ಸಂಸ್ಥೆಯು ಸುಮಾರು 7.7 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಆದಾಯವನ್ನು ವರದಿ ಮಾಡಿದ್ದರೂ, ಪ್ರಮುಖ ಅಧಿಕಾರಿಗಳ ವೇತನ ರಚನೆ ಅತ್ಯಂತ ಹಾಸ್ಯಾಸ್ಪದವಾಗಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಕೇವಲ 17,000 ರೂ. ಮಾಸಿಕ ವೇತನ ಪಡೆಯುತ್ತಿದ್ದರೆ, ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) 2020ರಿಂದ ಯಾವುದೇ ವೇತನವನ್ನೇ ಪಡೆದಿಲ್ಲ ಎಂಬ ಮಾಹಿತಿ ತನಿಖಾಧಿಕಾರಿಗಳನ್ನು ದಂಗುಬಡಿಸಿದೆ.
ಬೆಂಗಳೂರು ಹಾಗೂ ಮುಂಬೈನ ಒಟ್ಟು 9 ಸ್ಥಳಗಳಲ್ಲಿ ಚಿನ್ನದ ರಫ್ತು ಸಂಸ್ಥೆ ‘ರಾಜೇಶ್ ಎಕ್ಸ್‌ಪೋರ್ಟ್ಸ್’ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿದ ದಾಳಿಯಲ್ಲಿ ಆಘಾತಕಾರಿ ಹಾಗೂ ಬೃಹತ್ ಪ್ರಮಾಣದ ಆರ್ಥಿಕ ಅಕ್ರಮಗಳು ಬೆಳಕಿಗೆ ಬಂದಿವೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಜೂನ್ 23ರಂದು ಆರಂಭವಾದ ಈ ಶೋಧ ಕಾರ್ಯಾಚರಣೆಯು, ಸಂಸ್ಥೆಯ ಕೋಟ್ಯಂತರ ರೂಪಾಯಿಗಳ ಲೆಕ್ಕವಿಲ್ಲದ ವಹಿವಾಟುಗಳು ಹಾಗೂ ವಿದೇಶಿ ವ್ಯವಹಾರಗಳ ಕರಾಳ ಮುಖವನ್ನು ಜಗಜ್ಜಾಹೀರು ಮಾಡಿದೆ.
ಆಫ್ರಿಕಾದ ಗಣಿಗಳಲ್ಲಿ ಮಾಡಲಾಗಿದೆ ಎನ್ನಲಾದ 1,035 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆಗೆ ಸಂಬಂಧಿಸಿದಂತೆ ಯಾವುದೇ ಪೂರಕ ದಾಖಲೆಗಳು ಪತ್ತೆಯಾಗಿಲ್ಲ ಎಂಬುದು ಇ.ಡಿ ತನಿಖೆಯಿಂದ ಬಹಿರಂಗವಾಗಿದೆ. ಆಮದು, ರಫ್ತು ಹಾಗೂ ವಿದೇಶಿ ವಹಿವಾಟುಗಳ ನೈಜತೆಯನ್ನು ದೃಢೀಕರಿಸುವ ಕನಿಷ್ಠ ದಾಖಲೆಗಳನ್ನು ಒದಗಿಸುವಲ್ಲಿಯೂ ಆಡಳಿತ ಮಂಡಳಿ ಸಂಪೂರ್ಣವಾಗಿ ವಿಫಲವಾಗಿದ್ದು, ವ್ಯವಹಾರಗಳು ತೀವ್ರ ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.
ದಾಳಿಯ ವೇಳೆ ಪತ್ತೆಯಾದ ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಸಂಸ್ಥೆಯ ರಿಜಿಸ್ಟರ್ ಪುಸ್ತಕಗಳಲ್ಲಿ ನಮೂದಿಸಲಾದ ಚಿನ್ನದ ದಾಸ್ತಾನಿಗೂ ಮತ್ತು ಕಚೇರಿಯಲ್ಲಿ ವಾಸ್ತವಿಕವಾಗಿ ಲಭ್ಯವಿದ್ದ ಚಿನ್ನದ ಪ್ರಮಾಣಕ್ಕೂ ಭಾರಿ ವ್ಯತ್ಯಾಸ ಕಂಡುಬಂದಿದೆ. ಕಾಗದ ಪತ್ರಗಳಲ್ಲಿ ತೋರಿಸಲಾದ ದಾಸ್ತಾನಿಗಿಂತ ಶೇಕಡಾ 40ರಷ್ಟು ಕಡಿಮೆ ಚಿನ್ನ ಪತ್ತೆಯಾಗಿದ್ದು, ಇದು ದಾಸ್ತಾನು ನಿರ್ವಹಣೆಯ ಹೆಸರಿನಲ್ಲಿ ನಡೆದಿರುವ ಭಾರೀ ಗೋಲ್‌ಮಾಲ್ ಕಡೆಗೆ ಬೊಟ್ಟು ಮಾಡುತ್ತಿದೆ.
ಇದನ್ನು ಓದಿದ್ದೀರಾ? ಫಿಫಾ 2026: ಚಿನ್ನದ ಬೂಟಿಗಾಗಿ ಮೆಸ್ಸಿ, ಮ್ಬಾಪೆ, ಹಾಲಾಂಡ್ ನಡುವೆ ಜಿದ್ದಾಜಿದ್ದಿನ ಪೈಪೋಟಿ
ಸಂಸ್ಥೆಯು ಸುಮಾರು 7.7 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಆದಾಯವನ್ನು ವರದಿ ಮಾಡಿದ್ದರೂ, ಪ್ರಮುಖ ಅಧಿಕಾರಿಗಳ ವೇತನ ರಚನೆ ಅತ್ಯಂತ ಹಾಸ್ಯಾಸ್ಪದವಾಗಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಕೇವಲ 17,000 ರೂ. ಮಾಸಿಕ ವೇತನ ಪಡೆಯುತ್ತಿದ್ದರೆ, ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) 2020ರಿಂದ ಯಾವುದೇ ವೇತನವನ್ನೇ ಪಡೆದಿಲ್ಲ ಎಂಬ ಮಾಹಿತಿ ತನಿಖಾಧಿಕಾರಿಗಳನ್ನು ದಂಗುಬಡಿಸಿದೆ. ಇಂತಹ ನಡೆಗಳು ವಾಣಿಜ್ಯ ನಿಯಮಗಳಿಗೆ ಸಂಪೂರ್ಣ ವಿರುದ್ಧವಾಗಿವೆ.
ಯುಎಇ ಸೇರಿದಂತೆ ವಿವಿಧ ಸಾಗರೋತ್ತರ ಸಂಸ್ಥೆಗಳ ಜೊತೆಗಿನ ಸುಮಾರು 3,000 ಕೋಟಿ ರೂಪಾಯಿಗಳ ವಿದೇಶಿ ವ್ಯಾಪಾರ ವಹಿವಾಟುಗಳಲ್ಲಿ ಅಪಾರದರ್ಶಕತೆ ಕಂಡುಬಂದಿದೆ. ಇದರ ಜೊತೆಗೆ, ಅನಿವಾಸಿ ಭಾರತೀಯ (ಎನ್‌ಆರ್‌ಐ) ಬೇನಾಮಿಗಳ ಹೆಸರಿನಲ್ಲಿ ಷೇರು ತಿರುಚುವಿಕೆ ಮಾಡುವ ಮೂಲಕ ಬರೋಬ್ಬರಿ 600 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಭಾರತದಿಂದ ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿರುವ ಗಂಭೀರ ಆರೋಪವನ್ನು ಇ.ಡಿ ಮಾಡಿದೆ.
ಸಂಸ್ಥೆಯ ಷೇರುಗಳಲ್ಲಿ ನಡೆದಿರುವ ಅನುಮಾನಾಸ್ಪದ ಬ್ಲಾಕ್ ಟ್ರೇಡ್‌ಗಳ ಬಗ್ಗೆಯೂ ಇ.ಡಿ ತನಿಖೆ ಮುಂದುವರಿಸಿದೆ. ಈ ವಹಿವಾಟುಗಳಲ್ಲಿ ಭಾಗಿಯಾಗಿರುವ ಕೆಲವರ ಹೆಸರುಗಳು ‘ಇಂಟರ್‌ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್’ (ಐಸಿಐಜೆ) ಬಿಡುಗಡೆ ಮಾಡಿರುವ ರಹಸ್ಯ ದಾಖಲೆಗಳಲ್ಲಿಯೂ ಉಲ್ಲೇಖಗೊಂಡಿದ್ದು, ಅಘೋಷಿತ ಕಡಲಾಚೆಯ (ಆಫ್‌ಶೋರ್) ಲಿಂಕ್‌ಗಳ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ. ಕಳೆದ ವಾರವಷ್ಟೇ ‘ಸೆಬಿ’ ಕೂಡ 2021ರಿಂದ 2025ರ ನಡುವೆ ಆದಾಯವನ್ನು 15.15 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಿಸಿ ತೋರಿಸಲಾಗಿದೆ ಎಂದು ಆರೋಪಿಸಿ ಪ್ರವರ್ತಕ ರಾಜೇಶ್ ಮೆಹ್ತಾ ಅವರ ಮೇಲೆ ನಿರ್ಬಂಧ ಹೇರಿತ್ತು.




