಾಗಳ ವೈರ್‌ಗಳನ್ನು ಕತ್ತರಿಸಿರುವುದಾಗಿ ಬಾಯಿಬಿಟ್ಟಿದ್ದಾರೆ.
ಕ್ರೀಡಾಂಗಣದಲ್ಲಿ ಕಣ್ಗಾವಲು ನಿರ್ವಹಣೆಯ ಮೂಲ ಗುತ್ತಿಗೆಯನ್ನು ಆರ್‌ಸಿಬಿ ಫ್ರಾಂಚೈಸಿಯಿಂದ ಗುರುಗ್ರಾಮ ಮೂಲದ ‘ಸ್ಟಾಕ್ಯೂ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್’ ಪಡೆದಿತ್ತು. ಆ ಕಂಪನಿಯು ತನ್ನ ನಿರ್ವಹಣಾ ಕೆಲಸವನ್ನು ಐವಿಎಸ್ ಡಿಜಿಟಲ್ ಸಲ್ಯೂಷನ್ಸ್‌ಗೆ ಉಪ-ಗುತ್ತಿಗೆ ನೀಡಿತ್ತು. ಘಟನೆಗೆ ಸಂಬಂಧಿಸಿದಂತೆ ಸ್ಟಾಕ್ಯೂ ಟೆಕ್ನಾಲಜೀಸ್ ಉದ್ಯೋಗಿ ಆದಿತ್ಯ ಭಟ್ ಅವರು ನೀಡಿದ ದೂರಿನ ಮೇರೆಗೆ, ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 324ರ (ಕಿಡಿಗೇಡಿತನ) ಅಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇಷ್ಟೆಲ್ಲಾ ಭದ್ರತಾ ಆತಂಕಗಳ ನಡುವೆಯೂ ಅಧಿಕಾರಿಗಳು ತ್ವರಿತವಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದ್ದರಿಂದ ಪಂದ್ಯವು ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ನೆರವೇರಿತು. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನೀಡಿದ್ದ 205/3 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ತಂಡವು ಕೇವಲ 18.5 ಓವರ್‌ಗಳಲ್ಲಿ ಗೆಲುವು ಸಾಧಿಸಿತ್ತು.




