ದ್ರಾವಿಡ ಚಳವಳಿಯ ಸುದೀರ್ಘ ಇತಿಹಾಸ ಕಂಡಿರುವ ತಮಿಳುನಾಡಿನಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಎಐಎಡಿಎಂಕೆ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಸ್ಪರ್ಧೆಗೆ ಸಜ್ಜಾಗಿದೆ. ಎಐಎಡಿಎಂಕೆ ರಾಜಕೀಯದ 35 ವರ್ಷಗಳ ಇತಿಹಾಸದಲ್ಲೇ ಇಂತಹದ್ದೊಂದು ಬೆಳವಣಿಗೆ ಮೊದಲ ಬಾರಿಗೆ ಆಗಿದ್ದು ಎನ್ನುವುದು ಇಲ್ಲಿ ಉಲ್ಲೇಖನೀಯ. ಮಾತ್ರವಲ್ಲದೇ, ಈ ಬಾರಿ ಚುನಾವಣೆಯಲ್ಲಿ ಯಾವ ಪ್ರಮುಖ ಪಕ್ಷದಿಂದಲೂ ಬ್ರಾಹ್ಮಣ ಸಮುದಾಯದ ಯಾವೊಬ್ಬ ವ್ಯಕ್ತಿಯೂ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಆಡಳಿತರೂಢ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿಯೂ ಈ ಸಮುದಾಯದವರಿಗೆ ಟಿಕೆಟ್ ನೀಡಲಾಗಿಲ್ಲ. ಬ್ರಾಹ್ಮಣ ಸಮುದಾಯ ಹೆಚ್ಚಿರುವ ಕ್ಷೇತ್ರಗಳಲ್ಲಿಯೂ ಬ್ರಾಹಣ ಸಮುದಾಯದವರಿಗೆ ಟಿಕೆಟ್ ನೀಡದೆ ಸ್ಪರ್ಧೆಗೆ ಪ್ರಮುಖ ಪಕ್ಷಗಳು ಮುಂದಾಗಿವೆ.
ಬಿಜೆಪಿ ತಮಿಳುನಾಡು ಬ್ರಾಹ್ಮಣ ಸಂಘದ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೂ, ಎಐಎಡಿಎಂಕೆ ಮಿತ್ರಪಕ್ಷವಾಗಿರುವ ಬಿಜೆಪಿಗೆ ಹಂಚಿಕೆ ಮಾಡಿರುವ 27 ಕ್ಷೇತ್ರಗಳಲ್ಲಿಯೂ ಬ್ರಾಹ್ಮಣ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕೆ ಇಳಿಸುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ರಾಜ್ಯದ ಜನಸಂಖ್ಯೆಲ್ಲಿ ಬ್ರಾಹ್ಮಣರು ಶೇಕಡ 3ರಷ್ಟು ಪಾಲು ಹೊಂದಿದ್ದಾರೆ.
ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಬಳಿಕ ಕಳೆದ ಹತ್ತು ವರ್ಷಗಳಲ್ಲಿ ಎಐಎಡಿಎಂಕೆ ಸಮುದಾಯದ ಒಬ್ಬರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಿತ್ತು. ನಿವೃತ್ತ ಡಿಜಿಪಿ ಆರ್.ನಟರಾಜ್ ಅವರು 2021ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು.
ಇದನ್ನೂ ಓದಿ : ಕ್ಷೇತ್ರ ಮರುವಿಂಗಡಣೆ ಹೆಸರಲ್ಲಿ ದಕ್ಷಿಣದ ಧ್ವನಿ ಅಡಗಿಸುವ ಹುನ್ನಾರ: ಕೇಂದ್ರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ,…
ಆದರೇ, ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯವನ್ನು ನೀಡುತ್ತೇನೆ ಎಂದು ಭರವಸೆ ನೀಡಿ ಚುನಾವಣಾ ಕಣಕ್ಕೆ ಧುಮುಕಿದ ನಟ ವಿಜಯ್ ಅವರ ಟಿವಿಕೆ ಪಕ್ಷ ಇಬ್ಬರು ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ತಮಿಳು ರಾಷ್ಟ್ರೀಯವಾದಿ ಸೀಮನ್ ಅವರ ಎನ್ ಟಿಕೆ ಆರು ಮಂದಿ ಬ್ರಾಹ್ಮಣರನ್ನು ಕಣಕ್ಕೆ ಇಳಿಸಿದೆ. ಮೈಲಾಪುರ ಹಾಗೂ ಶ್ರೀರಂಗಂನಂಥ ಬ್ರಾಹ್ಮಣ ಸಮುದಾಯದ ಮತಗಳು ಅಧಿಕವಿರುವ ಕ್ಷೇತ್ರಗಳನ್ನು ಆ ಸಮುದಾಯಕ್ಕೆ ಬಿಟ್ಟುಕೊಟ್ಟಿವೆ. ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಪ್ರಮುಖ ಪಕ್ಷಗಳಿಂದ ಟಿಕೆಟ್ ಪಡೆದ ಬಹುತೇಕ ಮಂದಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು.
ಈ ಸಂಬಂಧಿಸಿದಂತೆ ರಾಜಕೀಯ ವಿಶ್ಲೇಷಕ ರವೀಂದ್ರನ್ ದುರೈಸಾಮಿ “ಎಐಎಡಿಎಂಕೆ ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಜಯಲಲಿತಾ ಮತ್ತು ಎಂಜಿಆರ್ ಅವರು ಸದಾ ಬ್ರಾಹ್ಮಣ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿದ್ದರು” ಎಂದು ಆಕ್ರೋಶ ಹೊರ ಹಾಕಿದ್ದಾರೆ.




