ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ 15 ಮತಗಟ್ಟೆಗಳಲ್ಲಿ ಶನಿವಾರ ಮತದಾನ ಆರಂಭವಾಗಿದೆ. ಚುನಾವಣಾ ಅಕ್ರಮಗಳ ಆರೋಪದ ಹಿನ್ನೆಲೆ ಚುನಾವಣಾ ಆಯೋಗವು ನಿನ್ನೆ ಮರು ಮತದಾನಕ್ಕೆ ಆದೇಶಿಸಿತ್ತು.
ಮಗ್ರಹತ್ ಪಶ್ಚಿಮ್‌ನ 11 ಮತಗಟ್ಟೆಗಳು ಮತ್ತು ಡೈಮಂಡ್ ಹಾರ್ಬರ್‌ನ ನಾಲ್ಕು ಮತಗಟ್ಟೆಗಳಲ್ಲಿ ಮರು ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಹಾಡಹಗಲೇ ಟಿಎಂಸಿ ನಾಯಕನಿಗೆ ಗುಂಡೇಟು; ತಿಂಗಳಲ್ಲಿ ಮೂರನೇ ಘಟನೆ
“ಈವರೆಗೆ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಯಾವುದೇ ಹಿಂಸಾಚಾರ ಅಥವಾ ಅಶಾಂತಿ ಘಟನೆ ನಡೆದಿಲ್ಲ. ಎರಡು ಕ್ಷೇತ್ರಗಳಲ್ಲಿ ಅಧಿಕ ಪ್ರಮಾಣದ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ವೆಬ್‌ಕಾಸ್ಟಿಂಗ್ ಸಹ ನಡೆಯುತ್ತಿದೆ ಮತ್ತು ನಾವು ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.
ಈ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 29ರಂದು ನಡೆದ ಎರಡನೇ ಹಂತದಲ್ಲಿ ಮತದಾನ ನಡೆಸಲಾಗಿತ್ತು. ಈ ಎರಡು ಕ್ಷೇತ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಬಳಿಕ ಚುನಾವಣಾ ಆಯೋಗ ಮರು ಮತದಾನ ಘೋಷಿಸಿದೆ.
ಮಗ್ರಹತ್ ಪಶ್ಚಿಮ್‌ನಲ್ಲಿ, ಟಿಎಂಸಿಯ ಮುಹಮ್ಮದ್ ಸಮೀಮ್ ಅಹಮದ್ ಮೊಲ್ಲಾ ಬಿಜೆಪಿ ಅಭ್ಯರ್ಥಿ ಗೌರ್‌ಸುಂದರ್ ಘೋಷ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನ ಅಬ್ದುಲ್ ಮಜೀದ್ ಹಲ್ದರ್ ಮತ್ತು ಐಎಸ್‌ಎಫ್ ಅಭ್ಯರ್ಥಿ ಅಬ್ದುಲ್ ಅಜೀಜ್ ಅಲ್ ಹಸನ್ ಕೂಡ ಕಣದಲ್ಲಿದ್ದಾರೆ. ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಪನ್ನಾ ಲಾಲ್ ಹಲ್ದರ್, ಬಿಜೆಪಿಯ ದೀಪಕ್ ಕುಮಾರ್ ಹಲ್ದರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನ ಗೌತಮ್ ಭಟ್ಟಾಚಾರ್ಯ ಮತ್ತು ಸಿಪಿಐ(ಎಂ)ನ ಸಮರ್ ನಯಾ ಇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈ ಕ್ಷೇತ್ರಗಳಲ್ಲಿ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎರಡೂ ಸ್ಥಾನಗಳ ಕೆಲವು ಮತಗಟ್ಟೆಗಳಲ್ಲಿ ವ್ಯಾಪಕ ಚುನಾವಣಾ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗ ಮರು ಮತದಾನ ನಡೆಸುತ್ತಿದೆ. ಈ ಹಿಂದೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಕ್ರಮ ನಡೆಸಿರುವ ಬಗ್ಗೆ ಟಿಎಂಸಿ, ಕಾಂಗ್ರೆಸ್ ಮೊದಲಾದ ಪಕ್ಷಗಳು ಆರೋಪಿಸಿರುವಾಗ ಮರು ಮತದಾನ ಯಾಕೆ ನಡೆಸಿಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ಮೇ 2ಕ್ಕೆ ಮರು ಮತದಾನ: ಚುನಾವಣಾ ಆಯೋಗ ಆದೇಶ
ಮರು ಮತದಾನದ ಬಗ್ಗೆ ಮಾತನಾಡಿರುವ ಟಿಎಂಸಿ ನಾಯಕಿ ನಯನಾ ಬಂಡೋಪಾಧ್ಯಾಯ, “ಪರಿಶೀಲಿಸುವುದು ಚುನಾವಣಾ ಆಯೋಗಕ್ಕೆ ಬಿಟ್ಟದ್ದು. ಮರು ಮತದಾನ ನಡೆಸುತ್ತಿದ್ದಾರೆ, ಅದು ನಡೆಯಲಿ. ಜನರು ಮತ್ತೆ ಹೊರಬಂದು ದೀದಿ (ಮಮತಾ ಬ್ಯಾನರ್ಜಿ) ಅವರಿಗೆ ಮತ ಹಾಕುತ್ತಾರೆ. ದೀದಿ ಸಂತೋಷ ಮತ್ತು ದುಃಖದ ಸಮಯದಲ್ಲಿ ಎಲ್ಲರೊಂದಿಗೆ ನಿಲ್ಲುವವರು” ಎಂದು ಹೇಳಿದ್ದಾರೆ.
ಇನ್ನೊಂದೆಡೆ ಎರಡು ದಿನಗಳ ಕಾಲ ತಮ್ಮ ದುಡಿಮೆ ಬಿಟ್ಟು ಮತ ಚಲಾಯಿಸಲು ಬಂದ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಶಾ ಮಂಡಲ್ ಎಂಬ ಯುವತಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, “ನಾನು ಮತ್ತೆ ಇಲ್ಲಿಗೆ ಮತ ಚಲಾಯಿಸಲು ಬಂದಿದ್ದೇನೆ. ನಾನು ಪ್ರತಿದಿನ ಕೆಲಸಕ್ಕೆ ಹೋಗಬೇಕು, ಆದರೆ ಹಿಂದಿನ ಮತದಾನದ ದಿನ ಮತ್ತು ಇಂದು ಮತ್ತೆ ರಜೆ ತೆಗೆದುಕೊಳ್ಳಬೇಕಾಯಿತು. ಎರಡೂ ದಿನಗಳ ನನ್ನ ವೇತನವನ್ನು ಕಡಿತಗೊಳಿಸಲಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಭಾರೀ ಭದ್ರತಾ ವ್ಯವಸ್ಥೆಗಳ ನಡುವೆ ಎರಡು ಹಂತಗಳಲ್ಲಿ ನಡೆದವು. ಮತ ಎಣಿಕೆ ಮೇ 4ರಂದು ನಡೆಯಲಿದೆ.




