ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಒಡೆತನದ ಕಂಪನಿಗಳಿಗೆ ಸುಮಾರು 1,270 ಕೋಟಿ ರೂ. ಮೌಲ್ಯದ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಗಂಭೀರ ಆರೋಪದ ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಮಹತ್ವದ ಆದೇಶ ನೀಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದ್ದು, ಮುಂದಿನ ಎರಡು ವಾರಗಳೊಳಗೆ ಪ್ರಾಥಮಿಕ ತನಿಖೆಯನ್ನು ಆರಂಭಿಸುವಂತೆ ಸಿಬಿಐಗೆ ಸೂಚಿಸಿದೆ. 2015ರ ಜನವರಿ 1ರಿಂದ 2025ರ ಡಿಸೆಂಬರ್ 31ರವರೆಗಿನ 10 ವರ್ಷಗಳ ಅವಧಿಯಲ್ಲಿ ನೀಡಲಾಗಿರುವ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆ ಮತ್ತು ಕಾರ್ಯಾದೇಶಗಳ ಬಗ್ಗೆ ಈ ತನಿಖೆ ನಡೆಯಲಿದ್ದು, ಸಿಬಿಐ ಮುಂದಿನ 16 ವಾರಗಳಲ್ಲಿ ತನ್ನ ವಸ್ತುಸ್ಥಿತಿ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಿದೆ.
ಇದನ್ನು ಓದಿದ್ದೀರಾ? ಕ್ಷೇತ್ರ ಮರುವಿಂಗಡಣೆ ಹೆಸರಲ್ಲಿ ದಕ್ಷಿಣದ ಧ್ವನಿ ಅಡಗಿಸುವ ಹುನ್ನಾರ: ಕೇಂದ್ರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ, ಪಿಣರಾಯಿ
‘ಸೇವ್ ಮೊನ್ ರೀಜನ್ ಫೆಡರೇಷನ್’ ಮತ್ತು ‘ವಾಲಂಟರಿ ಅರುಣಾಚಲ ಸೇನಾ’ ಎಂಬ ಸ್ವಯಂ ಸೇವಾ ಸಂಸ್ಥೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಧಾರದ ಮೇಲೆ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ವಾದವನ್ನು ಆಲಿಸಿದ ಬಳಿಕ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಪೆಮಾ ಖಂಡು ಅವರ ಅಧಿಕಾರಾವಧಿಯಲ್ಲಿ ಅವರ ಪತ್ನಿ, ತಾಯಿ ಹಾಗೂ ಸೋದರಳಿಯನ (ಹಾಲಿ ಶಾಸಕ ತ್ಸೆರಿಂಗ್ ತಾಶಿ) ಒಡೆತನದ ‘ಎಂ/ಎಸ್ ಬ್ರ್ಯಾಂಡ್ ಈಗಲ್ಸ್’ ಮತ್ತು ‘ಎಂ/ಎಸ್ ಅಲಯನ್ಸ್ ಟ್ರೇಡಿಂಗ್ ಕೋ.’ ಸೇರಿದಂತೆ ಒಟ್ಟು ನಾಲ್ಕು ಸಂಸ್ಥೆಗಳಿಗೆ ಟೆಂಡರ್ ಪ್ರಕ್ರಿಯೆಯ ನಿಯಮಗಳನ್ನು ಗಾಳಿಗೆ ತೂರಿ ಒಟ್ಟು 1,270 ಕೋಟಿ ರೂ. ಮೌಲ್ಯದ ಗುತ್ತಿಗೆಗಳನ್ನು ನೀಡಲಾಗಿದೆ ಎಂಬುದು ಈ ಪ್ರಕರಣದ ಪ್ರಮುಖ ಆರೋಪವಾಗಿದೆ. ಮುಕ್ತ ಟೆಂಡರ್ ಕರೆಯದೆ ಮತ್ತು ಯಾವುದೇ ಪಾರದರ್ಶಕತೆ ಇಲ್ಲದೆ ಗುತ್ತಿಗೆಗಳನ್ನು ನೀಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಸಿಬಿಐ ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಅರುಣಾಚಲ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ನಿರ್ದೇಶಿಸಿದೆ. ಸಿಬಿಐ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ತಕ್ಷಣವೇ ‘ನೋಡಲ್ ಅಧಿಕಾರಿ’ಯೊಬ್ಬರನ್ನು ನೇಮಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿರುವ ನ್ಯಾಯಾಲಯವು, ಈ ಗುತ್ತಿಗೆಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ನಾಶಪಡಿಸದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.




