ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‌ಎಸ್) ಮತ್ತು ಪಾಕಿಸ್ತಾನದ ನಡುವಿನ ನಂಟಿನ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಇತ್ತೀಚೆಗೆ, ಮುಂಬೈನಲ್ಲಿ ಮಾತನಾಡಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ‘ಪಾಕಿಸ್ತಾನಿಯರು ಭಾರತೀಯರ ಬದ್ಧ ಶತ್ರುಗಳಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ಖಂಡಿಸಿರುವ ಹರಿಪ್ರಸಾದ್, “ಪುಲ್ವಾಮಾ ದಾಳಿಯ ತನಿಖೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಂದಿಗೂ ಮೌನ ವಹಿಸಿರುವುದರ ಹಿಂದೆ ಸಂಘ ಪರಿವಾರದ ಹಸ್ತಕ್ಷೇಪವಿದೆ ಎಂಬುದು ಈಗ ಬಟಾಬಯಲಾಗಿದೆ. ಪಾಕಿಸ್ತಾನ ಮತ್ತು ಆರ್‌ಎಸ್‌ಎಸ್‌ಗೂ ಇರುವ ಸಂಬಂಧದ ಬಗ್ಗೆ ತನಿಖೆ ನಡೆಯಬೇಕು” ಎಂದಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹರಿಪ್ರಸಾದ್, “ಹಿಂದೆ, ಪಾಕಿಸ್ತಾನದ ಐಎಸ್‌ಐ ಉಗ್ರಗಾಮಿ ಸಂಘಟನೆಗಳ ಜೊತೆ ಆರ್‌ಎಸ್‌ಎಸ್ ಪ್ರಮುಖರು ರಹಸ್ಯ ಸಭೆಗಳನ್ನು ನಡೆಸಿದ್ದ ಇತಿಹಾಸವಿದೆ. ಪ್ರಸ್ತುತ ಭಾಗವತ್ ನೀಡಿರುವ ಹೇಳಿಕೆಯು ಎಲ್ಲವೂ ಪೂರ್ವನಿಯೋಜಿತ ಎಂಬುದನ್ನು ಸ್ಪಷ್ಟಪಡಿಸುತ್ತಿದೆ” ಎಂದಿದ್ದಾರೆ.
“ನಾನು ಈ ಹಿಂದೆ ವಿಧಾನ ಪರಿಷತ್ತಿನಲ್ಲಿ ಪಾಕಿಸ್ತಾನವನ್ನು ನೆರೆಯ ರಾಷ್ಟ್ರ ಎಂದಿದ್ದಾಗ ನಕಲಿ ದೇಶಪ್ರೇಮಿಗಳು ತೀವ್ರವಾಗಿ ಹರಿಹಾಯ್ದಿದ್ದರು. ಆದರೆ, 2026ರ ಫೆಬ್ರವರಿಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯವೇ ಸಂಸತ್ತಿನಲ್ಲಿ ಪಾಕಿಸ್ತಾನವನ್ನು ಭಾರತದ ನೆರೆಯ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಿ ಅಧಿಕೃತ ಉತ್ತರ ನೀಡಿದೆ. ಈಗ, ಮೋಹನ್ ಭಾಗವತ್, ಪಾಕಿಸ್ತಾನವು ಭಾರತದ ಬದ್ಧ ಶತ್ರುವಲ್ಲ ಎಂದಿದ್ದಾರೆ. ಈಗ ಆ ನಕಲಿ ದೇಶಪ್ರೇಮಿಗಳ ನಾಲಿಗೆಗೆ ಈಗ ನಾಗಪುರದಿಂದ ಬೀಗ ಬಿದ್ದಿದೆಯೇ” ಎಂದು ಪ್ರಶ್ನಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಪ್ರಯಾಗ್‌ರಾಜ್‌ನ ಛಾತ್ರೋಂ ಕೀ ಗೂಂಜ್: ಯುವಜನರ ಆಕ್ರೋಶಕ್ಕೆ ಹೊಸ ರಾಜಕೀಯ ಭಾಷ್ಯ ಬರೆದ ರಾಹುಲ್
“ಚುನಾವಣಾ ಸಮಯ ಬಂದಾಗ ಮಾತ್ರ ಪಾಕಿಸ್ತಾನದ ವಿರುದ್ಧ ಉಗ್ರ ಭಾಷಣಗಳನ್ನು ಮಾಡುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು, ಅಧಿಕಾರದಲ್ಲಿದ್ದಾಗ ಪಾಕಿಸ್ತಾನದ ಮೇಲೆ ಪ್ರೇಮ ಮೆರೆಯುವ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದಾರೆ. ದೇಶ ವಿಭಜನೆ ಮಾಡಿದ ಮಹಮ್ಮದ್ ಅಲಿ ಜಿನ್ನಾ ಜೊತೆ ಸೇರಿ ಬಂಗಾಳದಲ್ಲಿ ಸರ್ಕಾರ ನಡೆಸಿದ ಜನಸಂಘದ ಶ್ಯಾಮಪ್ರಸಾದ್ ಮುಖರ್ಜಿಯಿಂದ ಹಿಡಿದು, ಜಿನ್ನಾ ಸಮಾಧಿಗೆ ಭೇಟಿ ನೀಡಿದ್ದ ಎಲ್.ಕೆ. ಅಡ್ವಾಣಿ ಹಾಗೂ ಆಹ್ವಾನವಿಲ್ಲದಿದ್ದರೂ ಪಾಕಿಸ್ತಾನ ಪ್ರಧಾನಿ ಮನೆಗೆ ತೆರಳಿ ಬಿರಿಯಾನಿ ಸವಿದ ನರೇಂದ್ರ ಮೋದಿಯವರವರೆಗೆ ಬಿಜೆಪಿಯ ‘ಪಾಕ್ ಪ್ರೇಮ’ ಮುಂದುವರಿಯುತ್ತಲೇ ಬಂದಿದೆ” ಎಂದು ಅವರು ದೂರಿದ್ದಾರೆ.
“ಗಡಿಯಲ್ಲಿ ಭಾರತದ ವೀರ ಯೋಧರು ಪ್ರಾಣ ತ್ಯಾಗ ಮಾಡುತ್ತಿರುವಾಗ ಮತ್ತು ಪುಲ್ವಾಮಾ, ಪಹಲ್ಗಾಮ್ ದಾಳಿಗಳಲ್ಲಿ ಅಮಾಯಕರು ಬಲಿಯಾಗುತ್ತಿರುವಾಗ “ಪಾಕಿಸ್ತಾನಿಯರೆಲ್ಲರೂ ಶತ್ರುಗಳಲ್ಲ” ಎನ್ನುವ ಮೋಹನ್ ಭಾಗವತ್ ಮಾತಿನ ಅಸಲಿ ಅರ್ಥವೇನು ಎಂದು ಪ್ರಶ್ನಿಸಿರುವ ಕೆಪಿಸಿಸಿ ನಾಯಕರು, ದೇಶಭಕ್ತಿಯ ಗುತ್ತಿಗೆ ಪಡೆದಂತೆ ಮಾತನಾಡುವ ಬಿಜೆಪಿ ನಾಯಕರು ಈಗ ತಮ್ಮದೇ ಸಂಘಚಾಲಕರ ಹೇಳಿಕೆಯ ಬಗ್ಗೆ ಮೌನ ವಹಿಸಿರುವುದೇಕೆ” ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ.



