ಜಾಗತಿಕ ಮತ್ತು ಪ್ರಾದೇಶಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಭಾರತವು ಸಂವಾದ ಹಾಗೂ ರಾಜತಾಂತ್ರಿಕತೆಯನ್ನು ಬಲವಾಗಿ ಪ್ರತಿಪಾದಿಸುತ್ತದೆ. ಅಂತರರಾಷ್ಟ್ರೀಯ ನಿಯಮಗಳಿಗೆ ಗೌರವ ನೀಡುವುದು, ಸಮುದ್ರ ಮಾರ್ಗದ ಮುಕ್ತ ವ್ಯಾಪಾರಕ್ಕೆ ಬೆಂಬಲ, ಮಾರುಕಟ್ಟೆ ಮತ್ತು ಸಂಪನ್ಮೂಲಗಳನ್ನು ದುರುದ್ದೇಶಕ್ಕೆ ಬಳಸಿಕೊಳ್ಳುವುದನ್ನು ವಿರೋಧಿಸುವುದು, ಜಾಗತಿಕ ಆರ್ಥಿಕತೆಯ ಸುರಕ್ಷತೆಗಾಗಿ ವಿಶ್ವಾಸಾರ್ಹ ಪಾಲುದಾರಿಕೆಯನ್ನು ಹೊಂದುವುದು ಹಾಗೂ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ‘ಶೂನ್ಯ ಸಹಿಷ್ಣುತೆ’ಯು ಭಾರತದ ಪ್ರಮುಖ ಐದು ನಿಲುವುಗಳಾಗಿವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಭಾರತದ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಜೊತೆ ಜೈಶಂಕರ್ ದೆಹಲಿಯಲ್ಲಿ ಸಭೆ ನಡೆಸಿದ್ದಾರೆ. ಬಳಿಕ, ಜಂಟಿ ಪ್ರತಿಕಾಗೋಷ್ಠಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್, “ಇತ್ತೀಚಿನ ಜಾಗತಿಕ ವಿದ್ಯಮಾನಗಳಾದ ಪಶ್ಚಿಮ ಏಷ್ಯಾ ಬಿಕ್ಕಟ್ಟು, ಉಕ್ರೇನ್ ಸಂಘರ್ಷ ಹಾಗೂ ಇಂಡೋ-ಪೆಸಿಫಿಕ್ ವಲಯದ ಸುರಕ್ಷತೆಯ ಬಗ್ಗೆ ವಿಸ್ತೃತವಾಗಿ ಆಲೋಚಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮಾತನಾಡಿ, “ಇರಾನ್ ಜತೆಗಿನ ಮಾತುಕತೆಗಳು ಅಂತಿಮ ಹಂತಕ್ಕೆ ತಲುಪಿವೆ. ಮುಂದಿನ ಕೆಲವು ಗಂಟೆಗಳಲ್ಲಿ ಪಶ್ಚಿಮ ಏಷ್ಯಾದಲ್ಲಿನ ಯುದ್ಧಕ್ಕೆ ಮುಕ್ತಾಯ ಹಾಡುವ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಸಕಾರಾತ್ಮಕ ಸುದ್ದಿಯೊಂದು ಜಗತ್ತಿಗೆ ಸಿಗಲಿದೆ” ಎಂದು ಹೇಳಿದ್ದಾರೆ.
“ಉಭಯ ರಾಷ್ಟ್ರಗಳ ರಕ್ಷಣಾ ಸಹಭಾಗಿತ್ವದ 10 ವರ್ಷಗಳ ಒಪ್ಪಂದದ ನವೀಕರಣ, ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ರಕ್ಷಣಾ ಉತ್ಪಾದನೆ ಮತ್ತು ಮುಂಬರುವ ದಿನಗಳಲ್ಲಿ ಸಮಗ್ರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ನಾಂದಿ ಹಾಡಲಿರುವ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಚರ್ಚೆಗಳು ನಡೆದಿವೆ” ಎಂದು ಜೈಶಂಕರ್ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!
“ಭಾರತದ 140 ಕೋಟಿ ಜನಸಂಖ್ಯೆಗೆ ಕೈಗೆಟುಕುವ ದರದಲ್ಲಿ ಇಂಧನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕದೊಂದಿಗೆ ಇಂಧನ ವ್ಯಾಪಾರ ನಡೆದಿರುವುದು ಸ್ವಾಗತಾರ್ಹ” ಎಂದು ಜೈಶಂಕರ್ ಹೇಳಿದ್ದಾರೆ.
“ಅಮೆರಿಕದಲ್ಲಿ ‘ಶಾಂತಿ ಆಕ್ಟ್’ ಅಂಗೀಕಾರಗೊಂಡಿರುವುದರಿಂದ ಉಭಯ ದೇಶಗಳ ನಡುವೆ ಪರಮಾಣು ಇಂಧನ ಸಹಕಾರಕ್ಕೆ ಹೊಸ ಅವಕಾಶಗಳು ತೆರೆದುಕೊಂಡಿವೆ. ಇದರೊಂದಿಗೆ ಉದಯೋನ್ಮುಖ ತಂತ್ರಜ್ಞಾನಗಳು, ನಿರ್ಣಾಯಕ ಖನಿಜಗಳು ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸಲಾಗುತ್ತದೆ” ಎಂದು ಹೇಳಿದ್ದಾರೆ.



